ಬುಧವಾರ, 4 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಪಾನ್‌ ಓಪನ್‌ ಬ್ಯಾಡ್ಮಿಂಟನ್‌: ಸಿಂಧುಗೆ ಮತ್ತೆ ನಿರಾಸೆ

ಜಪಾನ್‌ ಓಪನ್‌ ಬ್ಯಾಡ್ಮಿಂಟನ್‌: ಎರಡನೇ ಸುತ್ತಿಗೆ ಲಕ್ಷ್ಯ
Published 26 ಜುಲೈ 2023, 15:26 IST
Last Updated 26 ಜುಲೈ 2023, 15:26 IST
ಅಕ್ಷರ ಗಾತ್ರ

ಟೋಕಿಯೊ: ಎರಡು ಬಾರಿಯ ಒಲಿಂಪಿಕ್‌ ಪದಕ ವಿಜೇತೆ ಪಿ.ವಿ.ಸಿಂಧು ಅವರ ನೀರಸ ಆಟ ಮುಂದುವರಿದಿದ್ದು, ಜಪಾನ್‌ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯ ಮಹಿಳೆಯರ ಸಿಂಗಲ್ಸ್‌ ವಿಭಾಗದಲ್ಲಿ ಮೊದಲ ಸುತ್ತಿನಲ್ಲೇ ಮುಗ್ಗರಿಸಿದರು.

ಪುರುಷರ ಸಿಂಗಲ್ಸ್‌ ವಿಭಾಗದಲ್ಲಿ ಭಾರತದವರೇ ಆದ ಪ್ರಿಯಾಂಶು ರಾಜಾವತ್‌ ಒಡ್ಡಿದ ಪ್ರಬಲ ಸವಾಲನ್ನು ಬದಿಗೊತ್ತಿದ ಲಕ್ಷ್ಯ ಸೇನ್‌ ಎರಡನೇ ಸುತ್ತಿಗೆ ಮುನ್ನಡೆದರು. ಕೊರಿಯಾ ಓಪನ್‌ ಚಾಂಪಿಯನ್, ಸಾತ್ವಿಕ್‌ ಸಾಯಿರಾಜ್‌ ರಣಕಿರೆಡ್ಡಿ ಮತ್ತು ಚಿರಾಗ್‌ ಶೆಟ್ಟಿ ಜೋಡಿಯೂ ಶುಭಾರಂಭ ಮಾಡಿತು.

ಬುಧವಾರ ನಡೆದ ಪಂದ್ಯದಲ್ಲಿ ಸಿಂಧು 12–21, 13–21 ರಿಂದ ಜಪಾನ್‌ನ ಝಾಂಗ್ ಯಿ ಮಾನ್ ಎದುರು ಪರಾಭವಗೊಂಡರು. ಈ ಪಂದ್ಯ 32 ನಿಮಿಷ ನಡೆಯಿತು. ಸಿಂಧು ಈ ವರ್ಷ ಆಡಿದ 13 ಬಿಡಬ್ಲ್ಯುಎಫ್‌ ವಿಶ್ವ ಟೂರ್‌ ಟೂರ್ನಿಗಳಲ್ಲಿ ಏಳರಲ್ಲೂ ಮೊದಲ ಸುತ್ತಿನಲ್ಲೇ ಹೊರಬಿದ್ದಿದ್ದಾರೆ.

ಹಳೆಯ ಲಯಕ್ಕೆ ಮರಳಲು ಪರದಾಡುತ್ತಿರುವ ಭಾರತದ ಆಟಗಾರ್ತಿ, ಸಾಕಷ್ಟು ಸ್ವಯಂಕೃತ ತಪ್ಪುಗಳನ್ನು ಮಾಡಿದರು. ಮಲೇಷ್ಯಾ ಓಪನ್‌ ಟೂರ್ನಿಯ ಕ್ವಾರ್ಟರ್‌ ಫೈನಲ್‌ನಲ್ಲಿ ಅವರು ಇದೇ ಎದುರಾಳಿಯನ್ನು ಮಣಿಸಿದ್ದರು. ಆದರೆ ಚೀನಾದ ಆಟಗಾರ್ತಿ ಈ ಬಾರಿ ಮುಯ್ಯಿ ತೀರಿಸಿಕೊಂಡರು.

ಕೆನಡಾ ಓಪನ್‌ ಚಾಂಪಿಯನ್‌ ಸೇನ್, ಒಂದು ಗಂಟೆಗೂ ಹೆಚ್ಚು ಸಮಯ ನಡೆದ ಜಿದ್ದಾಜಿದ್ದಿನ ಸೆಣಸಾಟದಲ್ಲಿ 21-15, 12-21, 24-22 ರಿಂದ ರಾಜಾವತ್‌ ಅವರನ್ನು ಮಣಿಸಿದರು. ಎರಡನೇ ಸುತ್ತಿನಲ್ಲಿ ಅವರು ಜಪಾನ್‌ನ ಕಾಂತ ಸುನೆಯಮಾ ವಿರುದ್ಧ ಆಡುವರು.

ಕಳೆದ ವಾರ ಕೊರಿಯಾ ಓಪನ್‌ ಜಯಿಸಿದ್ದ ಸಾತ್ವಿಕ್‌– ಚಿರಾಗ್‌ 21-16, 11-21, 21-13 ರಿಂದ ಇಂಡೊನೇಷ್ಯಾದ ಲಿಯೊ ರಾಲಿ ಕರ್ನಾಂಡೊ ಮತ್ತು ಡೇನಿಯಲ್ ಮಾರ್ಟಿನ್‌ ಅವರನ್ನು ಮಣಿಸಿದರು. ಭಾರತದ ಜೋಡಿ ಮುಂದಿನ ಸುತ್ತಿನಲ್ಲಿ ಡೆನ್ಮಾರ್ಕ್‌ನ ಜೆಪ್‌ ಬೇ– ಲಾಸೆ ಮೊಲ್ಹೀಡ್ ಅವರನ್ನು ಎದುರಿಸಲಿದೆ.

ಕರ್ನಾಟಕದ ಮಿಥುನ್‌ ಮಂಜುನಾಥ್ 21-13, 22-24, 18-21 ರಿಂದ ಚೀನಾದ ವೆಂಗ್‌ ಹಾಂಗ್ ಎದುರು ಮಣಿದರು. ಈ ಮ್ಯಾರಥಾನ್‌ ಹೋರಾಟ ಒಂದು ಗಂಟೆ 25 ನಿಮಿಷ ನಡೆಯಿತು.

ಮಾಳವಿಕಾ ಬನ್ಸೋಡ್‌ ಅವರಿಗೂ ಮೊದಲ ಸುತ್ತು ದಾಟಲು ಆಗಲಿಲ್ಲ. ಜಪಾನ್‌ನ ಅಯಾ ಒಹೊರಿ ಕೈಯಲ್ಲಿ 14–21, 17–21 ರಿಂದ ಪರಾಭವಗೊಂಡರು.

ಪುರುಷರ ಡಬಲ್ಸ್‌ನಲ್ಲಿ ಎಂ.ಆರ್‌.ಅರ್ಜುನ್‌ ಮತ್ತು ಧ್ರುವ್‌ ಕಪಿಲಾ ಜೋಡಿ, ಆ್ಯರನ್‌ ಚಿಯಾ– ಸೊ ವೂಯಿ ಯಿಕ್‌ ವಿರುದ್ಧದ ಮೊದಲ ಸುತ್ತಿನ ಪಂದ್ಯದಲ್ಲಿ ಅರ್ಧದಲ್ಲೇ ಹಿಂದೆ ಸರಿಯಿತು. ಭಾರತದ ಜೋಡಿ ಮೊದಲ ಗೇಮ್‌ನಲ್ಲಿ 5–15 ರಿಂದ ಹಿನ್ನಡೆಯಲ್ಲಿತ್ತು. ಅರ್ಜುನ್‌ ಅವರು ಕೊರಿಯಾ ಓಪನ್‌ ಟೂರ್ನಿಯಲ್ಲೂ ಬೆನ್ನುನೋವಿನ ಕಾರಣ ಅರ್ಧದಲ್ಲೇ ಹಿಂದೆ ಸರಿದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT