ಕ್ರಿಕೆಟ್‌: ದಕ್ಷಿಣ ಆಫ್ರಿಕಾ ‘ಎ’ ತಂಡದ ವಿರುದ್ಧ ಮಯಂಕ್‌, ಪೃಥ್ವಿ ಶತಕದ ಅಬ್ಬರ

7

ಕ್ರಿಕೆಟ್‌: ದಕ್ಷಿಣ ಆಫ್ರಿಕಾ ‘ಎ’ ತಂಡದ ವಿರುದ್ಧ ಮಯಂಕ್‌, ಪೃಥ್ವಿ ಶತಕದ ಅಬ್ಬರ

Published:
Updated:

ಬೆಂಗಳೂರು:  ಕರ್ನಾಟಕದ ‘ರನ್ ಯಂತ್ರ’ ಮಯಂಕ್‌ ಅಗರವಾಲ್ ಮತ್ತು ಮುಂಬೈಕರ್ ಪೃಥ್ವಿ ಶಾ ಇಲ್ಲಿ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ‘ ಎ’ ವಿರುದ್ಧದ ಪಂದ್ಯದಲ್ಲಿ ಭಾನುವಾರ ತಲಾ ಒಂದು ಶತಕ ದಾಖಲಿಸಿದರು. ಈ ಆರಂಭಿಕ ಜೋಡಿಯ ಅಬ್ಬರದ ಆಟದಿಂದಾಗಿ  ಭಾರತ ‘ಎ’ ತಂಡವು ಮೊದಲ ಇನಿಂಗ್ಸ್‌ ಮುನ್ಪಡೆಯುವತ್ತ ದಾಪುಗಾಲಿಟ್ಟಿದೆ. 

ಶನಿವಾರ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದ ಪ್ರವಾಸಿ ತಂಡವು 246 ರನ್‌ ಗಳಿಸಿತು. ಅದಕ್ಕುತ್ತರವಾಗಿ ಭಾರತ ‘ಎ’ ತಂಡವು ಭಾನುವಾರ ಊಟದ ವಿರಾಮದ ವೇಳೆಗೆ 26.1 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೇ 200  ರನ್‌ ಗಳಿಸಿತು.
ಚುರುಕಾಗಿ ಬ್ಯಾಟಿಂಗ್ ಮಾಡುತ್ತಿರುವ ಆರಂಭಿಕ ಜೋಡಿ ಪೃಥ್ವಿ ಶಾ ( ಬ್ಯಾಟಿಂಗ್ 103;  167 ನಿಮಿಷ, 116 ಎಸೆತ, 18ಬೌಂಡರಿ,  1ಸಿಕ್ಷರ್ ) ಮತ್ತು ಮಯಂಕ್ ಅಗರವಾಲ್ (ಬ್ಯಾಟಿಂಗ್ 100; 102 ಎಸೆತ, 153 ನಿಮಿಷ, 17 ಬೌಂಡರಿ, 1 ಸಿಕ್ಸರ್)  ಭರ್ಜರಿ  ಆರಂಭ ನೀಡಿದರು.

ಇವರಿಬ್ಬರ ಬ್ಯಾಟಿಂಗ್‌ಗೆ ಕಡಿವಾಣ ಹಾಕಲು ದಕ್ಷಿಣ  ಆಫ್ರಿಕಾ ‘ಎ’ ತಂಡದ ಬೌಲರ್‌ಗಳು ಪರದಾಡಿದರು. ಅದರಲ್ಲೂ ಮಯಂಕ್ ಅವರು ಟ್ವೆಂಟಿ–20 ಮಾದರಿಯ ಬ್ಯಾಟಿಂಗ್ ಮಾಡಿದರು. ಆದರೆ ಈ ಚೆಂದದ ಆಟವನ್ನು ಕ್ರೀಡಾಂಗಣದಲ್ಲಿದ್ದ  60–70 ಜನರು ಆಸ್ವಾದಿಸಿದರು. 
 
ಮೊದಲ ದಿನ ರೂಡಿ ಸೆಕೆಂಡ್ ಅವರ ಅಮೋಘ ಬ್ಯಾಟಿಂಗ್ ಬಲದಿಂದ ದಕ್ಷಿಣ  ಆಫ್ರಿಕಾ ಬಳಗವು 88 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 246 ರನ್‌ ಗಳಿಸಿತ್ತು. ಭಾನುವಾರ ಬೆಳಿಗ್ಗೆ ಮೂರೇ ಎಸೆತಗಳಲ್ಲಿ ತಂಡದ ಇನಿಂಗ್ಸ್‌ ಮುಗಿಯಿತು. ಬಾಕಿ ಇದ್ದ ಎರಡು ವಿಕೆಟ್‌ಗಳನ್ನು ಮೊಹಮ್ಮದ್ ಸಿರಾಜ್ ಕಬಳಿಸಿದರು. ಮೊದಲ ದಿನ ಮೂರು ವಿಕೆಟ್ ಪಡೆದಿದ್ದ ಅವರು ಒಟ್ಟು 5 ವಿಕೆಟ್‌ಗಳನ್ನು ಗಳಿಸಿದ ಸಾಧನೆ ಮಾಡಿದರು. 
 
ಬ್ಯಾಟಿಂಗ್ ಆರಂಭಿಸಿದ  ಭಾರತ ‘ಎ’ ತಂಡದ ಮಯಂಕ್ ಮತ್ತು ಪೃಥ್ವಿ ರನ್ ಹೊಳೆ ಹರಿಸಿದರು. ಇವರಿಬ್ಬರನ್ನು ಕಟ್ಟಿಹಾಕುವಲ್ಲಿ ಬೌಲರ್‌ಗಳು ಯಾವುದೇ ಕಠಿಣ ಸ್ಪರ್ಧೆ ಒಡ್ಡಲಿಲ್ಲ.  ಮಯಂಕ್‌ಗಿಂತ ಮೊದಲು ಪೃಥ್ವಿ ಅರ್ಧಶತಕ ಪೂರೈಸಿದರು. ಆದರೆ ಜಿದ್ದಿಗೆ ಬಿದ್ದಂತೆ ಆಡಿದ ಮಯಂಕ್ ಪೃಥ್ವಿಗಿಂತ ಮೊದಲೇ ಶತಕ ಸಿಡಿಸಿ ಸಂಭ್ರಮಿಸಿದರು.  
 
ಹೋದ ದೇಶಿ ಋತುವಿನಲ್ಲಿ ರನ್‌ಗಳ ಹೊಳೆಯನ್ನೇ ಹರಿಸಿದ್ದ ಮಯಂಕ್ ತಮ್ಮ ಲಯವನ್ನು ಇಲ್ಲಿಯೂ ಮುಂದುವರಿಸಿದರು. ಆಕರ್ಷಕ ಕಟ್,, ಡ್ರೈವ್, ಸ್ಟ್ರೇಟ್‌ ಶಾಟ್‌ಗಳ ರಸದೌತಣ ನೀಡಿದರು. ಕೇವಲ 57 ಎಸೆತಗಳಲ್ಲಿ ಅರ್ಧಶತಕ ಬಾರಿಸಿದರು. ನಂತರ  ಆಡಿದ 45 ಎಸೆತಗಳಲ್ಲಿ ಶತಕದ ಗಡಿ ಮುಟ್ಟಿದರು. 19 ವರ್ಷದೊಳಗಿನವರ ವಿಶ್ವಕಪ್ ವಿಜೇತ ತಂಡದ ನಾಯಕ ಪೃಥ್ವಿ ಶಾ  ಬೌಲರ್‌ಗಳನ್ನು ಕಾಡಿದರು. ಫೀಲ್ಡರ್‌ಗಳ ನಡುವಿನ ಗ್ಯಾಪ್‌ನಲ್ಲಿ ಚೆಂಡನ್ನು ಬೌಂಡರಿಗೆ ಕಳಿಸುತ್ತಿದ್ದ ಅವರ ಆಟ ಆಕರ್ಷಕವಾಗಿತ್ತು.  
 
  

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !