ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಟರ್‌ಕಾಂಟಿನೆಂಟಲ್ ಕಪ್ ಫುಟ್‌ಬಾಲ್: ಭಾರತ–ಲೆಬನಾನ್ ಮುಖಾಮುಖಿ ಇಂದು

ಫಿಫಾ ರ‍್ಯಾಂಕಿಂಗ್‌ನಲ್ಲಿ ಅಗ್ರ ನೂರರ ಮೇಲೆ ಚೆಟ್ರಿ ಬಳಗದ ಕಣ್ಣು
Published 14 ಜೂನ್ 2023, 23:35 IST
Last Updated 14 ಜೂನ್ 2023, 23:35 IST
ಅಕ್ಷರ ಗಾತ್ರ

ಭುವನೇಶ್ವರ್: ಫಿಫಾ ರ‍್ಯಾಂಕಿಂಗ್‌ನಲ್ಲಿ ಅಗ್ರ ನೂರರೊಳಗಿನ ಸ್ಥಾನ ಗಳಿಸುವ ಛಲದಲ್ಲಿರುವ ಭಾರತ ಫುಟ್‌ಬಾಲ್ ತಂಡವು ಗುರುವಾರ ಇಂಟರ್‌ಕಾಂಟಿನೆಂಟಲ್ ಕಪ್ ಟೂರ್ನಿಯಲ್ಲಿ ಲೆಬನಾನ್‌ ತಂಡವನ್ನು ಎದುರಿಸಲಿದೆ.

ರೌಂಡ್‌ ರಾಬಿನ್ ಲೀಗ್ ಸುತ್ತಿನ ಕೊನೆಯ ಪಂದ್ಯದಲ್ಲಿ ಭಾರತವು ಆಡಲಿದೆ.  ಎರಡನೇ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿರುವ ತಂಡವು ಸುನಿಲ್ ಚೆಟ್ರಿ ನಾಯಕತ್ವದಲ್ಲಿ ಆಡಲಿದೆ.  ’ಬ್ಲ್ಯೂ ಟೈಗರ್ಸ್‌‘ ಖ್ಯಾತಿಯ ತಂಡವು  ಈ ಟೂರ್ನಿಯಲ್ಲಿ ಈಗಾಗಲೇ ಫೈನಲ್ ಪ್ರವೇಶಿಸಿದೆ. ಮಂಗೋಲಿಯಾ ಹಾಗೂ ವನುವಾಟು ಎದುರಿನ ಪಂದ್ಯಗಳನ್ನು ಜಯಿಸಿತ್ತು.

ಲೆಬನಾನ್ ಎದುರಿನ ಪಂದ್ಯವು ಭಾರತದ ಮಟ್ಟಿಗೆ ಭಾನುವಾರ ನಡೆಯವ ಫೈನಲ್‌ಗೂ ಮುನ್ನ ಪೂರ್ವಸಿದ್ಧತೆಯ ವೇದಿಕೆಯಾಗಲಿದೆ.

ಆದರೆ, ಇಗೋರ್ ಸ್ಟಿಮ್ಯಾಚ್ ಕೋಚ್ ಆಗಿರುವ ಭಾರತ ತಂಡಕ್ಕೆ ಲೆಬನಾನ್‌ ಸವಾಲು ಸುಲಭವಲ್ಲ. ಭಾರತವು  ರ‍್ಯಾಂಕಿಂಗ್‌ನಲ್ಲಿ 101 ಹಾಗೂ ಲೆಬನಾನ್‌ 99ನೇ ಸ್ಥಾನದಲ್ಲಿವೆ. ಇದರಿಂದಾಗಿ ಈ ಪಂದ್ಯದಲ್ಲಿ ಜಯಿಸಿದರೆ ಭಾರತ ತಂಡವು 100ರೊಳಗಿನ ಸ್ಥಾನಕ್ಕೆ ಲಗ್ಗೆ ಹಾಕುವ ಅವಕಾಶವಿದೆ.

2018ರಲ್ಲಿ ಮೊದಲ ಬಾರಿಗೆ ಇಂಟರ್‌ಕಾಂಟಿನೆಂಟಲ್ ಕಪ್ ಗೆದ್ದಿದ್ದ ಭಾರತ ತಂಡವು ನೂರರೊಳಗಿನ ಸ್ಥಾನಕ್ಕೇರಿತ್ತು.  ಭಾರತವು 1996ರಲ್ಲಿ ಫಿಫಾ ರ‍್ಯಾಂಕಿಂಗ್‌ನಲ್ಲಿ 94ನೇ ಸ್ಥಾನಕ್ಕೇರಿದ್ದು ಇದುವರೆಗಿನ ಶ್ರೇಷ್ಠ ಸಾಧನೆಯಾಗಿದೆ. ಆಗ ಬೈಚುಂಗ್ ಭುಟಿಯಾ  ಹಾಗೂ ಐ.ಎಂ. ವಿಜಯನ್ ಭಾರತ ತಂಡದ ಸಾಧನೆಯ ರೂವಾರಿಗಳಾಗಿದ್ದರು.

ಲೆಬನಾನ್ ತಂಡಕ್ಕೆ ಈ ಪಂದ್ಯ ’ಮಾಡು ಇಲ್ಲವೇ ಮಡಿ‘ ಎಂಬ ಸವಾಲಿನದ್ದು. ಕಳೆದ ಪಂದ್ಯದಲ್ಲಿ ತಂಡವು ಮಂಗೋಲಿಯಾ ವಿರುದ್ಧ ಸೋತಿದ್ದರಿಂದ ಭಾರತದ ಎದುರು ಕನಿಷ್ಠ ಪಕ್ಷ ಡ್ರಾ ಆದರೂ ಸಾಧಿಸಬೇಕಿದೆ.  ಅಲೆಕ್ಸಾಂಡರ್ ಇಲಿಚ್ ಅವರ ತಂಡವು ಇಲ್ಲಿ ಡ್ರಾ ಅಥವಾ ಗೆಲುವು ಸಾಧಿಸಿದರೆ, ಫೈನಲ್‌ನಲ್ಲಿ ಮತ್ತೆ ಭಾರತಕ್ಕೆ ಎದುರಾಗಲಿದೆ.

’ಪಂದ್ಯದ ಆರಂಭಿಕ ಹಂತದಲ್ಲಿಯೇ ಗೋಲು ಗಳಿಕೆ ಮಾಡುವುದು ಅಗತ್ಯವಾಗಿದೆ. ಆಟ ಮುಂದುವರಿದಂತೆ ಗೋಲುಗಳಿಕೆಯು ಕಠಿವಾಗುತ್ತದೆ.  ಮಂಗೋಲಿಯಾ ಎದುರಿನ ಪಂದ್ಯದಲ್ಲಿ ಲೆಬನಾನ್ ತಂಡದ ಆಟವನ್ನು ನೋಡಿದ್ದೇವೆ.  ಅದರ ಕೆಲವು ಅಂಶಗಳನ್ನು ಅವಲೋಕಿಸಿ ಯೋಜನೆ ರೂಪಿಸುತ್ತೇವೆ‘ ಎಂದು ಸ್ಟಿಮ್ಯಾಚ್ ಹೇಳಿದ್ದಾರೆ.

ಪಂದ್ಯ ಆರಂಭ: ರಾತ್ರಿ 7.20

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ 2 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT