ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಟರ್ಲಿಂಗ್‌, ಬಲ್ಬೈರ್ನ್‌ ಭರ್ಜರಿ ಆಟ ; ಕೊನೆಯ ಪಂದ್ಯದಲ್ಲಿ ಐರ್ಲೆಂಡ್‌ಗೆ ಜಯ

ಕೊನೆಯ ಪಂದ್ಯದಲ್ಲಿ ಐರ್ಲೆಂಡ್‌ಗೆ ಜಯ: ಇಂಗ್ಲೆಂಡ್‌ಗೆ ಸರಣಿ
Last Updated 5 ಆಗಸ್ಟ್ 2020, 9:25 IST
ಅಕ್ಷರ ಗಾತ್ರ

ಸೌತಾಂಪ್ಟನ್‌: ಪಾಲ್‌ ಸ್ಟರ್ಲಿಂಗ್‌ ಮತ್ತು ನಾಯಕ ಆ್ಯಂಡಿ ಬಲ್ಬೈರ್ನ್‌ ಅವರ ಭರ್ಜರಿ ಶತಕಗಳ ನೆರವಿನಿಂದ ಐರ್ಲೆಂಡ್‌ ತಂಡ ಏಳು ವಿಕೆಟ್‌ಗಳಿಂದ ಇಂಗ್ಲೆಂಡ್‌ ತಂಡವನ್ನು ಮಣಿಸಿತು. ಇತಿಹಾಸದಲ್ಲಿ ಇಂಗ್ಲೆಂಡ್‌ ಎದುರು ಎರಡನೇ ಬಾರಿ ಗೆದ್ದ ಸಂಭ್ರಮವನ್ನು ಅದು ಬುಧವಾರ ಆಚರಿಸಿತು.

ಇಲ್ಲಿನ ಏಜಿಸ್‌ ಬೌಲ್‌ ಕ್ರೀಡಾಂಗಣದಲ್ಲಿ ನಡೆದ ಮೂರನೇ ಹಾಗೂ ಕೊನೆಯ ಏಕದಿನ ಪಂದ್ಯದಲ್ಲಿ ಸ್ಟರ್ಲಿಂಗ್‌ ಹಾಗೂ ಬಲ್ಬೈರ್ನ್‌ ಎರಡನೇ ವಿಕೆಟ್‌ ಜೊತೆಯಾಟದಲ್ಲಿ 214 ರನ್‌ ಕಲೆಹಾಕಿದರು. 329 ರನ್‌ಗಳ ಗುರಿ ಬೆನ್ನತ್ತಿದ್ದ ಐರ್ಲೆಂಡ್‌ ಕೊನೆಯ ಓವರ್‌ನಲ್ಲಿ ಗೆಲುವಿನ ಕೇಕೆ ಹಾಕಿತು. 2011ರ ವಿಶ್ವಕಪ್‌ ಟೂರ್ನಿಯಲ್ಲಿ ಬೆಂಗಳೂರಿನಲ್ಲಿ ನಡೆದ ಪಂದ್ಯದಲ್ಲಿ 327 ರನ್‌ ಗುರಿ ಬೆನ್ನತ್ತಿದ್ದ ಐರ್ಲೆಂಡ್‌,‌ 329 ರನ್‌ ಗಳಿಸಿ ಇಂಗ್ಲೆಂಡ್‌ ತಂಡವನ್ನು ಸೋಲಿಸಿತ್ತು.

ಮೊದಲ ಎರಡು ಪಂದ್ಯಗಳಲ್ಲಿ ಗೆದ್ದಿದ್ದ ಆಂಗ್ಲರ ತಂಡವು ಸರಣಿಯನ್ನು ತನ್ನ ವಶಕ್ಕೆ ತೆಗೆದುಕೊಂಡಿದೆ.

ಸ್ಟರ್ಲಿಂಗ್‌ (142, 128 ಎಸೆತ, 9 ಬೌಂಡರಿ, 6 ಸಿಕ್ಸರ್‌) ಹಾಗೂ ಬಲ್ಬೈರ್ನ್‌ (113, 112 ಎಸೆತ, 12 ಬೌಂಡರಿ) ಇಂಗ್ಲೆಂಡ್‌ ಬೌಲರ್‌ಗಳಿಗೆ ಬೆವರಿಳಿಸಿದರು. ಇವರಿಬ್ಬರೂ ಔಟಾದಾಗ ಜಯಕ್ಕೆ 33 ಎಸೆತಗಳಲ್ಲಿ ಇನ್ನೂ 50 ರನ್‌ಗಳು‌ ಬೇಕಿದ್ದವು. ಕೊನೆಯಲ್ಲಿ ಅಬ್ಬರಿಸಿದ ಬೆಂಗಳೂರು ಪಂದ್ಯದ ’ಹೀರೊ‘ ಕೆವಿನ್‌ ಓಬ್ರಿಯನ್‌ (21, 15 ಎಸೆತ, 1 ಬೌಂಡರಿ, 1 ಸಿಕ್ಸರ್‌) ಒಂದು ಎಸೆತ ಬಾಕಿ ಇರುವಂತೆ ತಂಡವನ್ನು ಗೆಲುವಿನ ದಡ ಸೇರಿಸಿದರು.

ಇದಕ್ಕೂ ಮುನ್ನ ಟಾಸ್‌ ಗೆದ್ದ ಐರ್ಲೆಂಡ್‌ ತಂಡ ಆತಿಥೇಯರನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿತು. 44 ರನ್‌ಗಳಿಗೆ ಮೂರು ವಿಕೆಟ್‌ ಕಳೆದುಕೊಂಡ ಇಂಗ್ಲೆಂಡ್‌ ಸಂಕಷ್ಟಕ್ಕೆ ಸಿಲುಕಿತ್ತು. ಈ ಹಂತದಲ್ಲಿ ನಾಯಕ ಇಯಾನ್‌ ಮಾರ್ಗನ್‌ (106, 84 ಎಸೆತ, 15 ಬೌಂಡರಿ, 4 ಸಿಕ್ಸರ್‌) ಹಾಗೂ ಟಾಮ್‌ ಬೆಂಟನ್‌ (58) ನಾಲ್ಕನೇ ವಿಕೆಟ್‌ ಜೊತೆಯಾಟದಲ್ಲಿ 146 ರನ್‌ ಸೇರಿಸಿದರು. ತಂಡ 49.5 ಓವರ್‌ಗಳಲ್ಲಿ 328 ರನ್‌ ಗಳಿಸಿ ಎಲ್ಲ ವಿಕೆಟ್‌ ಕಳೆದುಕೊಂಡಿತು.

ಇಂಗ್ಲೆಂಡ್‌ ಸರಣಿ ಜಯಿಸಿದರೂ ಏಕದಿನ ಹಾಗೂ ಟ್ವೆಂಟಿ–20 ವಿಶ್ವಕಪ್ ವಿಜೇತ ಎರಡೂ‌ ತಂಡಗಳನ್ನು ಮಣಿಸಿದ ಶ್ರೇಯವಂತೂ ಬಲ್ಬೈರ್ನ್‌ ಬಳಗದ ಪಾಲಾಯಿತು. ಜನವರಿಯಲ್ಲಿ ಐರ್ಲೆಂಡ್‌ ತಂಡ 2016ರ ವಿಶ್ವಕಪ್‌ ಟ್ವೆಂಟಿ–20 ಚಾಂಪಿಯನ್‌ ವೆಸ್ಟ್‌ ಇಂಡೀಸ್‌ಅನ್ನು ಸೋಲಿಸಿತ್ತು.

ಸಂಕ್ಷಿಪ್ತ ಸ್ಕೋರ್‌: ಇಂಗ್ಲೆಂಡ್‌ 49.5 ಓವರ್‌ಗಳಲ್ಲಿ 328 (ಇಯಾನ್‌ ಮಾರ್ಗನ್‌ 106, ಟಾಮ್ ಬೆಂಟನ್‌ 58, ಡೇವಿಡ್‌ ವಿಲ್ಲಿ 51, ಟಾಮ್‌ ಕರನ್‌ ಔಟಾಗದೆ 38; ಕ್ರೇಗ್‌ ಯಂಗ್‌ 53ಕ್ಕೆ 3, ಜೋಷ್‌ ಲಿಟಲ್‌ 62ಕ್ಕೆ 2, ಕರ್ಟಿಸ್‌ ಕ್ಯಾಂಫರ್‌ 68ಕ್ಕೆ 2). ಐರ್ಲೆಂಡ್‌ 49.5 ಓವರ್‌ಗಳಲ್ಲಿ 3 ವಿಕೆಟ್‌ಗೆ 329 (ಪಾಲ್‌ ಸ್ಟರ್ಲಿಂಗ್‌ 142, ಆ್ಯಂಡ್ರ್ಯೂ ಬಲ್ಬೈರ್ನ್‌ 113, ಹ್ಯಾರಿ ಹೆಕ್ಟರ್‌ 29; ಆದಿಲ್‌ ರಶೀದ್‌ 61ಕ್ಕೆ 1). ಫಲಿತಾಂಶ: ಐರ್ಲೆಂಡ್‌ ತಂಡಕ್ಕೆ ಏಳು ವಿಕೆಟ್‌ಗಳ ಗೆಲುವು. ಇಂಗ್ಲೆಂಡ್‌ಗೆ 2–1ರಿಂದ ಸರಣಿ. ಪಂದ್ಯಶ್ರೇಷ್ಠ: ಪಾಲ್‌ ಸ್ಟರ್ಲಿಂಗ್‌, ಸರಣಿ ಶ್ರೇಷ್ಠ: ಡೇವಿಡ್‌ ವಿಲ್ಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT