ಭಾನುವಾರ, ಆಗಸ್ಟ್ 14, 2022
25 °C
ಏಷ್ಯಾ ಕಪ್‌ ಫುಟ್‌ಬಾಲ್‌ ಅರ್ಹತಾ ಟೂರ್ನಿ: ಗರಿಷ್ಠ ಗೋಲು ಗಳಿಸಿದ ಅಗ್ರ 10ರಲ್ಲಿ ಸ್ಥಾನ ಪಡೆಯುವತ್ತ ಸುನಿಲ್ ಚೆಟ್ರಿ

ಏಷ್ಯಾ ಕಪ್ ಫುಟ್‌ಬಾಲ್ | ಅಫ್ಗಾನಿಸ್ತಾನ ಸವಾಲು; ಮೂರನೇ ಸುತ್ತಿನತ್ತ ಭಾರತದ ಚಿತ್ತ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ದೋಹ: ಭಾರತದ ಗೋಲು ಮಷಿನ್ ಸುನಿಲ್ ಚೆಟ್ರಿ ಅಂತರರಾಷ್ಟ್ರೀಯ ಫುಟ್‌ಬಾಲ್‌ನಲ್ಲಿ ಗರಿಷ್ಠ ಗೋಲು ಗಳಿಸಿದ 10 ಮಂದಿ ಆಟಗಾರರ ಪಟ್ಟಿಯಲ್ಲಿ ಸ್ಥಾನ ಗಳಿಸುವ ಹಾದಿಯಲ್ಲಿದ್ದಾರೆ. ಮಂಗಳವಾರ ಇಲ್ಲಿ ನಡೆಯಲಿರುವ ವಿಶ್ವಕಪ್ ಮತ್ತು ಏಷ್ಯಾಕಪ್ ಅರ್ಹತಾ ಟೂರ್ನಿಯ ಪಂದ್ಯದಲ್ಲಿ ಅವರು ಈ ಸಾಧನೆಯ ಮೇಲೆ ಕಣ್ಣಿಟ್ಟು ಕಣಕ್ಕೆ ಇಳಿಯಲಿದ್ದಾರೆ. 

‘ಇ’ ಗುಂಪಿನ ಪಂದ್ಯದಲ್ಲಿ ಸುನಿಲ್ ಚೆಟ್ರಿ ನೇತೃತ್ವದ ಭಾರತ ತಂಡ ಅಫ್ಗಾನಿಸ್ತಾನವನ್ನು ಎದುರಿಸಲಿದೆ. ಈ ‍ಪಂದ್ಯವನ್ನು ಡ್ರಾ ಮಾಡಿಕೊಂಡರೂ ಭಾರತ ಏಷ್ಯಾಕಪ್ ಅರ್ಹತೆಯ ಮೂರನೇ ಸುತ್ತಿನಲ್ಲಿ ಆಡಲು ಅವಕಾಶ ಗಳಿಸಲಿದೆ. ವಿಶ್ವಕಪ್‌ ಸ್ಪರ್ಧೆಯಿಂದ ಭಾರತ ಈಗಾಗಲೇ ಹೊರಬಿದ್ದಿದೆ.

ಕಳೆದ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಭಾರತ 2–0 ಅಂತರದಲ್ಲಿ ಮಣಿಸಿತ್ತು. ಆ ಮೂಲಕ ಈ ಬಾರಿಯ ಅರ್ಹತಾ ಟೂರ್ನಿಯಲ್ಲಿ ಮೊದಲ ಜಯ ದಾಖಲಿಸಿತ್ತು. ಪಂದ್ಯದ ಎರಡೂ ಗೋಲುಗಳನ್ನು ಸುನಿಲ್ ಚೆಟ್ರಿ ಗಳಿಸಿದ್ದರು. ಆ ಮೂಲಕ ಅವರ ವೈಯಕ್ತಿಕ ಖಾತೆಯಲ್ಲಿ 74 ಗೋಲುಗಳು ಸೇರಿದ್ದವು. ಅವರು ಈಗ ಹೆಚ್ಚು ಗೋಲು ಗಳಿಸಿದವರ ಪಟ್ಟಿಯ 11ನೇ ಸ್ಥಾನದಲ್ಲಿದ್ದಾರೆ.

ಯುಎಇಯ ಅಲಿ ಮಬ್ಕೌತ್‌, ಕುವೈತ್‌ನ ಬಾಷಾರ್ ಅಬ್ದುಲ್ಲ ಮತ್ತು ಜಪಾನ್‌ನ ಕುನಿಶಿಗೆ ಕಮಮೊಟೊ 75 ಗೋಲು ಗಳಿಸಿದ್ದಾರೆ. ಮಂಗಳವಾರದ ಪಂದ್ಯದಲ್ಲಿ ಮೂರು ಗೋಲುಗಳನ್ನು ಗಳಿಸಿದರೆ ಬ್ರೆಜಿಲ್‌ನ ಪೆಲೆ ಗಳಿಸಿದ ಗೋಲುಗಳ ಸಂಖ್ಯೆಯನ್ನು ಚೆಟ್ರಿ ಸರಿಗಟ್ಟಲಿದ್ದಾರೆ. 

ಅಫ್ಗಾನಿಸ್ತಾನ ಎದುರಿನ ಪಂದ್ಯದಲ್ಲಿ ಸೋಲು ತಪ್ಪಿಸಲು ಸಾಧ್ಯವಾದರೆ ತಂಡ ಗುಂಪಿನಲ್ಲಿ ಮೂರನೇ ಸ್ಥಾನ ಗಳಿಸಲಿದೆ. ಆ ಮೂಲಕ ಮೂರನೇ ಸುತ್ತಿಗೆ ಪ್ರವೇಶಿಸಲಿದೆ. ಎದುರಾಳಿ ತಂಡ ಅಷ್ಟೊಂದು ಬಲಿಷ್ಠವಾಗಿಲ್ಲದ ಕಾರಣ ಭಾರತ ಗೆಲುವಿನ ಭರವಸೆಯೊಂದಿಗೆ ಕಣಕ್ಕೆ ಇಳಿಯಲಿದೆ. ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ತೋರಿದ ಸಾಮರ್ಥ್ಯವನ್ನು ಈ ಪಂದ್ಯದಲ್ಲೂ ತೋರಿಸಲು ಸಾಧ್ಯವಾದರೆ ಗೆಲುವು ದೂರವಲ್ಲ. 

ಸುನಿಲ್ ಚೆಟ್ರಿ ಮತ್ತು ಮನ್ವೀರ್ ಸಿಂಗ್ ಆಕ್ರಮಣ ವಿಭಾಗವನ್ನು ಚೆನ್ನಾಗಿ ನಿರ್ವಹಿಸುತ್ತಿದ್ದಾರೆ. ಇವರಿಬ್ಬರಿಗೆ ಮಿಡ್‌ಫೀಲ್ಡರ್ ಬ್ರೆಂಡನ್ ಫರ್ನಾಂಡಿಸ್ ಉತ್ತಮ ಸಹಕಾರ ನೀಡುತ್ತಿದ್ದಾರೆ. ಇದು ತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ.

ಪಂದ್ಯ ಆರಂಭ: ರಾತ್ರಿ 7.30 (ಭಾರತೀಯ ಕಾಲಮಾನ). ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್‌.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು