ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯ್ ಹಜಾರೆ ಟ್ರೋಫಿ: ಕರ್ನಾಟಕಕ್ಕೆ ಜಮ್ಮು–ಕಾಶ್ಮೀರ ಸವಾಲು

ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಇಂದಿನಿಂದ: ಹಾಲಿ ಚಾಂಪಿಯನ್ ಸೌರಾಷ್ಟ್ರಕ್ಕೆ ಕೇರಳ ಎದುರಾಳಿ
Published 22 ನವೆಂಬರ್ 2023, 16:36 IST
Last Updated 22 ನವೆಂಬರ್ 2023, 16:36 IST
ಅಕ್ಷರ ಗಾತ್ರ

ಅಹಮದಾಬಾದ್: ಮಯಂಕ್ ಅಗರವಾಲ್ ನಾಯಕತ್ವದ ಕರ್ನಾಟಕ ಕ್ರಿಕೆಟ್ ತಂಡವು ಗುರುವಾರ ಇಲ್ಲಿ ಆರಂಭವಾಗಲಿರುವ ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಟೂರ್ನಿಯ ಮೊದಲ ಪಂದ್ಯದಲ್ಲಿ ಕಣಕ್ಕಿಳಿಯಲಿದೆ.

ಕರ್ನಾಟಕ ತಂಡವು ಈ ಸಲ ಸಿ ಗುಂಪಿನಲ್ಲಿದೆ. ಮೊದಲ ಪಂದ್ಯದಲ್ಲಿ ಜಮ್ಮು–ಕಾಶ್ಮೀರದ ವಿರುದ್ಧ ಆಡಲಿದೆ. ಏಕದಿನ ಮಾದರಿಯ ಪಂದ್ಯಗಳ ಈ ಟೂರ್ನಿಯಲ್ಲಿ ಯುವ ಆಟಗಾರರಾದ ಕೆ. ಶ್ರೀಜಿತ್ ಹಾಗೂ ಶುಭಾಂಗ್ ಹೆಗ್ಡೆ ಆಡಲಿದ್ದಾರೆ.

ಅನುಭವಿಗಳಾದ ಮನೀಷ್ ಪಾಂಡೆ,  ಆಫ್‌ಸ್ಪಿನ್ನರ್ ಕೆ. ಗೌತಮ್, ಆರ್. ಸಮರ್ಥ್ ಅವರಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ವಿದ್ವತ್ ಕಾವೇರಪ್ಪ, ವೈಶಾಖ ವಿಜಯಕುಮಾರ್ ಮತ್ತು ವಾಸುಕಿ ಕೌಶಿಕ್ ಅವರು ತಂಡದ ಪ್ರಮುಖ ಶಕ್ತಿಯಾಗಿದ್ದಾರೆ. ಕಳೆದ ದೇಶಿ ಋತುವಿನಲ್ಲಿ ಈ ಮೂವರು ಬೌಲರ್‌ಗಳು ಉತ್ತಮವಾಗಿ ಆಡಿದ್ದರು.

ಆದರೆ ಈಚೆಗೆ ನಡೆದಿದ್ದ ಸೈಯದ್ ಮುಷ್ತಾಕ್ ಅಲಿ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ರಾಜ್ಯ ತಂಡದ ಸಾಧನೆ ಗಣನೀಯವಾಗಿರಲಿಲ್ಲ.

ಲೆಗ್‌ಸ್ಪಿನ್ನರ್ ಶ್ರೇಯಸ್ ಗೋಪಾಲ್, ಬ್ಯಾಟರ್ ಕರುಣ್ ನಾಯರ್ ಅವರು ಪರರಾಜ್ಯದ ತಂಡಗಳಿಗೆ ವಲಸೆ ಹೋಗಿದ್ದಾರೆ.

ಪ್ರಸಿದ್ಧ ಕೃಷ್ಣ ಆಸ್ಟ್ರೇಲಿಯಾ ಎದುರಿನ ಟಿ20 ಸರಣಿಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ. ಆಲ್‌ರೌಂಡರ್ ಮನೋಜ್ ಬಾಂಢಗೆ,  ಎಡಗೈ ಸ್ಪಿನ್ನರ್ ಜೆ. ಸುಚಿತ್ ಹಾಗೂ ಬಿರುಸಿನ ಹೊಡೆತಗಾರ ಅಭಿನವ್ ಮನೋಹರ್ ಕೂಡ ತಂಡದಲ್ಲಿದ್ದಾರೆ.

2019-20ರಲ್ಲಿ ಗೆದ್ದ ನಂತರ ತಂಡಕ್ಕೆ ಈ ಪ್ರಶಸ್ತಿ ಮತ್ತೆ ಒಲಿದಿಲ್ಲ. ಟೂರ್ನಿಯ ಇತಿಹಾಸದಲ್ಲಿ ರಾಜ್ಯ ತಂಡವು ಒಟ್ಟು ನಾಲ್ಕು ಬಾರಿ ಪ್ರಶಸ್ತಿ ಸಾಧನೆ ಮಾಡಿದೆ.

ಜಮ್ಮು–ಕಾಶ್ಮೀರ ತಂಡದಲ್ಲಿ ವೇಗಿ ಉಮ್ರಾನ್ ಮಲಿಕ್ ಮತ್ತು ಅಬ್ದುಲ್ ಸಮದ್ ಕರ್ನಾಟಕ ತಂಡಕ್ಕೆ ಸವಾಲೊಡ್ಡಲು ಸಿದ್ಧರಾಗಿದ್ದಾರೆ. ಶುಭಂ ಖಜೂರಿ ತಂಡವನ್ನು ಮುನ್ನಡೆಸುತ್ತಿದ್ದಾರೆ.

ಕರ್ನಾಟಕದ ಪಂದ್ಯಗಳು

ಟೂರ್ನಿಯಲ್ಲಿ ಕರ್ನಾಟಕ ತಂಡವು ಜಮ್ಮು–ಕಾಶ್ಮೀರ (ನ.23), ಉತ್ತರಾಖಂಡ (ನ.25), ದೆಹಲಿ (ನ.27), ಬಿಹಾರ (ನ.29), ಚಂಡೀಗಡ (ಡಿ.1), ಹರಿಯಾಣ (ಡಿ.3) ಮತ್ತು ಮಿಜೋರಾಂ (ಡಿ.5) ವಿರುದ್ಧ ಆಡಲಿದೆ. 

ಬೆಂಗಳೂರಿನಲ್ಲಿ ಪಂದ್ಯಗಳು

ಆಲೂರು: ಕರ್ನಾಟಕದ ಶ್ರೇಯಸ್ ಗೋಪಾಲ್ ಅವರು ಈ ಟೂರ್ನಿಯಲ್ಲಿ ಕೇರಳ ತಂಡವನ್ನು ಪ್ರತಿನಿಧಿಸಲಿದ್ದಾರೆ. ಕೇರಳ ತಂಡವು ಬೆಂಗಳೂರು ಹೊರವಲಯದ ಆಲೂರಿನಲ್ಲಿ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ಹಾಲಿ ಚಾಂಪಿಯನ್ ಸೌರಾಷ್ಟ್ರ ತಂಡವನ್ನು ಎದುರಿಸಲಿದೆ. ಕೇರಳ ತಂವನ್ನು ವಿಕೆಟ್‌ ಕೀಪರ್ ಸಂಜು ಸ್ಯಾಮ್ಸನ್ ಮುನ್ನಡೆಸುವರು. ಸೌರಾಷ್ಟ್ರಕ್ಕೆ ಜಯದೇವ್ ಉನದ್ಕತ್ ನಾಯಕರಾಗಿದ್ದಾರೆ. ತಂಡದಲ್ಲಿ ಟೆಸ್ಟ್ ಬ್ಯಾಟರ್ ಚೇತೇಶ್ವರ್ ಪೂಜಾರ ಇದ್ದಾರೆ. ಎ ಗುಂಪಿನ ಪಂದ್ಯಗಳು ಬೆಂಗಳೂರಿನಲ್ಲಿ ನಡೆಯಲಿವೆ. ಇದರಲ್ಲಿ ಒಡಿಶಾ ತ್ರಿಪುರಾ ಪುದುಚೇರಿ ಸೌರಾಷ್ಟ್ರ ಮುಂಬೈ ರೈಲ್ವೆಸ್ ಕೇರಳ ಸಿಕ್ಕಿಂ ರೈಲ್ವೆಸ್ ತಂಡಗಳು ಆಡಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT