ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2024 | ಇಂದು ರಾಜಸ್ಥಾನ ರಾಯಲ್ಸ್‌ಗೆ KKR ನಾರಾಯಣ್ ಸ್ಪಿನ್ ಸವಾಲು

ವಿಶ್ವಾಸದಲ್ಲಿರುವ ಸಂಜು ಪಡೆ* ಗೆದ್ದರೆ ಶ್ರೇಯಸ್‌ ಬಳಗಕ್ಕೆ ಅಗ್ರಸ್ಥಾನ
Published 15 ಏಪ್ರಿಲ್ 2024, 19:22 IST
Last Updated 15 ಏಪ್ರಿಲ್ 2024, 19:22 IST
ಅಕ್ಷರ ಗಾತ್ರ

ಕೋಲ್ಕತ್ತ: ರಾಜಸ್ಥಾನ ರಾಯಲ್ಸ್‌ ತಂಡದ ತಾರಾಖಚಿತ ಬ್ಯಾಟಿಂಗ್‌ ಸರದಿ, ಸುನೀಲ್‌ ನಾರಾಯಣ್ ಅವರ ಸ್ಪಿನ್‌ ಒಗಟನ್ನು ಎಷ್ಟರ ಮಟ್ಟಿಗೆ ಬಿಡಿಸಬಲ್ಲದು ಎಂಬ ಕುತೂಹಲ ಗರಿಗೆದರಿದೆ. ಇವೆರಡು ತಂಡಗಳು ಮಂಗಳವಾರ ಈಡನ್ ಗಾರ್ಡನ್‌ನಲ್ಲಿ ನಡೆಯುವ ಐಪಿಎಲ್‌ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ.

ಇನ್ನೊಂದು ತಿಂಗಳಲ್ಲಿ 36ನೇ ವರ್ಷಕ್ಕೆ ಕಾಲಿಡುವ ನಾರಾಯಣ್, ಈ ಹಿಂದೆ ಗೌತಮ್ ಗಂಭೀರ್‌ ಅವರ ತರಬೇತಿಯ ಅವಧಿಯಲ್ಲಿ– 2013 ಮತ್ತು 2014ರಲ್ಲೂ ಕೆಕೆಆರ್‌ ಕಿರೀಟ ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. 2012ರಲ್ಲಿ ತಂಡವವನ್ನು ಸೇರಿಕೊಂಡ ನಂತರ ಅವರು ತವರು ಮೈದಾನದಲ್ಲಿ ಎದುರಾಳಿ ಬ್ಯಾಟರ್‌ಗಳನ್ನು ಕಾಡಿದ್ದಾರೆ.

ನಾರಾಯಣ್ ಈ ಬಾರಿ ಆಲ್‌ರೌಂಡರ್ ಪ್ರದರ್ಶನ ನೀಡುತ್ತಿದ್ದಾರೆ. ಸನ್‌ರೈಸರ್ಸ್‌ ವಿರುದ್ಧ 19ಕ್ಕೆ1, ಲಖನೌ ಸೂಪರ್‌ಜೈಂಟ್ಸ್ ವಿರುದ್ಧ 17ಕ್ಕೆ 1 ವಿಕೆಟ್‌ ದೊಡ್ಡ ಸಾಧನೆಯಾಗಿ ಕಾಣುವುದಿಲ್ಲ. ಆದರೆ ವರು ಒಂದೂ ಬೌಂಡರಿ ನೀಡಿಲ್ಲ ಎನ್ನುವುದು ಗಮನಾರ್ಹ. ಅದು ಅಂತಿಮವಾಗಿ ಕೆಕೆಆರ್‌ ಪಾಲಿಗೆ ಅಮೂಲ್ಯವಾಯಿತು.

ಎಲ್‌ಎಸ್‌ಜಿ ವಿರುದ್ಧ ಭಾನುವಾರದ ಪಂದ್ಯದಲ್ಲಿ ಫಿಲ್‌ ಸಾಲ್ಟ್‌ ಸ್ಫೋಟಕ ಬ್ಯಾಟಿಂಗ್‌ನಿಂದ ಪಂದ್ಯದ ಆಟಗಾರ ಎನಿಸಿದರು. ಆದರೆ ಮಧ್ಯದ ಓವರ್‌ಗಳಲ್ಲಿ ನಾರಾಯಣ್ ಅವರ ಬಿಗು ದಾಳಿ ಲಖನೌ ಮೊತ್ತವನ್ನು 161ರ ಸಾಧಾರಣ ಮೊತ್ತಕ್ಕೆ ಕಟ್ಟಿಹಾಕಲು ನೆರವಾಗಿತ್ತು.

ಸಂಜು ಸ್ಯಾಮ್ಸನ್‌, ರಿಯಾನ್ ಪರಾಗ್‌, ಶಿಮ್ರಾನ್‌ ಹೆಟ್ಮೇಯರ್‌ (ಎಲ್ಲರ ಸ್ಟ್ರೈಕ್‌ರೇಟ್‌ 155ರ ಮೇಲಿದೆ) ಅವರು ನಾರಾಯಣ್ ಅವರನ್ನು ಹೇಗೆ ನಿಭಾಯಿಸುತ್ತಾರೆ ಎಂಬುದು ಕುತೂಹಲಕರ. ಕಿಂಗ್ಸ್ ವಿರುದ್ಧ ಪಂದ್ಯ ತಪ್ಪಿಸಿಕೊಂಡಿದ್ದ ಬಟ್ಲರ್ ತಂಡಕ್ಕೆ ಮರಳುವರೊ ಎಂಬುದನ್ನು ಕಾದುನೋಡಬೇಕಾಗಿದೆ.

ಬ್ಯಾಟಿಂಗ್‌ನಲ್ಲೂ ಸುನೀಲ್ ನಾರಾಯಣ್ 183.51ರ ಸ್ಟ್ರೈಕ್‌ರೇಟ್‌ನಲ್ಲಿ ರನ್‌ ಗಳಿಸಿದ್ದಾರೆ. 33ಕ್ಕಿಂ ಹೆಚ್ಚು ಸರಾಸರಿಯಿದೆ. ಎಲ್‌ಎಸ್‌ಜಿ ವಿರುದ್ಧ ಪಂದ್ಯದಲ್ಲಿ ಮಿಚೆಲ್‌ ಸ್ಟಾರ್ಕ್ ಅವರ (28ಕ್ಕೆ3) ಬೌಲಿಂಗ್ ಕೂಡ ಪರಿಣಾಮಕಾರಿಯಾಗಿತ್ತು.

ಇಂಥ ಪರಿಸ್ಥಿತಿಯಲ್ಲಿ ಪಂದ್ಯ ಕೆಕೆಆರ್‌ ಬೌಲಿಂಗ್‌ ವರ್ಸಸ್‌ ರಾಜಸ್ಥಾನ ರಾಯಲ್ಸ್‌ ಬ್ಯಾಟಿಂಗ್ ಎಂಬಂತೆ ಆಗಿದೆ. ಕೆಕೆಆರ್‌ ತಂಡಕ್ಕೆ ಸ್ವಲ್ಪ ಚಿಂತೆಯ ವಿಷಯವೆಂದರೆ ಶ್ರೇಯಸ್ ಅಯ್ಯರ್ ಅವರ ಎಂದಿನ ಲಯದಲ್ಲಿ ಇಲ್ಲದಿರುವುದು. ಲಖನೌ ವಿರುದ್ಧ ಅವರು ಅಜೇಯ 38 ರನ್ ಗಳಿಸಿದ್ದರೂ ಅದು ಗಮನ ಸೆಳೆಯುವ ರೀತಿಯಲ್ಲಿರಲಿಲ್ಲ.

ಕೆಕೆಆರ್‌ ಬ್ಯಾಟಿಂಗ್‌ ಹೆಚ್ಚಾಗಿ ಸಾಲ್ಟ್‌, ನಾರಾಯಣ್ ಅವರ ಮಿಂಚಿನ ಬ್ಯಾಟಿಂಗ್ ಮೇಲೆ ಅಲಂಬಿತವಾಗಿದೆ. ಕೊನೆಯಲ್ಲಿ ಆಂಡ್ರೆ ರಸೆಲ್‌ ಮಿಂಚಿನ ಬ್ಯಾಟಿಂಗ್‌ನಿಂದ ತಂಡದ ರಕ್ಷಣೆಗೆ ನಿಂತ ನಿದರ್ಶನ ಕಾಣಸಿಕ್ಕಿದೆ. ರಿಂಕು ಸಿಂಗ್ ಬ್ಯಾಟ್‌ ಎಂದಿನಂತೆ ಸದ್ದುಮಾಡಿಲ್ಲ. ಉಪ ನಾಯಕ ನಿತೀಶ್ ರಾಣಾ ಗಾಯಾಳಾಗಿದ್ದಾರೆ.

‌ರಾಯಲ್ಸ್‌ ಬೌಲಿಂಗ್ ದಾಳಿ ಪ್ರಬಲವಾಗಿದೆ. ಟ್ರೆಂಟ್‌ ಬೌಲ್ಟ್, ಆವೇಶ್ ಖಾನ್, ಯಜುವೇಂದ್ರ ಚಾಹಲ್, ಕೇಶವ ಮಹಾರಾಜ್ ಪ್ರದರ್ಶನ ಉತ್ತಮವಾಗಿಯೇ ಇದೆ. ಚಾಹಲ್‌ ಈ ಸಲ 11 ವಿಕೆಟ್‌ ಪಡೆದಿದ್ದಾರೆ.

ಪಂದ್ಯ ಆರಂಭ: ರಾತ್ರಿ 7.30.

ನೆರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌ ನೆಟ್‌ವರ್ಕ್‌ ಮತ್ತು ಜಿಯೊ ಆ್ಯಪ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT