ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ ಫುಟ್‌ಬಾಲ್ ಫೆಡರೇಷನ್ ಮೇಲೆ ಹೇರಿದ್ದ ಅಮಾನತು ಹಿಂಪಡೆದ ಫಿಫಾ

ಎಐಎಫ್ಎಫ್‌ ನಿರಾಳ: ಮಹಿಳಾ ವಿಶ್ವಕಪ್‌ಗೆ ಭಾರತ ಆತಿಥ್ಯ
Last Updated 26 ಆಗಸ್ಟ್ 2022, 19:50 IST
ಅಕ್ಷರ ಗಾತ್ರ

ಜೂರಿಚ್‌: ಅಖಿಲ ಭಾರತ ಫುಟ್‌ಬಾಲ್ ಫೆಡರೇಷನ್ (ಎಐಎಫ್‌ಎಫ್‌) ಮೇಲೆ ಹೇರಿದ್ದ ಅಮಾನತನ್ನು ವಿಶ್ವ ಫುಟ್‌ಬಾಲ್ ಆಡಳಿತ ಮಂಡಳಿ (ಫಿಫಾ) ಶುಕ್ರವಾರ ಹಿಂಪಡೆದಿದೆ.

ಎಐಎಫ್‌ಎಫ್‌ ಆಡಳಿತಗಾರರ ಸಮಿತಿಯನ್ನು (ಸಿಒಎ) ರದ್ದುಗೊಳಿಸುವ ತೀರ್ಮಾನವನ್ನು ಸುಪ್ರೀಂಕೋರ್ಟ್‌ ಕೈಗೊಂಡ ಬಳಿಕ ಫಿಫಾ ಈ ನಿರ್ಧಾರ ತೆಗೆದುಕೊಂಡಿದೆ. ಇದರಿಂದಾಗಿ ನಿಗದಿಯಂತೆ ಫಿಫಾ 17 ವರ್ಷದೊಳಗಿನ ಮಹಿಳಾ ವಿಶ್ವಕಪ್ಭಾರತದಲ್ಲಿ ನಡೆಯಲಿದೆ.

‘ಮೂರನೇ ವ್ಯಕ್ತಿಗಳ ಅನಗತ್ಯ ಹಸ್ತಕ್ಷೇಪ‘ದ ಕಾರಣ ನೀಡಿ ಫಿಫಾ ಆ. 15 ರಂದು ಎಐಎಫ್‌ಎಫ್‌ಅನ್ನು ಅಮಾನತು ಮಾಡಿತ್ತು. ‘ವಿಶ್ವಕಪ್‌ ಟೂರ್ನಿಯನ್ನು ನಿಗದಿಯಂತೆ ಭಾರತದಲ್ಲಿ ನಡೆಸಲು ಸಾಧ್ಯವಿಲ್ಲ’ ಎಂದೂ ಹೇಳಿತ್ತು. ಆದರೆ ಎಐಎಫ್‌ಎಫ್‌ ಮೇಲಿನ ಅಮಾನತು 11 ದಿನಗಳಲ್ಲೇ ತೆರವಾಗಿದೆ.

‘ಎಐಎಫ್‌ಎಫ್‌ ಮೇಲೆ ವಿಧಿಸಿದ್ದ ಅಮಾನತನ್ನು ವಾಪಸ್‌ ಪಡೆಯಲು ಬ್ಯೂರೊ ಆಫ್‌ ಫಿಫಾ ಕೌನ್ಸಿಲ್‌ ನಿರ್ಧರಿಸಿದೆ. 17 ವರ್ಷದೊಳಗಿನ ಮಹಿಳೆಯರ ವಿಶ್ವಕಪ್‌ ನಿಗದಿಯಂತೆ ಅಕ್ಟೋಬರ್‌ 11ರಿಂದ 30ರವರೆಗೆ ಭಾರತದಲ್ಲೇ ನಡೆಯಲಿದೆ‘ ಎಂದು ಫಿಫಾ ಹೇಳಿಕೆಯಲ್ಲಿ ತಿಳಿಸಿದೆ.

‘ಎಐಎಫ್‌ಎಫ್‌ನ ಆಗುಹೋಗುಗಳ ಮೇಲೆ ಫಿಫಾ ಮತ್ತು ಎಎಫ್‌ಸಿ ನಿಗಾ ಇರಿಸಲಿದೆ. ಚುನಾವಣೆ ನಿಗದಿಯಂತೆ ನಡೆಯಲು ಎಲ್ಲ ನೆರವು ನೀಡ ಲಾಗುವುದು’ ಎಂದು ಪ್ರಕಟಣೆ ಹೇಳಿದೆ.

ಎಐಎಫ್‌ಎಫ್‌ ಹಂಗಾಮಿ ಕಾರ್ಯದರ್ಶಿ ಸುನಂದೊ ಧಾರ್‌ ಅವರು ಫಿಫಾ ತೀರ್ಮಾನವನ್ನು ಸ್ವಾಗತಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT