ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹರಿಣಗಳ ಮೇಲೆ ಗರ್ಜಿಸಿದ ಬಾಂಗ್ಲಾ ‘ಹುಲಿ’ಗಳು

ಶಕೀಬ್ ಅಲ್ ಹಸನ್, ರಹೀಮ್ ಮಿಂಚು: ಫಾಫ್ ಡುಪ್ಲೆಸಿ ಅರ್ಧಶತಕ ವ್ಯರ್ಥ
Last Updated 2 ಜೂನ್ 2019, 18:19 IST
ಅಕ್ಷರ ಗಾತ್ರ

ಲಂಡನ್ (ಎಎಫ್‌ಪಿ): ಕೆನಿಂಗ್ಟನ್ ಓವೆಲ್ ಕ್ರೀಡಾಂಗಣದಲ್ಲಿ ಭಾನುವಾರ ರಾತ್ರಿ ಬಾಂಗ್ಲಾ ’ಹುಲಿ’ಗಳ ಮುಂದೆ ‘ಹರಿಣ’ಗಳ ನಾಡಿನ ತಂಡದ ಆಟ ನಡೆಯಲಿಲ್ಲ.

ವೃತ್ತಿಪರತೆ ಮತ್ತು ಕೌಶಲ್ಯಪೂರ್ಣ ಆಟವಾಡಿದ ಬಾಂಗ್ಲಾ ತಂಡವು 21 ರನ್‌ಗಳಿಂದ ದಕ್ಷಿಣ ಆಫ್ರಿಕಾ ಎದುರು ಜಯಿಸಿತು. ಮಷ್ರಫೆ ಮೊರ್ತಜಾ ನಾಯಕತ್ವದ ತಂಡಕ್ಕೆ ಇದು ಟೂರ್ನಿಯಲ್ಲಿ ಮೊದಲ ಪಂದ್ಯ. ಆದರೆ, ಫಾಫ್ ಡುಪ್ಲೆಸಿ ಬಳಗಕ್ಕೆ ಇದು ಎರಡನೇ ಪಂದ್ಯ ಮತ್ತು ಸೋಲು. ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ಎದುರು ಸೋತಿತ್ತು.

ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಆದರೆ ಆ ತಂಡದ ನಿರೀಕ್ಷೆಗಳನ್ನು ಬಾಂಗ್ಲಾದ ಬ್ಯಾಟಿಂಗ್ ಪಡೆ ಬುಡಮೇಲು ಮಾಡಿತು. ಮಧ್ಯಮ ಕ್ರಮಾಂಕದಲ್ಲಿ ಆಡುವ ಆಲ್‌ರೌಂಡರ್ ಶಕೀಬ್ ಅಲ್ ಹಸನ್ (75; 84ಎಸೆತ, 8ಬೌಂಡರಿ, 1ಸಿಕ್ಸರ್) ಮತ್ತು ರಹೀಮ್ (78; 80ಎಸೆತ, 8ಬೌಂಡರಿ) ಅವರ ಆಟದ ಬಲದಿಂದ ಬಾಂಗ್ಲಾದೇಶವು 50 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 330 ರನ್‌ಗಳನ್ನು ಗಳಿಸಿತು.

ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ 50 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 309 ರನ್‌ ಗಳಿಸಿ ಸೋತಿತು. ಏಡನ್ ಮರ್ಕರಮ್ (45ರನ್), ಫಾಫ್ ಡುಪ್ಲೆಸಿ (62 ರನ್) ಮತ್ತು ಜೀನ್ ಪಾಲ್ ಡುಮಿನಿ (45 ರನ್) ಅವರ ಆಟವು ವ್ಯರ್ಥವಾಯಿತು. 2015ರ ವಿಶ್ವಕಪ್ ಟೂರ್ನಿಯಲ್ಲಿ ಬಾಂಗ್ಲಾ ತಂಡವು ಎಂಟರ ಘಟ್ಟ ತಲುಪಿತ್ತು. ಈ ಬಾರಿ ಗೆಲುವಿನ ಆರಂಭ ಮಾಡಿದೆ.

ಶಕೀಬ್–ರಹೀಮ್ ಜೊತೆಯಾಟ: ಬಾಂಗ್ಲಾದ ಆರಂಭಿಕ ಜೋಡಿ ತಮೀಮ್ ಇಕ್ಬಾಲ್ (16 ರನ್) ಮತ್ತು ಸೌಮ್ಯ ಸರ್ಕಾರ್ (42 ರನ್) ಅವರು 50 ಎಸೆತಗಳಲ್ಲಿ 60 ರನ್‌ ಸೇರಿಸಿದರು. ಒಂಬತ್ತನೇ ಓವರ್‌ನಲ್ಲಿ ಆ್ಯಂಡಿಲೆ ಪಿಶುವಾಯೊ ಅವರು ಇಕ್ಬಾಲ್ ಅವರ ವಿಕೆಟ್ ಗಳಿಸಿ ಈ ಜೊತೆಯಾಟವನ್ನು ಮುರಿದರು. 12ನೇ ಓವರ್‌ನಲ್ಲಿ ಸೌಮ್ಯ ಸರ್ಕಾರ್ ಔಟಾದರು.

ಆಗ ಜೊತೆಗೂಡಿದ ಆಲ್‌ರೌಂಡರ್ ಶಕೀಬ್ ಮತ್ತು ರಹೀಮ್ ಅವರಿಬ್ಬರ ಆಟಕ್ಕೆ ದಕ್ಷಿಣ ಆಫ್ರಿಕಾ ತಂಡ ಬೆರಗಾಯಿತು. ಇವರಿಬ್ಬರೂ ಎದುರಾಳಿ ತಂಡದ ಏಳು ಬೌಲರ್‌ಗಳಿಗೂ ಚಳ್ಳೆಹಣ್ಣು ತಿನ್ನಿಸಿದರು. ಮೂರನೇ ವಿಕೆಟ್‌ಗೆ 142 ರನ್‌ಗಳನ್ನು ಕಲೆಹಾಕಿದರು.

ಈ ಜೋಡಿಯು ಹೇರಿದ ಒತ್ತಡದಲ್ಲಿ ಬೌಲರ್‌ಗಳು ಲಯ ತಪ್ಪಿದ್ದರು. ಡೇಲ್ ಸ್ಟೇನ್ ಅನುಪಸ್ಥಿತಿಯಲ್ಲಿ ಬೌಲಿಂಗ್ ಹೊಣೆ ಹೊತ್ತಿರುವ ಕಗಿಸೊ ರಬಾಡ ಒಬ್ಬರೇ ಏಳು ವೈಡ್‌ಗಳನ್ನು ಹಾಕಿದರು. ಆ್ಯಂಡಿಲೆ ಮತ್ತು ಕ್ರಿಸ್ ಕ್ರಮವಾಗಿ ಮೂರು ಮತ್ತು ಎರಡು ವೈಡ್ ಎಸೆತಗಳನ್ನು ಹಾಕಿದರು.

36ನೇ ಓವರ್‌ನಲ್ಲಿ ಅನುಭವಿ ಸ್ಪಿನ್ನರ್ ಇಮ್ರಾನ್ ತಾಹೀರ್ ಅವರು ಈ ಜೊತೆಯಾಟವನ್ನು ಮುರಿದರು. ಹಸನ್ ಅವರನ್ನು ಕ್ಲೀನ್‌ಬೌಲ್ಡ್ ಮಾಡಿದರು. 40ನೇ ಓವರ್‌ನಲ್ಲಿ ಮುಷ್ಫಿಕರ್ ರಹೀಮ್ ಅವರ ವಿಕೆಟ್‌ ಅನ್ನು ಆ್ಯಂಡಿಲೆ ಗಳಿಸಿದರು. ಆದರೆ, ನಂತರ ಬಂದ ಮೆಹಮುದುಲ್ಲಾ (ಔಟಾಗದೆ 46; 33ಎಸೆತ,3 ಬೌಂಡರಿ, 1ಸಿಕ್ಸರ್) ಮತ್ತು ಮೊಸಾದೆಕ್ ಹೊಸೇನ್ (26; 20ಎಸೆತ, 4ಬೌಂಡರಿ) ರನ್ ಸೂರೆ ಮಾಡಿದರು. ಕೊನೆಯ ಎಂಟು ಓವರ್‌ಗಳಲ್ಲಿ 80 ರನ್‌ಗಳನ್ನು ಸೇರಿಸಿದವು.

ಡುಪ್ಲೆಸಿ, ಡುಮಿನಿ ಹೋರಾಟ: ಬ್ಯಾಟ್ಸ್‌ಮನ್‌ಗಳಿಗೆ ನೆರವು ನೀಡುವಂತಿದ್ದ ಪಿಚ್‌ನಲ್ಲಿ ದಕ್ಷಿಣ ಆಫ್ರಿಕಾದ ಬ್ಯಾಟ್ಸ್‌ಮನ್‌ಗಳು ವೇಗವಾಗಿ ರನ್‌ ಗಳಿಸುವಲ್ಲಿ ಹಿಂದೇಟು ಹಾಕಿದರು. ಮೊದಲ ಆರು ಕ್ರಮಾಂಕಗಳ ಬ್ಯಾಟ್ಸ್‌ಮನ್‌ಗಳು ಉತ್ತಮ ಲಯ ಕಂಡುಕೊಂಡರೂ ‘ಫಿನಿಷರ್‌’ ಪಾತ್ರ ವಹಿಸುವಲ್ಲಿ ಯಾರೂ ಸಫಲರಾಗಲಿಲ್ಲ. ಇದರಿಂಆಗಿ ತಂಡಕ್ಕೆ ಜಯ ಒಲಿಯಲಿಲ್ಲ. ಮುಸ್ತಫಿಜುರ್ ರೆಹಮಾನ್, ಮೊಹಮ್ಮದ್ ಸಲಾವುದ್ದೀನ್ ಮತ್ತು ಶಕೀಬ್ ಅಲ್ ಹಸನ್ ಅವರು ಉತ್ತಮ ಬೌಲಿಂಗ್ ಮಾಡಿದರು.

ಪ್ರೇಕ್ಷಕರ ಗ್ಯಾಲರಿಯಲ್ಲಿದ್ದ ಬಾಂಗ್ಲಾ ಅಭಿಮಾನಿಗಳು ಹುಲಿ ಗೊಂಬೆಗಳನ್ನು ಗಾಳಿಯಲ್ಲಿ ಚಿಮ್ಮಿಸಿ ಸಂಭ್ರಮಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT