ಸೋಮವಾರ, ಮೇ 23, 2022
30 °C
ಮುಂಬೈನಲ್ಲಿ ಮೇ 17ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿರುವ ನಾಯಕ, ಕೋಚ್‌ಗಳು

ದೇಶಿ ಕ್ರಿಕೆಟ್ ಪ್ರತಿನಿಧಿ ಸಮಾವೇಶದಲ್ಲಿ ಮಹಿಳಾ ಧ್ವನಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕ್ರಾಂತಿಕಾರಿ ಹೆಜ್ಜೆ ಇರಿಸಿರುವ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಈ ಬಾರಿ ದೇಶಿ ತಂಡಗಳ ನಾಯಕರ ಮತ್ತು ಕೋಚ್‌ಗಳ ವಾರ್ಷಿಕ ಸಮಾವೇಶಕ್ಕೆ ಮಹಿಳಾ ತಂಡಗಳ ಪ್ರತಿನಿಧಿಗಳನ್ನೂ ಆಹ್ವಾನಿಸಿದೆ.

ಪ್ರತಿ ಬಾರಿ ದೇಶಿ ಟೂರ್ನಿಗಳು ಮುಕ್ತಾಯಗೊಂಡ ನಂತರ ಸಮಾವೇಶ ನಡೆಸಲಾಗುತ್ತಿದೆ. ಎಲ್ಲ ರಾಜ್ಯಗಳ ರಣಜಿ ತಂಡಗಳ ನಾಯಕರು ಮತ್ತು ಕೋಚ್‌ಗಳು ಬಿಸಿಸಿಐ ಆಡಳಿತಕ್ಕೆ ಮಾಹಿತಿಯನ್ನು ನೀಡುತ್ತಾರೆ. ಒಂದು ದಶಕದಿಂದ ನಡೆಯುತ್ತಿರುವ ಈ ಸಮಾವೇಶದಲ್ಲಿ ಮಹಿಳಾ ತಂಡಗಳ ಪ್ರತಿನಿಧಿಗಳು ಪಾಲ್ಗೊಂಡಿರಲಿಲ್ಲ. ಈ ಬಾರಿಯ ಸಮಾವೇಶ ಮೇ 17ರಂದು ಮುಂಬೈನಲ್ಲಿ ನಡೆಯಲಿದೆ.

‘ಇದೇ ಮೊದಲ ಬಾರಿ ಮಹಿಳಾ ತಂಡಗಳ ನಾಯಕಿಯರು ಮತ್ತು ಮುಖ್ಯ ಕೋಚ್‌ಗಳು ಸಮಾವೇಶದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವರ ಅಭಿಪ್ರಾಯಗಳಿಗೂ ಬೆಲೆ ನೀಡಬೇಕಾದ ಅಗತ್ಯವಿದ್ದು ಸಮಾವೇಶದಲ್ಲಿ ಸಿಗುವ ಮಾಹಿತಿಗಳ ಆಧಾರದಲ್ಲಿ ಮುಂದಿನ ಹೆಜ್ಜೆ ಇರಿಸಲಾಗುವುದು’ ಎಂದು ಬಿಸಿಸಿಐ ಕ್ರಿಕೆಟ್ ಆಪರೇಷನ್ಸ್‌ ವಿಭಾಗದ ಪ್ರಧಾನ ವ್ಯವಸ್ಥಾಪಕ ಸಾಬಾ ಕರೀಂ ಬುಧವಾರ ತಿಳಿಸಿದರು.

‘ಮಹಿಳೆಯರ ಐಪಿಎಲ್ ಸಂಘಟಿಸುವ ಕುರಿತು ಚರ್ಚೆ ನಡೆಯುತ್ತದೆಯೋ ಇಲ್ಲವೋ ಎಂಬುದನ್ನು ಈಗಲೇ ಹೇಳಲಾರೆ. ಮಹಿಳಾ ಕ್ರಿಕೆಟ್‌ ಬೆಳವಣಿಗೆಗೆ ಏನೇನು ಮಾಡಬೇಕು ಎಂಬುದರ ಕುರಿತು ಅಭಿಪ್ರಾಯ ಕಲೆ ಹಾಕಲಾಗುವುದು’ ಎಂದು ಅವರು ವಿವರಿಸಿದರು.

ಜೂಲನ್ ಗೋಸ್ವಾಮಿ (ಬಂಗಾಳ), ಮಿಥಾಲಿ ರಾಜ್‌ (ರೈಲ್ವೇಸ್‌), ಜೆಮಿಮಾ ರಾಡ್ರಿಗಸ್‌ (ಮುಂಬೈ) ಮತ್ತಿತರರು ಸಮಾವೇಶದಲ್ಲಿ ಪಾಲ್ಗೊಳ್ಳುವುದು ಖಚಿತವಾಗಿದೆ.

ಈಶಾನ್ಯ ರಾಜ್ಯಗಳ ಮೇಲೆ ಕಣ್ಣು: ಪ್ರಥಮ ದರ್ಜೆ ಕ್ರಿಕೆಟ್‌ಗೆ ಕಳೆದ ಬಾರಿ ಪದಾರ್ಪಣೆ ಮಾಡಿದ ಈಶಾನ್ಯ ರಾಜ್ಯಗಳ ತಂಡಗಳ ಪ್ರತಿನಿಧಿಗಳು ಈ ಬಾರಿಯ ಸಮಾವೇಶದಲ್ಲಿ ಗಮನ ಸೆಳೆಯಲಿದ್ದಾರೆ. ಅವರು ನೀಡುವ ಮಾಹಿತಿ ಮತ್ತು ಸಲಹೆಗಳಿಗೆ ಬಿಸಿಸಿಐ ಯಾವ ರೀತಿ ಸ್ಪಂದಿಸಲಿದೆ ಎಂಬುದು ಕುತೂಹಲ ಕೆರಳಿಸಿದೆ.

ದೇಶಿ ಮಟ್ಟದ ಎಲ್ಲ ಮಾದರಿಯ ಕ್ರಿಕೆಟ್‌ನಲ್ಲಿ ಕಳಪೆ ಮಟ್ಟದ ಅಂಪೈರಿಂಗ್ ಮತ್ತು ವಯೋಮಾನ ಕ್ರಿಕೆಟ್‌ಗೆ ಸಂಬಂಧಿಸಿದ ಚರ್ಚೆಗೆ ಹೆಚ್ಚು ಒತ್ತು ಸಿಗಲಿದೆ ಎಂದು ನಿರೀಕ್ಷಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು