ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೈಯದ್ ಮುಶ್ತಾಕ್ ಅಲಿ ಟ್ರೋಫಿ ಕ್ರಿಕೆಟ್‌: ಕರ್ನಾಟಕ ತಂಡದ ಅಜೇಯ ಓಟ

ಪ್ರಸಿದ್ಧ ಕೃಷ್ಣ, ಶ್ರೇಯಸ್‌ ಪರಿಣಾಮಕಾರಿ ದಾಳಿ
Last Updated 2 ಮಾರ್ಚ್ 2019, 19:11 IST
ಅಕ್ಷರ ಗಾತ್ರ

ಕಟಕ್‌: ಆರಂಭಿಕ ಬ್ಯಾಟ್ಸ್‌ಮನ್ ರೋಹನ್ ಕದಂ ಅವರ ಉತ್ತಮ ಬ್ಯಾಟಿಂಗ್ ಮತ್ತು ಪ್ರಸಿದ್ಧ ಕೃಷ್ಣ–ಶ್ರೇಯಸ್ ಗೋಪಾಲ್ ಅವರ ಪರಿಣಾಮಕಾರಿ ಬೌಲಿಂಗ್ ನೆರವಿನಿಂದ ಕರ್ನಾಟಕ ತಂಡ ಸೈಯದ್ ಮುಶ್ತಾಕ್ ಅಲಿ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಅಮೋಘ ಜಯ ಸಾಧಿಸಿತು.

ಶನಿವಾರ ಇಲ್ಲಿ ನಡೆದ ಪಂದ್ಯದಲ್ಲಿ ಹರಿಯಾಣವನ್ನು ಕರ್ನಾಟಕ 14 ರನ್‌ಗಳಿಂದ ಮಣಿಸಿ ಸತತ ಏಳನೇ ಜಯ ತನ್ನದಾಗಿಸಿಕೊಂಡಿತು. ಈ ಮೂಲಕ ‘ಡಿ’ ಗುಂಪಿನಲ್ಲಿ 28 ಪಾಯಿಂಟ್‌ಗಳೊಂದಿಗೆ ಪಾಯಿಂಟ್‌ ಪಟ್ಟಿಯ ಅಗ್ರ ಸ್ಥಾನದಲ್ಲಿ ಉಳಿಯಿತು.

ಟಾಸ್‌ ಗೆದ್ದು ಫೀಲ್ಡಿಂಗ್ ಆಯ್ದುಕೊಂಡು ಅಮಿತ್ ಮಿಶ್ರಾ ನಾಯಕತ್ವದ ಹರಿಯಾಣದ ಲೆಕ್ಕಾಚಾರವನ್ನು ರೋಹನ್ ಕದಂ ಮತ್ತು ಬಿ.ಆರ್.ಶರತ್ ಬುಡಮೇಲು ಮಾಡಿದರು. ಮೊದಲ ವಿಕೆಟ್‌ಗೆ ಇವರಿಬ್ಬರು 42 ರನ್‌ ಸೇರಿಸಿದರು.

10 ಎಸೆತಗಳ ಅಂತರದಲ್ಲಿ ಇವರಿಬ್ಬರು ಔಟಾದ ನಂತರ ಮಯಂಕ್ ಅಗರವಾಲ್‌ ಮತ್ತು ಕರುಣ್ ನಾಯರ್‌ 31 ರನ್‌ ಸೇರಿಸಿದರು. ಮನೀಷ್ ಪಾಂಡೆ 23 ಎಸೆತಗಳಲ್ಲಿ 25 ರನ್‌ ಗಳಿಸಿ ಮಿಂಚಿದರು.

ಆದರೆ ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಬೇಗನೇ ವಿಕೆಟ್ ಒಪ್ಪಿಸಿದ ಕಾರಣ ನಿರೀಕ್ಷಿತ ಮೊತ್ತ ಸೇರಿಸಲು ಕರ್ನಾಟಕಕ್ಕೆ ಸಾಧ್ಯವಾಗಲಿಲ್ಲ. ಐದು ಮಂದಿ ಎರಡಂಕಿ ಮೊತ್ತ ದಾಟಲಾಗದೆ ಮರಳಿದರು.

ಸುಮಿತ್ ಕುಮಾರ್‌ ಬ್ಯಾಟಿಂಗ್ ವೈಭವ: ಸಾಧಾರಣ ಗುರಿ ಬೆನ್ನತ್ತಿದ ಹರಿಯಾಣಕ್ಕೆ ಪ್ರಸಿದ್ಧ ಕೃಷ್ಣ ಮತ್ತು ಶ್ರೇಯಸ್‌ ನಿರಂತರವಾಗಿ ಪೆಟ್ಟು ನೀಡಿದರು. ತಂಡದ ಎಂಟು ಬ್ಯಾಟ್ಸ್‌ಮನ್‌ಗಳು ಎರಡಂಕಿ ಮೊತ್ತ ದಾಟದೆ ಮರಳಿದರು. ಇವರ ಪೈಕಿ ಮೂವರು ಶೂನ್ಯಕ್ಕೆ ಔಟಾದರು. ವಿಕೆಟ್‌ ಕೀಪರ್ ನಿತಿನ್ ಸೈನಿ, ಏಳನೇ ಕ್ರಮಾಂಕದ ಸುಮಿತ್ ಕುಮಾರ್ ಮತ್ತು ಬಾಲಂಗೋಚಿ ಅರುಣ್ ಚಪ್ರಾನ ಸ್ವಲ್ಪ ಪ್ರತಿರೋಧ ಒಡ್ಡಿದರು. ಸುಮಿತ್‌ 40 ಎಸೆತಗಳಲ್ಲಿ ಮೂರು ಸಿಕ್ಸರ್ ಮತ್ತು ಎಂಟು ಬೌಂಡರಿ ಒಳಗೊಂಡ 63 ರನ್‌ ಗಳಿಸಿ ಏಕಾಂಗಿ ಹೋರಾಟ ನಡೆಸಿದರು.

ಸಂಕ್ಷಿಪ್ತ ಸ್ಕೋರು: ಕರ್ನಾಟಕ: 20 ಓವರ್‌ಗಳಲ್ಲಿ 9ಕ್ಕೆ 138 (ರೋಹನ್ ಕದಂ 25, ಬಿ.ಆರ್.ಶರತ್‌ 16, ಮಯಂಕ್ ಅಗರವಾಲ್‌ 20, ಕರುಣ್‌ ನಾಯರ್‌ 18, ಮನೀಷ್ ಪಾಂಡೆ 25, ಜೆ.ಸುಚಿತ್‌ 17; ಅರುಣ್ ಚಪ್ರಾನ 29ಕ್ಕೆ3, ಸುಮಿತ್ ಕುಮಾರ್‌ 23ಕ್ಕೆ 2, ಅಮಿತ್ ಮಿಶ್ರಾ 26ಕ್ಕೆ3); ಹರಿಯಾಣ: 19.1 ಓವರ್‌ಗಳಲ್ಲಿ 124 (ಸುಮಿತ್ ಕುಮಾರ್‌ 63; ವಿನಯಕುಮಾರ್‌ 26ಕ್ಕೆ1, ಪ್ರಸಿದ್ಧ ಕೃಷ್ಣ 25ಕ್ಕೆ3, ಜೆ.ಸುಚಿತ್‌ 18ಕ್ಕೆ1, ಶ್ರೇಯಸ್ ಗೋಪಾಲ್‌ 16ಕ್ಕೆ3). ಫಲಿತಾಂಶ: ಕರ್ನಾಟಕಕ್ಕೆ 14 ರನ್‌ಗಳ ಜಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT