ಬುಧವಾರ, 17 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಣಜಿ ಕ್ರಿಕೆಟ್‌ ಟೂರ್ನಿ: ಶ್ರೇಯಸ್‌, ವೈಶಾಖ ಶತಕದ ಸೊಬಗು

Published 19 ಫೆಬ್ರುವರಿ 2024, 6:52 IST
Last Updated 19 ಫೆಬ್ರುವರಿ 2024, 6:52 IST
ಅಕ್ಷರ ಗಾತ್ರ

ಹುಬ್ಬಳ್ಳಿ: ರಾಜನಗರದ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ಸೇರಿದ್ದ ಅಭಿಮಾನಿಗಳಿಗೆ ಎಸ್.ಶರತ್‌ (100) ಮತ್ತು ವೈಶಾಖ ವಿಜಯಕುಮಾರ (103) ನಿರಾಸೆ ಮಾಡಲಿಲ್ಲ. ಇಬ್ಬರೂ ಚೊಚ್ಚಲ ಶತಕದ ಸಂಭ್ರಮ ಆಚರಿಸಿದರು.

ಇವರಿಬ್ಬರ ಅಜೇಯ ಶತಕದ ಬಲದಿಂದ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಕೊನೆಯ ಲೀಗ್‌ ಪಂದ್ಯದಲ್ಲಿ ಚಂಡೀಗಢದ ಎದುರು ಕರ್ನಾಟಕ 296 ರನ್‌ಗಳ ಬೃಹತ್ ಮುನ್ನಡೆ ಗಳಿಸಿತು. ಪಂದ್ಯದ ಮೂರನೇ ದಿನವಾದ ಭಾನುವಾರ ಕರ್ನಾಟಕ 136.5 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 563 ರನ್‌ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು.

ಎರಡನೇ ಇನಿಂಗ್ಸ್ ಆರಂಭಿಸಿದ ಚಂಡೀಗಢ ತಂಡ ಉತ್ತಮ ಆರಂಭ ಪಡೆಯಿತು. ದಿನದಾಟದ ಅಂತ್ಯಕ್ಕೆ 11 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 61 ರನ್‌ ಗಳಿಸಿದೆ. ಕರ್ನಾಟಕದ ಬಾಕಿ ಚುಕ್ತಾ ಮಾಡಲು ಇನ್ನೂ 235 ರನ್‌ಗಳ ಅವಶ್ಯಕತೆ ಇದೆ.

ಚೆಂದದ ಜತೆಯಾಟ: ಶರತ್ ಮತ್ತು ವೈಶಾಖ ಚೆಂದದ ಜತೆಯಾಟಕ್ಕೆ ಎದುರಾಳಿ ಬೌಲರ್‌ಗಳು ಬಸವಳಿದರು. ಇಬ್ಬರೂ ಆರನೇ ವಿಕೆಟ್ ಪಾಲುದಾರಿಕೆಯಲ್ಲಿ 198 (289) ರನ್‌ ಕಲೆಹಾಕಿದರು. ಜತೆಯಾಟ ಮುರಿಯಲು ಚಂಡೀಗಢ ತಂಡದ ನಾಯಕ ಮನನ್‌ ವೋಹ್ರಾ ಬೌಲಿಂಗ್‌ನಲ್ಲಿ ಮಾಡಿದ ಯಾವ ಬದಲಾವಣೆಗಳೂ ಫಲ ನೀಡಲಿಲ್ಲ.

ವೈಯಕ್ತಿಕ 6 ರನ್‌ ಗಳಿಸಿದ್ದ ವೇಳೆ ಶರತ್‌ ಜೀವಧಾನ ಪಡೆದರು. ಗುರಿಂದರ್ ಸಿಂಗ್‌ ಎಸೆದ 90ನೇ ಓವರ್‌ನ ಕೊನೆಯ ಎಸೆತವನ್ನು ಅವರು ಸ್ವೀಪ್‌ ಮಾಡಿದರು. ಸ್ಕ್ವೇರ್‌ಲೆಗ್‌ನಲ್ಲಿದ್ದ ಮನನ್ ವೋಹ್ರಾ ಕ್ಯಾಚ್‌ ಕೈಚೆಲ್ಲಿದರು. ನಂತರ ಎಚ್ಚರಿಕೆಯಿಂದ ಆಡಿದ ಅವರು, 160 ಎಸೆತಗಳಲಲ್ಲಿ ಶತಕ ಪೂರೈಸಿದರು. 216 ನಿಮಿಷ ಕ್ರೀಸ್‌ನಲ್ಲಿದ್ದರು. ಅವರು ಶತಕ ಗಳಿಸುತ್ತಿದ್ದಂತೆ ಡಿಕ್ಲೇರ್ ಘೋಷಿಸಲಾಯಿತು. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಇದು ಅವರಿಗೆ ಮೊದಲ ಶತಕ.

ಇತ್ತೀಚಿನ ದಿನಗಳಲ್ಲಿ ಬ್ಯಾಟಿಂಗ್‌ನಲ್ಲಿಯೂ ಮಿಂಚುತ್ತಿರುವ ವೇಗಿ ವೈಶಾಖ ವಿಜಯಕುಮಾರ್ ಬಿರುಸಿನ ಆಟವಾಡಿದರು. ಅರ್ಧಶತಕ ಗಳಿಸಲು 119 ಎಸೆತಗಳನ್ನು ತೆಗೆದುಕೊಂಡ ಅವರು, ನಂತರ 17 ಎಸೆತಗಳಲ್ಲಿ ಶತಕ ಗಳಿಸಿ ಸಂಭ್ರಮಿಸಿದರು. ಎರಡು ಆಕರ್ಷಕ ಸಿಕ್ಸರ್‌ ಸಿಡಿಸಿದರು.

ಶನಿವಾರ 49 ರನ್‌ ಗಳಿಸಿ ಕ್ರೀಸ್‌ನಲ್ಲಿದ್ದ ಯುವಪ್ರತಿಭೆ ಹಾರ್ದಿಕ್‌ ರಾಜ್‌ ಭಾನುವಾರ ಅರ್ಧಶತಕ ಪೂರೈಸಿದರು. ಟೂರ್ನಿಯಲ್ಲಿ ಇದು ಅವರಿಗೆ ಎರಡನೇ ಅರ್ಧಶತಕ‌. ತಮಿಳುನಾಡು ವಿರುದ್ಧದ ಪಂದ್ಯದಲ್ಲಿಯೂ ಅವರು ಅರ್ಧಶತಕ ಗಳಿಸಿದ್ದರು.  ಶತಕದತ್ತ ದಾಪುಗಾಲಿಟ್ಟಿದ್ದ ಹಾರ್ದಿಕ್‌ (82 ರನ್‌; 178ಎ, 4X7), ಕರಣ್‌ ಕೈಲಾ ಬೌಲಿಂಗ್‌ನಲ್ಲಿ ವಿಕೆಟ್‌ ಕೀಪರ್ ಮಯಂಕ್‌ ಸಿಧುಗೆ ಕ್ಯಾಚಿತ್ತರು.

ಮನೀಷ್‌ ಪಾಂಡೆ ತಮ್ಮ ಖಾತೆಗೆ ಮತ್ತೆ 46 ರನ್‌ ಸೇರಿಸಿದರು. 148 ರನ್‌ ಗಳಿಸಿದ್ದಾಗ ಅವರನ್ನು ಕರಣ್‌ ಕೈಲಾ ಎಲ್‌ಬಿ ಬಲೆಗೆ ಕೆಡವಿದರು. ಹಾರ್ದಿಕ್ ಮತ್ತು ಪಾಂಡೆ ನಾಲ್ಕನೇ ವಿಕೆಟ್ ಜತೆಯಾಟದಲ್ಲಿ 239 (318) ರನ್ ಕಲೆಹಾಕಿದರು.

ಭಾನುವಾರ ದಿನದಾಟದ ಅಂತ್ಯಕ್ಕೆ ಚಂಡೀಗಢದ ಶಿವಂ ಭಾಂಬ್ರಿ (33), ಅರ್ಸ್ಲಾನ್ ಖಾನ್‌ (27) ಕ್ರೀಸ್‌ನಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT