ಗುರುವಾರ , ಮಾರ್ಚ್ 4, 2021
29 °C

ಗಂಗೂಲಿ ಜನ್ಮದಿನದಲ್ಲಿ ಸೆಮಿಫೈನಲ್ ಜಯದ ಕನವರಿಕೆ

ಪಿಟಿಐ Updated:

ಅಕ್ಷರ ಗಾತ್ರ : | |

ಕೋಲ್ಕತ್ತ: ಹಿರಿಯ ಕ್ರಿಕೆಟಿಗ ಸೌರವ್ ಗಂಗೂಲಿ ಸೋಮವಾರ 47ನೇ ವಸಂತಕ್ಕೆ ಕಾಲಿಟ್ಟರು. ವಿಶ್ವಕಪ್ ವೀಕ್ಷಕ ವಿವರಣೆ ಮಾಡುತ್ತಿರುವ ಗಂಗೂಲಿ ಇಂಗ್ಲೆಂಡ್‌ನಲ್ಲಿದ್ದಾರೆ. ಆದರೂ ಅವರ ಅಭಿಮಾನಿಗಳು ಕೋಲ್ಕತ್ತದಲ್ಲಿ ‘ದಾದಾ’ನ ಜನ್ಮದಿನವನ್ನು ಸಂಭ್ರಮದಿಂದ ಆಚರಿಸಿದರು. ಈ ಸಂತಸದಲ್ಲಿ, ಭಾರತ ತಂಡ ವಿಶ್ವಕಪ್ ಸೆಮಿಫೈನಲ್‌ನಲ್ಲಿ ಗೆಲ್ಲಲಿ ಎಂಬ ಆಶಯವೂ ಇತ್ತು. 

ಬೆಹಾಲ್‌ನಲ್ಲಿರುವ ಗಂಗೂಲಿ ನಿವಾಸದ ಬಳಿ ಸೇರಿದ ಅಭಿಮಾನಿಗಳು ಸಿಹಿ ಹಂಚಿದರು. ಗಂಗೂಲಿ ಅಭಿಮಾನಿ ಬಳಗದವರು ಭಾರತ–ನ್ಯೂಜಿಲೆಂಡ್ ನಡುವಿನ ಸೆಮಿಫೈನಲ್‌ ಹಣಾಹಣಿಯ ನೇರ ಪ್ರಸಾರವನ್ನು ಬೃಹತ್ ಪರದೆಯಲ್ಲಿ ನೋಡುವ ವ್ಯವಸ್ಥೆ ಮಾಡಿದ್ದಾರೆ. ರಾತ್ರಿ 100 ಮಂದಿಗೆ ಭೋಜನ ಸೌಲಭ್ಯವನ್ನೂ ಏರ್ಪಡಿಸಿದೆ.

ಇನ್‌ಸ್ಟಾಗ್ರಾಂ ಪ್ರವೇಶಿಸಿದ ಗಂಗೂಲಿ:ಇದೇ ವೇಳೆ ಗಂಗೂಲಿ ಅವರು ಸೋಮವಾರ ಇದೇ ಮೊದಲ ಬಾರಿ ಇನ್‌ಸ್ಟಾಗ್ರಾಂ ಬಳಸಿದರು. ಕೇಕ್ ಕತ್ತರಿಸುವ ಚಿತ್ರದ ಅವರ ಪೋಸ್ಟ್‌ಗೆ ದಾಖಲೆ ಪ್ರಮಾಣದಲ್ಲಿ ಜನರು ‘ಲೈಕ್’ ಒತ್ತಿದ್ದಾರೆ. 

‘ನನ್ನ ವಯಸ್ಸಿಗೆ ಮತ್ತೊಂದು ವರ್ಷ ಸೇರ್ಪಡೆಯಾಗಿದೆ. ಈ ವರ್ಷವನ್ನು ಅಭಿಮಾನಿಗಳಿಗೆ ಅರ್ಪಿಸುತ್ತೇನೆ. ಈ ವರ್ಷ ಹೊಸತನಕ್ಕೆ ನಾಂದಿ ಹಾಡುತ್ತಿದ್ದೇನೆ’ ಎಂದು ಅವರು ಇನ್‌ಸ್ಟಾಗ್ರಾಂ ಚಿತ್ರದ ಕೆಳಗೆ ಬರೆದಿದ್ದಾರೆ. ಸಚಿನ್ ತೆಂಡೂಲ್ಕರ್ ಮತ್ತು ವೀರೇಂದ್ರ ಸೆಹ್ವಾಗ್ ಕೂಡ ಗಂಗೂಲಿಗೆ ಶುಭ ಹಾರೈಸಿದ್ದಾರೆ.

‘ಶುಭಾಶಯಗಳು. 15 ವರ್ಷದೊಳಗಿನವರ ತಂಡದಲ್ಲಿ ಆಡುತ್ತಿದ್ದಲ್ಲಿಂದ ಈಗ ವೀಕ್ಷಕ ವಿವರಣೆ ನೀಡುವ ವರೆಗಿನ ನಿಮ್ಮೊಂದಿಗಿನ ಪಯಣ ಖುಷಿ ತಂದಿದೆ. ಮುಂದಿನ ಒಂದು ವರ್ಷ ನಿಮ್ಮ ಬಾಳು ಬಂಗಾರವಾಗಲಿ’ ಎಂದು ಸಚಿನ್ ಹಾರೈಸಿದ್ದಾರೆ.

ಭಾರತ ತಂಡ ಕಂಡ ಯಶಸ್ವಿ ನಾಯಕರಲ್ಲಿ ಒಬ್ಬರಾಗಿರುವ ಗಂಗೂಲಿ 311 ಏಕದಿನ ಪಂದ್ಯಗಳಲ್ಲಿ 11,363 ರನ್ ಗಳಿಸಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ಭಾರತದ ಪರ ಹೆಚ್ಚು ರನ್‌ ಗಳಿಸಿದವರ ಪಟ್ಟಿಯಲ್ಲಿ ಅವರು ಮೂರನೆಯವರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು