ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಅರ್ಜೆಂಟೀನಾ: ಬ್ರೆಜಿಲ್‌ಗೆ ಆಘಾತ

ಟೋಕಿಯೊ ಒಲಿಂಪಿಕ್ಸ್ ಫುಟ್ಬಾಲ್‌ ಚಾಂಪಿಯನ್
Published 12 ಫೆಬ್ರುವರಿ 2024, 13:54 IST
Last Updated 12 ಫೆಬ್ರುವರಿ 2024, 13:54 IST
ಅಕ್ಷರ ಗಾತ್ರ

ಕ್ಯಾರಾಕಸ್ (ವೆನೆಜುವೇಲಾ): ಟೋಕಿಯೊ ಒಲಿಂಪಿಕ್ಸ್ ಫುಟ್ಬಾಲ್‌ ಚಾಂಪಿಯನ್ ಬ್ರೆಜಿಲ್ ತಂಡ, ಪ್ಯಾರಿಸ್‌ನಲ್ಲಿ ನಡೆಯಲಿರುವ ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ಅರ್ಹತೆ ಪಡೆಯಲು ವಿಫಲವಾಗಿದೆ. ಆರ್ಜೆಂಟೀನಾ ತನ್ನ ‍ಪ್ರಬಲ ಪ್ರಾದೇಶಿಕ ಎದುರಾಳಿ ಬ್ರೆಜಿಲ್ ತಂಡವನ್ನು ಭಾನುವಾರ ನಡೆದ ಫುಟ್ಬಾಲ್‌ ಅರ್ಹತಾ ಟೂರ್ನಿಯ ಪಂದ್ಯದಲ್ಲಿ 1–0 ಗೋಲಿನಿಂದ ಸೋಲಿಸಿ ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಿತು.

2004ರ ನಂತರ ಇದೇ ಮೊದಲ ಬಾರಿ ಬ್ರೆಜಿಲ್ ತಂಡ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲು ವಿಫಲವಾಗಿದೆ. ಇಲ್ಲಿನ ಬ್ರಜಿಜಿಡೊ ಇರಿಯಾರ್ಟೆ ಕ್ರೀಡಾಂಗಣದಲ್ಲಿ ನಡೆದ 23 ವರ್ಷದೊಳಗಿನವರ ತಂಡಗಳ ನಡುವಣ ಪಂದ್ಯದಲ್ಲಿ ಲೂಸಿಯಾನೊ ಗೊಂಡೌ ಆರ್ಜೆಂಟೀನಾ ಪರ ನಿರ್ಣಾಯಕ ಗೋಲು ಗಳಿಸಿದರು.

ಪಂದ್ಯದ 73ನೇ ನಿಮಿಷ ವಲೆಂಟಿನ್ ಬಾರ್ಕೊ ಅವರಿಂದ ಬಂದ ಅಡ್ಡಪಾಸ್‌ನಲ್ಲಿ ಲೂಸಿಯಾನೊ ಅವರು ಬ್ರೆಜಿಲ್ ಗೋಲ್‌ಕೀಪರ್ ಮೈಕೆಲ್ ಅವರನ್ನು ವಂಚಿಸಿ ಚೆಂಡನ್ನು ಗೋಲಿನೊಳಗೆ ಹೆಡ್‌ ಮಾಡಿದರು.

ಬ್ರೆಜಿಲ್ ತಂಡ 2016ರ ರಿಯೊ ಡಿ ಜನೈರೊ ಮತ್ತು 2020ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪುರುಷರ ವಿಭಾಗದಲ್ಲಿ ಚಾಂಪಿಯನ್ ಆಗಿತ್ತು.

ದಕ್ಷಿಣ ಅಮೆರಿಕದಿಂದ ಒಲಿಂಪಿಕ್ಸ್‌ಗೆ ಎರಡು ತಂಡಗಳಿಗೆ ಅವಕಾಶವಿತ್ತು. ಅಂತಿಮ ಗುಂಪು ಹಂತದ ಪಂದ್ಯದಲ್ಲಿ ಮೊದಲ ಸ್ಥಾನ ಪಡೆದ ಪರಗ್ವೆ ತಂಡ ಏಳು ಪಾಯಿಂಟ್‌ಗಳೊಡನೆ ಮೊದಲ ಸ್ಥಾನ ಗಳಿಸಿ ಮೊದಲ ತಂಡವಾಗಿ ಅರ್ಹತೆ ಪಡೆಯಿತು. ದಕ್ಷಿಣ ಅಮೆರಿಕದ ಖಂಡದ ಇತರ ಎರಡು ದಿಗ್ಗಜ ತಂಡಗಳ ರೀತಿ ಸ್ಟಾರ್‌ ಆಟಗಾರರಿಲ್ಲದಿದ್ದರೂ ಪರಗ್ವೆ ತಂಡ, ಬ್ರೆಜಿಲ್‌ ಮೇಲೆ ಜಯಗಳಿಸಿತ್ತು. ಭಾನುವಾರ ತನ್ನ ಕೊನೆಯ ಪಂದ್ಯದಲ್ಲಿ ಅದು 2–0 ಗೋಲುಗಲಿಂದ ಆತಿಥೇಯ ವೆನೆಜುವೇಲಾ ಮೇಲೆ ಗೆಲುವು ಪಡೆಯಿತು.

ಐದು ಪಾಯಿಂಟ್ಸ್ ಸಂಗ್ರಹಿಸಿದ ಆರ್ಜೆಂಟೀನಾ ಎರಡನೇ ಸ್ಥಾನ ಪಡೆಯಿತು. ಬ್ರೆಜಿಲ್ ಮೂರು ಪಾಯಿಂಟ್ಸ್ ಗಳಿಸಲಷ್ಟೇ ಶಕ್ತವಾಯಿತು. ಈ ತಂಡ, ವೆನೆಜುವೇಲಾ ಮೇಲೆ ಮಾತ್ರ ಗೆಲುವನ್ನು ಪಡೆದಿತ್ತು.

ಪರಗ್ವೆ 2004ರ (ಅಥೆನ್ಸ್‌) ಒಲಿಂಪಿಕ್ಸ್‌ನಲ್ಲಿ ಬೆಳ್ಳಿಯ ಪದಕ ಪಡೆದಿತ್ತು. ಆ ಬಾರಿ ಆರ್ಜೆಂಟೀನಾ ಚಾಂಪಿಯನ್ ಆಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT