ಮಂಗಳವಾರ, ಸೆಪ್ಟೆಂಬರ್ 17, 2019
22 °C

‘ಕೋಚ್‌ ಕುರಿತು ಅಭಿಪ್ರಾಯ ಹೇಳುವ ಹಕ್ಕು ಕೊಹ್ಲಿಗೆ ಇದೆ’

Published:
Updated:
Prajavani

ಕೋಲ್ಕತ್ತ: ಭಾರತ ಕ್ರಿಕೆಟ್ ತಂಡದ ನಾಯಕರಾಗಿರುವ ವಿರಾಟ್ ಕೊಹ್ಲಿ ಅವರಿಗೆ ತಮ್ಮ ತಂಡಕ್ಕೆ ಎಂತಹ ಕೋಚ್ ಬೇಕು ಎಂದು ಹೇಳುವ ಅಧಿಕಾರ ಇದೆ ಎಂದು ಹಿರಿಯ ಕ್ರಿಕೆಟಿಗ ಸೌರವ್‌ ಗಂಗೂಲಿ ಹೇಳಿದ್ದಾರೆ.

ಈಚೆಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ ವಿರಾಟ್ ಅವರು ಭಾರತ ತಂಡಕ್ಕೆ ರವಿಶಾಸ್ತ್ರೀಯವರೇ ಕೋಚ್ ಆಗಿ ಮುಂದುವರಿಯಲಿ ಎಂದು ಅಭಿಪ್ರಾಯವ್ಯಕ್ತಪಡಿಸಿದ್ದರು. ಈ ಹೇಳಿಕೆಯನ್ನು ಕೆಲವರು ಟೀಕಿಸಿದ್ದರು. ಆದರೆ ಕೊಹ್ಲಿಯ ಮಾತನ್ನು ಗಂಗೂಲಿ ಸಮರ್ಥಿಸಿಕೊಂಡಿದ್ದಾರೆ.

ಇದೇ ಸಂದರ್ಭದಲ್ಲಿ ಪೃಥ್ವಿ ಶಾ ಅವರಿಗೆ ವಿಧಿಸಲಾಗಿರುವ ಅಮಾನತು ಶಿಕ್ಷೆಯ ಕುರಿತು ಪ್ರತಿಕ್ರಿಯಿಸಿರುವ ಗಂಗೂಲಿ, ‘ಕೆಮ್ಮಿನ ಔಷಧಿಯಲ್ಲಿ ಹಲವಾರು ಮದ್ದಿನ ಅಂಶಗಳು ಇರುತ್ತವೆ. ಪೃಥ್ವಿ ಶಾ ಪ್ರಕರಣದಲ್ಲಿ ನಡೆದಿರುವುದರ ಬಗ್ಗೆ ನನಗೆ ಅಷ್ಟೊಂದು ಮಾಹಿತಿ ಇಲ್ಲ’ ಎಂದಿದ್ದಾರೆ.

2017ರಲ್ಲಿ ತಂಡಕ್ಕೆ ಕೋಚ್ ಆಯ್ಕೆ ಮಾಡಿದ್ದ ಕ್ರಿಕೆಟ್‌ ಸಲಹಾ ಸಮಿತಿ (ಸಿಎಸಿ)ಯಲ್ಲಿ  ಗಂಗೂಲಿ, ಸಚಿನ್ ತೆಂಡೂಲ್ಕರ್ ಮತ್ತು ವಿವಿಎಸ್ ಲಕ್ಷ್ಮಣ ಇದ್ದರು. ಈ ಸಲ ಕೋಚ್ ಆಯ್ಕೆ ಮಾಡಲು ಸಿಎಸಿಯಲ್ಲಿ ಕಪಿಲ್ ದೇವ್, ಅನ್ಷುಮನ್ ಗಾಯಕವಾಡ್ ಮತ್ತು ಶಾಂತಾ ರಂಗಸ್ವಾಮಿ ಅವರು ಇದ್ದಾರೆ.

Post Comments (+)