ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

Cricket: ಅಂತರರಾಷ್ಟ್ರೀಯ T20 ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ರವೀಂದ್ರ ಜಡೇಜ

Published 30 ಜೂನ್ 2024, 12:09 IST
Last Updated 30 ಜೂನ್ 2024, 15:09 IST
ಅಕ್ಷರ ಗಾತ್ರ

ನವದೆಹಲಿ: ಭಾರತ ಕ್ರಿಕೆಟ್ ತಂಡದ ಆಲ್‌ರೌಂಡರ್ ರವೀಂದ್ರ ಜಡೇಜ ಅಂತರರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. 

ಶನಿವಾರ ಟಿ20 ವಿಶ್ವಕಪ್ ಜಯಿಸಿದ ನಂತರ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರು ಚುಟುಕು ಕ್ರಿಕೆಟ್ ಮಾದರಿಗೆ ವಿದಾಯ ಘೋಷಿಸಿದ್ದರು. ಈಗ ಅವರ ಸಾಲಿಗೆ ಎಡಗೈ ಸ್ಪಿನ್‌–ಆಲ್‌ರೌಂಡರ್ ಜಡೇಜ ಸೇರಿದ್ದಾರೆ. 

35 ವರ್ಷದ ಅವರು ಅಮೆರಿಕ –ವೆಸ್ಟ್ ಇಂಡೀಸ್ ಆತಿಥ್ಯದಲ್ಲಿ ನಡೆದ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಎಂಟು ಪಂದ್ಯಗಳಲ್ಲಿ ಆಡಿದ್ದರು. ಒಟ್ಟು 14 ಓವರ್ ಬೌಲಿಂಗ್ ಮಾಡಿ ಒಂದು ವಿಕೆಟ್ ಗಳಿಸಿದ್ದರು. 35 ರನ್ ಬಿಟ್ಟುಕೊಟ್ಟಿದ್ದರು. ಬ್ಯಾಟಿಂಗ್‌ನಲ್ಲಿ 39 ರನ್ ಗಳಿಸಿದ್ದರು. ಗಯಾನದಲ್ಲಿ ನಡೆದಿದ್ದ ಇಂಗ್ಲೆಂಡ್ ಎದುರಿನ ಸೆಮಿಫೈನಲ್‌ನಲ್ಲಿ ಜಡೇಜ ಕ್ರೀಸ್‌ಗೆ ಬಂದಾಗ ತಂಡದ ಮೊತ್ತವು 6ಕ್ಕೆ146 ಆಗಿತ್ತು. ಜಡೇಜ ಅವರು 9 ಎಸೆತಗಳಲ್ಲಿ 17 ರನ್  ಗಳಿಸಿ ತಂಡದ ಮೊತ್ತವು 171ಕ್ಕೆ ಹೆಚ್ಚಲು ಪ್ರಮುಖ ಪಾತ್ರ ವಹಿಸಿದ್ದರು. ಆ ಪಂದ್ಯದಲ್ಲಿ ಭಾರತವು 68 ರನ್‌ಗಳಿಂದ ಜಯಿಸಿತ್ತು. 

ಏಳನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಜಡೇಜ ಅವರು ಇಂತಹ ಪುಟ್ಟದಾದರೂ ಮಹತ್ವದ ಪಾತ್ರ ವಹಿಸಿದ ಹಲವಾರು ಪಂದ್ಯಗಳಿವೆ. ಬೌಲಿಂಗ್‌ನಲ್ಲಿಯೂ ಮಿಂಚಿದ್ದಾರೆ. ತಮ್ಮ ಸಣ್ಣ ಅಂತರದ ರನ್‌ ಅಪ್ ಮೂಲಕ ಓವರ್‌ಗಳನ್ನು ವೇಗವಾಗಿ ಮುಗಿಸುವ ಅವರ ಕಲೆಗೆ ಬ್ಯಾಟರ್‌ಗಳು ಒತ್ತಡಕ್ಕೆ ಒಳಗಾದ ಉದಾಹರಣೆಗಳು ಸಾಕಷ್ಟಿವೆ. 

‘ಒಬ್ಬ ಆಲ್‌ರೌಂಡರ್‌ ಆಗಿ ಒತ್ತಡದ ಸನ್ನಿವೇಶಗಳಲ್ಲಿ ತಂಡಕ್ಕೆ ಆಸರೆಯಾಗುವುದು ನನ್ನ ಕರ್ತವ್ಯ. ತಂಡದ ಜಯಕ್ಕೆ 30–40 ರನ್‌ಗಳ ಅವಶ್ಯಕತೆ ಇದ್ದಾಗ ಅಥವಾ ಒಂದೋ ಎರಡೋ ವಿಕೆಟ್‌ಗಳನ್ನು ಉರುಳಿಸುವ ಅಗತ್ಯವಿದ್ದಾಗ ಸ್ಪಂದಿಸಿದಾಗ ಸಿಗುವ ಆತ್ಮತೃಪ್ತಿ ಅಮೂಲ್ಯವಾದದ್ದು’ ಎಂದು ಜಡೇಜ ಹೇಳುತ್ತಾರೆ. 

ಕೊಲಂಬೊದಲ್ಲಿ 2009ರಲ್ಲಿ ನಡೆದಿದ್ದ ಶ್ರೀಲಂಕಾ ಎದುರಿನ ಪಂದ್ಯದಲ್ಲಿ ಜಡೇಜ ಪದಾರ್ಪಣೆ ಮಾಡಿದ್ದರು. 74 ಪಂದ್ಯಗಳಲ್ಲಿ ಆಡಿ 515 ರನ್ ಗಳಿಸಿದ್ದಾರೆ. ಒಟ್ಟು 54 ವಿಕೆಟ್‌ಗಳು ಅವರ ಖಾತೆಯಲ್ಲಿವೆ. 

ಈ ವಿಶ್ವಕಪ್ ಟೂರ್ನಿಯಲ್ಲಿ ಎಡಗೈ ಆಟಗಾರ ಅಕ್ಷರ್ ಪಟೇಲ್ ಅವರು ಆಲ್‌ರೌಂಡ್ ಆಟವು ರಂಗೇರಿತ್ತು.  ಅವರು ಜಡೇಜ ಅವರ ಸ್ಥಾನವನ್ನು ತುಂಬಬಲ್ಲ ಆಲ್‌ರೌಂಡರ್ ಎಂದೂ ಹೇಳಲಾಗುತ್ತಿದೆ.

ಆದರೆ ಕಳೆದ 15 ವರ್ಷಗಳಿಂದ ಮೂರು ಮಾದರಿಗಳಲ್ಲಿಯೂ ಜಡೇಜ ಕೆಲವು ಪಂದ್ಯಗಳಲ್ಲಿ ವಿಜಯದ ರೂವಾರಿಯಾಗಿದ್ದರು. ಐಸಿಸಿ ಆಲ್‌ರೌಂಡರ್ ರ‍್ಯಾಂಕಿಂಗ್‌ನಲ್ಲಿಯೂ ಅವರು ದೀರ್ಘ ಕಾಲದವರೆಗೆ ಅಗ್ರಸ್ಥಾನ ಕಾಪಾಡಿಕೊಂಡಿದ್ದರು. 

ಇದೀಗ ಅಂತರರಾಷ್ಟ್ರೀಯ ಚುಟುಕು ಮಾದರಿಯಲ್ಲಿ ಅವರ ಸ್ಪಿನ್ ಮೋಡಿ ಮತ್ತು ಬೀಸಾಟಕ್ಕೆ ತೆರೆ ಬಿದ್ದಿದೆ. ಟೆಸ್ಟ್ ಕ್ರಿಕೆಟ್‌ ತಮ್ಮ ಜೊತೆಗಾರ ಆರ್‌. ಅಶ್ವಿನ್ ಅವರೊಂದಿಗೆ ಮತ್ತಷ್ಟು ಪಂದ್ಯಗಳಲ್ಲಿ ಕಾಣಿಸಿಕೊಳ್ಳಬಹುದು.  ಅಲ್ಲದೇ ಏಕದಿನ ಮತ್ತು ಐಪಿಎಲ್‌ ಟೂರ್ನಿಗಳಲ್ಲಿಯೂ ತಮ್ಮ ಆಟ ಮುಂದುವರಿಸುವ ಸಾಧ್ಯತೆ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT