ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿ20 ಕ್ರಿಕೆಟ್: ಆಸ್ಟ್ರೇಲಿಯಾ ಮಡಿಲಿಗೆ ಸರಣಿ

ಹೀಲಿ, ಮೂನಿ ಅಮೋಘ ಬ್ಯಾಟಿಂಗ್; ಪೂಜಾಗೆ ಎರಡು ವಿಕೆಟ್‌, ಮುಂದುವರಿದ ಹರ್ಮನ್‌ ವೈಫಲ್ಯ
Published 9 ಜನವರಿ 2024, 20:43 IST
Last Updated 9 ಜನವರಿ 2024, 20:43 IST
ಅಕ್ಷರ ಗಾತ್ರ

ನವೀ ಮುಂಬೈ: ಆರಂಭಿಕ ಜೋಡಿ ಅಲಿಸಾ ಹೀಲಿ ಮತ್ತು ಬೆತ್ ಮೂನಿ ಅವರ ಸೊಗಸಾದ ಅರ್ಧಶತಕಗಳ ಬಲದಿಂದ ಆಸ್ಟ್ರೇಲಿಯಾ ತಂಡವು ಭಾರತದ ಎದುರಿನ ಟಿ20 ಪಂದ್ಯದಲ್ಲಿ 7 ವಿಕೆಟ್‌ಗಳಿಂದ ಜಯಿಸಿತು.

ಇದರೊಂದಿಗೆ ಮೂರು ಪಂದ್ಯಗಳ ಸರಣಿಯನ್ನು 2–1 ರಿಂದ ತನ್ನದಾಗಿಸಿಕೊಂಡಿತು. ಡಿ.ವೈ. ಪಾಟೀಲ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಮೂರನೇ ಮತ್ತು ಕೊನೆಯ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು.

ಅನಾಬೆಲ್ ಸದರ್ಲೆಂಡ್ ಮತ್ತು ವೇರ್‌ಹ್ಯಾಮ್ ಅವರ ದಾಳಿಯ ಮುಂದೆ ಭಾರತ ತಂಡಕ್ಕೆ 20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 147 ರನ್ ಗಳಿಸಲು ಮಾತ್ರ ಸಾಧ್ಯವಾಯಿತು. ಅದಕ್ಕುತ್ತರವಾಗಿ ಆಸ್ಟ್ರೇಲಿಯಾ ತಂಡವು 18.4 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 149 ರನ್ ಗಳಿಸಿ ಜಯಿಸಿತು. ಹೀಲಿ (55; 38ಎ, 4X9, 6X1) ಮತ್ತು ಮೂನಿ (52; 45ಎ, 4X5) ಅವರು ಮೊದಲ ವಿಕೆಟ್ ಜೊತೆಯಾಟದಲ್ಲಿ 85 ರನ್‌ ಸೇರಿಸಿದರು.

ಈ ಜೊತೆಯಾಟಕ್ಕೆ ತಡೆಯೊಡ್ಡುವಲ್ಲಿ ಆತಿಥೇಯ ತಂಡದ ಬೌಲರ್‌ಗಳು ವಿಫಲರಾದರು. ಹತ್ತನೇ ಓವರ್‌ನಲ್ಲಿ ಹೀಲಿ ಅವರ ವಿಕೆಟ್ ಗಳಿಸಿದ ದೀಪ್ತಿ ಶರ್ಮಾ ಜೊತೆಯಾಟವನ್ನು ಮುರಿದರು. ಆದರೆ ಮೂನಿ ಮಾತ್ರ ದಿಟ್ಟತನದಿಂದ ಆಟ ಮುಂದುವರಿಸಿದರು. 

16ನೇ ಓವರ್‌ ಒಂದರಲ್ಲಿಯೇ  ತಹಿಲಿಯಾ ಮೆಕ್‌ಗ್ರಾ (20 ರನ್)  ಮತ್ತು ಎಲಿಸ್ ಪೆರಿ ಅವರ ವಿಕೆಟ್‌ಗಳನ್ನು ಕಬಳಿಸಿದ ಪೂಜಾ ವಸ್ತ್ರಾಕರ್ ಭಾರತದ ಪಾಳೆಯದಲ್ಲಿ ಗೆಲುವಿನ ಆಸೆ ಚಿಗುರಿಸಿದರು. ಆದರೆ ಮೂನಿ ಜೊತೆಗೂಡಿದ ಫೊಯೆಬಿ ಲಿಚ್‌ಫೀಲ್ಡ್ (ಔಟಾಗದೆ 17) ತಂಡವನ್ನು ಗೆಲುವಿನ ದಡ ಸೇರಿಸಿದರು.

ರಿಚಾ ಘೋಷ್ ಉತ್ತಮ ಬ್ಯಾಟಿಂಗ್: ನಾಯಕಿ ಹರ್ಮನ್‌ ಪ್ರೀತ್ ಕೌರ್ ಮತ್ತು ಜಿಮಿಮಾ ರಾಡ್ರಿಗಸ್ ಅವರ ವೈಫಲ್ಯದಿಂದಾಗಿ ಭಾರತ ತಂಡವು ಅಲ್ಪಮೊತ್ತಕ್ಕೆ ಕುಸಿಯುವ ಭೀತಿ ಎದುರಿಸಿತ್ತು. ಆದರೆ ರಿಚಾ ಘೋಷ್ (34; 38ಎ, 4X2, 6X3) ಕೊನೆಯಲ್ಲಿ ಇನಿಂಗ್ಸ್‌ಗೆ ಜೀವ ತುಂಬಿದರು.

ತಂಡಕ್ಕೆ ಶಫಾಲಿ ವರ್ಮಾ (26; 17ಎ, 4X6) ಮತ್ತು ಸ್ಮೃತಿ ಮಂದಾನ (29; 28ಎ, 4X2, 6X1) ಮೊದಲ ವಿಕೆಟ್ ಜೊತೆಯಾಟದಲ್ಲಿ 39 ರನ್‌ ಸೇರಿಸಿ ಉತ್ತಮ ಆರಂಭವನ್ನು ನೀಡಿದ್ದರು.

ಆಸ್ಟ್ರೇಲಿಯಾ ತಂಡವು ಈ ಪ್ರವಾಸದಲ್ಲಿ ಆಡಿದ್ದ ಏಕೈಕ ಟೆಸ್ಟ್‌ನಲ್ಲಿ ಸೋತಿತ್ತು. ನಂತರ ಏಕದಿನ ಸರಣಿ ಜಯಿಸಿತ್ತು.

ಸಂಕ್ಷಿಪ್ತ ಸ್ಕೋರು: ಭಾರತ: 20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 147 (ಶಫಾಲಿ ವರ್ಮಾ 26, ಸ್ಮೃತಿ ಮಂದಾನ 29, ರಿಚಾ ಘೋಷ್ 34, ಅಮನ್ಜೋತ್ ಕೌರ್ ಔಟಾಗದೆ 17, ಅನಾಬೆಲ್ ಸದರ್ಲೆಂಡ್ 12ಕ್ಕೆ2, ವೇರ್‌ಹ್ಯಾಮ್ 24ಕ್ಕೆ2)   ಆಸ್ಟ್ರೇಲಿಯಾ: 18.4 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 149 (ಅಲಿಸಾ ಹೀಲಿ 55, ಬೆತ್ ಮೂನಿ ಔಟಾಗದೆ 2, ತಹಿಲಾ ಮೆಕ್‌ಗ್ರಾ 20, ಫೊಯೆಬಿ ಲಿಚ್‌ಫೀಲ್ಡ್ ಔಟಾಗದೆ 17, ಪೂಜಾ ವಸ್ತಾಕರ್ 25ಕ್ಕೆ2, ದೀಪ್ತಿ ಶರ್ಮಾ 32ಕ್ಕೆ1) ಫಲಿತಾಂಶ: ಆಸ್ಟ್ರೇಲಿಯಾ ತಂಡಕ್ಕೆ 7 ವಿಕೆಟ್‌ಗಳ ಜಯ ಹಾಗೂ 2–1ರಿಂದ ಸರಣಿ ಗೆಲುವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT