ದೋಹಾ (ರಾಯಿಟರ್ಸ್): ಕಲಾವಿದರ ಮನಮೋಹಕ ಪ್ರದರ್ಶನ, ನೆರಳು ಬೆಳಕು ಮೂಡಿಸಿದ ಚಿತ್ತಾರ, ಅರಬ್ ಸಂಸ್ಕೃತಿಯ ಅನಾವರಣದೊಂದಿಗೆ ಫಿಫಾ ವಿಶ್ವಕಪ್ ಟೂರ್ನಿಗೆ ಭಾನುವಾರ ವರ್ಣರಂಜಿತ ಚಾಲನೆ ಲಭಿಸಿತು.
ದೋಹಾದಿಂದ ಉತ್ತರಕ್ಕೆ 50 ಕಿ.ಮೀ ದೂರದ ಅಲ್ ಖೋರ್‌ನಲ್ಲಿರುವ ಅಲ್ ಬೈತ್ ಕ್ರೀಡಾಂಗಣದಲ್ಲಿ ನಡೆದ ಉದ್ಘಾಟನಾ ಸಮಾರಂಭ ಫುಟ್‌ಬಾಲ್ ಪ್ರೇಮಿಗಳ ಮನಗೆದ್ದಿತು. ಕತಾರ್– ಈಕ್ವೆಡಾರ್ ನಡುವಿನ ಪಂದ್ಯಕ್ಕೂ ಮುನ್ನ ನಡೆದ ಕಾರ್ಯಕ್ರಮವನ್ನು ವೀಕ್ಷಿಸಲು 60 ಸಾವಿರ ಆಸನ ಸಾಮರ್ಥ್ಯದ ಕ್ರೀಡಾಂಗಣದಲ್ಲಿ ವಿವಿಧ ದೇಶಗಳಿಂದ ಬಂದಿದ್ದ ಅಭಿಮಾನಿಗಳು ಕಿಕ್ಕಿರಿದು ನೆರೆದಿದ್ದರು.
ದಕ್ಷಿಣ ಕೊರಿಯಾದ 'ಬಿಟಿಎಸ್’ ಬ್ಯಾಂಡ್‌ನ ಕಲಾವಿದ ಜಾಂಗ್ ಕೂಕ್ ಅವರು ಕತಾರ್‌ನ ಗಾಯಕ ಫಹದ್ ಅಲ್ ಖುಬೈಸಿ ಜತೆ ಟೂರ್ನಿಯ ಗೀತೆ ಹಾಡಿದರು. ಅಮೆರಿಕದ ನಟ ಮಾರ್ಗನ್ ಫ್ರೀಮನ್ ಪಾಲ್ಗೊಂಡರು. ಅರೇಬಿಯಾದ ಸಾಂಪ್ರದಾಯಿಕ ನೃತ್ಯ ಸಮಾರಂಭದ ಕಳೆ
ಹೆಚ್ಚಿಸಿತು.
ಕತಾರ್ ದೊರೆ ಶೈಖ್ ತಮೀಮ್ ಬಿನ್ ಹಮದ್ ಅಲ್ ಥಾನಿ ಮಾತನಾಡಿ, ‘ಕತಾರ್ ಹಾಗೂ ಅರಬ್ ನಾಡಿನ ಪರವಾಗಿ ನಾನು ಎಲ್ಲರನ್ನೂ ವಿಶ್ವಕಪ್ ಟೂರ್ನಿಗೆ ಸ್ವಾಗತಿಸುತ್ತಿದ್ದೇನೆ’ ಎಂದರು.
‘ವಿವಿಧ ದೇಶಗಳ ಜನರು ವೈವಿಧ್ಯತೆಯಲ್ಲೂ ಏಕತೆಯ ಸಂದೇಶ ಸಾರಲು ಇಲ್ಲಿ ನೆರೆದ್ದಾರೆ. ಕತಾರ್‌ನ ಇತಿಹಾಸದಲ್ಲಿ ಇದೊಂದು ಅಪೂರ್ಣ ಕ್ಷಣ’ ಎಂದು ಹೇಳಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.