ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೈನಲ್ ಹಾದಿಯ ಮೊದಲ ಸವಾಲು

ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್: ನಾರ್ತ್ ಈಸ್ಟ್‌ –ಬಿಎಫ್‌ಸಿ ಹಣಾಹಣಿ ಇಂದು
Last Updated 6 ಮಾರ್ಚ್ 2019, 19:43 IST
ಅಕ್ಷರ ಗಾತ್ರ

ಗುವಾಹಟಿ (ಪಿಟಿಐ): ಲೀಗ್‌ ಹಾದಿಯುದ್ದಕ್ಕೂ ಅಮೋಘ ಸಾಮರ್ಥ್ಯ ತೋರಿದ ಬೆಂಗಳೂರು ಫುಟ್‌ಬಾಲ್ ಕ್ಲಬ್‌ (ಬಿಎಫ್‌ಸಿ), ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್‌) ಫುಟ್‌ ಬಾಲ್ ಟೂರ್ನಿಯ ಫೈನಲ್ ಪ್ರವೇಶದ ಕನಸಿನಲ್ಲಿದೆ.

ಎರಡು ಲೆಗ್‌ಗಳಲ್ಲಿ ನಡೆಯಲಿರುವ ಸೆಮಿಫೈನಲ್‌ ಹಣಾಹಣಿಯ ಮೊದಲ ಲೆಗ್‌ನ ಮೊದಲ ಪ‍ಂದ್ಯ ಗುರುವಾರ ಇಲ್ಲಿನ ಇಂದಿರಾ ಗಾಂಧಿ ಅಥ್ಲೆಟಿಕ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಕಳೆದ ಬಾರಿಯ ರನ್ನರ್ ಅಪ್‌ ಬಿಎಫ್‌ಸಿ, ಇದೇ ಮೊದಲ ಬಾರಿ ಸೆಮಿಫೈನಲ್‌ ಪ್ರವೇಶಿಸಿರುವ ನಾರ್ತ್ ಈಸ್ಟ್ ಯುನೈಟೆಡ್‌ ಎದುರು ಸೆಣಸಲಿದೆ.

ಲೀಗ್ ಹಂತದ 18 ಪಂದ್ಯಗಳಲ್ಲಿ ಕೇವಲ ನಾಲ್ಕನ್ನು ಸೋತಿರುವ ಬಿಎಫ್‌ಸಿ ಒಟ್ಟು 34 ಪಾಯಿಂಟ್‌ಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಅಗ್ರ ಸ್ಥಾನ ಗಳಿಸಿದೆ. ನಾರ್ತ್ ಈಸ್ಟ್‌ ನಾಲ್ಕನೇ ಸ್ಥಾನದಲ್ಲಿದೆ. ಈ ತಂಡ 18 ಪಂದ್ಯಗಳಲ್ಲಿ 29 ಪಾಯಿಂಟ್ ಕಲೆ ಹಾಕಿದೆ. ಹೀಗಾಗಿ ಬಿಎಫ್‌ಸಿ ಗೆಲ್ಲುವ ನೆಚ್ಚಿನ ತಂಡ ಎನಿಸಿಕೊಂಡಿದೆ.

ಗುವಾಹಟಿಯಲ್ಲಿ ಈ ಹಿಂದೆ ನಡೆ ದಿದ್ದ ಪಂದ್ಯದಲ್ಲಿ ನಾರ್ತ್‌ ಈಸ್ಟ್ ತಂಡ ಬಿಎಫ್‌ಸಿಗೆ ಕಠಿಣ ಸವಾಲು ಒಡ್ಡಿತ್ತು. ಕೊನೆಯ ಕ್ಷಣದಲ್ಲಿ ಚೆಂಕೊ ಗಳಿಸಿದ ಗೋಲಿನ ಮೂಲಕ ಬಿಎಫ್‌ಸಿ ಗೆದ್ದಿತ್ತು. ಬೆಂಗಳೂರಿನಲ್ಲಿ ನಡೆದಿದ್ದ ಪಂದ್ಯದಲ್ಲಿ ಬಿಎಫ್‌ಸಿ ಪೂರ್ಣ ಆಧಿಪತ್ಯ ಸ್ಥಾಪಿಸಿತ್ತು.

‘ಕಳೆದ 10–12 ಪಂದ್ಯಗಳಲ್ಲಿ ತಂಡದ ದೌರ್ಬಲ್ಯಗಳನ್ನು ಸರಿಪಡಿಸಲು ಪ್ರಯತ್ನಿಸುತ್ತಿದ್ದೇವೆ. ರೆಡ್ ಕಾರ್ಡ್ ಶಿಕ್ಷೆಗೆ ಒಳಗಾಗಿರುವ ಕಾರಣ ತಂಡದಲ್ಲಿ ಈಗ ಕೇವಲ 16 ಆಟಗಾರರು ಇದ್ದು ಅವರ ಪೈಕಿ ಉತ್ತಮ ಆಟಗಾರರನ್ನು ಕಣಕ್ಕೆ ಇಳಿಸಬೇಕಾದ ಅನಿವಾರ್ಯ ಸ್ಥಿತಿ ಒದಗಿದೆ’ ಎಂದು ನಾರ್ತ್ ಈಸ್ಟ್ ಯುನೈಟೆಡ್ ತಂಡದ ಕೋಚ್‌ ಎಲ್ಕೊ ಶಟೋರಿ ತಿಳಿಸಿದರು.

ಕಳೆದ ಡಿಸೆಂಬರ್‌ ಮಧ್ಯದವರೆಗೆ ನಡೆದ ಲೀಗ್‌ನ ಮೊದಲ ಹಂತದಲ್ಲಿ ಬಿಎಫ್‌ಸಿ ಅಜೇಯವಾಗಿ ಸಾಗಿತ್ತು. ಆದರೆ ಏಷ್ಯಾ ಕಪ್‌ ಟೂರ್ನಿಯ ನಂತರ ಸ್ವಲ್ಪ ಹಿನ್ನಡೆ ಕಂಡಿತ್ತು. ನಾಯಕ ಸುನಿಲ್ ಚೆಟ್ರಿ ಗೋಲು ಗಳಿಸುವಲ್ಲಿ ವಿಫಲರಾಗಿದ್ದರು. ಮೊದಲ ಐದು ಪಂದ್ಯಗಳ ನಂತರ ಗಾಯಗೊಂಡು ತವರಿಗೆ ವಾಪಸಾಗಿದ್ದ ಮಿಕು ಈ ವರ್ಷ ಮತ್ತೆ ತಂಡವನ್ನು ಸೇರಿಕೊಂಡಿದ್ದರು. ಹೀಗಾಗಿ ಸುನಿಲ್ ಚೆಟ್ರಿ ಬಲ ಪಡೆದುಕೊಂಡಿದ್ದಾರೆ. ಗೋಲು ಬರ ನೀಗಿಸಿ ಅವರು ಗುರುವಾರ ತಂಡಕ್ಕೆ ಗೆಲುವು ತಂದುಕೊಡುವರೇ ಎಂಬುದನ್ನು ಕಾದು ನೋಡಬೇಕು.

ಆರಂಭ: ರಾತ್ರಿ 7.30.

ನೇರ ಪ್ರಸಾರ: ಸ್ಟಾರ್‌ ನೆಟ್‌ವರ್ಕ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT