ಗುರುವಾರ, 20 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

T20 ವಿಶ್ವಕಪ್ ಮೆಲುಕು: ಶ್ರೀಲಂಕಾದ ಮುಡಿಗೆ ಕಿರೀಟ

Published 28 ಮೇ 2024, 0:18 IST
Last Updated 28 ಮೇ 2024, 0:18 IST
ಅಕ್ಷರ ಗಾತ್ರ
  • 1996ರಲ್ಲಿ ಏಕದಿನ ವಿಶ್ವಕಪ್‌ ಗೆದ್ದಿದ್ದ ಶ್ರೀಲಂಕಾ ತಂಡವು ಸ್ಟಾರ್‌ ಆಟಗಾರರನ್ನು ಹೊಂದಿದ್ದರೂ ನಂತರದ ಟೂರ್ನಿಗಳಲ್ಲಿ ತೀವ್ರ ನಿರಾಸೆ ಅನುಭವಿಸಿತ್ತು. ನಾಲ್ಕು ಐಸಿಸಿ ವಿಶ್ವಕಪ್‌ ಟೂರ್ನಿಗಳಲ್ಲಿ (2007, 2011ರ ಏಕದಿನ ವಿಶ್ವಕಪ್‌ ಮತ್ತು 2009, 2012ರ ಟಿ20 ವಿಶ್ವಕಪ್‌) ಫೈನಲ್‌ ಪ್ರವೇಶಿಸಿದ್ದರೂ ಟ್ರೋಫಿ ಒಲಿದಿರಲಿಲ್ಲ. ಈ ಟೂರ್ನಿಯ ಮೂಲಕ 18 ವರ್ಷಗಳ ಪ್ರಶಸ್ತಿ ಬರವನ್ನು ಕೊನೆಗೂ ನೀಗಿಸಿಕೊಂಡಿತು.

  • ಲಂಕಾದ ಅನುಭವಿ ಬ್ಯಾಟರ್‌ಗಳಾದ ಮಹೇಲ ಜಯವರ್ಧನೆ ಮತ್ತು ಕುಮಾರ ಸಂಗಕ್ಕಾರ ಅವರಿಗೆ ಚುಟುಕು ಕ್ರಿಕೆಟ್‌ನಲ್ಲಿ ಇದು ವಿದಾಯದ ಟೂರ್ನಿಯಾಗಿತ್ತು. ಢಾಕಾದಲ್ಲಿ ನಡೆದ ಫೈನಲ್‌ ಹಣಾಹಣಿಯಲ್ಲಿ ಭಾರತ ತಂಡವನ್ನು ಮಣಿಸಿ, ಅವರು ನಿವೃತ್ತಿ ಘೋಷಿಸಿದ್ದರು.

  • ಬಾಂಗ್ಲಾದೇಶದ ಆತಿಥ್ಯದಲ್ಲಿ 2014 ಮಾರ್ಚ್‌ 16ರಿಂದ ಏಪ್ರಿಲ್‌ 6ರವರೆಗೆ ಟೂರ್ನಿ ನಡೆಯಿತು. ಟಿ20 ಕ್ರಿಕೆಟ್‌ನಲ್ಲಿ ಇಲ್ಲಿ ಮೊದಲ ಬಾರಿ ಯುಡಿಆರ್‌ಎಸ್‌ (ಅಂಪೈರ್ ತೀರ್ಪು ಮರುಪರಿಶೀಲನಾ ವ್ಯವಸ್ಥೆ) ಜಾರಿಗೊಳಿಸಲಾಯಿತು.

  • ಈ ಹಿಂದಿನ ನಾಲ್ಕು ವಿಶ್ವಕಪ್‌ ಟೂರ್ನಿಗಳಲ್ಲಿ 12 ತಂಡಗಳು ಮಾತ್ರ ಸ್ಪರ್ಧೆ ಮಾಡಿದ್ದವು. ಆದರೆ, ಈ ಟೂರ್ನಿಯಲ್ಲಿ 16 ತಂಡಗಳು ಟ್ರೋಫಿಗಾಗಿ ಸೆಣಸಾಟ ನಡೆಸಿದವು. ಯುಎಇ, ನೇಪಾಳ ಮತ್ತು ಹಾಂಗ್‌ಕಾಂಗ್‌ ತಂಡಗಳು ಚೊಚ್ಚಲ ಪ್ರವೇಶ ಪಡೆದಿದ್ದವು.

  • ಕ್ರಿಕೆಟ್‌ ಶಿಶು ನೆದರ್ಲೆಂಡ್ಸ್‌ ತಂಡವು ಸೂಪರ್‌ 10 ಹಂತದ ಪಂದ್ಯದಲ್ಲಿ ಬಲಿಷ್ಠ ಇಂಗ್ಲೆಂಡ್‌ ತಂಡವನ್ನು 45 ರನ್‌ಗಳಿಂದ ಮಣಿಸಿ ಅಚ್ಚರಿ ಮೂಡಿಸಿತ್ತು.

  • ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡವನ್ನು ಮಹೇಂದ್ರ ಸಿಂಗ್‌ ಧೋನಿ ಐದನೇ ಬಾರಿ ಮುನ್ನಡೆಸಿದ್ದರು. ಪಾಕಿಸ್ತಾನದ ವಿರುದ್ಧ 7 ವಿಕೆಟ್‌ಗಳ ಸುಲಭ ಜಯ ಸಾಧಿಸಿದ್ದ ಭಾರತ, ಸೂಪರ್‌ ಟೆನ್ ಹಂತದಲ್ಲಿ  ಎಲ್ಲ ನಾಲ್ಕು ಪಂದ್ಯಗಳನ್ನು ಗೆದ್ದು ಅಗ್ರಸ್ಥಾನನೊಂದಿಗೆ ಸೆಮಿಫೈನಲ್‌ಗೆ ಭಾರತ ಲಗ್ಗೆ ಹಾಕಿತ್ತು. ಅಲ್ಲಿ ದಕ್ಷಿಣ ಆಫ್ರಿಕಾವನ್ನು ಮಣಿಸಿ ಫೈನಲ್‌ ಪ್ರವೇಶಿಸಿತ್ತು.

  • ಶ್ರೀಲಂಕಾ ತಂಡವು ಸೂಪರ್‌ 10 ಹಂತದಲ್ಲಿ ಇಂಗ್ಲೆಂಡ್‌ ವಿರುದ್ಧ 6 ವಿಕೆಟ್‌ಗಳ ಸೋಲು ಅನುಭವಿಸಿದರೂ ಅಗ್ರಸ್ಥಾನದೊಂದಿಗೆ ಸೆಮಿಫೈನಲ್‌ ಪ್ರವೇಶಿಸಿತ್ತು. ಅಲ್ಲಿ 2012ರ ಆವೃತ್ತಿಯ ಚಾಂಪಿಯನ್‌ ವೆಸ್ಟ್‌ ಇಂಡೀಸ್‌ ತಂಡವನ್ನು ಮಣಿಸಿ ಫೈನಲ್‌ಗೇರಿತ್ತು.

  • ಫೈನಲ್‌ನಲ್ಲಿ ಟಾಸ್ ಸೋತ ಭಾರತ ಮೊದಲು ಬ್ಯಾಟಿಂಗ್‌ ಮಾಡಿತು. ವಿರಾಟ್‌ ಕೊಹ್ಲಿ (77 ರನ್‌; 58ಎಸೆತ) ಅವರ ಅರ್ಧಶತಕದ ನೆರವಿನಿಂದ ನಾಲ್ಕು ವಿಕೆಟ್‌ಗೆ 130 ರನ್‌ ಗಳಿಸಿತು. ಶ್ರೀಲಂಕಾ ತಂಡವು 13 ಎಸೆತ ಬಾಕಿ ಇರುವಂತೆ ನಾಲ್ಕು ವಿಕೆಟ್‌ಗೆ 134 ರನ್ ಸೇರಿಸಿ, ಪ್ರಶಸ್ತಿಯನ್ನು ಗೆದ್ದುಕೊಂಡಿತು. ವೃತ್ತಿ ಜೀವನದ ಕೊನೆಯ ಟಿ20 ಪಂದ್ಯದಲ್ಲಿ ಕುಮಾರ ಸಂಗಕ್ಕಾರ ಅವರು ಅಜೇಯ 52 ರನ್‌ (35ಎ) ಗಳಿಸಿ ಪಂದ್ಯದ ಆಟಗಾರ ಗೌರವಕ್ಕೆ ಪಾತ್ರವಾದರು.

ಪ್ರಮುಖ ಅಂಶಗಳು

ಐದನೇ ವಿಶ್ವಕಪ್‌: 2014

ಆತಿಥ್ಯ: ಬಾಂಗ್ಲಾದೇಶ

ವಿಜೇತ ತಂಡ: ಶ್ರೀಲಂಕಾ

ರನ್ನರ್ಸ್ ಅಪ್‌: ಭಾರತ

ತಂಡಗಳು: 16

ಪಂದ್ಯಗಳು: 35

ಸರಣಿ ಶ್ರೇಷ್ಠ, ಬ್ಯಾಟರ್: ವಿರಾಟ್‌ ಕೊಹ್ಲಿ (ಭಾರತ, 319 ರನ್)

ಶ್ರೇಷ್ಠ ಬೌಲರ್‌: ಇಮ್ರಾನ್‌ ತಾಹೀರ್ (ದಕ್ಷಿಣ ಆಫ್ರಿಕಾ), ಎಹಸಾನ್ ಮಲಿಕ್ (ನೆದರ್ಲೆಂಡ್ಸ್‌) ತಲಾ 12 ವಿಕೆಟ್‌.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT