ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ಏಕದಿನ ಕ್ರಿಕೆಟ್‌: ಸರಣಿ ‘ಕ್ಲೀನ್‌ ಸ್ವೀಪ್‌’ ಮೇಲೆ ಭಾರತದ ಕಣ್ಣು

ಇಂದು ಇಂಗ್ಲೆಂಡ್‌ ಎದುರು ಅಂತಿಮ ಹೋರಾಟ
Last Updated 27 ಫೆಬ್ರುವರಿ 2019, 19:45 IST
ಅಕ್ಷರ ಗಾತ್ರ

ಮುಂಬೈ: ಸತತ ಎರಡು ಪಂದ್ಯಗಳಲ್ಲಿ ಗೆದ್ದು ವಿಶ್ವಾಸದ ಅಲೆಯಲ್ಲಿ ತೇಲುತ್ತಿರುವ ಭಾರತ ಮಹಿಳಾ ತಂಡದವರು ಇಂಗ್ಲೆಂಡ್‌ ಎದುರಿನ ಏಕದಿನ ಸರಣಿಯಲ್ಲಿ ‘ಕ್ಲೀನ್‌ ಸ್ವೀಪ್‌’ ಸಾಧನೆ ಮಾಡುವ ತವಕದಲ್ಲಿದ್ದಾರೆ.

ಉಭಯ ತಂಡಗಳ ನಡುವಣ ಮೂರನೇ ಹಾಗೂ ಅಂತಿಮ ಹಣಾಹಣಿ, ಗುರುವಾರ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿದೆ.

ಸರಣಿಯ ಮೊದಲ ಪಂದ್ಯದಲ್ಲಿ 66ರನ್‌ಗಳಿಂದ ವಿಶ್ವ ಚಾಂಪಿಯನ್ನರನ್ನು ಮಣಿಸಿದ್ದ ಮಿಥಾಲಿ ರಾಜ್‌ ಬಳಗ, ಎರಡನೇ ಹೋರಾಟದಲ್ಲಿ ಏಳು ವಿಕೆಟ್‌ಗಳ ಜಯಭೇರಿ ಮೊಳಗಿಸಿತ್ತು. ಈ ಮೂಲಕ ನಾಲ್ಕು ಪಾಯಿಂಟ್ಸ್‌ ಕಲೆಹಾಕಿ, 2021ರ ಏಕದಿನ ವಿಶ್ವಕಪ್‌ಗೆ ನೇರ ಅರ್ಹತೆ ಗಳಿಸುವ ಹಾದಿಯನ್ನು ಸುಗಮ ಮಾಡಿಕೊಂಡಿದೆ. ಅಂತಿಮ ಪಂದ್ಯದಲ್ಲೂ ಪ್ರವಾಸಿ ಪಡೆಯನ್ನು ಹಣಿದು ಮತ್ತೆರಡು ಪಾಯಿಂಟ್ಸ್‌ ಬುಟ್ಟಿಗೆ ಹಾಕಿಕೊಳ್ಳುವತ್ತ ಈಗ ಭಾರತ ತಂಡ ಚಿತ್ತ ನೆಟ್ಟಿದೆ.

ಡಬ್ಲ್ಯು.ವಿ.ರಾಮನ್‌ ಅವರು ಮುಖ್ಯ ಕೋಚ್‌ ಆಗಿ ನೇಮಕಗೊಂಡ ನಂತರ ತಂಡ ಎಲ್ಲಾ ವಿಭಾಗಗಳಲ್ಲೂ ಪರಿಣಾಮಕಾರಿ ಸಾಮರ್ಥ್ಯ ತೋರುತ್ತಿದೆ. ಹಿಂದಿನ ಎರಡು ಪಂದ್ಯಗಳನ್ನು ಗಮನಿಸಿದರೆ ಇದು ಮನದಟ್ಟಾಗುತ್ತದೆ.

ಎಡಗೈ ಆಟಗಾರ್ತಿ ಸ್ಮೃತಿ ಮಂದಾನ, ಜೆಮಿಮಾ ರಾಡ್ರಿಗಸ್‌ ಮತ್ತು ನಾಯಕಿ ಮಿಥಾಲಿ ಅಮೋಘ ಲಯದಲ್ಲಿರುವುದು ತಂಡಕ್ಕೆ ವರವಾಗಿದೆ. ಎರಡನೇ ಪಂದ್ಯದಲ್ಲಿ 63ರನ್‌ ಗಳಿಸಿದ್ದ ಸ್ಮೃತಿ, ಅಂತಿಮ ಪಂದ್ಯದಲ್ಲೂ ಅಬ್ಬರಿಸಲು ಕಾಯುತ್ತಿದ್ದಾರೆ. ಜೆಮಿಮಾ ಜೊತೆಗೂಡಿ ತಂಡಕ್ಕೆ ಭದ್ರ ಅಡಿಪಾಯ ಹಾಕಿಕೊಡಲು ಹಾತೊರೆಯುತ್ತಿದ್ದಾರೆ.

ಮಿಥಾಲಿ, ಈ ಸರಣಿಯಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಆಟಗಾರ್ತಿ ಎನಿಸಿದ್ದಾರೆ. ಮೊದಲ ಪಂದ್ಯದಲ್ಲಿ 44ರನ್‌ ಬಾರಿಸಿದ್ದ ಅವರು ಎರಡನೇ ಹಣಾಹಣಿಯಲ್ಲಿ ಅಜೇಯ 47ರನ್‌ ದಾಖಲಿಸಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದ್ದರು.

ಅನುಭವಿ ಆಟಗಾರ್ತಿ ಪೂವನ್‌ ರಾವುತ್‌ ಲಯಕ್ಕೆ ಮರಳಿರುವುದರಿಂದ ಆತಿಥೇಯರ ಬ್ಯಾಟಿಂಗ್‌ ವಿಭಾಗಕ್ಕೆ ಇನ್ನಷ್ಟು ಶಕ್ತಿ ಬಂದಂತಾಗಿದೆ.

ಜೆಮಿಮಾ, ದೀ‍ಪ್ತಿ ಶರ್ಮಾ, ಮೋನಾ ಮೆಷ್ರಮ್‌ ಮತ್ತು ವಿಕೆಟ್‌ ಕೀಪರ್‌ ತಾನಿಯಾ ಭಾಟಿಯಾ ಕೂಡಾ ಅಬ್ಬರಿಸಿದರೆ ವಾಂಖೆಡೆ ಕ್ರೀಡಾಂಗಣದಲ್ಲಿ ರನ್‌ ಮಳೆ ಸುರಿಯುವುದು ನಿಶ್ಚಿತ.

ಬೌಲಿಂಗ್‌ನಲ್ಲೂ ಭಾರತ ಬಲಿಷ್ಠವಾಗಿದೆ. ಹೊಸ ಚೆಂಡಿನೊಂದಿಗೆ ದಾಳಿಗಿಳಿಯುವ ಜೂಲನ್‌ ಗೋಸ್ವಾಮಿ ಮತ್ತು ಶಿಖಾ ಪಾಂಡೆ ಆರಂಭದಲ್ಲೇ ವಿಕೆಟ್‌ ಉರುಳಿಸಿ ಎದುರಾಳಿಗಳ ಬ್ಯಾಟಿಂಗ್‌ ಶಕ್ತಿಗೆ ಪೆಟ್ಟು ನೀಡಲು ಕಾಯುತ್ತಿದ್ದಾರೆ. ಹಿಂದಿನ ಹೋರಾಟದಲ್ಲಿ ಇವರು ತಲಾ ನಾಲ್ಕು ವಿಕೆಟ್‌ ಪಡೆದಿದ್ದರು.

ಸ್ಪಿನ್ನರ್‌ಗಳಾದ ದೀಪ್ತಿ ಶರ್ಮಾ, ಪೂನಮ್‌ ಯಾದವ್‌ ಮತ್ತು ಏಕ್ತಾ ಬಿಷ್ಠ್‌ ಅವರೂ ಮೋಡಿ ಮಾಡಲು ಕಾತರರಾಗಿದ್ದಾರೆ.

ಗೌರವ ಉಳಿಸಿಕೊಳ್ಳುವ ಗುರಿ: ಹೀದರ್‌ ನೈಟ್‌ ಸಾರಥ್ಯದ ಇಂಗ್ಲೆಂಡ್‌ ತಂಡ ಅಂತಿಮ ಪಂದ್ಯದಲ್ಲಿ ಗೆದ್ದು ಗೌರವ ಉಳಿಸಿಕೊಳ್ಳುವ ಗುರಿ ಹೊಂದಿದೆ.

ತಂಡದ ಗೆಲುವಿನ ಕನಸು ಸಾಕಾರಗೊಳ್ಳಬೇಕಾದರೆ ಹೀದರ್‌ ಬಳಗ ಬ್ಯಾಟಿಂಗ್ ಮತ್ತು ಬೌಲಿಂಗ್ ವಿಭಾಗಗಳಲ್ಲಿ ಶ್ರೇಷ್ಠ ಸಾಮರ್ಥ್ಯ ತೋರುವುದು ಅಗತ್ಯ.

ಪಂದ್ಯದ ಆರಂಭ: ಬೆಳಿಗ್ಗೆ 9.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT