ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್ ಟೂರ್ನಿ: ಮುಂಬೈ ಸಿಟಿಗೆ ಹ್ಯಾಟ್ರಿಕ್ ಗೆಲುವು

ಇಂಡಿಯನ್ ಸೂಪರ್ ಲೀಗ್: ಜೆಮ್ಶೆಡ್‌ಪುರ ಎಫ್‌ಸಿಗೆ ನಿರಾಸೆ; ಇಂದು ಒಡಿಶಾ–ನಾರ್ತ್ ಈಸ್ಟ್ ‌ಮುಖಾಮುಖಿ
Last Updated 9 ಡಿಸೆಂಬರ್ 2021, 19:40 IST
ಅಕ್ಷರ ಗಾತ್ರ

ಫತೋರ್ಡ, ಗೋವಾ: ಅಮೋಘ ಲಯದಲ್ಲಿರುವ ಮುಂಬೈ ಸಿಟಿ ಎಫ್‌ಸಿ ತಂಡ ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್ ಟೂರ್ನಿಯಲ್ಲಿ ಮತ್ತೊಂದು ಭರ್ಜರಿ ಜಯ ಗಳಿಸಿತು. ಬ್ಯಾಂಬೊಲಿಮ್‌ನ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ತಂಡ 4–2ರಲ್ಲಿ ಜೆಮ್ಶೆಡ್‌ಪುರ ಎಫ್‌ಸಿಯನ್ನು ಮಣಿಸಿತು. ಇದು ತಂಡದ ಸತತ ಮೂರನೇ ಜಯವಾಗಿದೆ.

ಮೊದಲಾರ್ಧದಲ್ಲೇ ಮೂರು ಗೋಲುಗಳನ್ನು ಗಳಿಸಿ ಮುಂಬೈ ಸಿಟಿ ಮುನ್ನಡೆ ಸಾಧಿಸಿತು. ಮೂರನೇ ನಿಮಿಷದಲ್ಲಿ ಕ್ಯಾಸಿಯೊ ಗ್ಯಾಬ್ರಿಯೆಲ್ ಮೊದಲ ಗೋಲು ಗಳಿಸಿದರು. ಎಡಬದಿಯಿಂದ ಕಾರ್ನರ್ ಕಿಕ್ ತೆಗೆದ ಅಹಮ್ಮದ್ ಜಹೋ ಗೋಲು ಆವರಣದ ಹೊರಗಿದ್ದ ಕ್ಯಾಸಿಯೊಗೆ ಚೆಂಡು ನೀಡಿದರು. ಅವರು ಚೆಂಡಿನೊಂದಿಗೆ ಗೋಲು ಆವರಣಕ್ಕೆ ನುಗ್ಗಿದರು. ನಂತರ ಸುಲಭವಾಗಿ ಗುರಿಯತ್ತ ಒದ್ದರು.

17ನೇ ನಿಮಿಷದಲ್ಲಿ ಬಿಪಿನ್ ಸಿಂಗ್ ಯಶಸ್ಸು ಸಾಧಿಸಿದರು. ಮಿಡ್‌ಫೀಲ್ಡ್ ವಿಭಾಗದಿಂದ ಚೆಂಡಿನೊಂದಿಗೆ ಧಾವಿಸಿದ ಕ್ಯಾಸಿಯೊ ಎದುರಾಳಿ ತಂಡದ ಆವರಣಕ್ಕೆ ತಲುಪುತ್ತಿದ್ದಂತೆ ಬಿಪಿನ್ ಅವರತ್ತ ಕ್ರಾಸ್ ಮಾಡಿದರು. ಅವರು ನಿರಾಯಾಸದಿಂದ ಗೋಲುಪೆಟ್ಟಿಗೆಯೊಳಗೆ ತಳ್ಳಿದರು.

ಇಗರ್ ಆಂಗುಲೊ 24ನೇ ನಿಮಿಷದಲ್ಲಿ ಗಳಿಸಿದ ಗೋಲು ತಂಡಕ್ಕೆ 3–0 ಮುನ್ನಡೆ ಗಳಿಸಿಕೊಟ್ಟಿತು. ಈ ಗೋಲಿಗೂ ಕ್ಯಾಸಿಯೊ ನೆರವಾದರು. ಜೆಮ್ಶೆಡ್‌ಪುರದ ಮಿಡ್‌ಫೀಲ್ಡ್ ವಿಭಾಗದ ಆಟಗಾರರನ್ನು ವಂಚಿಸಿ ಚೆಂಡಿನೊಂದಿಗೆ ಸಾಗಿದ ಅವರು ಕೊನೆಗೆ ಇಗರ್ ಆಂಗುಲೊ ಅವರತ್ತ ತಳ್ಳಿದರು. ಡಿಫೆಂಡರ್ ಎಲಿ ಸಾಬಿಯ ಅವರು ತಡೆಯಲು ಮುಂದಾದರೂ ಫಲ ಕಾಣಲಿಲ್ಲ.

ದ್ವಿತೀಯಾರ್ಧದಲ್ಲಿ ಎರಡು ಗೋಲು ಗಳಿಸಿ ಜೆಮ್ಶೆಡ್‌ಪುರ ತಿರುಗೇಟು ನೀಡಲು ಪ್ರಯತ್ನಿಸಿತು. 48ನೇ ನಿಮಿಷದಲ್ಲಿ ಕೋಮಲ್ ತತಾಲ್ ಮತ್ತು 55ನೇ ನಿಮಿಷದಲ್ಲಿ ಎಲಿ ಸಾಬಿಯಾ ಚೆಂಡನ್ನು ಗುರಿ ಮುಟ್ಟಿಸುವಲ್ಲಿ ಯಶಸ್ವಿಯಾದರು. ಮುನ್ನಡೆಯನ್ನು ಉಳಿಸಿಕೊಂಡ ಮುಂಬೈ 70ನೇ ನಿಮಿಷದಲ್ಲಿ ವೈಗರ್ ಕಟಾಟು ಅವರ ಗೋಲಿನೊಂದಿಗೆ ಜಯದ ಅಂತರವನ್ನು ಹೆಚ್ಚಿಸಿದರು.

ಒಡಿಶಾ ಎಫ್‌ಸಿ–ನಾರ್ತ್‌ ಈಸ್ಟ್ ಮುಖಾಮುಖಿ

ಉತ್ತಮ ಸಾಮರ್ಥ್ಯ ತೋರುತ್ತ ಬಂದಿರುವ ಒಡಿಶಾ ಎಫ್‌ಸಿ ಶುಕ್ರವಾರದ ಹಣಾಹಣಿಯಲ್ಲಿ ನಾರ್ತ್ ಈಸ್ಟ್ ಯುನೈಟೆಡ್ ವಿರುದ್ಧ ಸೆಣಸಲಿದೆ. ಸತತ ಎರಡು ಪಂದ್ಯಗಳಲ್ಲಿ ಭಾರಿ ಅಂತರದಿಂದ ಜಯ ಗಳಿಸಿರುವ ಒಡಿಶಾ ಎಫ್‌ಸಿ ಕಳೆದ ಪಂದ್ಯದಲ್ಲಿ ಕೇರಳ ಬ್ಲಾಸ್ಟರ್ಸ್‌ಗೆ ಮಣಿದಿತ್ತು. ಹೀಗಾಗಿ ಗೆಲುವಿನ ಲಯಕ್ಕೆ ಮರಳಲು ತಂಡ ಪ್ರಯತ್ನಿಸಲಿದೆ.

ಕಳೆದ ಬಾರಿ ಒಡಿಶಾ ಪಾಯಿಂಟ್‌ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿತ್ತು. ಈ ಬಾರಿ ಮೊದಲ ಪಂದ್ಯದಲ್ಲೇ ಬೆಂಗಳೂರು ಎಫ್‌ಸಿಯನ್ನು 3–1ರಲ್ಲಿ ಮಣಿಸಿತ್ತು. ನಂತರ ಎಸ್‌ಸಿ ಈಸ್ಟ್ ಬೆಂಗಾಲ್ ವಿರುದ್ಧ 6–4ರಲ್ಲಿ ಜಯ ಗಳಿಸಿತ್ತು. ಗೆದ್ದು ಪಾಯಿಂಟ್ ಪಟ್ಟಿಯ ಅಗ್ರ ಐದರಲ್ಲಿ ಸ್ಥಾನ ಗಳಿಸುವ ಗುರಿಯೊಂದಿಗೆಶುಕ್ರವಾರದ ಪಂದ್ಯದಲ್ಲಿ ಕಣಕ್ಕೆ ಇಳಿಯಲಿದೆ. ಜೊನಾಥಸ್ ಕ್ರಿಸ್ಟಿಯನ್ ಈ ಪಂದ್ಯಕ್ಕೆ ಲಭ್ಯ ಇಲ್ಲ ಎಂದು ಕೋಚ್ ಕಿಕೊ ರಮಿರೆಜ್ ತಿಳಿಸಿದ್ದಾರೆ.

ಮೊದಲ ಮೂರು ಪಂದ್ಯಗಳಲ್ಲಿ ಒಂದರಲ್ಲಿ ಡ್ರಾ ಸಾಧಿಸಿ ಎರಡನ್ನು ಸೋತಿದ್ದ ನಾರ್ತ್ ಈಸ್ಟ್ ಯುನೈಟೆಡ್ ತಂಡ ಹಿಂದಿನ ಪಂದ್ಯದಲ್ಲಿ ಬಲಿಷ್ಠ ಎಫ್‌ಸಿ ಗೋವಾ ವಿರುದ್ಧ ಗೆದ್ದು ಭರವಸೆಯಲ್ಲಿದೆ. ನಾಲ್ಕು ಪಂದ್ಯಗಳಿಂದ ನಾಲ್ಕು ಪಾಯಿಂಟ್ ಕಲೆ ಹಾಕಿರುವ ತಂಡ ಪಾಯಿಂಟ್ ಪಟ್ಟಿಯ ಅಗ್ರ ಐದರಲ್ಲಿ ಸ್ಥಾನ ಗಳಿಸಬೇಕಾದರೆ ಮುಂದಿನ ಪಂದ್ಯಗಳನ್ನು ಗೆಲ್ಲಬೇಕಾಗಿದೆ. ಗಾಯದಿಂದ ಬಳಲುತ್ತಿರುವ ಫೆಡರಿಕೊ ಗಾಲೆಗೊ ಪಂದ್ಯಕ್ಕೆ ಲಭ್ಯ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT