ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶುಭಮನ್ ದಾಖಲೆಯ ದ್ವಿಶತಕ

ವೆಸ್ಟ್ ಇಂಡೀಸ್ ‘ಎ’ ಎದುರಿನ ಅನಧಿಕೃತ ಟೆಸ್ಟ್: ಗೆಲುವಿನ ಸನಿಹ ಭಾರತ ‘ಎ’ ತಂಡ
Last Updated 9 ಆಗಸ್ಟ್ 2019, 18:40 IST
ಅಕ್ಷರ ಗಾತ್ರ

ತರೋಬಾ, ವೆಸ್ಟ್ ಇಂಡೀಸ್ : ಆತಂಕದ ಕಡಲಿನಲ್ಲಿದ್ದ ತಂಡವನ್ನು ಮೇಲೆತ್ತಿ ಆತ್ಮವಿಶ್ವಾಸ ತುಂಬಿದ ಯುವ ಆಟಗಾರ ಶುಭಮನ್ ಗಿಲ್ ದ್ವಿಶತಕ ಗಳಿಸಿದರು; ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ದ್ವಿಶತಕ ಗಳಿಸಿದ ಭಾರತದ ಅತಿ ಕಿರಿಯ ಆಟಗಾರ ಎಂಬ ದಾಖಲೆಯನ್ನೂ ಬರೆದರು.

ಇಲ್ಲಿ ನಡೆಯುತ್ತಿರುವ ವೆಸ್ಟ್ ಇಂಡೀಸ್ ‘ಎ’ ಎದುರಿನ ಮೂರನೇ ಅನಧಿಕೃತ ಟೆಸ್ಟ್ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ ಶುಭಮನ್ (204; 248 ಎಸೆತ, 2 ಸಿಕ್ಸರ್‌, 19 ಬೌಂಡರಿ) ಮತ್ತು ನಾಯಕ ಹನುಮ ವಿಹಾರಿ (118; 221ಎ, 1 ಸಿ, 10 ಬೌಂ) ಅಜೇಯ ಜೊತೆಯಾಟದ ಮೂಲಕ ಮಿಂಚಿದರು.

ಐದನೇ ವಿಕೆಟ್‌ಗೆ ಇವರಿಬ್ಬರು ಸೇರಿಸಿದ 315 ರನ್‌ ಭಾರತಕ್ಕೆ ಭಾರಿ ಮುನ್ನಡೆ ಗಳಿಸಿಕೊಟ್ಟಿತು. 373 ರನ್‌ಗಳ ಗೆಲುವಿನ ಗುರಿ ಬೆನ್ನತ್ತಿರುವ ಆತಿಥೇಯರು ಮೂರನೇ ದಿನವಾದ ಗುರುವಾರ ವಿಕೆಟ್ ಕಳೆದುಕೊಳ್ಳದೆ 37 ರನ್‌ ಗಳಿಸಿದ್ದು ತಂಡದ ಜಯಕ್ಕೆ ಇನ್ನೂ 336 ರನ್‌ಗಳ ಅಗತ್ಯವಿದೆ.

ಮೊದಲ ಇನಿಂಗ್ಸ್‌ನಲ್ಲಿ ಕೇವಲ ಏಳು ರನ್‌ಗಳ ಮುನ್ನಡೆ ಗಳಿಸಿದ್ದ ಭಾರತ ‘ಎ’ ಎರಡನೇ ಇನಿಂಗ್ಸ್‌ನ ಆರಂಭದಲ್ಲೇ ವಿಕೆಟ್‌ಗಳನ್ನು ಕಳೆದುಕೊಂಡಿತು. 18ನೇ ಓವರ್‌ನಲ್ಲಿ 50 ರನ್ ಗಳಿಸುವಷ್ಟರಲ್ಲಿ ಪ್ರಿಯಾಂಕ್ ಪಾಂಚಾಲ್‌, ಅಭಿಮನ್ಯು ಈಶ್ವರನ್, ಮಯಂಕ್ ಅಗರವಾಲ್ ಮತ್ತು ಶಹಬಾಜ್ ನದೀಮ್ ಅವರ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.

ಈ ಸಂದರ್ಭದಲ್ಲಿ ಜೊತೆಗೂಡಿದ ಶುಭಮನ್ ಮತ್ತು ಹನುಮ ವಿಹಾರಿ ಎದುರಾಳಿ ತಂಡದ ಬೌಲರ್‌ಗಳನ್ನು ಎಗ್ಗಿಲ್ಲದೆ ದಂಡಿಸಿದರು. 19 ವರ್ಷದ ಶುಭಮನ್‌ ಇನ್ನೂರು ರನ್‌ ದಾಟುತ್ತಿದ್ದಂತೆ ಗೌತಮ್ ಗಂಭೀರ್ ಹೆಸರಿನಲ್ಲಿದ್ದ ದಾಖಲೆ ಮುರಿದು ಬಿತ್ತು. ಗಂಭೀರ್ 20ನೇ ವಯಸ್ಸಿನಲ್ಲಿ ದ್ವಿಶತಕ ಗಳಿಸಿದ್ದರು. 2002ರಲ್ಲಿ ಜಿಂಬಾಬ್ವೆ ಎದುರಿನ ಪಂದ್ಯದಲ್ಲಿ ಭಾರತ ಮಂಡಳಿ ಇಲೆವನ್ ಪರವಾಗಿ ಗಂಭೀರ್‌ 218 ರನ್ ಸೇರಿಸಿದ್ದರು.

‌ಬುಧವಾರ 3ಕ್ಕೆ23 ರನ್‌ ಗಳಿಸಿದ್ದ ಭಾರತ ‘ಎ’ ತಂಡದ ಶಹಬಾಜ್ ನದೀಮ್ 13 ರನ್‌ ಗಳಿಸಿ ಮರಳಿದರು. ವೈಯಕ್ತಿಕ ಎರಡು ರನ್‌ಗಳಿಂದ ದಿನದಾಟ ಆರಂಭಿಸಿದ ಶುಭಮನ್ ನಿರಾಯಾಸವಾಗಿ ಬ್ಯಾಟ್ ಬೀಸಿದರು. ಹೀಗಾಗಿ ಭೋಜನ ವಿರಾಮದ ಮೊದಲೇ ಶತಕ ಪೂರೈಸಲು ಅವರಿಗೆ ಸಾಧ್ಯವಾಯಿತು.

ತಿರುಗೇಟು ನೀಡಿದ ಶುಭಮನ್ ಗಿಲ್: ಮೊದಲ ಇನಿಂಗ್ಸ್‌ನಲ್ಲಿ ಎದುರಿಸಿದ ಮೊದಲ ಎಸೆತದಲ್ಲೇ ಔಟಾಗಿದ್ದ ಶುಭಮನ್ ಎರಡನೇ ಇನಿಂಗ್ಸ್‌ನಲ್ಲಿ ಬೌಲರ್‌ಗಳಿಗೆ ತಿರುಗೇಟು ನೀಡಿದರು. 82.25ರ ಸ್ಟ್ರೈಕ್‌ರೇಟ್‌ನಲ್ಲಿ ರನ್ ಗಳಿಸಿದ ಅವರಿಗೆ ನಾಯಕ ಉತ್ತಮ ಸಹಕಾರ ನೀಡಿದರು. ಹನುಮ ವಿಹಾರಿ ಮೊದಲ ಇನಿಂಗ್ಸ್‌ನಲ್ಲಿ 55 ರನ್‌ ಗಳಿಸಿದ್ದರು. ಗಿಲ್‌ ದ್ವಿಶತಕ ಗಳಿಸಿದ ಕೂಡಲೇ ಭಾರತ ‘ಎ’ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು.

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್‌: ಭಾರತ ‘ಎ’: 201; ವೆಸ್ಟ್ ಇಂಡೀಸ್ ‘ಎ’:194; ಎರಡನೇ ಇನಿಂಗ್ಸ್‌: ಭಾರತ ‘ಎ’ (ಬುಧವಾರದ ಅಂತ್ಯಕ್ಕೆ 9 ಓವರ್‌ಗಳಲ್ಲಿ 3ಕ್ಕೆ23): 90 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 365 ಡಿಕ್ಲೇರ್‌ (ಶುಭಮನ್ ಗಿಲ್ ಅಜೇಯ 204, ಹನುಮ ವಿಹಾರಿ ಅಜೇಯ 118; ಮಿಗೆಲ್ ಕಮಿನ್ಸ್‌ 28ಕ್ಕೆ1, ಚೆಮರ್ ಹೋಲ್ಡರ್ 88ಕ್ಕೆ2, ಅಕಿಮ್ ಫ್ರೇಜರ್ 104ಕ್ಕೆ1); ವೆಸ್ಟ್ ಇಂಡೀಸ್‌: 15 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 37 (ಮಾಂಟ್ಸಿನ್ ಹಾಜ್ 15, ಜೆರೆಮಿ ಜೊಲೊಜಾನೊ 20).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT