ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಯಾಫ್ ಫುಟ್‌ಬಾಲ್: ನಾಲ್ಕರ ಘಟ್ಟಕ್ಕೆ ಭಾರತ

ಸುನಿಲ್ ಚೆಟ್ರಿ, ಮಹೇಶ್ ಸಿಂಗ್ ಮಿಂಚು; ನೇಪಾಳ ತಂಡಕ್ಕೆ ನಿರಾಶೆ
Published 24 ಜೂನ್ 2023, 23:31 IST
Last Updated 24 ಜೂನ್ 2023, 23:31 IST
ಅಕ್ಷರ ಗಾತ್ರ

ಬೆಂಗಳೂರು: ಶನಿವಾರ ಮುಸ್ಸಂಜೆಯ ಮಳೆ ಮತ್ತು ತಂಪುಗಾಳಿಯನ್ನೂ ಲೆಕ್ಕಿಸದ ಫುಟ್‌ಬಾಲ್ ಪ್ರೇಮಿಗಳನ್ನು ಭಾರತ ತಂಡದ ಆಟಗಾರರು ನಿರಾಶಗೊಳಿಸಲಿಲ್ಲ.

ಕಂಠೀರವ ಕ್ರೀಡಾಂಗಣದಲ್ಲಿ ನಡೆದ ದಕ್ಷಿಣ ಏಷ್ಯಾ ಫೆಡರೇಷನ್ ಫುಟ್‌ಬಾಲ್ (ಸ್ಯಾಫ್) ಟೂರ್ನಿಯ ಪಂದ್ಯದಲ್ಲಿ ಸುನಿಲ್ ಚೆಟ್ರಿ ಬಳಗವು 2–0 ಗೋಲುಗಳಿಂದ ನೇಪಾಳ ತಂಡದ ವಿರುದ್ಧ ಜಯಭೇರಿ ಬಾರಿಸಿತು. ಸತತ ಎರಡನೇ ಜಯ ಸಾಧಿಸಿದ ಭಾರತ ತಂಡವು ನಾಲ್ಕರ ಘಟ್ಟಕ್ಕೆ ಲಗ್ಗೆ ಇಟ್ಟಿತು. 20 ಸಾವಿರಕ್ಕೂ ಹೆಚ್ಚು ಪ್ರೇಕ್ಷಕರು ಸಂಭ್ರಮಿಸಿದರು.

ಪಂದ್ಯದ ಮೊದಲ ಒಂದು ಗಂಟೆಯಲ್ಲಿ ಉಭಯ ತಂಡಗಳೂ ತುರುಸಿನ ಪೈಪೋಟಿ ನಡೆಸಿದವು. ಇದರಿಂದಾಗಿ ಎರಡೂ ತಂಡಗಳ ಖಾತೆಯಲ್ಲಿ ಗೋಲು ಇರಲಿಲ್ಲ. ಆದರೆ 61ನೇ ನಿಮಿಷದಲ್ಲಿ ಭಾರತದ ನಾಯಕ ಚೆಟ್ರಿ ಕಾಲ್ಚಳಕ ಮೆರೆದರು. ಭಾರತ ತಂಡದ ನವಪ್ರತಿಭೆ ಮಹೇಶ್ ಸಿಂಗ್ ನೀಡಿದ ಕ್ರಾಸ್‌ ಪಡೆದ ಚೆಟ್ರಿ ಶರವೇಗದಿಂದ ಚೆಂಡನ್ನು ಗುರಿ ಮುಟ್ಟಿಸಿದರು.. ಎದುರಾಳಿ ಗೋಲುಕೀಪರ್ ಕಿರಣಕುಮಾರ್ ಲಿಂಬು ಚೆಂಡು ತಡೆಯಲು ಚುರುಕಾಗಿ ಪ್ರಯತ್ನಿಸಿದರೂ ಚೆಟ್ರಿಯ ಕಿಕ್ ವೇಗಕ್ಕೆ ಸರಿಸಾಟಿಯಾಲಿಲ್ಲ. ಅಂತರರಾಷ್ಟ್ರೀಯ ಫುಟ್‌ಬಾಲ್‌ನಲ್ಲಿ ಇದು ಚೆಟ್ರಿಯ 91ನೇ ಗೋಲು.

ಇದರಿಂದಾಗಿ ಒತ್ತಡಕ್ಕೊಳಗಾದ ನೇಪಾಳ ಆಟಗಾರರು ಮತ್ತಷ್ಟು ಆಕ್ರಮಣಶೀಲರಾಗಲು ಪ್ರಯತ್ನಿಸಿದರು. ಇದರಿಂದಾಗಿ 63ನೇ ನಿಮಿಷದಲ್ಲಿ ಉಭಯ ತಂಡಗಳ ಆಟಗಾರರ ನಡುವೆ ಮಾತಿನ ಚಕಮಕಿ, ತಳ್ಳಾಟಗಳೂ ನಡೆದವು. ರೆಫರಿ ಮಧ್ಯಪ್ರವೇಶಿಸಿ ವಾತಾವರಣ ತಿಳಿಗೊಳಿಸಿದರು.

ಭಾರತ ತಂಡದ ರಾಹುಲ್ ಭೇಕೆ ಮತ್ತು ನೇಪಾಳದ ಬಿಮಲ್ ಮಗಾರ್ ಅವರು ಹಳದಿ ಕಾರ್ಡ್ ದರ್ಶನ ಕೂಡ ಪಡೆದರು.

1–0 ಮುನ್ನಡೆ ಪಡೆದ ಭಾರತದ ಆಟಗಾರರ ಆತ್ಮವಿಶ್ವಾಸ ಉತ್ತುಂಗದಲ್ಲಿತ್ತು. ಇದರಿಂದಾಗಿ ಪದೇ ಪದೇ ಗೋಲು ವಲಯದತ್ತ ಚೆಂಡನ್ನು ತೆಗೆದುಕೊಂಡು ಹೋಗುವಲ್ಲಿ ಯಶಸ್ವಿಯಾದರು. 70ನೇ ನಿಮಿಷದಲ್ಲಿ ಇದರ ಫಲ ಲಭಿಸಿತು. ಸಹಲ್ ಸಮದ್ ಕೊಟ್ಟ ಪಾಸ್ ಪಡೆದ ಚೆಟ್ರಿ ಕಿಕ್ ಮಾಡಿದರು. ಆದರೆ ಚೆಂಡು ಗೋಲು ಗೂಡಿನ ಕ್ರಾಸ್‌ಬಾರ್‌ಗೆ ಅಪ್ಪಳಿಸಿ ಮರಳಿತು. ಆದರೆ ಅಲ್ಲಿಯೇ ಇದ್ದ ಮಹೇಶ್ ಚೆಂಡನ್ನು ಗೋಲು ಗೂಡು ಸೇರಿಸುವಲ್ಲಿ ಯಶಸ್ವಿಯಾದರು. ಎರಡು ಗೋಲುಗಳನ್ನು ಗೆಲುವಿನ ಮೆಟ್ಟಿಲಾಗಿಸಿಕೊಂಡರು. ಉಳಿದ ಅವಧಿಯಲ್ಲಿ ಸತತವಾಗಿ ಚೆಂಡನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವಲ್ಲಿ ಚೆಟ್ರಿ ಬಳಗವು ಯಶಸ್ವಿಯಾಯಿತು. ಮುಖ್ಯಕೋಚ್ ಇಗೋರ್ ಸ್ಟಿಮ್ಯಾಚ್ ಗೈರುಹಾಜರಿಯಲ್ಲಿ ಸಹಾಯಕ ಕೋಚ್ ಮಹೇಶ್ ಗಾವ್ಳಿ ಅವರು ಬದಲೀ ಆಟಗಾರರನ್ನು ಸಮರ್ಥವಾಗಿ ನಿಭಾಯಿಸಿದರು.

ಸಂಧು–ಲಿಂಬು ಪೈಪೋಟಿ!
ಪಂದ್ಯದ ಮೊದಲಾರ್ಧವು ಉಭಯ ತಂಡಗಳ ಗೋಲು ಕೀಪರ್‌ಗಳ ಅಮೋಘ ಆಟದ ಕಣವಾಗಿತ್ತು. ಭಾರತದ ಅಗ್ರಮಾನ್ಯ ಗೋಲ್‌ಕೀಪರ್ ಗುರುಪ್ರೀತ್ ಸಿಂಗ್ ಸಂಧು ಮತ್ತು ನೇಪಾಳದ ಕಿರಣಕುಮಾರ್ ಲಿಂಬು ಅವರ ದಿಟ್ಟೆದೆಯ ಆಟದಿಂದಾಗಿ ಇಡೀ ಅವಧಿಯಲ್ಲಿ ಉಭಯ ತಂಡಗಳ ಖಾತೆಗೆ ಗೋಲು ದಾಖಲಾಗಲಿಲ್ಲ.

ಚೆಟ್ರಿ ಬಳಗವು ಆರಂಭದಿಂದಲೇ ಆಕ್ರಮಣಕಾರಿ ಆಟವಾಡಿತು. ನೇಪಾಳ ಕೂಡ ಅದಕ್ಕೆ ತಕ್ಕ ತಂತ್ರಗಾರಿಕೆ ತೋರಿತು. 17ನೇ ನಿಮಿಷದಲ್ಲಿ ನೇಪಾಳದ ಅಲಿಕ್ ಬಿಷ್ಠಾ ಶೂಟ್ ಮಾಡಿದ ಚೆಂಡನ್ನು ತಡೆಯುವಲ್ಲಿ ಸಂಧು ಯಶಸ್ವಿಯಾದರು. 32ನೇ ನಿಮಿಷದಲ್ಲಿ ಭಾರತಕ್ಕೆ ಫ್ರೀ ಕಿಕ್ ಲಭಿಸಿತ್ತು. ಚೆಟ್ರಿ ಮಾಡಿದ ಕಿಕ್‌ ತಡೆದ ನೇಪಾಳದ ಡಿಫೆಂಡರ್ ಅನಂತ ತಮಾಂಗ್ ಅಪಾಯವನ್ನು ತಪ್ಪಿಸಿದರು.

ಅರ್ಧವಿರಾಮಕ್ಕೆ ಕೆಲವೇ ಸೆಕೆಂಡುಗಳ ಆಟ ಬಾಕಿಯಿದ್ದಾಗ ಚೆಟ್ರಿ ಒದ್ದ ಚೆಂಡನ್ನು ಡೈವ್ ಮಾಡಿ ಹಿಡಿತಕ್ಕೆ ಪಡೆದ ಲಿಂಬು ಅಪಾಯ ತಪ್ಪಿಸಿದರು. ಇದರಿಂದಾಗಿ ಗೋಲಿಲ್ಲದೇ ಮೊದಲಾರ್ಧ ಮುಗಿಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT