ತಮಿಳುನಾಡಿನ ಆಫ್ ಸ್ಪಿನ್ನರ್ ವಾಷಿಂಗ್ಟನ್ ಸುಂದರ್ ಈಗ ಟೆಸ್ಟ್ ಕ್ರಿಕೆಟ್‌ನಲ್ಲಿಯೂ ಹೆಜ್ಜೆಗುರುತು ಮೂಡಿಸಿದ್ದಾರೆ. ತಮ್ಮ ಚೊಚ್ಚಲ ಟೆಸ್ಟ್‌ನಲ್ಲಿಯೇ ‘ಆಲ್‌ರೌಂಡ್’ ಆಟದ ಮೂಲಕ ಗಮನ ಸೆಳೆದಿದ್ದಾರೆ.
ಬ್ರಿಸ್ಬೇನ್‌ನ ಗಾಬಾದಲ್ಲಿ ಆಸ್ಟ್ರೇಲಿಯಾದ ಪ್ಯಾಟ್ ಕಮಿನ್ಸ್, ಜೋಶ್ ಹ್ಯಾಜಲ್‌ವುಡ್ ಮತ್ತು ಮಿಚೆಲ್ ಸ್ಟಾರ್ಕ್ ಅವರಂತಹ ಘಟಾನುಘಟಿ ವೇಗಿಗಳನ್ನು ಸುಂದರ್ ಎದುರಿಸಿದ್ದು ಇದೇ ಮೊದಲ ಸಲ. ಆದರೂ ದಿಟ್ಟ ಆಟವಾಡಿ, ಅರ್ಧಶತಕ ಗಳಿಸಿದರು. ಶಾರ್ದೂಲ್ ಠಾಕೂರ್ ಜೊತೆಗೆ ದಾಖಲೆಯ ಜೊತೆಯಾಟವನ್ನೂ ಆಡಿ ತಂಡಕ್ಕೆ ಬಲ ತುಂಬಿದರು.
ಇದೇ ಹೊತ್ತಿನಲ್ಲಿ ಈ ಹುಡುಗನ ಹೆಸರು ‘ವಾಷಿಂಗ್ಟನ್’ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಕುತೂಹಲದ ಹುಡುಕಾಟಗಳೂ ನಡೆದವು. ಚೆನ್ನೈನ ಹುಡುಗನಿಗೆ ಈ ಹೆಸರು ಬಂದಿದ್ದಾದರೂ ಹೇಗೆ ಎಂಬ ಶೋಧ ಜೋರಾಗಿಯೇ ನಡೆಯಿತು. ಅವರ ತಂದೆ ಸುಂದರ್, ಮಗನಿಗೆ ವಾಷಿಂಗ್ಟನ್ ಎಂದೇ ನಾಮಕರಣ ಮಾಡಿದ್ದರ ಹಿಂದೆ ಒಂದು ಕಥೆ ಇದೆ. ಅದನ್ನು ಅವರೇ ಒಂದು ಕಡೆ ಹೇಳಿಕೊಂಡಿದ್ದಾರೆ.
‘ನಾನು ಚಿಕ್ಕವನಿದ್ದಾಗ ಕ್ರಿಕೆಟ್ ಆಡುವುದೆಂದರೆ ಪಂಚಪ್ರಾಣವಾಗಿತ್ತು. ಆದರೆ ಮನೆಯಲ್ಲಿ ಆರ್ಥಿಕ ಅನುಕೂಲಗಳು ಕಡಿಮೆ ಇದ್ದವು. ನಮ್ಮ ಮನೆಯ ಹತ್ತಿರ ಮಾಜಿ ಯೋಧ ಪಿ.ಡಿ. ವಾಷಿಂಗ್ಟನ್ ಎಂಬುವವರಿದ್ದರು. ನಾವು ಕ್ರಿಕೆಟ್ ಆಡುತ್ತಿದ್ದ ಮೈದಾನಕ್ಕೆ ಬಂದು ಆಟ ನೋಡುತ್ತಿದ್ದರು. ನನ್ನ ಮೇಲೆ ಅದೇನೋ ವಿಶೇಷ ಪ್ರೀತಿ ಅವರಿಗೆ. ಕ್ರಿಕೆಟ್ ಬ್ಯಾಟು, ಚೆಂಡು, ಕಿಟ್, ಶಾಲೆಯ ಶುಲ್ಕ, ಸಮವಸ್ತ್ರವನ್ನೂ ನೀಡುತ್ತಿದ್ದರು. ತಮ್ಮ ಸ್ಕೂಟರ್, ಸೈಕಲ್ ಮೇಲೆ ಶಾಲೆಗೆ ಕರ್ಕೊಂಡು ಹೋಗುತ್ತಿದ್ದರು. ಅವರ ಪ್ರೋತ್ಸಾಹದಿಂದಾಗಿಯೇ ನಾನು ರಾಜ್ಯ ರಣಜಿ ತಂಡಕ್ಕೆ ಆಯ್ಕೆಯಾಗುವ ಮಟ್ಟಕ್ಕೆ ಬೆಳೆದೆ. ಮುಂದೆ ನನಗೆ ಮಗ ಜನಿಸಿದ. ನಾಮಕರಣ ಶಾಸ್ತ್ರದಲ್ಲಿ ಮಗುವಿನ ಕಿವಿಯಲ್ಲಿ ಪದ್ಧತಿಗಾಗಿ ಶ್ರೀನಿವಾಸನ್ ಎಂದು ದೇವರನಾಮ ಉಸುರಿದೆ. ಆದರೆ ಆಮೇಲೆ ವಾಷಿಂಗ್ಟನ್ ಎಂದೇ ಕರೆದೆ’ ಎಂದು ಸುಂದರ್ ಹೇಳುತ್ತಾರೆ.
‘ನನ್ನ ಜೀವನ ಬದಲಿಸಿದ ವ್ಯಕ್ತಿಯ ಹೆಸರನ್ನು ಮಗನಿಗೆ ಇಟ್ಟಿದ್ದು ಸಾರ್ಥಕ ಭಾವ. ಜೊತೆಗೆ ಮಗ ಇವತ್ತು ಭಾರತ ತಂಡದಲ್ಲಿ ಆಡುತ್ತಿದ್ದು, ನಾನು ಮಾಡದ ಸಾಧನೆಯನ್ನು ಮಾಡಿದ್ದಾನೆ’ ಎಂದು ಸುಂದರ್ ಭಾವುಕರಾಗುತ್ತಾರೆ.
21 ವರ್ಷದ ವಾಷಿಂಗ್ಟನ್ ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ರಮುಖ ಆಟಗಾರನಾಗಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.