ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಧನೆಯ ಹಿಂದಿನ ಸರದಾರರು..

Last Updated 15 ಜುಲೈ 2018, 19:30 IST
ಅಕ್ಷರ ಗಾತ್ರ

ಮೂವತ್ತೊಂದು ದಿನಗಳ ಫಿಫಾ ವಿಶ್ವಕಪ್ ಫುಟ್‌ಬಾಲ್‌ ಹಬ್ಬದಲ್ಲಿ ಅನೇಕ ರೋಚಕ ಕ್ಷಣಗಳನ್ನು ಅಭಿಮಾನಿಗಳು ಕಣ್ತುಂಬಿಕೊಂಡಿದ್ದಾರೆ. ಅದರಲ್ಲೂ, ಈ ಸಲದ ಟೂರ್ನಿಯಲ್ಲಿ ಚಾಂಪಿಯನ್ ಆಗುವ ನಿರೀಕ್ಷೆ ಮೂಡಿಸಿದ್ದ ಕೆಲವು ಪ್ರಮುಖ ತಂಡಗಳು ಹೊರಬಿದ್ದವು. ಅಂತಹ ತಂಡಗಳ ಕೆಲ ಆಟಗಾರರು ಹಾಗೂ ತರಬೇತುದಾರರ ಮೇಲೆ ಆಯಾ ದೇಶಗಳ ಫುಟ್‌ಬಾಲ್ ಅಭಿಮಾನಿಗಳು ಹಾಗೂ ಮಾಧ್ಯಮದವರು ಬೇಸರ ವ್ಯಕ್ತಪಡಿಸಿದ್ದೂ ಆಯಿತು.

ತಂಡದ ಕಳಪೆ ಅಥವಾ ಉತ್ತಮ ಸಾಧನೆಗೆ ಕೇವಲ ಆಟಗಾರರನ್ನಷ್ಟೇ ಕಾಲ್ಚೆಂಡಿನ ಅಭಿಮಾನಿಗಳು ಗುರಿ ಮಾಡುವುದಿಲ್ಲ. ತಂಡಗಳನ್ನು ಮುನ್ನಡೆಸಿದ ತರಬೇತುದಾರರು ಟೀಕೆಗಳಿಗೆ ಒಳಗಾಗುತ್ತಾರೆ. ಇದೇ ಕಾರಣದಿಂದಾಗಿಯೇ ಹಿಂದಿನ ಬಾರಿಯ ಚಾಂಪಿಯನ್ ಜರ್ಮನಿ ತಂಡವು ಟೂರ್ನಿಯ ಲೀಗ್ ಹಂತದಲ್ಲೇ ಹೊರಬಿದ್ದಾಗ ಅದರ ತರಬೇತುದಾರ ಜೋಕಿಮ್ ಲೋವ್ ಅವರ ವಿರುದ್ದ ಅಭಿಮಾನಿಗಳು ಕಿಡಿಕಾರಿದ್ದರು. ಜೊತೆಗೆ ಅವರನ್ನು ಆ ಸ್ಥಾನದಿಂದ ಕೆಳಗಿಳಿಸಬೇಕು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗಳನ್ನೂ ನಡೆಸಿದ್ದರು.

ಇದೇ ನಿಟ್ಟಿನಲ್ಲಿ ತಂಡಗಳನ್ನು ಗೆಲುವಿನ ಹಾದಿಯಲ್ಲಿ ಕರೆದೊಯ್ದ ತರಬೇತುದಾರರು ತಾರಾ ಆಟಗಾರರಷ್ಟೇ ಜನಪ್ರಿಯರಾಗುತ್ತಾರೆ. ಟೂರ್ನಿಯ ಮೊದಲ ಮೂರು ಹಂತಗಳಲ್ಲಿ ಗೆದ್ದು ನಾಲ್ಕರ ಘಟ್ಟ ತಲುಪಿದ ತಂಡಗಳ ಆಟಗಾರರು ಮತ್ತು ತರಬೇತುದಾರರು ಕಾಲ್ಚೆಂಡಿನ ಆಟಕ್ಕೆ ಹೊಸ ವ್ಯಾಖ್ಯಾನಗಳನ್ನು ಬರೆದಿದ್ದಾರೆ. ಸೋಲು ಗೆಲುವಿನ ಲೆಕ್ಕಾಚಾರದ ಹೊರತಾಗಿ ತಂಡ ಮುಂದಿನ ದಿನಗಳಲ್ಲಿ ಸಾಗಬೇಕಾದ ದಾರಿ ಹಾಗೂ ಕ್ರಮಿಸಬೇಕಾದ ದೂರವನ್ನು ಈ ತರಬೇತುದಾರರು ನಿರ್ದೇಶಿಸಿದ್ದಾರೆ. ಅಂತಹವರ ಬಗ್ಗೆ ಒಂದು ಪಕ್ಷಿನೋಟ ಇಲ್ಲಿದೆ-

1. ಡೀಡಿ ಡೆಶಾಂಪ್ಸ್ (ಫ್ರಾನ್ಸ್‌)
49 ವರ್ಷದ ಡೀಡಿ ಅವರು ಫ್ರಾನ್ಸ್ ತಂಡದ ಮಿಡ್ ಫೀಲ್ಡರ್ ವಿಭಾಗದ ಪ್ರಮುಖ ಆಟಗಾರರಾಗಿದ್ದವರು. ಮೊನಾಕೊ, ಯುವೆಂಟಸ್‌ನಂತಹ ಪ್ರತಿಷ್ಠಿತ ಕ್ಲಬ್‌ಗಳಿಗೆ ಕೆಲಕಾಲ ಕೋಚ್ ಆಗಿದ್ದವರು. ಅವರು ಫೈನಲ್ ತಲುಪಿರುವ ಫ್ರಾನ್ಸ್ ತಂಡದ ಕೋಚ್. 2012ರಲ್ಲಿ ಫ್ರಾನ್ಸ್ ತಂಡದ ತರಬೇತುದಾರರಾಗಿ ಆಯ್ಕೆಯಾದ ಡೆಶಾಂಪ್ಸ್, 2014ರ ವಿಶ್ವಕಪ್ ಹಾಗೂ 2016ರ ಯೂರೊ ಕಪ್‌ನಲ್ಲಿ ತಂಡವನ್ನು ಕ್ರಮವಾಗಿ ಕ್ವಾರ್ಟರ್ ಫೈನಲ್ಸ್ ಹಾಗೂ ಫೈನಲ್ಸ್‌ವರೆಗೂ ಮುನ್ನಡೆಸಿದ್ದರು.

2016ರ ಯೂರೊ ಕಪ್‌ನಲ್ಲಿ ತಂಡವು ಫೈನಲ್ ಹಂತ ತಲುಪಲು ನೆರವಾಗಿದ್ದ ಅವರನ್ನು 2020ರವರೆಗೆ ತರಬೇತುದಾರನ ಸ್ಥಾನದಲ್ಲಿ ಮುಂದುವರಿಯವಂತೆ ಫ್ರಾನ್ಸ್ ಪುಟ್‌ಬಾಲ್ ಮಂಡಳಿಯು ಕೇಳಿಕೊಂಡಿತ್ತು. ಇದಕ್ಕೆ ಸಂಬಂಧಿಸಿದಂತೆ 2017ರಲ್ಲಿಯೇ ಒಪ್ಪಂದ ಕೂಡ ಮಾಡಿಕೊಂಡಿತ್ತು.

ಎಲ್ಲ ಸಾಮರ್ಥ್ಯವಿದ್ದೂ ನೆಚ್ಚಿನ ತಂಡ ಎನಿಸಿಕೊಳ್ಳದ ಫ್ರಾನ್ಸ್ ತಂಡಕ್ಕೆ ಹೊಸ ಕಳೆ ತುಂಬಿದವರು ಡೆಶಾಂಪ್ಸ್. ಪಾಲ್ ಪೊಗ್ಬಾ, ಕೈಲಿಯನ್ ಬಾಪೆ, ಆ್ಯಂಟೋನ್ ಗ್ರೀಜ್‌ಮನ್, ರಾಫೆಲ್ ವಾರೆನ್ ಅವರಂತಹ ಪ್ರತಿಭಾನ್ವಿತ ಆಟಗಾರರ ಪಡೆಯನ್ನು ಕಟ್ಟಿದರು. ಇದೇ ಕಾರಣದಿಂದ ಈ ಎಲ್ಲ ಆಟಗಾರರು ಈ ಸಲದ ವಿಶ್ವಕಪ್‌ನಲ್ಲಿ ಮಿಂಚಲು ಸಾಧ್ಯವಾಗಿದೆ ಎಂಬ ವಿಶ್ಲೇಷಣೆ ಅನೇಕ ಪುಟ್‌ಬಾಲ್ ಪಂಡಿತರದ್ದು.

2. ಲಾಟ್ಕೊ ಡಾಲಿಕ್ (ಕ್ರೊವೇಷ್ಯಾ)
ಈ ಸಲದ ವಿಶ್ವಕಪ್ ಟೂರ್ನಿಯುದ್ದಕ್ಕೂ ಅಚ್ಚರಿಯ ಫಲಿತಾಂಶ ನೀಡುತ್ತಾ ಫೈನಲ್ ಪ್ರವೇಶಿಸಿದ ಕ್ರೊವೇಷ್ಯಾ ತಂಡದ ತರಬೇತುದಾರನ ಹುದ್ದೆಗೆ ಲಾಟ್ಕೊ ಅವರು ಆಯ್ಕೆಯಾಗಿದ್ದು 2017ರಲ್ಲಿ. 2016ರಿಂದ 2017ರ ಮಧ್ಯಭಾಗದವರೆಗೆ ತಂಡ ತೋರಿದ ಕಳಪೆ ಸಾಧನೆಗೆ ಆಗಿನ ಕೋಚ್ ಆಂಟೆ ಸೆಸಿಕ್ ಅವರ ತಲೆದಂಡವಾಗಿತ್ತು. ಕ್ರೊವೇಷ್ಯಾ ಪುಟ್‌ಬಾಲ್ ಮಂಡಳಿಯು ಅವರನ್ನು ವಜಾಗೊಳಿಸಿ ಆ ಸ್ಥಾನಕ್ಕೆ ಡಾಲಿಕ್ ಅವರನ್ನು ನೇಮಿಸಿತ್ತು. 2018ರ ವಿಶ್ವಕಪ್‌ನಲ್ಲಿ ಸ್ಪರ್ಧಿಸಲು ತಂಡ ಅರ್ಹತೆ ಗಳಿಸಿದರೆ ಮಾತ್ರ ಕೋಚ್ ಹುದ್ದೆಯಲ್ಲಿ ಮುಂದುವರಿಯುವುದಾಗಿ ಡಾಲಿಕ್ ಹೇಳಿದ್ದರು. ತಂಡ ಕೇವಲ ಅರ್ಹತೆ ಗಳಿಸುವುದಷ್ಟೇ ಅಲ್ಲದೆ, ವಿಶ್ವಕಪ್‌ನಲ್ಲಿನ ಸಾಧನೆಗೆ ಸಂಬಂಧಿಸಿದಂತೆ ಇತಿಹಾಸ ಬರೆಯಿತು.

ಸಾಮರ್ಥ್ಯವಿದ್ದರೂ ಅದನ್ನು ಹೊರಗೆಡಹುವಲ್ಲಿ ವಿಫಲರಾಗುತ್ತಿದ್ದ ಆಂಟೆ ರೆಬಿಚ್, ಇವಾನ್ ರಕಿಟಿಚ್, ಲೂಕಾ ಮಾಡ್ರಿಚ್ ಅವರು ಹೊಸ ಹುರುಪು ಹಾಗೂ ಪರಿಶ್ರಮದೊಂದಿಗೆ ಅಂಗಳಕ್ಕಿಳಿಯುವಂತೆ ಮಾಡಿದವರು ಡಾಲಿಕ್. ಲೀಗ್ ಹಂತದಲ್ಲಿ ಬಲಿಷ್ಠ ಅರ್ಜೆಂಟೀನಾ ತಂಡವನ್ನು ಕಟ್ಟಿಹಾಕಿ, ಪ್ರೀ ಕ್ವಾರ್ಟರ್ ಹಾಗೂ ಕ್ವಾರ್ಟರ್ ಫೈನಲ್ ಘಟ್ಟದಲ್ಲಿ ಪೆನಾಲ್ಟಿ ಶೂಟೌಟ್‌ನಲ್ಲಿ ಗೆಲುವು ಸಾಧಿಸಲು ನೆರವಾಗಿದ್ದು ಡಾಲಿಕ್ ಅವರ ಭಿನ್ನ ಯೋಜನೆ ಮತ್ತು ಲೆಕ್ಕಾಚಾರ. ಎದುರಾಳಿ ತಂಡದ ಸಾಮರ್ಥ್ಯಕ್ಕೆ ತಕ್ಕಂತೆ ರಕ್ಷಣಾ ಹಾಗೂ ಮಿಡ್ ಫೀಲ್ಡ್‌ ವಿಭಾಗದ ಆಟಗಾರರನ್ನು ಅದಲು ಬದಲು ಮಾಡುವ ಅವರ ತಂತ್ರ ಸಾಕಷ್ಟು ಯಶಸ್ವಿಯಾಯಿತು.

‘ಭರವಸೆ ಕಳೆದುಕೊಂಡಾಗ ನಾನು ದೇವರ ಮೊರೆ ಹೋಗುತ್ತೇನೆ. ಎಷ್ಟೆಲ್ಲ ಪರಿಶ್ರಮ ಇದ್ದರೂ, ಅದೃಷ್ಟ ಕೈಕೊಟ್ಟಾಗ ನಿರಾಶೆಯಾಗುತ್ತದೆ. ಕ್ರೊವೇಷ್ಯಾದಂತಹ ಸಣ್ಣ ದೇಶ, ಇತಿಹಾಸ ನಿರ್ಮಿಸುವ ಹೊಸ್ತಿಲಿನಲ್ಲಿದೆ’ ಎಂದು ತಮ್ಮ ತಂಡ ಫೈನಲ್‌ ತಲುಪಿದ್ದ ವೇಳೆ ಹೇಳಿದ್ದರು.
*

3. ರಾಬರ್ಟೊ ಮಾರ್ಟಿನೆಜ್‌ (ಬೆಲ್ಜಿಯಂ)
ವಿಶ್ವಕಪ್‌ ಆರಂಭದಿಂದಲೂ ಎಲ್ಲ ವಿಭಾಗಗಳಲ್ಲಿ ಅತ್ಯುತ್ತಮ ಸಾಮರ್ಥ್ಯ ತೋರಿದ ಮತ್ತೊಂದು ತಂಡ ಬೆಲ್ಜಿಯಂ. ತಂಡದ ಅಟ್ಯಾಕಿಂಗ್‌ ಹಾಗೂ ರಕ್ಷಣಾ ವಿಭಾಗದ ಆಟಗಾರರರು ತೋರಿದ ಸಾಧನೆಗೆ ಫುಟ್‌ಬಾಲ್‌ ಅಭಿಮಾನಿಗಳೆಲ್ಲ ದಂಗಾಗಿದ್ದರು. ಈ ತಂಡದ ಕೋಚ್‌ ಯಾವ ರೀತಿಯ ಲೆಕ್ಕಾಚಾರದಲ್ಲಿ ಇಷ್ಟು ಪರಿಪೂರ್ಣ ಪಡೆಯನ್ನು ಕಟ್ಟಿದ್ದಾರೆ ಎಂಬುದರ ಬಗ್ಗೆ ಅನೇಕ ವಿಶ್ಲೇಷಣೆಗಳು ಪತ್ರಿಕೆಗಳಲ್ಲಿ ಪ್ರಕಟವಾದವು. ತಂಡದ ಈ ಶಕ್ತಿಯ ಹಿಂದಿನ ಹೆಸರು ರಾಬರ್ಟೊ ಮಾರ್ಟಿನೆಜ್‌.

‘ಎವರ್ಟನ್‌’, ‘ವೈಗನ್ ಅಥ್ಲೆಟಿಕ್‌’ನಂತಹ ಕ್ಲಬ್‌ಗಳಿಗೆ ತರಬೇತುದಾರರಾಗಿ ಕೆಲಸ ಮಾಡಿದ್ದ ರಾಬರ್ಟೊ ಅವರನ್ನು ಬೆಲ್ಜಿಯಂ ತಂಡದ ಕೋಚ್‌ ಆಗಿ 2016ರಲ್ಲಿ ನೇಮಕ ಮಾಡಲಾಯಿತು. ಇವರ ಮಾರ್ಗದರ್ಶನದಲ್ಲಿ ಬೆಲ್ಜಿಯಂ ಎದುರಿಸಿದ ಮೊದಲ ಪಂದ್ಯದಲ್ಲಿ ಸೋಲು ಅನುಭವಿಸಿತು. ಬ್ರಸೆಲ್ಸ್‌ನಲ್ಲಿ ನಡೆದ ಪಂದ್ಯದಲ್ಲಿ ಸ್ಪೇನ್‌ 2–0ಯಿಂದ ಬೆಲ್ಜಿಯಂ ತಂಡವನ್ನು ಮಣಿಸಿತ್ತು. ಸಹಜವಾಗಿಯೇ ರಾಬರ್ಟೊ ನಿರಾಸೆಗೀಡಾದರು. ಆದರೆ, ಇದರಿಂದ ಅವರು ಧೃತಿಗೆಡಲಿಲ್ಲ. ಮುಂದೆ ಇದ್ದ ವಿಶ್ವಕಪ್‌ನಂತಹ ದೊಡ್ಡ ಸವಾಲಿಗೆ ತಂಡವನ್ನು ಸಿದ್ಧಗೊಳಿಸುವ‌ ಗುರುತರ ಜವಾಬ್ದಾರಿ ಅವರ ಮೇಲಿತ್ತು. ಇದನ್ನು ಯಶಸ್ವಿಯಾಗಿ ನಿಭಾಯಿಸಿದ ಅವರು ತಮ್ಮ ಸಾಮರ್ಥ್ಯವನ್ನು ಜಗತ್ತಿಗೆ ತೋರಿಸಿಕೊಟ್ಟರು.

ವಿಶ್ವಕಪ್‌ಗೆ ಸ್ಪರ್ಧಿಸಲು ಅರ್ಹತೆ ಗಳಿಸಿದ ಯುರೋಪ್‌ನ ಮೊದಲ ತಂಡ ಎಂಬ ಹಿರಿಮೆಯೊಂದಿಗೆ ರಷ್ಯಾಗೆ ತೆರಳಿದ ಬೆಲ್ಜಿಯಂ ಅಪೂರ್ವ ಆಟ ಆಡಿತು. ಲೀಗ್‌ ಹಂತದಲ್ಲಿ ಪನಾಮಾ, ಟ್ಯುನಿಷಿಯಾ, ಇಂಗ್ಲೆಂಡ್‌ ತಂಡವನ್ನು ಮಣಿಸುವುದರೊಂದಿಗೆ ಎದುರಾಳಿಗಳಿಗೆ ಕಡಿಮೆ ಸಂಖ್ಯೆಯ ಗೋಲುಗಳನ್ನು ಬಿಟ್ಟುಕೊಟ್ಟಿತು. ಇದಕ್ಕೆ ಕಾರಣ ರಕ್ಷಣಾ ವಿಭಾಗವನ್ನು ಬಲಗೊಳಿಸಿದ ರಾಬರ್ಟೊ ಅವರ ಜಾಣ್ಮೆ. ಸೆಮಿಫೈನಲ್‌ನಲ್ಲಿ ಸೋತರೂ ಬೆಲ್ಜಿಯಂ ಅಭಿಮಾನಿಗಳು ತಂಡದ ಆಟಗಾರರೊಂದಿಗೆ ರಾಬರ್ಟೊ ಅವರನ್ನು ಸ್ಮರಿಸಿಕೊಳ್ಳಲಿದ್ದಾರೆ.

*

4. ಗರೆತ್‌ ಸೌತ್‌ಗೇಟ್‌ (ಇಂಗ್ಲೆಂಡ್‌)
‘ಪ್ರತಿಭೆ ಇದ್ದರೂ ಪ್ರಮುಖ ಟೂರ್ನಿಗಳಲ್ಲಿ ಮಿಂಚಲು ವಿಫಲವಾಗುತ್ತಿದ್ದ ಇಂಗ್ಲೆಂಡ್‌ ತಂಡ ಸೆಮಿಫೈನಲ್‌ ತಲುಪಲು ಗರೆತ್‌ ಅವರು ಕಾರಣ. ಅಭಿಮಾನಿಗಳು ತಂಡದ ಗತಕಾಲದ ವೈಭವವನ್ನು ಮತ್ತೆ ನೆನಪಿಸಿಕೊಳ್ಳುವಂತೆ ಮಾಡಿದ ಗರೆತ್‌ ನಿಜಕ್ಕೂ ಶ್ರೇಷ್ಠ ಕೋಚ್‌’ –ಇಂಗ್ಲೆಂಡ್‌ನ ಹಿರಿಯ ಫುಟ್‌ಬಾಲ್‌ ಆಟಗಾರ ವೇಯ್ನ್‌ ರೂನಿಯ ನುಡಿಗಳು ಇವು. ಶ್ರೇಷ್ಠ ಆಟಗಾರರಲ್ಲಿ ಒಬ್ಬರಾಗಿರುವ ರೂನಿ ಅವರು ಇಂಗ್ಲೆಂಡ್‌ ತಂಡ ಸೆಮಿಫೈನಲ್‌ ಪ್ರವೇಶಿಸಿದ್ದ ವೇಳೆ ಗರೆತ್‌ ಅವರನ್ನು ಶ್ಲಾಘಿಸಿದ್ದರು.

2016ರ ಸೆಪ್ಟೆಂಬರ್‌ನಲ್ಲಿ ಇಂಗ್ಲೆಂಡ್‌ ತಂಡದ ಹಂಗಾಮಿ ಕೋಚ್‌ ಆಗಿ ಗರೆತ್‌ ಅವರನ್ನು ನೇಮಕ ಮಾಡಲಾಯಿತು. ರಾಷ್ಟ್ರದ ಫುಟ್‌ಬಾಲ್‌ ಮಂಡಳಿಯಲ್ಲಿ ಭುಗಿಲೆದ್ದಿದ್ದ ಭ್ರಷ್ಟಾಚಾರದ ವಿವಾದದಿಂದ ತಂಡದ ಆಟಗಾರರು ಹೈರಾಣಾಗಿದ್ದರು. ಇದೇ ವೇಳೆಯಲ್ಲಿ ಹಂಗಾಮಿ ಕೋಚ್‌ ಆಗಿ ತಂಡ ಸೇರಿಕೊಂಡ ಗರೆತ್‌ ಮುಂದೆ ದೊಡ್ಡ ಸವಾಲಿತ್ತು. ಕೇವಲ ಉತ್ತಮ ತಂಡವನ್ನು ಕಟ್ಟುವುದಷ್ಟೇ ಅಲ್ಲದೇ, ಕುಸಿದುಹೋಗಿದ್ದ ಆಟಗಾರರ ವಿಶ್ವಾಸವನ್ನು ಹೆಚ್ಚಿಸಬೇಕಿತ್ತು. ಈ ಕಾರ್ಯದಲ್ಲಿ ತೊಡಗಿದ್ದಾಗಲೇ (ನವೆಂಬರ್‌ 30, 2016ರಂದು) ನಾಲ್ಕು ವರ್ಷಗಳ ಕಾಲ ತಂಡದ ಮುಖ್ಯ ಕೋಚ್‌ ಹುದ್ದೆಗೆ ಏರಿದರು. 28 ವರ್ಷಗಳ ನಂತರ ತಂಡವನ್ನು ಸೆಮಿಫೈನಲ್‌ವರೆಗೂ ಮುನ್ನಡೆಸುವ ಮೂಲಕ ಅಭಿಮಾನಿಗಳು ಹೊಸ ಕನಸು ಕಾಣುವಂತೆ ಮಾಡಿದರು.

ಹ್ಯಾರಿ ಕೇನ್‌ ಎಂಬ ಪ್ರತಿಭಾಶಾಲಿ ಆಟಗಾರನನ್ನು ಮುನ್ನಲೆಗೆ ತಂದ ಗರೆತ್‌ ಉಳಿದ ಆಟಗಾರರ ಸಾಮರ್ಥ್ಯಕ್ಕೆ ತಕ್ಕಂತೆ ಯೋಜನೆ ರೂಪಿಸಿದರು. ಯಾವುದೇ ಕಾರಣಕ್ಕೂ ಒಬ್ಬ ಆಟಗಾರನ ಮೇಲೆ ತಂಡ ಅವಲಂಬಿತವಾಗಬಾರದು ಎಂಬ ಕಾರಣಕ್ಕೆ ರಕ್ಷಣಾ ಹಾಗೂ ಮಿಡ್‌ಫೀಲ್ಡ್‌ ವಿಭಾಗದ ಆಟಗಾರರನ್ನು ಮುಂಚೂಣಿ ವಿಭಾಗದಲ್ಲಿ ಆಡಿಸುವ ಪರಿಪಾಠ ಬೆಳೆಸಿದರು. ಯಾವುದೇ ಹಂತದಲ್ಲಿಯೂ ತಂಡ ಸೋಲಿಗೆ ಶರಣಾಗಬಾರದು ಎಂಬ ಲೆಕ್ಕಾಚಾರವೇ ಈ ತಂತ್ರದ ಹಿಂದೆ ಕೆಲಸ ಮಾಡಿತ್ತು. ಒಟ್ಟಿನಲ್ಲಿ ಇಂಗ್ಲೆಂಡ್‌ ಫುಟ್‌ಬಾಲ್‌ ತಂಡದ ವೈಭವ ಮರಳುವಂತೆ ಮಾಡಿದ ಗರೆತ್‌ ತಮ್ಮದು ಯುರೋಪ್‌ನ ಬಲಿಷ್ಠ ತಂಡ ಎಂಬುದನ್ನು ಸಾಬೀತು ಮಾಡಲು ಯಶಸ್ವಿಯಾದರು.

*

ಟಿಟೆ (ಬ್ರೆಜಿಲ್‌)
2014ರ ತವರು ನೆಲದಲ್ಲಿ ನಡೆದ ವಿಶ್ವಕಪ್‌ನ ಸೆಮಿಫೈನಲ್ ಪಂದ್ಯದಲ್ಲಿ ಬ್ರೆಜಿಲ್ ತಂಡವು ಹೀನಾಯವಾಗಿ ಸೋತಿದ್ದನ್ನು ಯಾರೂ ಮರೆಯಲು ಸಾಧ್ಯವಿಲ್ಲ. ತಾರಾ ಆಟಗಾರ ನೇಮರ್ ಮೇಲೆ ಹೆಚ್ಚು ಅವಲಂಬಿತವಾಗಿ ಪಂದ್ಯ ಸೋಲಬೇಕಾಯಿತು ಎಂದು ಅನೇಕ ಆಟಗಾರರು ಆಗಲೇ ಹೇಳಿದ್ದರು. 2016ರ ಕೋಪಾ ಅಮೆರಿಕ ಟೂರ್ನಿಯಲ್ಲಿ ಮತ್ತೆ ಕಳಪೆ ಸಾಧನೆ ತೋರಿದ ಬ್ರೆಜಿಲ್ ತಂಡವನ್ನು ಎಲ್ಲ ರೀತಿಯಿಂದಲೂ ಬದಲಿಸಬೇಕು, ಇಲ್ಲದಿದ್ದರೆ 2018ರ ವಿಶ್ವಕಪ್‌ನಲ್ಲಿ ಏದುಸಿರು ಬಿಡಬೇಕಾಗುತ್ತದೆ ಎಂಬ ಅಭಿಪ್ರಾಯ ಹಲವರಿಂದ ವ್ಯಕ್ತವಾಯಿತು. ಅದೇ ವರ್ಷದಲ್ಲಿ ತಂಡದ ನೂತನ ತರಬೇತುದಾರರಾಗಿ ಟಿಟೆ ಅವರು ಜವಾಬ್ದಾರಿ ವಹಿಸಿಕೊಂಡರು. ನಂತರ ಅನೇಕ ಬದಲಾವಣೆಗಳಾದವು. ನೇಮರ್ ಜೊತೆಗೆ ರಾಬರ್ಟೊ ಫರ್ಮಿನೋ, ಫಿಲಿಪ್ ಕುಟಿನ್ಹೋ, ವಿಲ್ಲಿಯನ್ ಹಾಗೂ ಮಾರ್ಸೆಲೊ ಅವರಂತಹ ಯುವ ಶಕ್ತಿಯ ಪಡೆ ಕಟ್ಟಿದರು. ಹೀಗಾಗಿಯೇ ಈ ಟೂರ್ನಿಯ ಕ್ವಾರ್ಟರ್‌ಫೈನಲ್‌ವರೆಗೆ ಬ್ರೆಜಿಲ್ ತಂಡವು ಸಂಘಟಿತ ಹೋರಾಟದ ಮೂಲಕ ಎದುರಾಳಿಯನ್ನು ಕಟ್ಟಿಹಾಕಲು ಯಶಸ್ವಿಯಾಯಿತು.

ಕೋಚ್ ಅದಲು-ಬದಲು
ಈ ಸಲದ ಟೂರ್ನಿಯ ಪ್ರೀ ಕ್ವಾರ್ಟರ್ ಹಂತದಲ್ಲಿ ಸೋತು ಹೊರಬಿದ್ದ ಸ್ಪೇನ್ ತಂಡಕ್ಕೆ ಒಂದೇ ತಿಂಗಳಲ್ಲಿ ಮೂರು ಮಂದಿ ತರಬೇತುದಾರರಾದರು! ತಂಡ ಸ್ಥಿರ ಸಾಮರ್ಥ್ಯ ತೋರುವಲ್ಲಿ ವಿಫಲವಾಗಿದ್ದಕ್ಕೆ ಇದು ಒಂದು ಕಾರಣ ಎಂದು ಹೇಳಲಾಗುತ್ತಿದೆ.

ವಿಶ್ವಕಪ್‌ ನಂತರ ಪ್ರತಿಷ್ಠಿತ ರಿಯಲ್ ಮ್ಯಾಡ್ರಿಡ್ ಕ್ಲಬ್‌ಗೆ ಕೋಚ್ ಆಗಲಿದ್ದೇನೆ ಎಂದು ಸ್ಪೇನ್ ತಂಡದ ಕೋಚ್ ಆಗಿದ್ದ ಜೂಲೆನ್ ಲೊಪೆಟೆಗಿ ಅವರು ಟೂರ್ನಿಯ ಮುಂಚೆ ಘೋಷಿಸಿದ್ದರು. ಇದೇ ಕಾರಣಕ್ಕೆ ಅವರನ್ನು ಟೂರ್ನಿ ಆರಂಭವಾಗುವ ಮುನ್ನಾ ದಿನ ಕೋಚ್ ಸ್ಥಾನದಿಂದ ವಜಾ ಮಾಡಲಾಯಿತು. ಅವರ ಸ್ಥಾನಕ್ಕೆ ಫರ್ನಾಂಡೊ ಹೇರೊ ಅವರನ್ನು ಸ್ಪೇನ್ ಫುಟ್‌ಬಾಲ್ ಮಂಡಳಿ ನೇಮಿಸಿತ್ತು.

ಆದರೆ ಇತ್ತೀಚೆಗೆ ಸ್ಪೇನ್ ತಂಡದ ಕೋಚ್ ಆಗಿ ಮುಂದುವರಿಯದಿರಲು ಫರ್ನಾಂಡೊ ನಿರ್ಧರಿಸಿದರು. ನಂತರ, ಕೆಲಕಾಲ ಬಾರ್ಸಿಲೋನಾ ಕ್ಲಬ್‌ನ ಕೋಚ್ ಆಗಿದ್ದ ಲೂಯಿಸ್ ಎನ್ರಿಕ್‌ ಅವರನ್ನು ತಂಡದ ತರಬೇತುದಾರರಾಗಿ ನೇಮಕ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT