ಶನಿವಾರ, ಆಗಸ್ಟ್ 17, 2019
24 °C

‘4 ಓವರ್‌ಥ್ರೋ ರನ್‌ ಸೇರಿಸದಂತೆ ಮನವಿ ಮಾಡಿದ್ದ ಸ್ಟೋಕ್ಸ್‌’

Published:
Updated:
Prajavani

ಲಂಡನ್‌: ‘ಭಾನುವಾರ ವಿಶ್ವಕಪ್‌ ಫೈನಲ್‌ನ ನಿರ್ಣಾಯಕ ಸಂದರ್ಭದಲ್ಲಿ ತಮ್ಮ ಬ್ಯಾಟಿಗೆ ತಾಗಿ ಬೌಂಡರಿಗೆ ಹೋಗಿದ್ದ ‘ನಾಲ್ಕು ಓವರ್‌ಥ್ರೊ ರನ್‌ಗಳನ್ನು ಇಂಗ್ಲೆಂಡ್‌ ಮೊತ್ತದಿಂದ ಕಳೆದುಹಾಕುವಂತೆ’ ಬೆನ್‌ ಸ್ಟೋಕ್ಸ್‌ ಅಂಪೈರ್‌ಗಳನ್ನು ಕೇಳಿದ್ದರು’ ಎಂದು  ಟೆಸ್ಟ್‌ನಲ್ಲಿ ಅವರ ಸಹ ಆಟಗಾರನಾಗಿರುವ ಜಿಮ್ಮಿ ಆ್ಯಂಡರ್ಸನ್‌ ಹೇಳಿದ್ದಾರೆ.

ಇಂಗ್ಲೆಂಡ್‌ ಇನಿಂಗ್ಸ್‌ನ ಕೊನೆಯ ಓವರ್‌ನಲ್ಲಿ ಮಾರ್ಟಿನ್‌ ಗಪ್ಟಿಲ್‌ ಫೀಲ್ಡ್‌ ಮಾಡಿ ಕೀಪರ್‌ ಕಡೆ ಎಸೆದಿದ್ದ ಆ ಥ್ರೊ, ಎರಡನೇ ರನ್‌ ಪೂರೈಸುವ ಹಂತದಲ್ಲಿದ್ದ ಸ್ಟೋಕ್ಸ್‌ ಅವರ ಬ್ಯಾಟಿಗೆ ತಾಗಿ ಬೌಂಡರಿ ಗೆರೆ ದಾಟಿತ್ತು. ಅಂಪೈರ್‌ ಒಟ್ಟು ಆರು ರನ್‌ಗಳನ್ನು ನೀಡಿದ್ದರು. ಆ ಆರು ರನ್‌ ನೀಡದಿದ್ದರೆ ಪಂದ್ಯ ಸೂಪರ್‌ ಓವರ್‌ಗೆ ಹೋಗದೇ ನ್ಯೂಜಿಲೆಂಡ್‌ ಗೆಲವು ಸಾಧಿಸುವ ಸಾಧ್ಯತೆಯಿತ್ತು.

ಬ್ಯಾಟ್‌ಗೆ ಚೆಂಡು ತಗುಲಿದ ವೇಳೆಯೇ ಸ್ಟೋಕ್ಸ್‌ ಕ್ಷಮಾಪಣೆಯ ರೀತಿ ಕೈ ಎತ್ತಿ ಸಂಜ್ಞೆ ಮಾಡಿದ್ದರು. ಪಂದ್ಯದ ನಂತರ, ನಿರ್ಧಾರ ಬದಲಿಸುವಂತೆ ಅಂಪೈರ್‌ಗಳಿಗೆ ಮನವಿ ಮಾಡಿದ್ದರು. ಸ್ಟೋಕ್ಸ್‌ ಅಂಪೈರ್ಸ್‌ ಬಳಿ ಹೋಗಿ ‘ಆ ನಾಲ್ಕು ರನ್‌ಗಳನ್ನು ಹಿಂಪಡೆಯಬಹುದೇ? ನಮಗೆ ಅದು ಬೇಕಿಲ್ಲ’ ಎಂದು ಹೇಳಿರುವುದನ್ನು ಮೈಕೆಲ್‌ ವಾನ್‌ ನೋಡಿದ್ದರು’ ಎಂದು ಆ್ಯಂಡರ್ಸನ್‌ ಹೇಳಿದ್ದಾರೆ. ಆದರೆ ಚೆಂಡು ಬೌಂಡರಿ ದಾಟಿದ್ದರಿಂದ ಅಂಪೈರ್‌ಗಳು ಎರಡು ರನ್‌ಗಳ ಜೊತೆ ನಿಯಮದಂತೆ ಆ ನಾಲ್ಕು ಸೇರಿಸಿ ಆರು ರನ್‌ ನೀಡಿರಬೇಕು ಎಂದು ಆ್ಯಂಡರ್ಸನ್‌ ಬಿಬಿಸಿ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ. 

Post Comments (+)