ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಷ್ಯಾ ಅಂಗಳದಲ್ಲಿ ಪುಟಿಯಲಿದೆ ಕಾಲ್ಚೆಂಡು

Last Updated 15 ಜುಲೈ 2018, 19:30 IST
ಅಕ್ಷರ ಗಾತ್ರ

ಬಹಳಷ್ಟು ಕುತೂಹಲಗಳನ್ನು ಒಡಲಲ್ಲಿಟ್ಟುಕೊಂಡು ಆರಂಭವಾಗಿದ್ದ ಈ ಬಾರಿಯ ವಿಶ್ವಕಪ್‌ ಫುಟ್‌ಬಾಲ್‌ ಟೂರ್ನಿಗೆ ತೆರೆಬಿದ್ದಿದೆ. ಮುಂದಿನ ವಿಶ್ವಕಪ್‌ ಎಲ್ಲಿ ನಡೆಯಲಿದೆ, ಯಾವ ದೇಶ ಆತಿಥ್ಯ ವಹಿಸಲಿದೆ ಎನ್ನುವ ವಿಷಯ ಕೂಡ ಗೊತ್ತಾಗಿದೆ. ರಷ್ಯಾದಲ್ಲಿ ವಿಶ್ವಕಪ್‌ನ ಫೈನಲ್‌ ಪಂದ್ಯ ಮುಗಿಯುತ್ತಿದ್ದಂತೆ ಕತಾರ್‌ನಲ್ಲಿ ಸಂಭ್ರಮ ಮನೆ ಮಾಡಿದೆ. ಏಕೆಂದರೆ, ಏಷ್ಯಾ ಖಂಡದ ಈ ದೇಶ 2022ರಲ್ಲಿ ಟೂರ್ನಿಯ ಆತಿಥ್ಯ ವಹಿಸಲಿದೆ.

ವಿಶ್ವದಲ್ಲಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಮತ್ತು ಅತ್ಯಂತ ಪ್ರತಿಷ್ಠೆಯ ಹೋರಾಟ ಎನಿಸಿರುವ ವಿಶ್ವಕಪ್‌ನಲ್ಲಿ ಪುಟ್ಟ ರಾಷ್ಟ್ರ ಕತಾರ್‌ ಒಮ್ಮೆಯೂ ಪ್ರಧಾನ ಸುತ್ತಿಗೆ ಅರ್ಹತೆ ಪಡೆದಿಲ್ಲ. ಮುಂದಿನ ವಿಶ್ವಕಪ್‌ಗೆ ಆತಿಥ್ಯ ವಹಿಸಿರುವ ಕಾರಣ ನೇರವಾಗಿ ಮುಖ್ಯ ಸುತ್ತಿನಲ್ಲಿ ಆಡುವ ಅವಕಾಶ ಗಳಿಸಿದೆ.

ಇದು ಕತಾರ್‌ನಲ್ಲಿ ಫುಟ್‌ಬಾಲ್‌ ವೇಗವಾಗಿ ಬೆಳೆಯಲು ನೆರವಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಏಕೆಂದರೆ, 25 ಲಕ್ಷ ಜನಸಂಖ್ಯೆ ಹೊಂದಿರುವ ಕತಾರ್‌ ತಂಡ ಏಷ್ಯಾ ವಲಯದಲ್ಲಿ ಗುರುತಿಸಿಕೊಳ್ಳಲು ಈಗಲೂ ಹೆಣಗಾಡುತ್ತಿದೆ. ಇನ್ನು ವಿಶ್ವ ಮಟ್ಟದಲ್ಲಿ ತಂಡದ ಹೆಸರೇ ಬಹಳಷ್ಟು ರಾಷ್ಟ್ರಗಳಿಗೆ ಗೊತ್ತಿಲ್ಲ.

ಹೆಜ್ಜೆಗುರುತುಗಳ ಹಿನ್ನೋಟ
ಕತಾರ್‌ ರಾಷ್ಟ್ರೀಯ ತಂಡ 1970ರಲ್ಲಿ ಮೊದಲ ಬಾರಿಗೆ ಅಧಿಕೃತ ಪಂದ್ಯವಾಡಿ ಬಹ್ರೇನ್‌ ವಿರುದ್ಧ ಸೋತಿತ್ತು. ಇದಕ್ಕೂ ಮೊದಲೇ ಅರಬ್‌ ದೇಶದಲ್ಲಿ ಫುಟ್‌ಬಾಲ್‌ ಹೆಜ್ಜೆಗುರುತುಗಳಿವೆ.

1950ರ ದಶಕದಲ್ಲಿ ತೈಲ ಕಂಪನಿಗಳಲ್ಲಿ ಕೆಲಸ ಮಾಡುವ ವಲಸಿಗರು ಹವ್ಯಾಸಕ್ಕಾಗಿ ಫುಟ್‌ಬಾಲ್‌ ಪಂದ್ಯಗಳನ್ನು ಆಡುತ್ತಿದ್ದರು. 1960ರಲ್ಲಿ ಕತಾರ್‌ ಫುಟ್‌ಬಾಲ್‌ ಸಂಸ್ಥೆ ಅಸ್ತಿತ್ವಕ್ಕೆ ಬಂತು. ಈ ಸಂಸ್ಥೆ 1970ರಲ್ಲಿ ಫಿಫಾ ಮಾನ್ಯತೆ ಪಡೆದು ಕೊಂಡು, ಗಲ್ಫ್‌ ರಾಷ್ಟ್ರಗಳಲ್ಲಿ ಕ್ರೀಡೆಯ ಬೆಳವಣಿಗೆ ವೇಗ ಹೆಚ್ಚಿಸಲು ಅದೇ ವರ್ಷ ಅರೇಬಿಯನ್‌ ಗಲ್ಫ್‌ ಕಪ್‌ ಟೂರ್ನಿ ಆರಂಭಿಸಿತು.

ಹೆಚ್ಚು ಟೂರ್ನಿಗಳು ಹಾಗೂ ಆಟಗಾರರು ಇಲ್ಲದ ಕಾರಣ ಕತಾರ್‌ ಸಣ್ಣ ಟೂರ್ನಿಗಳಲ್ಲಿಯೇ ಉತ್ತಮ ಆಟ ವಾಡಲು ಪರದಾಡುತ್ತಿತ್ತು. ಆದರೆ, 1970ರ ದಶಕದಲ್ಲಿ ಹಂತಹಂತವಾಗಿ ಉತ್ತಮ ಪ್ರದರ್ಶನ ನೀಡಿ ಎಎಫ್‌ಸಿ ಏಷ್ಯಾ ಕಪ್‌ಗೆ ಅರ್ಹತೆ ಪಡೆದುಕೊಂಡಿತು. ಇದರಿಂದ 1978ರಲ್ಲಿ ಅರ್ಜೆಂಟೀನಾದಲ್ಲಿ ನಡೆದ ವಿಶ್ವಕಪ್‌ಗೆ ಅರ್ಹತಾ ಟೂರ್ನಿಯಲ್ಲಿ ಪಾಲ್ಗೊಳ್ಳಲು ಅವಕಾಶ  ಲಭಿಸಿತು. ಆದರೆ, ಈ ತಂಡ ಕೊನೆಯ ಹಂತದಲ್ಲಿ ಅರ್ಹತಾ ಟೂರ್ನಿಯಿಂದ ಹಿಂದೆ ಸರಿಯಿತು. 1972ರ ಗಲ್ಫ್‌ ಟೂರ್ನಿ ಯಲ್ಲಿ ಆಡಿದ ಮೂರೂ ಪಂದ್ಯಗಳಲ್ಲಿ ಸೋತು ಸುಣ್ಣವಾಗಿತ್ತು.

ಅರಬ್‌ ರಾಷ್ಟ್ರಗಳು ಸೇರಿ ಆಡುವ ‘ಅರಬ್‌ ನ್ಯಾಷನಲ್‌ ಕಪ್‌’ ಟೂರ್ನಿಯಲ್ಲಿ ಕತಾರ್‌ ತಂಡ 1998ರಲ್ಲಿ ರನ್ನರ್ಸ್‌ ಅಪ್‌ ಸ್ಥಾನ ಪಡೆದಿದ್ದು ಶ್ರೇಷ್ಠ ಸಾಧನೆಯಾಗಿದೆ. ಹೆಚ್ಚು ಟೂರ್ನಿ ಆಯೋಜನೆ: ಪಶ್ಚಿಮ ಏಷ್ಯಾದ ರಾಷ್ಟ್ರಗಳು ಈ ಕ್ರೀಡೆಯಲ್ಲಿ ಬಲಿಷ್ಠವಾಗಲೆಂದು ಪಶ್ಚಿಮ ಏಷ್ಯಾ ಫುಟ್‌ಬಾಲ್‌ ಫೆಡರೇಷನ್‌ (ಡಬ್ಲ್ಯು ಎಎಫ್‌ಎಫ್‌) ಪ್ರತಿ ಎರಡು ವರ್ಷಗಳಿಗೊಮ್ಮೆ ಡಬ್ಲ್ಯುಎಎಫ್‌ಎಫ್‌ ಚಾಂಪಿಯನ್‌ಷಿಪ್‌ ಆಯೋಜಿಸುತ್ತದೆ.
ಈ ಟೂರ್ನಿಯಲ್ಲಿ ಅಮಾನ್‌, ತೆಹರಾನ್‌, ಕುವೈತ್‌, ಇರಾನ್‌, ಇರಾಕ್‌, ಸಿರಿಯಾ, ಕತಾರ್‌, ಜೊರ್ಡಾನ್‌, ಬಹರೇನ್‌, ಸೌದಿ ಅರೇಬಿಯಾ, ಲೆಬನಾನ್‌, ಪ್ಯಾಲೆಸ್ತೀನ್‌, ಕಜಕಸ್ತಾನ್, ಯುಎಇ ಮತ್ತು ಕಿರ್ಗಿಸ್ತಾನ್ ತಂಡಗಳು ಪಾಲ್ಗೊಳ್ಳುತ್ತವೆ.

ಈ ಟೂರ್ನಿಯಲ್ಲಿ ನಾಲ್ಕು ವರ್ಷಗಳ ಹಿಂದೆ ಕತಾರ್‌ ಚಾಂಪಿಯನ್‌ ಆಗಿತ್ತು. ಎಎಫ್‌ಸಿ ಏಷ್ಯಾ ಕಪ್‌ನಲ್ಲಿ ಕ್ವಾರ್ಟರ್‌ ಫೈನಲ್‌ ಪ್ರವೇ ಶಿಸಿದ್ದು, ಅರೇಬಿ ಯನ್‌ ಗಲ್ಫ್‌ ಕಪ್‌ ಟೂರ್ನಿಯಲ್ಲಿ ಮೂರು ಸಲ ಪ್ರಶಸ್ತಿ ಪಡೆದಿದ್ದು ಕತಾರ್‌ ತಂಡದ ದೊಡ್ಡ ಸಾಧನೆ ಎನಿಸಿದೆ. 2006ರಲ್ಲಿ ದೋಹಾದಲ್ಲಿ ನಡೆದಿದ್ದ ಏಷ್ಯನ್‌ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದುಕೊಂಡಿತ್ತು.

ಹಸನ್‌ ಅಲ್‌ ಹೊಯ್ಡಸ್‌ ಕತಾರ್‌ ಫುಟ್‌ಬಾಲ್‌ ತಂಡದ ಸದ್ಯದ ನಾಯಕ. ಸೆಬಾಸ್ಟಿಯನ್‌ ಸೋರಿಯಾ 123 ಪಂದ್ಯಗಳಲ್ಲಿ ಆಡಿದ್ದು, 40 ಗೋಲುಗಳನ್ನು ಗಳಿಸಿದ್ದಾರೆ. ಇದು ಆ ದೇಶದ ಆಟಗಾರನೊಬ್ಬನ ಗರಿಷ್ಠ ಸಾಧನೆ ಎನಿಸಿದೆ. ಇದೇ ವರ್ಷದ ಮಾರ್ಚ್‌ನಲ್ಲಿ ಇರಾಕ್‌ನಲ್ಲಿ ನಡೆದಿದ್ದ ‘ಅಂತರರಾಷ್ಟ್ರೀಯ ಸೌಹಾರ್ದ ಚಾಂಪಿಯನ್‌ಷಿಪ್‌’ನಲ್ಲಿ ಕತಾರ್‌, ಸಿರಿಯಾ ಮತ್ತು ಇರಾಕ್‌ ತಂಡಗಳು ಪಾಲ್ಗೊಂಡಿದ್ದವು. ಈ ಟೂರ್ನಿಯಲ್ಲಿ ಕತಾರ್‌ ಚಾಂಪಿಯನ್‌ ಆಗಿತ್ತು.

ಹೀಗೆ ಏಷ್ಯಾ ಫುಟ್‌ಬಾಲ್‌ ಅಂಗಳದಲ್ಲಿ ಇತ್ತೀಚಿನ ವರ್ಷಗಳಲ್ಲಿ ಹೆಜ್ಜೆಗುರುತು ಮೂಡಿಸಲು ಯತ್ನಿಸುತ್ತಿರುವ ಕತಾರ್‌ಗೆ ಈಗ ಒಂದಾದ ಮೇಲೊಂದು ಅವಕಾಶಗಳು ಸಿಗುತ್ತಿವೆ. ವಿಶ್ವದ ಶ್ರೇಷ್ಠ ತಂಡಗಳು ಹಾಗೂ ಆಟಗಾರರು ಪಾಲ್ಗೊಳ್ಳುವ ವಿಶ್ವಕಪ್‌ನಲ್ಲಿ ಆಡಲು ಮೊದಲ ಬಾರಿಗೆ ಅವಕಾಶ ಸಿಕ್ಕಿದೆ.

ಇದಕ್ಕೂ ಮೊದಲು 2019ರಲ್ಲಿ ಬ್ರೆಜಿಲ್‌ನಲ್ಲಿ ಜರುಗಲಿರುವ ಕೊಪಾ ಅಮೆರಿಕ ಟೂರ್ನಿಯಲ್ಲಿ ಪಾಲ್ಗೊಳ್ಳಲು ವಿಶೇಷ ಆಹ್ವಾನಿತ ತಂಡವಾಗಿ ತೆರಳಲಿದೆ. ಈ ಮಹತ್ವದ ಟೂರ್ನಿ ಕತಾರ್‌ ಫುಟ್‌ಬಾಲ್‌ನಲ್ಲಿ ಹೊಸ ಶಕೆ ಆರಂಭಕ್ಕೆ ನಾಂದಿಯಾಗಲಿವೆ ಎಂದು ನಿರೀಕ್ಷಿಸಲಾಗಿದೆ.

ಆತಿಥ್ಯದ ಆಯ್ಕೆ ಪ್ರಕ್ರಿಯೆ: 2022ರ ವಿಶ್ವಕಪ್‌ ಟೂರ್ನಿಯ ಆತಿಥ್ಯಕ್ಕಾಗಿ ಫಿಫಾ 2009ರಲ್ಲಿ ಹೆಸರು ನೋಂದಾಯಿಸಲು ಆಸಕ್ತ ದೇಶಗಳಿಗೆ ಸೂಚಿಸಿತ್ತು. ಕತಾರ್‌, ಅಮೆರಿಕ, ದಕ್ಷಿಣ ಕೊರಿಯಾ, ಜಪಾನ್, ಆಸ್ಟ್ರೇಲಿಯಾ ರಾಷ್ಟ್ರಗಳ ಜೊತೆ ಮೆಕ್ಸಿಕೊ, ಇಂಡೊನೇಷ್ಯಾ ಬಿಡ್‌ ಸಲ್ಲಿಸಿದ್ದವು. ಕೊನೆಯ ಹಂತದಲ್ಲಿ ಮೆಕ್ಸಿಕೊ ಅರ್ಜಿ ಹಿಂಪಡೆದುಕೊಂಡಿತ್ತು.

ಅದ್ದರಿಂದ ಅಂತಿಮವಾಗಿ ಐದು ರಾಷ್ಟ್ರಗಳು ಕಣದಲ್ಲಿ ಉಳಿದಿದ್ದವು. 22 ಸದಸ್ಯರನ್ನು ಒಳಗೊಂಡ ಫಿಫಾ ಕಾರ್ಯಕಾರಿ ಸಮಿತಿ ನಾಲ್ಕು ಸುತ್ತುಗಳಲ್ಲಿ ಮತ ಚಲಾಯಿಸುವ ಮೂಲಕ ಕತಾರ್‌ಗೆ ಆತಿಥ್ಯ ನೀಡಿತು.

ಮತ ಹಾಕುವ ವಿಷಯದಲ್ಲಿ ಕಾರ್ಯಕಾರಿ ಸಮಿತಿಯ ಸದಸ್ಯರು ಭ್ರಷ್ಟಾಚಾರ ಎಸಗಿದ್ದಾರೆ ಎನ್ನುವ ಆರೋಪ ಕೂಡ ಇದೆ. ‘ಕತಾರ್‌ನಲ್ಲಿ ಟೂರ್ನಿ ಆಯೋಜಿಸುವುದು ಅತ್ಯಂತ ಅಪಾಯಕಾರಿ’ ಎನ್ನುವ ದೂರಿನ ನಡುವೆಯೂ ಟೂರ್ನಿ ನಡೆಸಲು ಅನುಮತಿ ಕೊಟ್ಟಿದ್ದಾರೆ. ಇದಕ್ಕಾಗಿ ಅವರು ಹಣ ಪಡೆದಿದ್ದಾರೆ ಎನ್ನುವ ಆರೋಪ ಆಗಲೇ ಕೇಳಿ ಬಂದಿದ್ದವು.

ಎಂಟು ಕ್ರೀಡಾಂಗಣಗಳಲ್ಲಿ ಪಂದ್ಯಗಳು: ಕತಾರ್‌ನ ಎಂಟು ಕ್ರೀಡಾಂಗಣಗಳಲ್ಲಿ ಪಂದ್ಯಗಳು ನಡೆಯಲಿವೆ. ಅಲ್‌ ವಾರ್ಕರ್‌, ಅಹ್ಮದ್‌ ಬಿನ್‌ ಅಲಿ, ಖಲೀಫಾ, ಕತಾರ್‌ ಫೌಂಡೇಷನ್‌, ರಾಸ್‌ ಅಬು ಅಬೋದ್‌ ಕ್ರೀಡಾಂಗಣಗಳ ದುರಸ್ತಿ ಕಾರ್ಯ ಈಗಾಗಲೇ ಆರಂಭವಾಗಿದೆ.

ರಷ್ಯಾದಲ್ಲಿ ಟೂರ್ನಿ ನಡೆಯುತ್ತಿರುವಾಗಲೇ ಕತಾರ್‌ನ ಮಸೀದಿಗಳು, ಪ್ರಮುಖ ಕಟ್ಟಡಗಳ ಮೇಲೆ ಫುಟ್‌ಬಾಲ್‌ ಚಿತ್ರಗಳು ರಾರಾಜಿಸುತ್ತಿದ್ದವು. ಬಣ್ಣಬಣ್ಣದ ದೀಪಗಳನ್ನು ಹಾಕಿ ‘2022ರಲ್ಲಿ ಭೇಟಿಯಾಗೋಣ’ ಎನ್ನುವ ಸಂದೇಶ ಕೂಡ ಬರೆಯಲಾಗಿದೆ. ಟೂರ್ನಿಯ ಉದ್ಘಾಟನಾ ಸಮಾರಂಭದ ವೇಳೆ ವಿದ್ಯುತ್‌ ದೀಪಗಳ ಆಕರ್ಷಕ ಚಿತ್ರಗಳು ಹೇಗಿರಬೇಕು ಎನ್ನುವುದರ ಬಗ್ಗೆಯೂ ಪ್ರಾತ್ಯಕ್ಷಿಕೆ ನಡೆಯುತ್ತಿದೆ.

ಟೂರ್ನಿಗೆ ಈಗಲೂ ವಿರೋಧ
ಕತಾರ್‌ಗೆ ಆತಿಥ್ಯದ ಅವಕಾಶ ಸಿಕ್ಕು ಎಂಟು ವರ್ಷಗಳು ಉರುಳಿದರೂ ಟೂರ್ನಿ ಅಯೋಜಿಸಲು ಈಗಲೂ ವಿರೋಧ ಮುಂದುವರಿದಿದೆ. ಭಯೋತ್ಪಾದನಾ ಚಟುವಟಿಕೆಗಳಿಗೆ ಕತಾರ್‌ ಸರ್ಕಾರ ಬೆಂಬಲ ನೀಡುತ್ತಿದೆ ಎಂದು ಜರ್ಮನಿ ಸೇರಿದಂತೆ ಅನೇಕ ರಾಷ್ಟ್ರಗಳು ಆರೋಪಿಸುತ್ತಿವೆ. ಕ್ರೀಡಾಂಗಣಗಳ ನಿರ್ಮಾಣ ಹಾಗೂ ದುರಸ್ತಿಯ ಕಾರ್ಯ ಚಟುವಟಿಕೆಗಳಿಗೆ ದುಡಿಯುತ್ತಿರುವ ಕಾರ್ಮಿಕರನ್ನು ಅಮಾ ನವೀಯವಾಗಿ ನಡೆಸಿಕೊಳ್ಳಲಾಗುತ್ತಿದೆ, ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಅಲ್ಲಿನ ಸಂಘಟನೆಗಳು ಆರೋಪಿಸಿವೆ. ಬಹಳಷ್ಟು ಫುಟ್‌ಬಾಲ್‌ ಆಟಗಾರರು ಕ್ರೈಸ್ತ ಧರ್ಮದವರಾಗಿದ್ದು, ಡಿಸೆಂಬರ್‌ನಲ್ಲಿ ಟೂರ್ನಿ ನಡೆದರೆ ಕ್ರಿಸ್‌ಮಸ್‌ ಆಚರಿಸಲು ಸಮಸ್ಯೆಯಾಗುತ್ತದೆ ಎನ್ನುವ ಅಂಶ ವಿರೋಧಕ್ಕೆ ಕಾರಣವಾಗಿದೆ. ಈ ಎಲ್ಲ ಸವಾಲುಗಳನ್ನು ಹೊತ್ತು ಅರಬ್‌ ರಾಷ್ಟ್ರಕ್ಕೆ ಕಾಲಿಟ್ಟಿರುವ ವಿಶ್ವಕಪ್‌ ಕಾಲ್ಚೆಂಡನ್ನು ಕತಾರ್‌ ಎಷ್ಟು ಎತ್ತರಕ್ಕೆ ಪುಟಿಸುತ್ತದೆ, ಜಗತ್ತಿನ ನಕಾಶೆಯಲ್ಲಿ ಹೇಗೆ ಕಂಗೊಳಿಸುತ್ತದೆ ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ.

ಏಷ್ಯಾದಲ್ಲಿ ಎರಡನೇ ವಿಶ್ವಕಪ್‌
ಏಷ್ಯಾ ಖಂಡದಲ್ಲಿ ವಿಶ್ವಕಪ್‌ ಆಯೋಜನೆಯಾಗಿರುವುದು ಇದು ಎರಡನೇ ಬಾರಿ. 2002ರಲ್ಲಿ ದಕ್ಷಿಣ ಕೊರಿಯಾ ಮತ್ತು ಜಪಾನ್‌ ಜಂಟಿಯಾಗಿ ಆತಿಥ್ಯ ವಹಿಸಿದ್ದವು. ಇದರ ಜೊತೆಗೆ ಅರಬ್‌ ರಾಷ್ಟ್ರದಲ್ಲಿ ನಡೆಯಲಿರುವ ಮತ್ತು ಮುಸ್ಲಿಮರ ಜನಸಂಖ್ಯೆ ಹೆಚ್ಚಿರುವ ರಾಷ್ಟ್ರದಲ್ಲಿ ಜರುಗುವ ಚೊಚ್ಚಲ ವಿಶ್ವಕಪ್‌ ಎಂಬ ಹೆಗ್ಗಳಿಕೆ 2022ರ ಟೂರ್ನಿಗಿದೆ.

ಮಹಾಟೂರ್ನಿಯ ಸವಾಲು
ಏಷ್ಯಾ ಮಟ್ಟದಲ್ಲಿ ಬೇರೆ ಬೇರೆ ಕ್ರೀಡೆಗಳಿಗೆ ಕತಾರ್‌ ಹಿಂದೆ ಆತಿಥ್ಯ ವಹಿಸಿದೆ. ಆದರೆ, ವಿಶ್ವಕಪ್‌ನಂಥ ದೊಡ್ಡ ಟೂರ್ನಿ ನಡೆಯುವುದು ಇದೇ ಮೊದಲು. 2005ರಲ್ಲಿ ಈ ದೇಶ ವಿಶ್ವ ವೇಟ್‌ಲಿಫ್ಟಿಂಗ್‌ ಚಾಂಪಿಯನ್‌ಷಿಪ್‌, 2006ರಲ್ಲಿ ಏಷ್ಯನ್‌ ಕ್ರೀಡಾಕೂಟ, 2011ರಲ್ಲಿ ಏಷ್ಯನ್‌ ಫುಟ್‌ಬಾಲ್‌ ಕಪ್‌, 2015ರಲ್ಲಿ ವಿಶ್ವ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌ ಟೂರ್ನಿಗಳನ್ನು ಸಮರ್ಥವಾಗಿ ಸಂಘಟಿಸಿ ಕ್ರೀಡಾಪ್ರೇಮಿಗಳಿಂದ ಸೈ ಎನಿಸಿಕೊಂಡಿದೆ.

ಸಾಂಪ್ರದಾಯಿಕ ವೇಳಾಪಟ್ಟಿಗೆ ‘ಬ್ರೇಕ್‌’
ಚೊಚ್ಚಲ ವಿಶ್ವಕಪ್‌ ನಡೆದ 1930ರಿಂದಲೂ ಪ್ರತಿ ಬಾರಿ ಜೂನ್‌ ಹಾಗೂ ಜುಲೈನಲ್ಲಿಯೇ ಟೂರ್ನಿ ಇರುತ್ತದೆ. ಆದರೆ, ಇದೇ ಮೊದಲ ಬಾರಿಗೆ ಫಿಫಾ ಮತ್ತು ಕತಾರ್‌ ರಾಷ್ಟ್ರ ಈ ಸಂಪ್ರದಾಯ ಮುರಿದು ಹಾಕಿದೆ.

ಕತಾರ್‌ನಲ್ಲಿ ಜೂನ್‌ ಹಾಗೂ ಜುಲೈ ಅವಧಿಯಲ್ಲಿ ಬೇಸಿಗೆಯ ಬಿಸಿಲಿನ ಬೇಗೆ ಹೆಚ್ಚಿರುತ್ತದೆ. ಅದೇ ವರ್ಷ ಚೀನಾದ ಬೀಜಿಂಗ್‌ನಲ್ಲಿ ಒಲಿಂಪಿಕ್ಸ್‌ ಆಯೋ ಜನೆಯಾಗಿದೆ. ಜೂನ್‌ ಆಸುಪಾಸಿನಲ್ಲಿ ರಂಜಾನ್‌ ಹಬ್ಬವಿರುತ್ತದೆ. ಆದ್ದರಿಂದ 2022ರ ನವೆಂಬರ್ 21ರಿಂದ ಡಿಸೆಂಬರ್‌ 18ರ ವರೆಗೆ ಟೂರ್ನಿ ಹಮ್ಮಿಕೊಳ್ಳಲಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ಡಿ. 18ರಂದು ‘ಕತಾರ್‌ ರಾಷ್ಟ್ರೀಯ ದಿನ’. ಆ ದಿನದಂದೇ ವಿಶ್ವಕಪ್‌ ಟೂರ್ನಿಯ ಫೈನಲ್‌ ನಡೆಯಲಿರುವುದು ವಿಶೇಷ.

ಕಾರ್ಯಪಡೆ ವರದಿ ಮೇಲೆ ನಿರ್ಧಾರ: ಕತಾರ್‌ಗೆ ವಿಶ್ವಕಪ್‌ ಆತಿಥ್ಯದ ಅವಕಾಶ ಲಭಿಸಿದ ಬಳಿಕ ಜೂನ್‌–ಜುಲೈನಲ್ಲಿ ಪಂದ್ಯಗಳನ್ನಾಡಲು ಹಲವು ರಾಷ್ಟ್ರಗಳು ವಿರೋಧ ವ್ಯಕ್ತಪಡಿಸಿದ್ದವು.

ಆದ್ದರಿಂದ ಫಿಫಾ ಕಾರ್ಯಪಡೆ ರಚಿಸಿತ್ತು. ಈ ತಂಡ ಕತಾರ್‌ಗೆ ಭೇಟಿ ನೀಡಿ ಸ್ಥಳೀಯ ವಾತಾವರಣ ಮತ್ತು ಸಂಪ್ರದಾಯದಂತೆ ಟೂರ್ನಿ ನಡೆಸಿದರೆ ಆಗುವ ಸಮಸ್ಯೆಗಳನ್ನು ಪಟ್ಟಿ ಮಾಡಿತ್ತು. ಆದ್ದರಿಂದ ಫಿಫಾ ಆಡಳಿತ ಮಂಡಳಿ ಸಂಪ್ರದಾಯಕ್ಕೆ ‘ಬ್ರೇಕ್‌’ ಹಾಕಿ ನವೆಂಬರ್‌ನಲ್ಲಿ ಟೂರ್ನಿ ಆರಂಭಿಸಲು ನಿರ್ಧರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT