ಕಾಲ್ಚಳಕದ ಬೆರಗು ಹೆಚ್ಚಿಸಿದ ಐಎಸ್‌ಎಲ್‌...

ಮಂಗಳವಾರ, ಮಾರ್ಚ್ 19, 2019
20 °C

ಕಾಲ್ಚಳಕದ ಬೆರಗು ಹೆಚ್ಚಿಸಿದ ಐಎಸ್‌ಎಲ್‌...

Published:
Updated:

ಭಾರತದಲ್ಲಿ ಐಪಿಎಲ್‌ ಶುರುವಾದ ಬಳಿಕ ಬೇರೆ ಕ್ರೀಡೆಗಳಲ್ಲಿಯೂ ಲೀಗ್‌ ಪರ್ವ ಆರಂಭವಾಯಿತು. ಕುಸ್ತಿ, ಕಬಡ್ಡಿ ಹೀಗೆ ಎಲ್ಲ ಕ್ರೀಡೆಗಳಲ್ಲಿಯೂ ಹೊಸ ಮಾದರಿ, ಅಭಿಮಾನಿಗಳ ಮನಕ್ಕೆ ಲಗ್ಗೆ ಇಟ್ಟಿತು. ಹೀಗೆ ಆರಂಭವಾದ ಹೊಸ ಲೀಗ್‌ಗಳಲ್ಲಿ ಕೆಲವಷ್ಟೇ ಯಶಸ್ಸು ಕಂಡಿವೆ. ಇವುಗಳು ಆಟಗಾರರನ್ನು ಕುಬೇರರನ್ನಾಗಿ ಮಾಡಿದ್ದು, ಹೆಸರು, ಕೀರ್ತಿ, ಪ್ರತಿಷ್ಠೆ ಮತ್ತು ವರ್ಚಸ್ಸನ್ನೂ ತಂದುಕೊಟ್ಟಿವೆ. ಶ್ರೀಮಂತ ಕ್ರೀಡೆ ಎನಿಸಿರುವ ಫುಟ್‌ಬಾಲ್ ಕೂಡ ಇದರಿಂದ ಹೊರತಲ್ಲ.

2014ರಲ್ಲಿ ಮೊದಲ ಬಾರಿಗೆ ನಡೆದ ಇಂಡಿಯನ್‌ ಸೂಪರ್‌ ಲೀಗ್‌ (ಐಎಸ್‌ಎಲ್‌) ನಾಲ್ಕೇ ವರ್ಷಗಳಲ್ಲಿ ಐಪಿಎಲ್‌ ಮತ್ತು ಕಬಡ್ಡಿ ಹೊಂದಿರುವ ಖ್ಯಾತಿಗೆ ಸಮಾನಾಗಿ ಬೆಳೆದು ನಿಂತಿದೆ. ಆದ್ದರಿಂದ ದೇಶದ ಯಾವುದೇ ಮೂಲೆಯಲ್ಲಿ ಐಎಸ್‌ಎಲ್‌ ಪಂದ್ಯಗಳು ನಡೆದರೂ ಕ್ರೀಡಾಂಗಣಗಳಲ್ಲಿ ಸಾವಿರಾರು ಮಂದಿ ಸೇರಿರುತ್ತಾರೆ. ಫುಟ್‌ಬಾಲ್‌ ಪ್ರೀತಿ ಅ‍ಪರಿಮಿತವಾಗಿರುವ ಜೆಮ್‌ಶೆಡ್‌ಪುರ, ಕೋಲ್ಕತ್ತ, ಕೇರಳದಲ್ಲಿ ಪಂದ್ಯ ನಡೆದರಂತೂ ಗ್ಯಾಲರಿಗಳು ಅಭಿಮಾನಿಗಳಿಂದ ತುಂಬಿ ಹೋಗಿರುತ್ತವೆ. ಟಿ.ವಿ. ಮೂಲಕ ಪಂದ್ಯಗಳನ್ನು ವೀಕ್ಷಿಸುವವರ ಸಂಖ್ಯೆ ಕೋಟಿಗೂ ಅಧಿಕ. ಹೀಗಾಗಿಯೇ ಕ್ರೀಡಾ ವಾಹಿನಿಗಳ ಟಿಆರ್‌ಪಿ ಗಣನೀಯವಾಗಿ ಹೆಚ್ಚಾಗುತ್ತಿದೆ.

ಆರ್ಥಿಕ ಲೆಕ್ಕಾಚಾರದ ಜೊತೆಗೆ, ಕ್ರೀಡಾ ದೃಷ್ಟಿಕೋನದಿಂದಲೂ ಐಎಸ್‌ಎಲ್‌ ಭಾರತದ ಫುಟ್‌ಬಾಲ್‌ ನಕಾಶೆಯಲ್ಲಿ ಹೊಸ ಅಲೆ ಹುಟ್ಟು ಹಾಕಿದೆ. ಏಕೆಂದರೆ, ವಿಶ್ವದ ಪ್ರಮುಖ ಫುಟ್‌ಬಾಲ್‌ ಲೀಗ್‌ಗಳಲ್ಲಿ ಆಡಿದ ಆಸ್ಟ್ರೇಲಿಯಾದ ಟಿಮ್‌ ಕಾಹಿಲ್‌, ಸ್ಪೇನ್‌ನ ಆ್ಯಡ್ರಿಯಾ ಕಾ‌ರ್ಮೊನ್‌, ಅರ್ಜೆಂಟೀನಾದ ಮಿಡ್‌ಫೀಲ್ಡರ್‌ ರಾಬರ್ಟಿನೊ ಪುಗ್ಲಿಯಿರಾ, ಫ್ಯಾಬ್ರಿಸಿಯೊ ಒರ್ಟಿಜ್‌, ಕೋಸ್ಟರಿಕಾದ ಕಾರ್ಲಸ್‌ ಹೆರ್ನಾಂಡಿಸ್‌ ಅವರಂಥ ಪ್ರತಿಭಾನ್ವಿತ ಆಟಗಾರರು ಲೀಗ್‌ನಲ್ಲಿ ಆಡುತ್ತಿದ್ದಾರೆ. ಕಾಹಿಲ್‌ 2004ರ ಅಥೆನ್ಸ್‌ ಒಲಿಂಪಿಕ್ಸ್‌, 2006ರಿಂದ ಸತತ ಮೂರು ವರ್ಷ ಫಿಫಾ ವಿಶ್ವಕಪ್‌ಗಳಲ್ಲಿ ರಾಷ್ಟ್ರೀಯ ತಂಡ ಪ್ರತಿನಿಧಿಸಿದ್ದರು.  ಕಾರ್ಮೊನ್‌ ಅವರು ಇಟಲಿಯ ಮಿಲಾನ್‌, ಬಾರ್ಸಿಲೋನಾ ಕ್ಲಬ್‌ಗಳಲ್ಲಿ ಆಡಿದ್ದರು.

ವಿದೇಶಿ ಕ್ಲಬ್‌ಗಳಲ್ಲಿ ಆಡಿದ ಅನುಭವ ಹೊಂದಿರುವ ಬೆಂಗಳೂರು ಫುಟ್‌ಬಾಲ್‌ ಕ್ಲಬ್‌ ಪ್ರತಿನಿಧಿಸುವ ಸುನಿಲ್‌ ಚೆಟ್ರಿ, ಜೆಮ್‌ಶೆಡ್‌ಪುರ ಕ್ಲಬ್‌ ಪ್ರತಿನಿಧಿಸುವ ಕೇರಳದ ಅನಾಸ್‌ ಎಡತೋಡಿಕಾ, ಮಣಿಪುರದ ಉದಾಂತ್‌ ಸಿಂಗ್‌, ಮಹಾರಾಷ್ಟ್ರದ ಕೇನ್‌ ಲೆವಿಸ್‌, ಮಡಗಾಂವ್‌ನ ಬ್ರೆಂಡನ್‌ ಫರ್ನಾಂಡೀಸ್‌, ಚಂಡೀಗಡದ ಸಂದೇಶ ಜಿಂಗಾನ್‌, ಪಂಜಾಬ್‌ನ ಗುರುಪ್ರೀತ್‌ ಸಿಂಗ್‌ ಸಂಧು, ಮಿಜೋರಾಂನ ಜೆಜೆ ಲಾಲ್‌ಪೆಕ್ಲುವಾ, ಕೇರಳದ ಕಣ್ಣೂರಿನ ಸಿ.ಕೆ. ವಿನೀತ್‌ ಹೀಗೆ ಕೆಲವು ಆಟಗಾರರು  ಐಎಸ್‌ಎಲ್‌ ಟೂರ್ನಿಯಲ್ಲಿ ಗಮನ ಸೆಳೆಯುತ್ತಿದ್ದಾರೆ. 

ಪಾದರಸದಂತಹ ವೇಗ, ಚೆಂಡಿನೊಂದಿಗೆ ಸಮತೋಲನ ಸಾಧಿಸಿ ಓಡುವ ರೀತಿ, ಆಟಗಾರರ ನಡುವಿನ ಹೊಂದಾಣಿಕೆ, ಫಿಟ್‌ನೆಸ್‌ ಈ ಎಲ್ಲ ಅಂಶಗಳಿಂದ ವಿದೇಶಿ ಆಟಗಾರರು ಗಮನ ಸೆಳೆಯುತ್ತಿದ್ದಾರೆ. ಹಿಂದಿನ ನಾಲ್ಕು ಆವೃತ್ತಿಗಳಲ್ಲಿ ‘ಹೀರೊ ಆಫ್‌ ದಿ ಲೀಗ್‌‘ ಗೌರವ ಪಡೆದ ಪಟ್ಟಿಯಲ್ಲಿ ವಿದೇಶಿ ಆಟಗಾರರೇ ಮುಂಚೂಣಿಯಲ್ಲಿರುವುದು ಇದಕ್ಕೆ ಸಾಕ್ಷಿ. 2014ರಲ್ಲಿ ಕೆನಡಾದ ಇಯಾನ್‌ ಹುಮೆ, ನಂತರದ ವರ್ಷಗಳಲ್ಲಿ ಕೊಲಂಬಿಯಾದ ಸ್ಟೀವನ್‌ ಮೆಂಡೋಜಾ, ಫ್ರಾನ್ಸ್‌ನ ಫ್ಲಾರಿಂಟ್‌ ಮಲೌಡ್‌ ಈ ಗೌರವ ಪಡೆದಿದ್ದರು. ಹೋದ ವರ್ಷದ ಟೂರ್ನಿಯಲ್ಲಿ ಸುನಿಲ್‌ ಚೆಟ್ರಿ ಶ್ರೇಷ್ಠ ಪ್ರದರ್ಶನಕ್ಕೆ ವೈಯಕ್ತಿಕ ಪ್ರಶಸ್ತಿ ಪಡೆದುಕೊಂಡಿದ್ದರು.

ಟೂರ್ನಿಯಲ್ಲಿ 105 ದೇಶಗಳ ಆಟಗಾರರು ಪಾಲ್ಗೊಂಡಿದ್ದಾರೆ. ಆಸ್ಟ್ರೇಲಿಯಾ, ಬ್ರೆಜಿಲ್‌, ಕ್ಯಾಮರೂನ್‌, ಕೆನಡಾ, ಕೋಸ್ಟರಿಕಾ, ಜೆಕ್‌ ಗಣರಾಜ್ಯ, ಇಂಗ್ಲೆಂಡ್‌, ಫ್ರಾನ್ಸ್‌, ಘಾನಾ, ಇಟಲಿ, ಐವರಿಕೋಸ್ಟಾ, ಜಪಾನ್‌, ನೇಪಾಳ, ನೆದರ್ಲೆಂಡ್ಸ್‌, ನೈಜೀರಿಯಾ, ಪೋರ್ಚುಗಲ್‌, ಐರ್ಲೆಂಡ್‌, ಸರ್ಬಿಯಾ, ದಕ್ಷಿಣ ಕೊರಿಯಾ ಮತ್ತು ಸ್ಪೇನ್‌ ರಾಷ್ಟ್ರಗಳ ಆಟಗಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

ತಮ್ಮದೇ ತಂಡದ ಬಲಿಷ್ಠ ಆಟಗಾರರ ಸವಾಲು ಎದುರಿಸಿ ಭಾರತದ ಆಟಗಾರರು ತವರಿನ ಅಭಿಮಾನಿಗಳ ಮನಸ್ಸು ಗೆಲ್ಲುತ್ತಿದ್ದಾರೆ. ಟೂರ್ನಿಯಲ್ಲಿ ಒಟ್ಟು ಹೆಚ್ಚು ಗೋಲು ಗಳಿಸಿದವರ ಮೊದಲ ಐವರು ಆಟಗಾರರ ಪಟ್ಟಿಯಲ್ಲಿ ಇಬ್ಬರು ಭಾರತೀಯರು ಇರುವುದು ಇದಕ್ಕೆ ಸಾಕ್ಷಿ. ಸ್ಪೇನ್‌ನ ಫೆರಾನ್‌ ಕೊರೊಮಿನಸ್‌ 37 ಪಂದ್ಯಗಳನ್ನಾಡಿದ್ದು, 33 ಗೋಲುಗಳನ್ನು (ಮಾ. 8ರ ಅಂತ್ಯಕ್ಕೆ) ಕಲೆಹಾಕಿದ್ದಾರೆ. ನಂತರದ ಸ್ಥಾನಗಳಲ್ಲಿ ಸುನಿಲ್‌ ಚೆಟ್ರಿ (55 ಪಂದ್ಯಗಳಿಂದ 29 ಗೋಲು), ಇಯಾನ್‌ ಹುಮೆ (69 ಪಂದ್ಯಗಳಿಂದ 28 ಗೋಲು), ಬ್ರೆಜಿಲ್‌ನ ಮಾರ್ಕೆಲೊ ಪೆರೆರಾ (46 ಪಂದ್ಯಗಳಿಂದ 24 ಗೋಲು) ಮತ್ತು ಭಾರತದ ಜೆಜೆ ಲಾಲ್‌ಪೆಕ್ಲುವಾ (69 ಪಂದ್ಯಗಳಿಂದ 23 ಗೋಲು) ಇದ್ದಾರೆ.

ಐಎಸ್‌ಎಲ್‌ನಲ್ಲಿ ಭಾರತದ ‘ಹಿರಿಯ’ ಆಟಗಾರರು ಉತ್ತಮ ಪ್ರದರ್ಶನ ನೀಡುತ್ತಿರುವುದರಿಂದ ಕಿರಿಯ ಆಟಗಾರರಿಗೂ ಸ್ಫೂರ್ತಿ ಲಭಿಸುತ್ತಿದೆ. ಕಿರಿಯರಿಗೂ ಅವಕಾಶಗಳು ಸಿಗುತ್ತಿವೆ. ಭಾರತದ ಕೋಮಲ್‌ ಥಾಟಲ್‌, ಎಟಿಕೆ ತಂಡದಲ್ಲಿ ಸ್ಥಾನ ಗಳಿಸಿದ್ದು ಇದಕ್ಕೆ ಸಾಕ್ಷಿ. ಅಂದ ಹಾಗೆ ಕೋಮಲ್‌ ವಯಸ್ಸು 17 ವರ್ಷವಷ್ಟೇ!

ಬೆಂಗಳೂರು ಕ್ಲಬ್‌ನ ಹೆಮ್ಮೆಯ ಸಾಧನೆ

ಐದು ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಆರಂಭವಾದ ಬೆಂಗಳೂರು ಫುಟ್‌ಬಾಲ್‌ ಕ್ಲಬ್‌ (ಬಿಎಫ್‌ಸಿ) ರಾಜ್ಯದಲ್ಲಿ ಹೊಸ ಸಂಚಲನ ಮೂಡಿಸಿದೆ. ಪ್ರಸಿದ್ಧ ವಿದೇಶಿ ಆಟಗಾರರು, ಅನುಭವಿ ಭಾರತೀಯ ಆಟಗಾರರನ್ನು ಒಳಗೊಂಡಿರುವ ತಂಡ ಕೆಲವೇ ವರ್ಷಗಳಲ್ಲಿ ಮಹತ್ವದ ಸಾಧನೆ ಮಾಡಿದೆ.

ಬಿಎಫ್‌ಸಿ ತಂಡ ಭಾರತದ ಪ್ರಸಿದ್ಧ ದೇಶಿ ಟೂರ್ನಿ ಐ ಲೀಗ್‌ನಲ್ಲಿ ಎರಡು ಸಲ ಚಾಂಪಿಯನ್‌, ಒಂದು ಸಲ ರನ್ನರ್ಸ್‌ ಅಪ್‌ ಸಾಧನೆ ಮಾಡಿದೆ. ಫೆಡರೇಷನ್‌ ಕಪ್‌ನಲ್ಲಿ ಎರಡು ಸಲ ಪ್ರಶಸ್ತಿ, ಇಂಡಿಯನ್‌ ಸೂಪರ್‌ ಕಪ್‌ನಲ್ಲಿ 2018ರಲ್ಲಿ ಟ್ರೋಫಿ, ಎಎಫ್‌ಸಿ ಕಪ್‌ ಟೂರ್ನಿಯಲ್ಲಿ 2016ರಲ್ಲಿ ರನ್ನರ್ಸ್‌ ಅಪ್‌ ಸ್ಥಾನ ಆಗಿತ್ತು.

ಪ್ರತಿಷ್ಠಿತ ಎಎಫ್‌ಸಿ ಟೂರ್ನಿಗಳಲ್ಲಿ ಎರಡು ಬಾರಿ ಆಡಿದೆ. ಬಿಎಫ್‌ಸಿ ತಂಡ ಆಡಲು ಶುರುಮಾಡಿದ ಬಳಿಕ ಕರ್ನಾಟಕದಲ್ಲಿ ಫುಟ್‌ಬಾಲ್‌ ಒಲವು ಹೆಚ್ಚಾಗಿದೆ. ವಿದೇಶದ ನೆಲದಲ್ಲಿ ಭಾರತದ ಘನತೆ ಎತ್ತಿ ಹಿಡಿಯಬಲ್ಲ ಕ್ಲಬ್‌ ಎನ್ನುವ ಭರವಸೆಯನ್ನು ಬೆಂಗಳೂರಿನ ತಂಡ ಮೂಡಿಸಿದೆ. ಬಿಎಫ್‌ಸಿ ತಂಡ ಐಎಸ್‌ಎಲ್‌ ಟೂರ್ನಿಯಲ್ಲಿ ಎರಡು ವರ್ಷಗಳಿಂದ ಆಡುತ್ತಿದೆ. ತನ್ನ ಮೊದಲ ಟೂರ್ನಿಯಲ್ಲಿಯೇ ರನ್ನರ್ಸ್‌ ಅಪ್‌ ಆಗಿ ಎಲ್ಲರ ಕಣ್ಣು ಹುಬ್ಬೇರುವಂತೆ ಮಾಡಿತ್ತು.

ಈ ಬಾರಿ ಲೀಗ್‌ ಹಂತದ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿರುವ ಬಿಎಫ್‌ಸಿ, ಗೋವಾ, ಮುಂಬೈ ಸಿಟಿ, ನಾರ್ತ್ ಈಸ್ಟ್‌ ಯುನೈಟೆಡ್‌ ತಂಡಗಳು ‘ಸೂಪರ್‌ ಲೀಗ್‌ ಪ್ಲೇ ಆಫ್‌’ ಹಂತಕ್ಕೆ ಅರ್ಹತೆ ಪಡೆದಿವೆ.

ಈ ಹಂತದ ಮೊದಲ ಪಂದ್ಯದಲ್ಲಿ ಬೆಂಗಳೂರಿನ ತಂಡ ನಾರ್ತ್‌ ಈಸ್ಟ್‌ ಎದುರು 1–2 ಗೋಲುಗಳಿಂದ ಸೋಲು ಕಂಡಿದ್ದು, ಎರಡನೇ ಪಂದ್ಯ ಸೋಮವಾರ (ಮಾ. 11) ಬೆಂಗಳೂರಿನಲ್ಲಿ ಜರುಗಲಿದೆ. ಫೈನಲ್‌ಗೆ ರಹದಾರಿ ಪಡೆಯಬೇಕಾದರೆ ಬಿಎಫ್‌ಸಿಯು, ನಾರ್ತ್‌ ಈಸ್ಟ್‌ ಎದುರು ಹೆಚ್ಚು ಗೋಲುಗಳ ಅಂತರದಿಂದ ಗೆಲ್ಲಬೇಕು. ಹೀಗಾಗಿ ಕಂಠೀರವ ಕ್ರೀಡಾಂಗಣದಲ್ಲಿ ನಿಗದಿಯಾಗಿರುವ ಈ ಹಣಾಹಣಿ  ಸುನಿಲ್‌ ಚೆಟ್ರಿ ಪಡೆಯ ಪಾಲಿಗೆ ಅತ್ಯಂತ ಮಹತ್ವದ್ದೆನಿಸಿದೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !