ವಿಶ್ವ ಟ್ವೆಂಟಿ–20 ಕ್ರಿಕೆಟ್‌: ಮಹಿಳಾ ತಂಡಕ್ಕೆ ವಿಶ್ವ ಕಿರೀಟದ ಕನಸು

7

ವಿಶ್ವ ಟ್ವೆಂಟಿ–20 ಕ್ರಿಕೆಟ್‌: ಮಹಿಳಾ ತಂಡಕ್ಕೆ ವಿಶ್ವ ಕಿರೀಟದ ಕನಸು

Published:
Updated:
Deccan Herald

ಪ್ರತಿಷ್ಠಿತ ಐಸಿಸಿ ವಿಶ್ವ ಟ್ವೆಂಟಿ–20 ಕ್ರಿಕೆಟ್‌ ಟೂರ್ನಿಯಲ್ಲಿ ಈ ಬಾರಿ ಭಾರತ ಮಹಿಳಾ ತಂಡಕ್ಕೆ ಟ್ರೋಫಿ ಒಲಿಯಲಿದೆಯೇ. ವೆಸ್ಟ್‌ ಇಂಡೀಸ್‌ನಲ್ಲಿ ನಡೆಯುವ ಚುಟುಕು ಕ್ರಿಕೆಟ್‌ ಹಬ್ಬದಲ್ಲಿ ನಮ್ಮವರು ಜಯದ ಸಿಹಿ ಸವಿಯಲಿದ್ದಾರೆಯೇ...

ಈ ಪ್ರಶ್ನೆಗಳು ಈಗ ಭಾರತದ ಕ್ರಿಕೆಟ್‌ ಅಭಿಮಾನಿಗಳನ್ನು ಕಾಡುತ್ತಿವೆ.

2009ರ ಮಾತು. ಇಂಗ್ಲೆಂಡ್‌ನಲ್ಲಿ ನಡೆದಿದ್ದ ಚೊಚ್ಚಲ ಟೂರ್ನಿಯಲ್ಲಿ ವೇಗದ ಬೌಲರ್‌ ಜೂಲನ್‌ ಗೋಸ್ವಾಮಿ ತಂಡದ ನೇತೃತ್ವ ವಹಿಸಿದ್ದರು. ಆಂಗ್ಲರ ನಾಡಿನಲ್ಲಿ ಕೆಚ್ಚೆದೆಯಿಂದ ಹೋರಾಡಿದ್ದ ವನಿತೆಯರು ಸೆಮಿಫೈನಲ್‌ ಪ್ರವೇಶಿಸಿ ಗಮನ ಸೆಳೆದಿದ್ದರು. 2010ರಲ್ಲಿ ವೆಸ್ಟ್‌ ಇಂಡೀಸ್‌ನಲ್ಲಿ ಆಯೋಜನೆಯಾಗಿದ್ದ ಟೂರ್ನಿಯಲ್ಲೂ ಭಾರತ ನಾಲ್ಕರ ಘಟ್ಟಕ್ಕೆ ಲಗ್ಗೆ ಇಟ್ಟಿತ್ತು. ಆಗಲೂ ಜೂಲನ್‌ ನಾಯಕಿಯಾಗಿದ್ದರು. ಅದಾದ ನಂತರ ನಡೆದ ಎರಡು ಟೂರ್ನಿಗಳಲ್ಲಿ (2012 ಮತ್ತು 2014) ತಂಡ ಗುಂಪು ಹಂತದಲ್ಲೇ ಹೊರಬಿದ್ದಿತ್ತು.

ಎರಡು ವರ್ಷಗಳ ಹಿಂದೆ (2016) ತವರಿನಲ್ಲೇ ಟೂರ್ನಿ ಆಯೋಜನೆಯಾಗಿದ್ದರಿಂದ ಆತಿಥೇಯರ ಮೇಲೆ ಅಪಾರ ನಿರೀಕ್ಷೆಗಳು ಗರಿಗೆದರಿದ್ದವು. ಅವುಗಳನ್ನು ಮಿಥಾಲಿರಾಜ್‌ ಬಳಗ ಹುಸಿಗೊಳಿಸಿತ್ತು. ಗುಂಪು ಹಂತದಲ್ಲೇ ತಂಡದ ಹೋರಾಟ ಅಂತ್ಯವಾಗಿದ್ದರಿಂದ ಅಭಿಮಾನಿಗಳು ನಿರಾಸೆಯ ಕಡಲಲ್ಲಿ ಮುಳುಗಿದ್ದರು.

ನವೆಂಬರ್‌ನಲ್ಲಿ ಕೆರಿಬಿಯನ್‌ ನಾಡಿನಲ್ಲಿ ಜರುಗುವ ಈ ಬಾರಿಯ ಟೂರ್ನಿಯಲ್ಲಿ ತಂಡ ಚಾಂಪಿಯನ್‌ ಪಟ್ಟಕ್ಕೇರಲಿದೆ ಎಂಬ ಆಶಾಭಾವ ಮತ್ತೆ ಕ್ರಿಕೆಟ್‌ ಪ್ರಿಯರಲ್ಲಿ ಚಿಗುರೊಡೆದಿದೆ. ಹೋದ ವರ್ಷ ಇಂಗ್ಲೆಂಡ್‌ನಲ್ಲಿ ನಡೆದಿದ್ದ ಏಕದಿನ ವಿಶ್ವಕಪ್‌ನಲ್ಲಿ ಮಿಥಾಲಿ ರಾಜ್‌ ಬಳಗ ರನ್ನರ್ಸ್‌ ಅಪ್‌ ಸಾಧನೆ ಮಾಡಿತ್ತು. ‌ಈ ಕಾರಣದಿಂದಾಗಿಯೂ ತಂಡದ ಮೇಲೆ ಬೆಟ್ಟದಷ್ಟು ಭರವಸೆ ಇಡಲಾಗಿದೆ.

ಬಿಸಿಸಿಐ ಮಹತ್ವದ ಹೆಜ್ಜೆ
ವಿಶ್ವ ಟ್ವೆಂಟಿ–20ಗೆ ಬಲಿಷ್ಠ ತಂಡ ಕಟ್ಟುವ ಉದ್ದೇಶದಿಂದ ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಮಹತ್ವದ ಹೆಜ್ಜೆಯೊಂದನ್ನು ಇಟ್ಟಿದೆ.

ಇದೇ ಮೊದಲ ಬಾರಿಗೆ ಮಹಿಳಾ ಟ್ವೆಂಟಿ–20 ಚಾಲೆಂಜರ್‌ ಟ್ರೋಫಿ ಆಯೋಜಿಸಿದ್ದು, ಈ ಮೂಲಕ ಪ್ರತಿಭಾನ್ವೇಷಣೆಗೆ ಮುನ್ನುಡಿ ಬರೆದಿದೆ.

ಬೆಂಗಳೂರಿನ ಹೊರವಲಯದಲ್ಲಿರುವ ಆಲೂರಿನ ಮೈದಾನದಲ್ಲಿ ನಡೆಯುತ್ತಿರುವ ಡಬಲ್ ರೌಂಡ್‌ ರಾಬಿನ್‌ ಲೀಗ್‌ ಮಾದರಿಯ ಟೂರ್ನಿಯಲ್ಲಿ ಇಂಡಿಯಾ ಬ್ಲೂ, ಇಂಡಿಯಾ ರೆಡ್‌ ಮತ್ತು ಇಂಡಿಯಾ ಗ್ರೀನ್‌ ತಂಡಗಳು ಪೈಪೋಟಿ ನಡೆಸುತ್ತಿದ್ದು, ಆಗಸ್ಟ್‌ 21ರಂದು ಫೈನಲ್‌ ನಿಗದಿಯಾಗಿದೆ.

ಮಿಥಾಲಿ ರಾಜ್‌, ಕರ್ನಾಟಕದ ವೇದಾ ಕೃಷ್ಣಮೂರ್ತಿ, ರಾಜೇಶ್ವರಿ ಗಾಯಕವಾಡ, ವಿ.ಆರ್‌.ವನಿತಾ, ಸುಷ್ಮಾ ವರ್ಮಾ, ಶಿಖಾ ಪಾಂಡೆ ಮತ್ತು ಜೂಲನ್‌ ಗೋಸ್ವಾಮಿ ಅವರಂತಹ ಅನುಭವಿಗಳು ಟೂರ್ನಿಯಲ್ಲಿ ಆಡುತ್ತಿದ್ದಾರೆ.

ವಯನಾಡಿನ ಕುರುಚ್ಚಿ ಬುಡಕಟ್ಟು ಸಮುದಾಯದ ಸಂಜೀವನ ಸಾಜನ, ತಿರುವನಂತಪುರದ ಕೀರ್ತಿ ಜೇಮ್ಸ್‌, ಪ್ರಿಯಾ ಪೂನಿಯಾ ಮತ್ತು ಪ್ರೀತಿ ಬೋಸ್‌ ಅವರಂತಹ ಯುವ ಪ್ರತಿಭೆಗಳು ಪ್ರವರ್ಧಮಾನಕ್ಕೆ ಬರಲು ಈ ಟೂರ್ನಿ ವೇದಿಕೆ ಕಲ್ಪಿಸಿದೆ.

ಇಷ್ಟೇ ಅಲ್ಲದೆ ಆಸ್ಟ್ರೇಲಿಯಾದ ಮಹಿಳಾ ಬಿಗ್‌ಬಾಷ್‌ ಟ್ವೆಂಟಿ–20 ಲೀಗ್‌ ಮಾದರಿಯಲ್ಲಿ ಮಹಿಳಾ ಐಪಿಎಲ್‌ ಆಯೋಜನೆಯ ಬಗ್ಗೆಯೂ ಬಿಸಿಸಿಐ ಚಿಂತನೆ ನಡೆಸಿದೆ. ಇದರ ಮೊದಲ ಹೆಜ್ಜೆಯಾಗಿ ಈ ಸಲದ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಟೂರ್ನಿಯ ವೇಳೆ ಪ್ರಾಯೋಗಿಕ ಪಂದ್ಯ ಆಯೋಜಿಸಿ ಹೊಸ ಭಾಷ್ಯ ಬರೆದಿದೆ.


ಕರ್ನಾಟಕದ ವೇದಾ ಕೃಷ್ಣಮೂರ್ತಿ, ರಾಜೇಶ್ವರಿ ಗಾಯಕವಾಡ ಮತ್ತು ವಿ.ಆರ್‌.ವನಿತಾ

ಮೇ 22ರಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದಿದ್ದ ಐತಿಹಾಸಿಕ ಹೋರಾಟದಲ್ಲಿ ಸ್ಮೃತಿ ಮಂದಾನ ಸಾರಥ್ಯದ ಟ್ರಯಲ್‌ ಬ್ಲೇಜರ್ಸ್‌ ಮತ್ತು ಹರ್ಮನ್‌ಪ್ರೀತ್‌ ಕೌರ್‌ ಮುಂದಾಳತ್ವದ ಸೂಪರ್‌ನೋವಾಸ್‌ ಪೈಪೋಟಿ ನಡೆಸಿದ್ದವು. ಈ ಹಣಾಹಣಿಯಲ್ಲಿ ಸೂಪರ್‌ನೋವಾಸ್‌ ಮೂರು ವಿಕೆಟ್‌ಗಳಿಂದ ಗೆದ್ದಿತ್ತು.

ನ್ಯೂಜಿಲೆಂಡ್‌ನ ಸೂಜಿ ಬೇಟ್ಸ್‌, ಆಸ್ಟ್ರೇಲಿಯಾದ ಅಲಿಸಾ ಹೀಲಿ, ಬೆಥ್‌ ಮೂನಿ, ಎಲಿಸೆ ಪೆರ‍್ರಿ, ಮೇಗನ್‌ ಶುಟ್‌ ಮತ್ತು ಇಂಗ್ಲೆಂಡ್‌ನ ಡೇನಿಯಲ್‌ ವ್ಯಾಟ್‌, ಮೆಗ್‌ ಲ್ಯಾನಿಂಗ್‌, ಸೋಫಿ ಡಿವೈನ್‌, ಡೇನಿಯಲ್‌ ಹಜೆಲ್‌ ಅವರಂತಹ ವಿಶ್ವ ಶ್ರೇಷ್ಠ ಆಟಗಾರ್ತಿಯರು ಈ ಪಂದ್ಯದಲ್ಲಿ ಆಡಿ ಅಭಿಮಾನಿಗಳನ್ನು ರಂಜಿಸಿದ್ದರು.

ವಿಶ್ವ ಟ್ವೆಂಟಿ–20 ಟೂರ್ನಿಗೂ ಮುನ್ನ ವೆಸ್ಟ್‌ ಇಂಡೀಸ್‌ನ ವಾತಾವರಣಕ್ಕೆ ಹೊಂದಿಕೊಳ್ಳಲು ಆಟಗಾರ್ತಿಯರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಬಿಸಿಸಿಐ, ಅಕ್ಟೋಬರ್‌ನಲ್ಲಿ ಕೆರಿಬಿಯನ್‌ ನಾಡಿನ ತಂಡದ ವಿರುದ್ಧ ಕ್ರಿಕೆಟ್‌ ಸರಣಿ ಆಯೋಜಿಸಿದೆ. ಹಿರಿಯ ಮತ್ತು ಅನುಭವಿ ಕ್ರಿಕೆಟಿಗ ರಮೇಶ್‌ ಪೊವಾರ್‌ ಅವರನ್ನು ಕೋಚ್‌ ಆಗಿ ನೇಮಿಸಿದೆ.

‘ವಿಶ್ವ ಟ್ವೆಂಟಿ–20 ಪ್ರತಿಷ್ಠಿತ ಟೂರ್ನಿ. ಇದಕ್ಕೂ ಮುನ್ನ ಚಾಲೆಂಜರ್‌ ಟ್ರೋಫಿ ಆಯೋಜಿಸಿರುವುದು ಉತ್ತಮ ನಿರ್ಧಾರ. ಇದರಿಂದ ಪ್ರತಿಭಾನ್ವೇಷಣೆಗೆ ಅನುಕೂಲವಾಗಲಿದೆ. ಹೊಸ ಕೌಶಲಗಳನ್ನು ಕಲಿಯಲು ಮತ್ತು ಒತ್ತಡವನ್ನು ಮೀರಿ ನಿಂತು ಆಡುವ ಕಲೆ ಕರಗತ ಮಾಡಿಕೊಳ್ಳಲು ಆಟಗಾರ್ತಿಯರಿಗೆ  ಲೀಗ್‌ ನೆರವಾಗಲಿದೆ’ ಎಂದು ಹಿರಿಯ ಆಟಗಾರ್ತಿ ಶಾಂತಾ ರಂಗಸ್ವಾಮಿ ಅಭಿಪ್ರಾಯಪಡುತ್ತಾರೆ.

‘ನಮ್ಮಲ್ಲಿ ಪ್ರತಿಭಾವಂತರ ದೊಡ್ಡ ಪಡೆ ಇದೆ. ಈ ಬಾರಿ ನಮ್ಮವರು ವಿಶ್ವ ಟ್ವೆಂಟಿ–20ಯಲ್ಲಿ ಕಿರೀಟ ಮುಡಿಗೇರಿಸಿಕೊಳ್ಳುತ್ತಾರೆ ಎಂಬ ಭರವಸೆ ಎಲ್ಲರಲ್ಲೂ ಇದೆ. ಮಿಥಾಲಿ ಮತ್ತು ಜೂಲನ್‌ ಪಾಲಿಗೆ ಇದು ಕೊನೆಯ ಟೂರ್ನಿಯಾಗಬಹುದು. ಈ ಕಾರಣದಿಂದಲೂ ಭಾರತ ತಂಡಕ್ಕೆ ಟೂರ್ನಿ ಮಹತ್ವದ್ದೆನಿಸಿದೆ’ ಎಂದು ಈ ಹಿಂದೆ ಭಾರತ ತಂಡದ ನಾಯಕಿಯೂ ಆಗಿದ್ದ ಶಾಂತಾ ಹೇಳುತ್ತಾರೆ.

‘ಬಿಸಿಸಿಐ ಆಡಳಿತಾಧಿಕಾರಿಗಳ ಸಮಿತಿ (ಸಿಒಎ) ಮಹಿಳಾ ಕ್ರಿಕೆಟ್‌ನ ಅಭಿವೃದ್ಧಿಯ ದೃಷ್ಟಿಯಿಂದ ಉತ್ತಮ ಯೋಜನೆಗಳನ್ನು ರೂಪಿಸುತ್ತಿದ್ದು, ಅವೆಲ್ಲವೂ ಕಟ್ಟುನಿಟ್ಟಾಗಿ ಕಾರ್ಯರೂಪಕ್ಕೆ ಬರಬೇಕು. ಹಾಗಾದಲ್ಲಿ ನಮ್ಮವರೂ ಆಸ್ಟ್ರೇಲಿಯಾ, ಇಂಗ್ಲೆಂಡ್‌, ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲೆಂಡ್‌ ತಂಡಗಳ ಹಾಗೇ ಮಹಿಳಾ ಕ್ರಿಕೆಟ್‌ನ ಶಕ್ತಿಕೇಂದ್ರವಾಗಿ ಬೆಳೆಯಲು ಸಾಧ್ಯ’ ಎಂದೂ ಅವರು ನುಡಿಯುತ್ತಾರೆ.

ಮಹಿಳಾ ತಂಡಕ್ಕೆ ಬಿಸಿಸಿಐನಿಂದ ಈಗ ಸಾಕಷ್ಟು ಬೆಂಬಲ ಸಿಗುತ್ತಿದೆ. ಹೀಗಾಗಿ ಯುವತಿಯರೂ ಕ್ರಿಕೆಟ್‌ನತ್ತ ಆಕರ್ಷಿತರಾಗುತ್ತಿದ್ದಾರೆ. ವಿಶ್ವದ ಬಲಿಷ್ಠ ತಂಡಗಳನ್ನು ಮಣಿಸುವ ಸಾಮರ್ಥ್ಯ ತಮ್ಮಲ್ಲಿದೆ ಎಂಬುದನ್ನು ಭಾರತದ ಆಟಗಾರ್ತಿಯರು ಏಕದಿನ ವಿಶ್ವಕಪ್‌ನಲ್ಲಿ ಸಾಬೀತುಪಡಿಸಿದ್ದಾರೆ. ಕೆರಿಬಿಯನ್ನರ ನೆಲದಲ್ಲೂ ಛಲದಿಂದ ಹೋರಾಡಿದರೆ ಚೊಚ್ಚಲ ಪ್ರಶಸ್ತಿಯ ಕನಸು ಕೈಗೂಡಬಹುದು.
***

ವಿಶ್ವ ಟ್ವೆಂಟಿ–20 ಸಿದ್ಧತೆಗೆ ವೇದಿಕೆ 
ವಿಶ್ವ ಟ್ವೆಂಟಿ–20 ಕ್ರಿಕೆಟ್‌ ಟೂರ್ನಿಯ ಸಿದ್ಧತೆಗೆ ಮಹಿಳಾ ಟ್ವೆಂಟಿ–20 ಚಾಲೆಂಜರ್‌ ಟ್ರೋಫಿ ವೇದಿಕೆಯಾಗಿದೆ. ನಮ್ಮ ತಂಡ ಬಲಿಷ್ಠವಾಗಿದ್ದು ಈ ಸಲ ಪ್ರಶಸ್ತಿ ಗೆಲ್ಲುವ ವಿಶ್ವಾಸ ಇದೆ. ಮಿಥಾಲಿ, ಹರ್ಮನ್‌ಪ್ರೀತ್‌ ಕೌರ್‌ ಮತ್ತು ಸ್ಮೃತಿ ಮಂದಾನ ಎಂತಹುದೇ ಪರಿಸ್ಥಿತಿಯಲ್ಲಿ ಕೆಚ್ಚೆದೆಯ ಆಟ ಆಡಿ ತಂಡಕ್ಕೆ ಗೆಲುವು ತಂದುಕೊಡುವ ಸಾಮರ್ಥ್ಯ ಹೊಂದಿದ್ದಾರೆ’ ಎಂದು ಭಾರತದ ಹಿರಿಯ ಆಟಗಾರ್ತಿ ಕರುಣಾ ಜೈನ್‌ ಹೇಳುತ್ತಾರೆ.

‘ನಮ್ಮಲ್ಲಿ ಈಗ ವಿವಿಧ ವಯೋಮಾನದ ಕ್ರಿಕೆಟ್‌ ಟೂರ್ನಿಗಳು ಹೆಚ್ಚು ನಡೆಯುತ್ತಿವೆ. ಇದರಿಂದ ಎಳವೆಯಲ್ಲಿಯೇ ಪ್ರತಿಭೆಗಳನ್ನು ಗುರುತಿಸಲು ಅನುವಾಗುತ್ತಿದೆ. ಬಿಸಿಸಿಐ ಯೋಜನೆಗಳೂ ಮಹಿಳಾ ಕ್ರಿಕೆಟ್‌ನ ಬೆಳವಣಿಗೆಗೆ ಪೂರಕವಾಗಿವೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !