ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

SA vs IND: ಎರಡನೇ ಟಿ20- ದಕ್ಷಿಣ ಆಫ್ರಿಕಾಗೆ ರೋಚಕ ಜಯ

ದಕ್ಷಿಣ ಆಫ್ರಿಕಾಕ್ಕೆ 5 ವಿಕೆಟ್ ಜಯ (ಡಿಎಲ್‌ಎಸ್ ಪದ್ಧತಿ ಅನ್ವಯ): ರೀಜಾ, ಸ್ಟಬ್ಸ್ ಮಿಂಚು, ಸೂರ್ಯ, ರಿಂಕು ಅರ್ಧಶತಕ
Published 12 ಡಿಸೆಂಬರ್ 2023, 19:47 IST
Last Updated 12 ಡಿಸೆಂಬರ್ 2023, 19:47 IST
ಅಕ್ಷರ ಗಾತ್ರ

ಸೇಂಟ್ ಜಾರ್ಜ್ ಪಾರ್ಕ್: ಮಳೆಯ ಆಟದ ನಡುವೆ ನಡೆದ  ಟಿ20 ಪಂದ್ಯದಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ ತಂಡವು ಭಾರತದ ಎದುರು ರೋಚಕ ಜಯಸಾಧಿಸಿತು.

ಮಂಗಳವಾರ ಇಲ್ಲಿ ನಡೆದ ಟಿ20 ಸರಣಿಯ ಎರಡನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವು 5 ವಿಕೆಟ್‌ಗಳಿಂದ ಗೆದ್ದಿತು. ಮೂರು ಪಂದ್ಯಗಳ ಸರಣಿಯಲ್ಲಿ 1–0ಯಿಂದ ಮುನ್ನಡೆ ಸಾಧಿಸಿತು. ಸರಣಿಯ ಮೊದಲ ಪಂದ್ಯವು ಮಳೆಗಾಹುತಿಯಾಗಿತ್ತು.

ಈ ಪಂದ್ಯದಲ್ಲಿಯೂ ಮಳೆಯಿಂದಾಗಿ ದಕ್ಷಿಣ ಆಫ್ರಿಕಾ ತಂಡದ ಗೆಲುವಿನ ಗುರಿಯನ್ನು ಪರಿಷ್ಕರಿಸಲಾಗಿತ್ತು. ಟಾಸ್ ಸೋತಿದ್ದ ಭಾರತ ಮೊದಲು ಬ್ಯಾಟಿಂಗ್ ಮಾಡಿತು.  ತಂಡವು 19.3 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 180 ರನ್ ಗಳಿಸಿತು.  ಈ ಸಂದರ್ಭದಲ್ಲಿ ಮಳೆ ಬಂದು ಆಟ ನಿಂತಿತು.  ಆದ್ದರಿಂದ ಡಕ್ವರ್ಥ್ ಲೂಯಿಸ್ ನಿಯಮದಡಿಯಲ್ಲಿ 15 ಓವರ್‌ಗಳಲ್ಲಿ 152 ರನ್‌ಗಳ ಗುರಿಯನ್ನು ಪರಿಷ್ಕರಿಸಲಾಯಿತು.

ಆರಂಭಿಕ ಬ್ಯಾಟರ್ ರೀಜಾ ಹೆನ್ರಿಕ್ಸ್ (49 ರನ್) ಮತ್ತು ಮ್ಯಾಥ್ಯೂ ಬ್ರೀಟ್ಜ್ ಅವರು ಕೇವಲ 2.5 ಓವರ್‌ಗಳಲ್ಲಿ42 ರನ್‌ ಸೂರೆ ಮಾಡಿ ಉತ್ತಮ ಆರಂಭ ನೀಡಿದರು. ಮೂರನೇ ಓವರ್‌ನಲ್ಲಿ ಮ್ಯಾಥ್ಯೂ ರನ್‌ಔಟ್ ಆಗಿದ್ದರಿಂದ ಜೊತೆಯಾಟ ಮುರಿಯಿತು. ಕ್ರೀಸ್‌ಗೆ ಬಂದ ಏಡನ್ ಮರ್ಕರಂ 17 ಎಸೆತಗಳಲ್ಲಿ 30 ರನ್‌ ಗಳಿಸಿದರು. ಅವರು ಮತ್ತು ರಿಜಾ ಕ್ರಮವಾಗಿ ಎಂಟು ಹಾಗೂ ಒಂಬತ್ತನೇ  ಓವರ್‌ನಲ್ಲಿ ಔಟ್ ಆದರು. ಇದರಿಂದಾಗಿ ಭಾರತ ಬಳಗದಲ್ಲಿ ಮತ್ತೆ ಗೆಲುವಿನ ವಿಶ್ವಾಸ ಮೂಡಿತು.  ನಂತರದ ನಾಲ್ಕು ಓವರ್‌ಗಳಲ್ಲಿ ತುರುಸಿನ ಪೈಪೋಟಿ ನಡೆಯಿತು. ಕ್ಲಾಸೆನ್ ಮತ್ತು ಡೇವಿಡ್ ಮಿಲ್ಲರ್ ವಿಕೆಟ್ ಪಡೆಯುವಲ್ಲಿ ಸಿರಾಜ್ ಹಾಗೂ ಮುಕೇಶ್ ಕುಮಾರ್ ಯಶಸ್ವಿಯಾದರು.

ಆದರೆ  ಸ್ಟಬ್ಸ್ ಮತ್ತು ಆ್ಯಂಡಿಲೆ ಪಿಶುವಾಯೊ ಅವರನ್ನು ಕಟ್ಟಿಹಾಕಲು ಭಾರತದ ಬೌಲರ್‌ಗಳಿಗೆ ಸಾಧ್ಯವಾಗಲಿಲ್ಲ. ಇನಿಂಗ್ಸ್‌ನ ಕೊನೆಯ 12 ಎಸೆತಗಳಲ್ಲಿ ಬೇಕಾಗಿದ್ದ 12 ರನ್‌ಗಳನ್ನು ಇಬ್ಬರೂ ಸೇರಿ ಐದು ಎಸೆತಗಳಲ್ಲಿ ಹೊಡೆದರು.  ಆ್ಯಂಡಿಲೆ ವಿಜಯದ ಸಿಕ್ಸರ್ ಸಿಡಿಸಿದರು.

ಸೂರ್ಯ, ರಿಂಕು ಅಬ್ಬರ:  ದಕ್ಷಿಣ ಆಫ್ರಿಕಾ ಎದುರಿನ ಎರಡನೇ ಟಿ20 ಪಂದ್ಯದಲ್ಲಿ ಸೂರ್ಯ (56; 36ಎ, 4X5, 6X3) ಮತ್ತು ರಿಂಕು (ಔಟಾಗದೆ 68; 39ಎ, 4X9, 6X2) ಅವರು ಸಿಡಿಲಬ್ಬರದ ಬ್ಯಾಟಿಂಗ್‌  ಮಾಡಿದರು.

ಭಾರತದ ಆರಂಭಿಕ ಜೋಡಿ ಯಶಸ್ವಿ ಜೈಸ್ವಾಲ್ ಮತ್ತು ಶುಭಮನ್ ಗಿಲ್ ಅವರಿಬ್ಬರೂ ಖಾತೆ ತೆರೆಯದೇ ಔಟಾದರು. 

ಈ ಹಂತದಲ್ಲಿ ಕ್ರೀಸ್‌ನಲ್ಲಿದ್ದ ತಿಲಕ್ ವರ್ಮಾ (29; 20ಎ) ಅವರು ಸೂರ್ಯ ಅವರೊಂದಿಗೆ ಮೂರನೇ ವಿಕೆಟ್ ಜೊತೆಯಾಟದಲ್ಲಿ 49 ರನ್ ಸೇರಿಸಿದರು. ಇನಿಂಗ್ಸ್‌ನ ಮೊದಲ ಓವರ್‌ನಲ್ಲಿ ಮತ್ತು ಎರಡನೇ ಓವರ್‌ನಲ್ಲಿ  ತಿಲಕ್ ವರ್ಮಾ ಅವರಿಗೆ ಜೀವದಾನಗಳು ಲಭಿಸಿದ್ದವು. ಗೆರಾಲ್ಡ್ ಕೋಝಿ ಎಸೆತದಲ್ಲಿ ವರ್ಮಾ ಔಟಾಗುವುದರೊಂದಿಗೆ ಜೊತೆಯಾಟ ಮುರಿಯಿತು.  ಸೂರ್ಯ ಮತ್ತು ರಿಂಕು  ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ 70 ರನ್‌ ಸೇರಿಸಿದರು.

ಸಂಕ್ಷಿಪ್ತ ಸ್ಕೋರು: ಭಾರತ: 19.3 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 180 (ತಿಲಕ್ ವರ್ಮಾ 29, ಸೂರ್ಯಕುಮಾರ್ ಯಾದವ್ 56, ರಿಂಕು ಸಿಂಗ್  ಔಟಾಗದೆ 68, ರವೀಂದ್ರ ಜಡೇಜ 19, ಗೆರಾಲ್ಡ್ ಕೋಜಿ 32ಕ್ಕೆ3) ದಕ್ಷಿಣ ಆಫ್ರಿಕಾ: 13.5 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 154 (ರೀಜಾ ಹೆನ್ರಿಕ್ಸ್ 49, ಏಡನ್ ಮರ್ಕರಂ 30, ಡೇವಿಡ್ ಮಿಲ್ಲರ್ 17, ಟ್ರಿಸ್ಟನ್ ಸ್ಟಬ್ಸ್ ಔಟಾಗದೆ 14, ಆ್ಯಂಡಿಲೆ ಪಿಶುವಾಯೊ ಔಟಾಗದೆ 10, ಮುಕೇಶ್ ಕುಮಾರ್ 34ಕ್ಕೆ2) ಫಲಿತಾಂಶ:ದಕ್ಷಿಣ ಆಫ್ರಿಕಾಕ್ಕೆ 5 ವಿಕೆಟ್ ಜಯ (ಡಿಎಲ್‌ಎಸ್ ಪದ್ಧತಿ ಅನ್ವಯ)

ಭಾರತದ ಬ್ಯಾಟರ್ ರಿಂಕು ಸಿಂಗ್ ಬ್ಯಾಟಿಂಗ್ ವೈಖರಿ  –ಎಪಿ/ಪಿಟಿಐ ಚಿತ್ರ
ಭಾರತದ ಬ್ಯಾಟರ್ ರಿಂಕು ಸಿಂಗ್ ಬ್ಯಾಟಿಂಗ್ ವೈಖರಿ  –ಎಪಿ/ಪಿಟಿಐ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT