ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2024 | ಸಂದೀಪ್‌ಗೆ 5 ವಿಕೆಟ್, ಜೈಸ್ವಾಲ್‌ ಶತಕ; ರಾಜಸ್ಥಾನಕ್ಕೆ ಏಳನೇ ಜಯ

Published 22 ಏಪ್ರಿಲ್ 2024, 18:59 IST
Last Updated 22 ಏಪ್ರಿಲ್ 2024, 18:59 IST
ಅಕ್ಷರ ಗಾತ್ರ

ಜೈಪುರ: ಈ ಆವೃತ್ತಿಯಲ್ಲಿ ಪರದಾಡುತ್ತಿದ್ದ ಯಶಸ್ವಿ ಜೈಸ್ವಾಲ್ ಅಮೋಘ ಶತಕದ (ಔಟಾಗದೇ 104, 60ಎ) ಮೂಲಕ ಲಯಕ್ಕೆ ಮರಳಿದರು. ಮೊದಲು ಸಂದೀಪ್‌ ಶರ್ಮಾ (18ಕ್ಕೆ5) ಅವರು ಮುಂಬೈ ಇಂಡಿಯನ್ಸ್‌ ತಂಡವನ್ನು ಸಾಧಾರಣ ಮೊತ್ತಕ್ಕೆ ಕಟ್ಟಿಹಾಕಲು ನೆರವಾದ ಬಳಿಕ, ಜೈಸ್ವಾಲ್‌ ಅವರು ರಾಜಸ್ಥಾನ ರಾಯಲ್ಸ್‌ ತಂಡ ಸೋಮವಾರ ನಡೆದ ಐಪಿಎಲ್‌  ಪಂದ್ಯದಲ್ಲಿ 9 ವಿಕೆಟ್‌ಗಳ ಸುಲಭ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಸವಾಯಿ ಮಾನ್‌ಸಿಂಗ್‌ ಕ್ರೀಡಾಂಗಣದಲ್ಲಿ ಟಾಸ್‌ ಗೆದ್ದ ಮುಂಬೈ 9 ವಿಕೆಟ್‌ಗೆ 179 ರನ್‌ ಗಳಿಸಿತು. ಉತ್ತರವಾಗಿ ರಾಜಸ್ಥಾನ ರಾಯಲ್ಸ್ ಎಂಟು ಎಸೆತಗಳು ಉಳಿದಿರುವಂತೆ 1 ವಿಕೆಟ್‌ಗೆ 104 ರನ್‌ ಹೊಡೆಯಿತು. ಯಶಸ್ವಿ ಅವರು 9 ಬೌಂಡರಿಗಳ ಜೊತೆ ಏಳು ಸಿಕ್ಸರ್‌ಗಳನ್ನು ಸಿಡಿಸಿದರು.

ಪವರ್‌ ಪ್ಲೇಗೆ ಮೊದಲು ವಿಕೆಟ್‌ ನಷ್ಟವಿಲ್ಲದೇ 61 ರನ್‌ ಗಳಿಸಿ ಒಳ್ಳೆಯ ಅಡಿಪಾಯ ಪಡೆದಿತ್ತು.  ಈ ವೇಳೆ ಮಳೆಯಿಂದ ಕೆಲಹೊತ್ತು ಆಟಕ್ಕೆ ಅಡ್ಡಿಯಾಯಿತು. ಎರಡು ಓವರುಗಳ ನಂತರ ನಂತರ ಜೋಸ್‌ ಬಟ್ಲರ್‌ (35, 25ಎ) ಅವರು ಪೀಯೂಷ್ ಚಾವ್ಲಾ ಅವರ ಬೌಲಿಂಗ್‌ನಲ್ಲಿ ಬೌಲ್ಡ್‌ ಆದರು. ಯಶಸ್ಸಿ ಜೊತೆಗೂಡಿದ ನಾಯಕ ಸಂಜು ಸ್ಯಾಮ್ಸನ್‌ (ಔಟಾಗದೇ 38, 28ಎ) ಅವರು ಮುರಿಯದ ಎರಡನೇ ವಿಕೆಟ್‌ಗೆ 109 ರನ್‌ ಸೇರಿಸಿದರು. ಇಬ್ಬರಿಗೂ ಒಂದೊಂದು ಜೀವದಾನ ದೊರೆಯಿತು.

ಇದಕ್ಕೆ ಮೊದಲು, ಗಾಯದ ವಿರಾಮದ ನಂತರ ತಂಡಕ್ಕೆ ಪುನರಾಗಮನ ಮಾಡಿದ ಮಧ್ಯಮ ವೇಗಿ ಸಂದೀಪ್‌ ಶರ್ಮಾ ಮೊದಲ ಸಲ ಐಪಿಎಲ್‌ನಲ್ಲಿ 5 ವಿಕೆಟ್‌ ಗೊಂಚಲು ಪಡೆದು ಮಿಂಚಿದರು. ಸಂದೀಪ್‌, ಎರಡನೇ ಸ್ಪೆಲ್‌ನ ಅಂತಿಮ ಓವರ್‌ನಲ್ಲಿ 3 ವಿಕೆಟ್‌ ಪಡೆದರು. ಇದರಲ್ಲಿ ಅರ್ಧ ಶತಕ ಗಳಿಸಿದ್ದ ತಿಲಕ್‌ ವರ್ಮಾ ಅವರ ವಿಕೆಟ್‌ ಒಳಗೊಂಡಿತ್ತು.

ಒಂದು ಹಂತದಲ್ಲಿ 4 ವಿಕೆಟ್‌ಗೆ 52 ರನ್‌ ಗಳಿಸಿ ಇಕ್ಕಟ್ಟಿಗೆ ಸಿಲುಕಿದ್ದ ಮುಂಬೈ ತಂಡ, ಎಡಗೈ ಬ್ಯಾಟರ್‌ ತಿಲಕ್‌ (65, 45ಎ, 4x4, 6x3) ಮತ್ತು ನೇಹಲ್‌ ವಢೇರಾ (49, 24, 4x3, 6x4) ಅವರ 99 ರನ್‌ಗಳ ಜೊತೆಯಾಟದಿಂದ ಜೀವಕಳೆ ಪಡೆಯಿತು.

ಚಾಹಲ್‌ಗೆ 200 ವಿಕೆಟ್‌: ಈ ಪಂದ್ಯದಲ್ಲಿ ಯಜುವೇಂದ್ರ ಚಾಹಲ್‌ ಅವರು ಮೊಹಮ್ಮದ್‌ ನಬಿ (23) ಅವರ ವಿಕೆಟ್‌ ಪಡೆಯುವ ಮೂಲಕ ಐಪಿಎಲ್‌ನಲ್ಲಿ 200 ವಿಕೆಟ್‌ಗಳ ಮೈಲಿಗಲ್ಲು ದಾಟಿ ದಾಖಲೆ ಸ್ಥಾಪಿಸಿದರು.

ಆರಂಭಿಕ ಕುಸಿತ: ವೇಗದ ಬೌಲರ್‌ ಟ್ರೆಂಟ್‌ ಬೌಲ್ಟ್‌ ಆರಂಭದಲ್ಲೇ ರೋಹಿತ್ ಶರ್ಮಾ (6) ವಿಕೆಟ್‌ ಪಡೆದು ಮುಂಬೈ ಕುಸಿತಕ್ಕೆ ನಾಂದಿ ಹಾಡಿದ್ದರು. ಇಶಾನ್‌ ಕಿಶನ್‌ ಹೆಚ್ಚು ಹೊತ್ತು ನಿಲ್ಲದೇ, ಸಂದೀಪ್‌ ಶರ್ಮಾ ಬೌಲಿಂಗ್‌ನಲ್ಲಿ ವಿಕೆಟ್‌ ಕೀಪರ್‌ ಸಂಜು ಸ್ಯಾಮ್ಸನ್‌ ಅವರಿಗೆ ಕ್ಯಾಚ್‌ ನೀಡಿದರು. ಪ್ರಮುಖ ಬ್ಯಾಟರ್‌ ಸೂರ್ಯಕುಮಾರ್ ಯಾದವ್ (10) ಅವರ ವಿಕೆಟ್‌ ಕೂಡ ಪಡೆದ ಸಂದೀಪ್‌ ಮುಂಬೈಗೆ ದೊಡ್ಡ ಪೆಟ್ಟು ನೀಡಿದರು. ಅವರು ಮಿಡ್‌ ಆನ್‌ನಲ್ಲಿ ರೋವ್ಮನ್‌ ಪೊವೆಲ್‌ ಅವರಿಗೆ ಕ್ಯಾಚಿತ್ತರು.

ಸಂಕ್ಷಿಪ್ತ ಸ್ಕೋರ್‌

ಮುಂಬೈ ಇಂಡಿಯನ್ಸ್‌ 20 ಓವರ್‌ಗಳಲ್ಲಿ 9ಕ್ಕೆ 179 (ತಿಲಕ್‌ ವರ್ಮಾ 65, ಮೊಹಮ್ಮದ್‌ ನಬಿ 23, ನೆಹಾಲ್ ವಧೇರಾ 49; ಸಂದೀಪ್‌ ಶರ್ಮಾ 18ಕ್ಕೆ 5, ಟ್ರೆಂಟ್ ಬೌಲ್ಟ್ 32ಕ್ಕೆ2

ರಾಜಸ್ಥಾನ ರಾಯಲ್ಸ್‌: 18.4 ಓವರುಗಳಲ್ಲಿ 1 ವಿಕೆಟ್‌ಗೆ 183 (ಯಶಸ್ವಿ ಜೈಸ್ವಾಲ್‌ ಔಟಾಗದೇ 104, ಜೋಸ್‌ ಬಟ್ಲರ್‌ 35, ಸಂಜು ಸ್ಯಾಮ್ಸನ್‌ ಔಟಾಗದೇ 38).

ಪಂದ್ಯದ ಆಟಗಾರ: ಸಂದೀಪ್‌ ಶರ್ಮಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT