ಶನಿವಾರ, ನವೆಂಬರ್ 16, 2019
21 °C
ಐಎಸ್‌ಎಲ್‌ ಫುಟ್‌ಬಾಲ್‌ ಟೂರ್ನಿ

ಗೋವಾಕ್ಕೆ 4–2 ಗೋಲುಗಳ ಜಯ

Published:
Updated:

ಮುಂಬೈ: ಗೋವಾ ಎಫ್‌ಸಿ ತಂಡ ಐಎಸ್‌ಎಲ್‌ ಫುಟ್‌ಬಾಲ್‌ ಟೂರ್ನಿ ಲೀಗ್‌ ಪಂದ್ಯದಲ್ಲಿ ಗುರುವಾರ ಮುಂಬೈ ಸಿಟಿ ಎಫ್‌ಸಿ ತಂಡವನ್ನು ಅದರ ತವರಿನಲ್ಲಿಯೇ 4–2 ಗೋಲುಗಳಿಂದ ಸೋಲಿಸಿತು.

ಇದು ಮುಂಬೈಗೆ ತವರಿನಲ್ಲಿ ಎರಡನೇ ಸೋಲು. ಈ ಹಿಂದಿನ ಪಂದ್ಯದಲ್ಲಿ ಒಡಿಶಾ ಎದುರು ಸೋಲನುಭವಿಸಿತ್ತು. ಗೋವಾಕ್ಕೆ ಇದು ಎರಡನೇ ಜಯ. ಈ ತಂಡ ಎರಡು ಪಂದ್ಯಗಳನ್ನು ಡ್ರಾ ಮಾಡಿಕೊಂಡಿದೆ.

ಮುಂಬೈ ಫುಟ್‌ಬಾಲ್‌ ಅರೇನಾದಲ್ಲಿ ನಡೆದ ಪಂದ್ಯದಲ್ಲಿ ಗೋವಾ ವಿರಾಮದ ವೇಳೆಗೇ 2–0 ಗೋಲುಗಳ ಮುನ್ನಡೆ ಪಡೆದಿತ್ತು. 27ನೇ ನಿಮಿಷ ಕಾರ್ನರ್‌ ಅವಕಾಶದಲ್ಲಿ ಚೆಂಡನ್ನು ಪಡೆದು ನಿಯಂತ್ರಿಸಿದ ಲೆನ್ನಿ ರೋಡ್ರಿಗಸ್‌ ಮೂವರು ರಕ್ಷಣೆ ಆಟಗಾರರ ನಡುವಿನಿಂದ ಅದನ್ನು ಗೋಲೊಳಕ್ಕೆ ಕಳುಹಿಸಿದರು. ಕೀಪರ್‌ ಅಮ್ರಿಂದರ್‌ ತಡೆಯಲೆತ್ನಿಸಿದರೂ  ಬೆರಳತುದಿಗೆ ತಾಗಿ ಗೋಲಿನೊಳಕ್ಕೆ ಹೋಯಿತು. ವಿರಾಮಕ್ಕೆ ಕೆಲವೇ ಕ್ಷಣಗಳಿದ್ದಾಗ ಫೆರಾನ್‌ ಕೊರೊಮಿನಾಸ್‌ ತಂಡದ ಮುನ್ನಡೆಯನ್ನು 2–0ಗೆ ಹೆಚ್ಚಿಸಿದರು.

49ನೇ ನಿಮಿಷ ಸಾರ್ಥಕ್‌ ಗೊಲುಯಿ ಗೋವಾ ತಂಡದ ರಕ್ಷಣಾ ಲೋಪದ ಲಾಭ ಪಡೆದು ಮುಂಬೈ ಪರ ಮೊದಲ ಗೋಲು ಹೊಡೆದರು. ಆರು ನಿಮಿಷಗಳ ನಂತರ ಸೌವಿಕ್‌ ಚಕ್ರವರ್ತಿ ಮೂಲಕ ಮುಂಬೈ ಸ್ಕೋರ್‌ (2–2) ಸಮ ಮಾಡಿಕೊಂಡಿತು.

59ನೇ ನಿಮಿಷ ಹ್ಯೂಗೊ ಬೌಮಾಸ್‌ ಪ್ರವಾಸಿ ತಂಡಕ್ಕೆ ಮತ್ತೆ ಮುನ್ನಡೆ ಒದಗಿಸಿದರು. 89ನೇ ನಿಮಿಷ ಕಾರ್ಲೋಸ್‌ ಪೆನಾ ಗೋವಾ ಗೆಲುವಿನ ಅಂತರ ಹೆಚ್ಚಿಸಿದರು.

ಶುಕ್ರವಾರದ ಪಂದ್ಯ: ಕೇರಳ ಬ್ಲಾಸ್ಟರ್ಸ್‌ ತಂಡ ಶುಕ್ರವಾರ ತವರಿನಲ್ಲಿ (ಕೊಚ್ಚಿಯ ಜವಾಹರಲಾಲ್‌ ನೆಹರೂ ಕ್ರೀಡಾಂಗಣ) ನಡೆಯುವ ಪಂದ್ಯದಲ್ಲಿ ಒಡಿಶಾ ಎಫ್‌ಸಿ ತಂಡವನ್ನು ಎದುರಿಸಲಿದೆ. ಮೊದಲ ಪಂದ್ಯದಲ್ಲಿ ಎಟಿಕೆ ವಿರುದ್ಧ ಜಯಗಳಿಸಿದ್ದ ಕೇರಳ ತಂಡ ನಂತರದ ಎರಡು ಪಂದ್ಯಗಳಲ್ಲಿ ಮುಂಬೈ ಮತ್ತು ಹೈದರಾಬಾದ್‌ ತಂಡಗಳಿಗೆ ಮಣಿದಿತ್ತು.

ಇನ್ನೊಂದೆಡೆ ಮೊದಲ ಎರಡು ಪಂದ್ಯ ಸೋತು ನಿರಾಶೆ ಅನುಭವಿಸಿದ್ದ ಒಡಿಶಾ ಮೂರನೇ ಪಂದ್ಯದಲ್ಲಿ ಮುಂಬೈ ಸಿಟಿ ವಿರುದ್ಧ ಜಯಗಳಿಸಿ ವಿಶ್ವಾಸದಲ್ಲಿದೆ.

ಪ್ರತಿಕ್ರಿಯಿಸಿ (+)