ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಂಗ್ಲಾದೇಶ ವಿರುದ್ಧ ಮಹಿಳಾ ಟಿ20 ಸರಣಿ: 5–0 ಕ್ಲೀನ್‌ಸ್ವೀಪ್ ಮಾಡಿದ ಭಾರತ

Published 9 ಮೇ 2024, 15:11 IST
Last Updated 9 ಮೇ 2024, 15:11 IST
ಅಕ್ಷರ ಗಾತ್ರ

ಸಿಲ್ಹೆಟ್‌ (ಬಾಂಗ್ಲಾದೇಶ): ಬ್ಯಾಟರ್‌ಗಳ ಸಾಂಘಿಕ ಪ್ರದರ್ಶನದ ನಂತರ ರಾಧಾ ಯಾದವ್ (24ಕ್ಕೆ3) ಅವರ ಉತ್ತಮ ಬೌಲಿಂಗ್ ನೆರವಿನಿಂದ ಭಾರತ ತಂಡ ಐದನೇ ಹಾಗೂ ಅಂತಿಮ ಮಹಿಳಾ ಟಿ20 ಪಂದ್ಯದಲ್ಲಿ ಬಾಂಗ್ಲಾದೇಶ ತಂಡವನ್ನು 21 ರನ್‌ಗಳಿಂದ ಸೋಲಿಸಿತು. ಭಾರತ ಸರಣಿಯನ್ನು 5–0 ಯಿಂದ ಕ್ಲೀನ್‌ ಸ್ವೀಪ್ ಮಾಡಿಕೊಂಡಿತು.

157 ರನ್‌ಗಳ ಗುರಿ ಬೆನ್ನತ್ತಿ ಬಾಂಗ್ಲಾದೇಶ ತಂಡಕ್ಕೆ ಎಡಗೈ ಸ್ಪಿನ್ನರ್‌ ರಾಧಾ ಯಾದವ್ ಪೆಟ್ಟುಕೊಟ್ಟರು. ಮೊದಲ ನಾಲ್ಕು ವಿಕೆಟ್‌ಗಳಲ್ಲಿ ಮೂರನ್ನು ಪಡೆದರು.

ರೀತು ಮೋನಿ (37, 33ಎ, 4x4) ಮತ್ತು ಶರೀಫಾ ಖಾತುನ್ (ಅಜೇಯ 28, 21ಎ, 4x3) ಮಾತ್ರ ಸ್ವಲ್ಪ ಹೋರಾಟ ತೋರಿದರು. ಅವರಿಬ್ಬರು ಆರನೇ ವಿಕೆಟ್‌ಗೆ 57 ರನ್ ಸೇರಿಸಿದ್ದರು. ಇದು ಬಾಂಗ್ಲಾ ಮಹಿಳಾ ತಂಡದ ಪರ ಆರನೇ ವಿಕೆಟ್‌ಗೆ ದಾಖಲೆ ಜೊತೆಯಾಟವೆನಿಸಿತು. ಸ್ಪಿನ್ನರ್‌ ಆಶಾ ಶೋಭನಾ ಈ ಜೊತೆಯಾಟ ಮುರಿದರು. ಆದರೆ ಆತಿಥೇಯರು ಅಂತಿಮವಾಗಿ 20 ಓವರುಗಳಲ್ಲಿ 6 ವಿಕೆಟ್‌ಗೆ 135 ರನ್ ಗಳಿಸಲಷ್ಟೇ ಶಕ್ತರಾದರು.

ಇದಕ್ಕೆ ಮೊದಲು ಭಾರತದ ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳು– ಸ್ಮೃತಿ ಮಂದಾನ (33, 25ಎ), ನಾಯಕಿ ಹರ್ಮನ್‌ಪ್ರೀತ್‌ ಕೌರ್‌ (30, 24ಎ), ದಯಾಳನ್ ಹೇಮಲತಾ (37, 28) ಉಪಯುಕ್ತ ಆಟವಾಡಿದರು. ಹರ್ಮನ್‌ಪ್ರೀತ್ ಮತ್ತು ಹೇಮಲತಾ ನಡುವೆ ಮೂರನೇ ವಿಕೆಟ್‌ಗೆ 41 ಎಸೆತಗಳಲ್ಲಿ 60 ರನ್‌ಗಳು ಬಂದವು.

ಆರಂಭ ಆಟಗಾರ್ತಿ ಶಫಾಲಿ ವರ್ಮಾ (14) ವಿಫಲರಾದರು. ಕೊನೆಯಲ್ಲಿ ರಿಚಾ ಘೋಷ್ 17 ಎಸೆತಗಳಲ್ಲಿ ಒಂದು ಸಿಕ್ಸರ್‌, ಮೂರು ಬೌಂಡರಿಗಳಿದ್ದ ಅಜೇಯ 28 ರನ್ ಗಳಿಸಿದರು.

ರಾಧಾ ಯಾದವ್‌ ಈ ಸರಣಿಯಲ್ಲಿ 10 ವಿಕೆಟ್‌ ಗಳಿಸಿ ಯಶಸ್ವಿ ಬೌಲರ್ ಎನಿಸಿದರೆ, ಸ್ಮೃತಿ ಮಂದಾನ (116) ಯಶಸ್ವಿ ಬ್ಯಾಟರ್‌ ಎನಿಸಿದರು.

ಸ್ಕೋರುಗಳು

ಭಾರತ: 20 ಓವರುಗಳಲ್ಲಿ 5ಕ್ಕೆ156 (ಸ್ಮೃತಿ ಮಂದಾನ 33, ದಯಾಳನ್ ಹೇಮಲತಾ 37, ಹರ್ಮನ್‌ಪ್ರೀತ್ ಕೌರ್‌ 30, ರಿಚಾ ಘೋಷ್‌ ಔಟಾಗದೇ 28; ರಬಿಯಾ ಖಾನ್ 28ಕ್ಕೆ2, ನಹಿದಾ ಅಖ್ತರ್ 27ಕ್ಕೆ2)

ಬಾಂಗ್ಲಾದೇಶ: 20 ಓವರುಗಳಲ್ಲಿ 6ಕ್ಕೆ 135 (ರುಬಿಯಾ ಹೈದರ್ 20, ರಿತು ಮೋನಿ 37, ಶರೀಫಾ ಖಾತುನ್ ಔಟಾಗದೇ 28, ರಬಿಯಾ ಖಾನ್ ಔಟಾಗದೇ 14; ರಾಧಾ ಯಾದವ್ 24ಕ್ಕೆ3, ಆಶಾ ಶೋಭನಾ 25ಕ್ಕೆ2).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT