ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಣಜಿ ಕ್ರಿಕೆಟ್‌: ಮಯಂಕ್‌– ಪಡಿಕ್ಕಲ್‌ ಜುಗಲ್‌ಬಂದಿ

ಇನಿಂಗ್ಸ್ ಮುನ್ನಡೆಯತ್ತ ಕರ್ನಾಟಕ
Published 20 ಜನವರಿ 2024, 21:28 IST
Last Updated 20 ಜನವರಿ 2024, 21:28 IST
ಅಕ್ಷರ ಗಾತ್ರ

ಮೈಸೂರು: ನಾಯಕ ಮಯಂಕ್ ಅಗರವಾಲ್‌ (114, 178ಎ, 4X10 ) ಹಾಗೂ ದೇವದತ್ತ ಪಡಿಕ್ಕಲ್‌ (103, 144 ಎ, 4X13)  ಶನಿವಾರ ಮಾನಸಗಂಗೋತ್ರಿಯಲ್ಲಿ ಸೇರಿದ್ದ ಕ್ರಿಕೆಟ್‌ ಪ್ರಿಯರಿಗೆ ರಸದೌತಣ ಉಣಬಡಿಸಿದರು. ಅವರಿಬ್ಬರ ಜೊತೆಯಾಟದಿಂದ ಕರ್ನಾಟಕ ತಂಡವು ಮೊದಲ ಇನಿಂಗ್ಸ್ ಮುನ್ನಡೆಯ ಸನಿಹ ಸಾಗಿತು. 

ಇಲ್ಲಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಣಜಿ ಟೂರ್ನಿಯ ಸಿ ಗುಂಪಿನ ಪಂದ್ಯದ ಎರಡನೇ ದಿನವಾದ ಶನಿವಾರ ಈ ಇಬ್ಬರೂ ಗೋವಾ ಎದುರು ಶತಕಗಳ ಮೂಲಕ ಸೊಗಸಾದ ಇನಿಂಗ್ಸ್ ಕಟ್ಟಿದರು. ಕುಕ್ಕರಹಳ್ಳಿಯ ಕೆರೆಯಿಂದ ಆಗಾಗ್ಗೆ ಬೀಸುತ್ತಿದ್ದ ತಂಗಾಳಿಗೆ ಅಷ್ಟೇ ಲಯಬದ್ಧವಾಗಿ ಬ್ಯಾಟ್ ಬೀಸುವ ಸದ್ದು ಜೊತೆಯಾಯಿತು. 204 ನಿಮಿಷಗಳ ಕಾಲ ಜೊತೆಯಾಗಿ ಕ್ರೀಸ್‌ನಲ್ಲಿದ್ದ ಈ ಜೋಡಿಯು ಎರಡನೇ ವಿಕೆಟ್‌ಗೆ 298 ಎಸೆತಗಳಲ್ಲಿ 211 ರನ್‌ ಕಲೆಹಾಕಿತು.

ಮೊದಲ ಇನ್ನಿಂಗ್ಸ್‌ನಲ್ಲಿ ಗೋವಾದ 321 ರನ್‌ಗಳಿಗೆ ಪ್ರತಿಯಾಗಿ ದಿನದಂತ್ಯಕ್ಕೆ ಕರ್ನಾಟಕ 4 ವಿಕೆಟ್‌ಗೆ 253 ರನ್‌ ಗಳಿಸಿದ್ದು, 68 ರನ್‌ಗಳ ಹಿನ್ನಡೆಯಲ್ಲಿದೆ. ಗೋವಾ ತಂಡವು ಎರಡನೇ ದಿನದ ಕಡೆಯ ಅವಧಿಯಲ್ಲಿ 3 ವಿಕೆಟ್ ಉರುಳಿಸುವ ಮೂಲಕ ತಿರುಗೇಟು ನೀಡುವ ಪ್ರಯತ್ನ ಮಾಡಿತು.

ಸೊಗಸಾದ ಜೊತೆಯಾಟ
ಹುಬ್ಬಳ್ಳಿಯಲ್ಲಿ ಪಂಜಾಬ್‌ ವಿರುದ್ಧ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ 193 ರನ್ ಗಳಿಸಿದ್ದ ಪಡಿಕ್ಕಲ್‌ ಮೈಸೂರಿನಲ್ಲೂ ಶತಕ ದಾಖಲಿಸಿದರು. ಆರಂಭದಿಂದಲೂ ಆಕ್ರಮಣಕಾರಿ ಆಟವಾಡಿದ ಅವರು, 52ನೇ ಓವರ್‌ನಲ್ಲಿ ಅರ್ಜುನ್ ತೆಂಡೂಲ್ಕರ್ ಎಸೆತದಲ್ಲಿ ಎರಡು ರನ್‌ ಗಳಿಸುವ ಮೂಲಕ ಶತಕ ಪೂರೈಸಿದರು. ಎರಡೂ ಕೈ ಮೇಲಕ್ಕೆತ್ತಿ ಬ್ಯಾಟ್‌ ಬೀಸಿ ಸಂಭ್ರಮಿಸಿದರು. 137 ಎಸೆತಗಳಲ್ಲಿ ಈ ಶತಕ ಮೂಡಿಬಂತು. ಆದರೆ ಮರು ಓವರ್‌ನಲ್ಲೇ ಮೋಹಿತ್‌ ರೆಡಕರ್ ಎಸೆತದಲ್ಲಿ ಸ್ಲಿಪ್‌ನಲ್ಲಿದ್ದ ದರ್ಶನ್‌ ಮಿಸಾಳ್‌ಗೆ ಕ್ಯಾಚಿತ್ತು ನಿರ್ಗಮಿಸಿದರು.

ಹೋದ ವಾರ ಅಹಮದಾಬಾದ್‌ನಲ್ಲಿ ಗುಜರಾತ್‌ ವಿರುದ್ಧದ ಮೊದಲ ಇನ್ನಿಂಗ್ಸ್‌ನಲ್ಲಿ ಶತಕ ಸಿಡಿಸಿದ್ದ ಮಯಂಕ್ ಇಲ್ಲಿಯೂ ತಮ್ಮ ಉತ್ತಮ ಫಾರ್ಮ್ ಮುಂದುವರಿಸಿದರು. ಒಂದೆಡೆ ಪಡಿಕ್ಕಲ್‌ ಅಬ್ಬರಿಸುತ್ತಿದ್ದರೆ, ಮತ್ತೊಂದೆಡೆ ನಾಯಕ ತಾಳ್ಮೆಯಿಂದ ಆಡಿದರು. ಕ್ರಮೇಣ ರನ್‌ ಗತಿ ಹೆಚ್ಚಿಸಿಕೊಂಡರು. 243 ನಿಮಿಷ ಕ್ರೀಸ್‌ನಲ್ಲಿದ್ದ ಅವರು, 161 ಎಸೆತಗಳಲ್ಲಿ 9 ಬೌಂಡರಿ ಸಹಿತ ಶತಕ ಪೂರೈಸಿದರು. 58ನೇ ಓವರ್‌ನಲ್ಲಿ ದರ್ಶನ್ ಮಿಸಾಳ್‌ ಓವರ್‌ನಲ್ಲಿ ಪಾಯಿಂಟ್‌ನಲ್ಲಿ ಈಶಾನ್‌ ಗಡೇಕರ್‌ಗೆ ಕ್ಯಾಚಿತ್ತು ನಿರ್ಗಮಿಸಿದಾಗ ಮೈದಾನದಲ್ಲಿ ತುಂಬ ಚಪ್ಪಾಳೆ ಸದ್ದು ಪ್ರತಿಧ್ವನಿಸಿತು.

ಮನೀಷ್ ಪಾಂಡೆ ಶುಕ್ರವಾರ ಫೀಲ್ಡಿಂಗ್‌ ವೇಳೆ ಕೈಗೆ ಗಾಯ ಮಾಡಿಕೊಂಡಿದ್ದು, ಸದ್ಯ ಹೊಲಿಗೆ ಹಾಕಿರುವ ಕಾರಣ ಬ್ಯಾಟಿಂಗ್‌ಗೆ ಬರಲಿಲ್ಲ. ಮಯಂಕ್‌–ಪಡಿಕ್ಕಲ್‌ ಹೊರತುಪಡಿಸಿ ಕರ್ನಾಟಕದ ಉಳಿದ ಬ್ಯಾಟರ್‌ಗಳಿಂದ ನಿರೀಕ್ಷಿತ ಪ್ರದರ್ಶನ ಬರಲಿಲ್ಲ. ಆರಂಭಿಕ ಡಿ. ನಿಶ್ಚಲ್‌ (16) ದರ್ಶನ್ ಮಿಸಾಳ್  ಹಾಕಿದ ಆರನೇ ಓವರ್‌ನ ಮೊದಲ ಎಸೆತದಲ್ಲಿ ಸ್ವಲ್ಪ ಅಂತರದಲ್ಲಿ ರನೌಟ್‌ನಿಂದ ಪಾರಾದರು. ಆದರೆ ಮರುಎಸೆತದಲ್ಲೇ ಎಲ್‌ಬಿಡಬ್ಲ್ಯು ಆಗಿ ನಿರ್ಗಮಿಸಿದರು. ಆಲ್‌ರೌಂಡರ್‌ ಎ.ಸಿ. ರೋಹಿತ್‌ಕುಮಾರ್ (2) ಬಂದಷ್ಟೇ ವೇಗವಾಗಿ ನಿರ್ಮಿಸಿದರು. ದಿನದಂತ್ಯಕ್ಕೆ ಉಪನಾಯಕ ನಿಕಿನ್ ಜೋಸ್‌ (3) ಹಾಗೂ ವಿಕೆಟ್‌ ಕೀಪರ್ ಎಸ್. ಶರತ್‌ ಕ್ರೀಸ್‌ನಲ್ಲಿದ್ದಾರೆ.

ಅರ್ಜುನ್ ಅರ್ಧಶತಕ: ಶುಕ್ರವಾರ ಕ್ರೀಸ್‌ನಲ್ಲಿ ಉಳಿದಿದ್ದ ಅರ್ಜುನ್‌ ತೆಂಡೂಲ್ಕರ್ (52) ಹಾಗೂ ಹೇರಂಭ ಪರಬ್‌ (53) ಜೋಡಿಯು ಶನಿವಾರ ಮುಂಜಾನೆ ಇನಿಂಗ್ಸ್ ಮುಂದುವರಿಸಿದ್ದು, ಒಟ್ಟಾರೆ 93 ರನ್‌ ಜೊತೆಯಾಟದ ಮೂಲಕ ಕರ್ನಾಟಕದ ಬೌಲರ್‌ಗಳನ್ನು ಕಾಡಿತು.

ಒಂದೂವರೆ ಗಂಟೆ ಕಾಲ ಕ್ರೀಸ್‌ನಲ್ಲಿದ್ದ ಜೋಡಿಯು ವೇಗವಾಗಿ ರನ್‌ ಗಳಿಕೆ ಮೂಲಕ ಸ್ಕೋರ್ ಹೆಚ್ಚಿಸುವತ್ತ ಗಮನ ನೀಡಿತು. ಇನ್ನಿಂಗ್ಸ್‌ನ 109ನೇ ಓವರ್‌ನಲ್ಲಿ ಸ್ಥಳೀಯ ಪ್ರತಿಭೆ ಎಂ. ವೆಂಕಟೇಶ್‌ ಹೇರಂಭ ಅವರನ್ನು ಕ್ಲೀನ್‌ ಬೌಲ್ಡ್‌ ಮಾಡಿದರು.  ನಂತರದ ಓವರ್‌ನಲ್ಲಿ ಅರ್ಜುನ್‌ ವಿಕೆಟ್ ಪಡೆಯುವ ಮೂಲಕ ಗೋವಾ ಇನಿಂಗ್ಸ್‌ಗೆ ಮಂಗಳ ಹಾಡಿದರು.

ಕರ್ನಾಟಕ ಎದುರಿನ ರಣಜಿ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಎಂ. ವೆಂಕಟೇಶ್ ಬೌಲಿಂಗ್‌ನಲ್ಲಿ ಗೋವಾ ತಂಡದ ಹೆರಂಬ್ ಪರಬ್ ಔಟಾದ ಪರಿ
ಪ್ರಜಾವಾಣಿ ಚಿತ್ರ/ಅನೂಪ್ ರಾಘ.ಟಿ.
ಕರ್ನಾಟಕ ಎದುರಿನ ರಣಜಿ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಎಂ. ವೆಂಕಟೇಶ್ ಬೌಲಿಂಗ್‌ನಲ್ಲಿ ಗೋವಾ ತಂಡದ ಹೆರಂಬ್ ಪರಬ್ ಔಟಾದ ಪರಿ ಪ್ರಜಾವಾಣಿ ಚಿತ್ರ/ಅನೂಪ್ ರಾಘ.ಟಿ.
ಗೋವಾ ಎದುರು ಶನಿವಾರ ಶತಕ (114) ಸಿಡಿಸಿದ ಕರ್ನಾಟಕ ತಂಡದ ನಾಯಕ ಮಯಂಕ್‌ ಅಗರವಾಲ್‌ ಸಂಭ್ರಮಿಸಿದ ಕ್ಷಣ
ಪ್ರಜಾವಾಣಿ ಚಿತ್ರ/ಅನೂಪ್ ರಾಘ.ಟಿ.
ಗೋವಾ ಎದುರು ಶನಿವಾರ ಶತಕ (114) ಸಿಡಿಸಿದ ಕರ್ನಾಟಕ ತಂಡದ ನಾಯಕ ಮಯಂಕ್‌ ಅಗರವಾಲ್‌ ಸಂಭ್ರಮಿಸಿದ ಕ್ಷಣ ಪ್ರಜಾವಾಣಿ ಚಿತ್ರ/ಅನೂಪ್ ರಾಘ.ಟಿ.
ಗೋವಾ ತಂಡದ ಎದುರು ಶನಿವಾರ ಶತಕ (103) ಸಿಡಿಸಿದ ಕರ್ನಾಟಕದ ದೇವದತ್ತ ಪಡಿಕ್ಕಲ್ ಸಂಭ್ರಮಿಸಿದ ಕ್ಷಣ
ಪ್ರಜಾವಾಣಿ ಚಿತ್ರ/ಅನೂಪ್ ರಾಘ.ಟಿ.
ಗೋವಾ ತಂಡದ ಎದುರು ಶನಿವಾರ ಶತಕ (103) ಸಿಡಿಸಿದ ಕರ್ನಾಟಕದ ದೇವದತ್ತ ಪಡಿಕ್ಕಲ್ ಸಂಭ್ರಮಿಸಿದ ಕ್ಷಣ ಪ್ರಜಾವಾಣಿ ಚಿತ್ರ/ಅನೂಪ್ ರಾಘ.ಟಿ.

ಅರ್ಜುನ್‌–ನಿಶ್ಚಲ್‌ಗೆ ಸಮನ್ಸ್‌

ಮೈದಾನದಲ್ಲಿ ನಿಯಮ ಉಲ್ಲಂಘಿಸಿದ ಆರೋಪದ ಮೇಲೆ ಗೋವಾ ಆಲ್‌ರೌಂಡರ್ ಅರ್ಜುನ್‌ ತೆಂಡೂಲ್ಕರ್‌ ಹಾಗೂ ಕರ್ನಾಟಕದ ಬ್ಯಾಟರ್‌ ಡಿ. ನಿಶ್ಚಲ್‌ಗೆ ಪಂದ್ಯದ ರೆಫ್ರಿ ಅರಿಂದಮ್‌ ಸರ್ಕಾರ್‌ ಸಮನ್ಸ್ ನೀಡಿದರು ಎಂದು ಮೂಲಗಳು ತಿಳಿಸಿವೆ. ಶನಿವಾರ ಬೆಳಿಗ್ಗೆ ಬ್ಯಾಟಿಂಗ್ ವೇಳೆ ಅರ್ಜುನ್‌ ಕ್ಯಾಚ್‌ ಔಟ್‌ ನೀಡಿದ್ದ ಅಂಪೈರ್‌ ನಿರ್ಣಯವನ್ನು ಕೈ ಸನ್ಹೆ ಮೂಲಕ ಪ್ರಶ್ನಿಸಿದ್ದರು. ಅಂತೆಯೇ ಎಲ್‌ಬಿಡಬ್ಲ್ಯು ನೀಡಿದ ಅಂಪೈರ್‌ ತೀರ್ಪಿನ ವಿರುದ್ಧ ನಿಶ್ಚಲ್‌ ಬ್ಯಾಟ್ ತೋರಿಸಿ ಅಸಮಾಧಾನ ವ್ಯಕ್ತಪಡಿಸಿದ್ದರು ಎನ್ನಲಾಗಿದೆ. ಶುಭಾಂಗ್ ‘ಅಮಾನತು’ ಒಂದೇ ಇನ್ನಿಂಗ್ಸ್‌ನಲ್ಲಿ ಎರಡು ಹೈ ಫುಲ್‌ಟಾಸ್‌ ಎಸೆತಗಳನ್ನು ಎಸೆದಿದ್ದಕ್ಕಾಗಿ ಕರ್ನಾಟಕದ ಎಡಗೈ ಸ್ಪಿನ್ನರ್‌ ಶುಭಾಂಗ್‌ ಹೆಗಡೆ ಅವರನ್ನು ಅಂಪೈರ್‌ಗಳು ಮೊದಲ ಇನ್ನಿಂಗ್ಸ್‌ನ ಬೌಲಿಂಗ್‌ನಿಂದ ಅಮಾನತುಗೊಳಿಸಿದರು. ಶನಿವಾರ ಮುಂಜಾನೆ ಮೊದಲ ಅವಧಿಯಲ್ಲಿ ಬೌಲ್‌ ಮಾಡುತ್ತಿದ್ದ ವೇಳೆ ಶುಭಾಂಗ್‌ ಈ ಪ್ರಮಾದ ಎಸಗಿದರು. ಇದರಿಂದ ಬೌಲಿಂಗ್‌ ಅವಕಾಶ ಕಳೆದುಕೊಂಡರು. ನಿಕಿನ್ ಜೋಸ್‌ ಅವರು ಶುಭಾಂಗ್‌ ಓವರ್‌ ಅನ್ನು ಪೂರ್ಣಗೊಳಿಸಿದರು.

ಸ್ಕೋರ್‌ ಕಾರ್ಡ್‌

ಮೊದಲ ಇನಿಂಗ್ಸ್: ಗೋವಾ: 321 (110.1 ಓವರ್‌ಗಳಲ್ಲಿ) ( ಶುಕ್ರವಾರ: 8 ವಿಕೆಟ್‌ಗಳಿಗೆ 228 )

ತೆಂಡೂಲ್ಕರ್‌ ಸಿ ಶರತ್‌ ಬಿ ವೆಂಕಟೇಶ್‌ 52 ( 112 ಎ, 4X3, 6X1)

ಪರಬ್‌ ಬಿ ವೆಂಕಟೇಶ್‌ 53 ( 81 ಎ, 4X8, 6X1)

ಫಿಲಿಕ್ಸ್‌  ಔಟಾಗದೇ 3 ( 3 ಎ)

ಇತರೆ: 24 (ಬೈ4, ಲೆಗ್‌ಬೈ12, ವೈಡ್‌2, ನೋಬಾಲ್‌ 6)

ವಿಕೆಟ್ ಪತನ: 9–314 ( ಹೇರಂಬ ಪರಬ್; 108.5), 10–321 (ಅರ್ಜುನ್‌ ತೆಂಡೂಲ್ಕರ್; 110.1)

ಬೌಲಿಂಗ್‌: ವಿ. ಕೌಶಿಕ್‌ 26–8–49–1, ವಿ. ವೈಶಾಖ 25–5–76–3, ಎಂ. ವೆಂಕಟೇಶ 19.1–3–41–3, ಎ.ಸಿ. ರೋಹಿತ್‌ ಕುಮಾರ್ 29–5–90–3, ಶುಭಾಂಗ್‌ ಹೆಗಡೆ 8.1–0–28–0, ಮಯಂಕ್ ಅಗರವಾಲ್‌ 2–0–13–0, ನಿಕಿನ್‌ ಜೋಸ್‌ 0.5–0–8–0

ಬೌಲಿಂಗ್‌: ವಿ. ಕೌಶಿಕ್‌ 26–8–49–1, ವಿ. ವೈಶಾಖ 25–5–76–3, ಎಂ. ವೆಂಕಟೇಶ 19.1–3–41–3, ಎ.ಸಿ. ರೋಹಿತ್‌ ಕುಮಾರ್ 29–5–90–3, ಶುಭಾಂಗ್‌ ಹೆಗಡೆ 8.1–0–28–0, ಮಯಂಕ್ ಅಗರವಾಲ್‌ 2–0–13–0, ನಿಕಿನ್‌ ಜೋಸ್‌ 0.5–0–8–0

ಮೊದಲ ಇನಿಂಗ್ಸ್

ಕರ್ನಾಟಕ: 4 ವಿಕೆಟ್‌ಗೆ 253 ( 64 ಓವರ್‌ಗಳಲ್ಲಿ)‌

ಡಿ. ನಿಶ್ಚಲ್ ಎಲ್‌ಬಿಡಬ್ಲ್ಯು ದರ್ಶನ್‌ ಮಿಸಾಳ್‌ 16 (20 ಎ, 4X2)

ಮಯಂಕ್‌ ಅಗರವಾಲ್‌ ಸಿ ಇಶಾನ್ ಗಡೇಕರ್‌ ಬಿ ದರ್ಶನ್‌ ಮಿಸಾಳ್‌ 114 ( 178 ಎ, 4X10)

ದೇವದತ್ತ ಪಡಿಕ್ಕಲ್‌ ಸಿ ದರ್ಶನ್‌ ಮಿಸಾಳ್‌ ಬಿ ಮೋಹಿತ್‌ ರೆದ್ಕರ್‌ 103 ( 144 ಎ, 4X13)

ಎಸ್‌.ಜೆ. ನಿಕಿನ್ ಜೋಸ್‌ ಔಟಾಗದೇ 3 ( 22 ಎ)

ಎ.ಸಿ. ರೋಹಿತ್‌ಕುಮಾರ್‌ 2 ( 22 ಎ)

ಎಸ್. ಶರತ್‌ 0 ( 1 ಎ)

ಇತರೆ: 15 ( ಬೈ 5, ಲೆಗ್‌ ಬೈ 6, ವೈಡ್‌ 1, ನೋಬಾಲ್‌ 3)

ವಿಕೆಟ್ ಪತನ: 1–27 ( ನಿಶ್ಚಲ್‌; 5.3), 2–236 ( ಪಡಿಕ್ಕಲ್‌; 54.4), 3–244 ( ಮಯಂಕ್‌; 57.2), ಎ.ಸಿ. ರೋಹಿತ್‌ ಕುಮಾರ್ (62.5)

ಬೌಲಿಂಗ್‌: ಅರ್ಜುನ್‌ ತೆಂಡೂಲ್ಕರ್‌ 8–1–36–0, ಹೇರಂಬ ಪರಬ್ 5–0–28–0, ದರ್ಶನ್‌ ಮಿಸಾಳ್‌ 24–1–68–2, ಮೋಹಿತ್‌ ರೆಡಕರ್‌ 18–2–65–2, ಫಿಲಿಕ್ಸ್‌ ಅಲೆಮಾವೊ 9–1–45–0

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT