ಶುಕ್ರವಾರ, 22 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಕ್ಷಿಣ ಏಷ್ಯಾ ಫುಟ್‌ಬಾಲ್ ಚಾಂಪಿಯನ್‌ಷಿಪ್‌: ಸೆಮಿಯಲ್ಲಿ ಭಾರತಕ್ಕೆ ಲೆಬನಾನ್ ಎದುರಾಳಿ

ಸ್ಯಾಫ್‌ ಫುಟ್‌ಬಾಲ್: ಬಾಂಗ್ಲಾದೇಶಕ್ಕೆ ಮಣಿದ ಭೂತಾನ್
Published 28 ಜೂನ್ 2023, 23:24 IST
Last Updated 28 ಜೂನ್ 2023, 23:24 IST
ಅಕ್ಷರ ಗಾತ್ರ

ಬೆಂಗಳೂರು: ಲೆಬನಾನ್ ತಂಡವು ಇಲ್ಲಿ ನಡೆಯುತ್ತಿರುವ ದಕ್ಷಿಣ ಏಷ್ಯಾ ಫುಟ್‌ಬಾಲ್ ಚಾಂಪಿಯನ್‌ಷಿಪ್‌ ಸೆಮಿಫೈನಲ್‌ನಲ್ಲಿ ಭಾರತ ತಂಡವನ್ನು ಎದುರಿಸಲಿದೆ.

ಬುಧವಾರ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಲೆಬನಾನ್ ತಂಡವು ನಾಯಕ ಹಸನ್ ಮಾಟೌಕ್ ಗಳಿಸಿದ ಏಕೈಕ ಗೋಲಿನಿಂದ ಮಾಲ್ಡೀವ್ಸ್‌ ಎದುರು ಜಯಿಸಿತು.

ಪಂದ್ಯದ 24ನೇ ನಿಮಿಷದಲ್ಲಿ ಲಭಿಸಿದ ಫ್ರೀಕಿಕ್‌ನಲ್ಲಿ ಹಸನ್ ಗೋಲು ಗಳಿಸಿದರು. ಇದರಿಂದಾಗಿ ಲೆಬನಾನ್ 1–0 ಜಯಗಳಿಸಿತು. ಇದರೊಂದಿಗೆ ತಂಡವು ತನ್ನ ಗುಂಪಿನಲ್ಲಿ ಅಗ್ರಸ್ಥಾನಕ್ಕೇರಿತು.

ಶನಿವಾರ ನಡೆಯಲಿರುವ ನಾಲ್ಕರ ಘಟ್ಟದ ಪಂದ್ಯದಲ್ಲಿ ಭಾರತ ಮತ್ತು ಲೆಬನಾನ್ ಮುಖಾಮುಖಿಯಾಗಲಿವೆ.

ಈಚೆಗೆ ಭುವನೇಶ್ವರದಲ್ಲಿ ನಡೆದಿದ್ದ ಇಂಟರ್‌ಕಾಂಟಿನೆಂಟಲ್ ಕಪ್ ಫೈನಲ್‌ನಲ್ಲಿಯೂ ಈ ಎರಡೂ ತಂಡಗಳು ಹಣಾಹಣಿ ನಡೆಸಿದ್ದವು. ಭಾರತ ಜಯಿಸಿತ್ತು.

ಗುಂಪು ಹಂತದ ಪಂದ್ಯದಲ್ಲಿ 154ನೇ ರ‍್ಯಾಂಕ್ ಹೊಂದಿರುವ ಮಾಲ್ಡೀವ್ಸ್‌ ತಂಡವು ಲೆಬನಾನ್ ಬಳಗಕ್ಕೆ ಸುಲಭವಾಗಿ ಮಣಿಯಲಿಲ್ಲ.

ಬಾಂಗ್ಲಾಕ್ಕೆ ಜಯ:  ಬಿ ಗುಂಪಿನ ಇನ್ನೊಂದು ಪಂದ್ಯದಲ್ಲಿ ಬಾಂಗ್ಲಾದೇಶ ತಂಡವು 3–1ರಿಂದ  ಭೂತಾನ್ ವಿರುದ್ಧ ಜಯಿಸಿತು.

ಭೂತಾನ್ ತಂಡದ ಟಿಸೆಂಡಾ ದೊರ್ಜಿ 12ನೇ ನಿಮಿಷದಲ್ಲಿಯೇ ಗೋಲು ಹೊಡೆದರು. ಒಂಬತ್ತು ನಿಮಿಷಗಳ ನಂತರ ಬಾಂಗ್ಲಾದ ಶೇಖ್ ಮಾರ್ಸಲಿನ್ ಗೋಲು ಹೊಡೆದು ಸಮಬಲ ಸಾಧಿಸಿದರು.

30ನೇ ನಿಮಿಷದಲ್ಲಿ ಭೂತಾನ್‌ನ ಫುಂಟಷೊ ಜಿಗ್ಮೆ ಕೊಟ್ಟ ’ಉಡುಗೊರೆ‘ ಗೋಲಿನಿಂದಾಗಿ ಬಾಂಗ್ಲಾ 2–1ರ ಮುನ್ನಡೆ ಪಡೆಯಿತು.

ರಖೀಬ್ ಹೊಸೇನ್ 36ನೇ ನಿಮಿಷದಲ್ಲಿ ಗೋಲು ಹೊಡೆದು ಅಂತರ ಹೆಚ್ಚಿಸಿದರು.

ಬಾಂಗ್ಲಾ ದೇಶ ತಂಡವು  ಒಟ್ಟು ಮೂರು ಪಂದ್ಯಗಳಲ್ಲಿ ಎರಡರಲ್ಲಿ ಜಯಿಸಿತು. ನಾಲ್ಕು ಅಂಕಗಳೊಂದಿಗೆ ಎರಡನೇ ಸ್ಥಾನ ಗಳಿಸಿ ನಾಲ್ಕರ ಘಟ್ಟದಲ್ಲಿ ಸ್ಥಾನ ಪಡೆಯಿತು.

ಗೋಲು ಉಡುಗೊರೆ ಕೊಟ್ಟಿದ್ದು ದೇಶ: ಚೆಟ್ರಿ

ಬೆಂಗಳೂರು: ‘ಪಂದ್ಯದಲ್ಲಿ ಉಡುಗೊರೆ ಗೋಲು ಕೊಟ್ಟಿದ್ದು ಅನ್ವರ್ ಅಲ್ಲ. ದೇಶದ ತಂಡ‘ ಎಂದು ಭಾರತ ಫುಟ್‌ಬಾಲ್ ತಂಡದ ನಾಯಕ ಸುನಿಲ್ ಚೆಟ್ರಿ ಹೇಳಿದರು. ಮಂಗಳವಾರ  ನಡೆದ ಸ್ಯಾಫ್‌ ಟೂರ್ನಿಯ ಪಂದ್ಯದಲ್ಲಿ ಕುವೈತ್ ವಿರುದ್ಧ 1–1ರ ಡ್ರಾ ಸಾಧಿಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.  ಪಂದ್ಯದಲ್ಲಿ ಕುವೈತ್‌ಗೆ ಉಡುಗೊರೆ ಗೋಲು ಲಭಿಸಿದ್ದರಿಂದ ಭಾರತದ ಜಯ ಗಳಿಸುವ ಅವಕಾಶ ಕೈತಪ್ಪಿತು. ಈ ಕುರಿತು ಪ್ರತಿಕ್ರಿಯಸಿದ ಚೆಟ್ರಿ ‘ ಈ ರೀತಿ ಯಾರಿಂದ ಬೇಕಾದರೂ  ಆಗಬಹುದು. ನಾವು ವೃತ್ತಿಪರ ಆಟಗಾರರು. ತಾಂತ್ರಿಕ ಲೋಪಗಳು ಆಗುತ್ತವೆ. ನಾವೆಲ್ಲರೂ ಅನ್ವರ್ ಅವರೊಂದಿಗೆ ಇದ್ದೇವೆ‘ ಎಂದು ನುಡಿದರು. ‘ಕುವೈತ್ ತಂಡದ ಆಟಗಾರರು ಉತ್ತಮ ಸಾಮರ್ಥ್ಯ ಹೊಂದಿದವರು. ಕಠಿಣ ಪೈಪೋಟಿಯೊಡ್ಡಿದರು. ಆದರೂ ಅವರಿಗೆ ಸರಿಸಮನಾಗಿ  ಆಡಿದೆವು. ಅಲ್ಲದೇ ಸೋಲಿಲ್ಲದ ಓಟವನ್ನು ಮುಂದುವರಿಸಿದೆವು. ನಮಗೆ ಇದೇ ರೀತಿ ಆಡುವ ತರಬೇತಿ ನೀಡಲಾಗಿದೆ. ಇದೇ ಉತ್ಕೃಷ್ಟ ಆಟವನ್ನು ಮುಂದುವರಿಸುತ್ತೇವೆ‘ ಎಂದರು. ’ಭಾರತ ತಂಡವು 2023ರಲ್ಲಿ ಆಡಿದ ಒಂಬತ್ತು ಪಂದ್ಯಗಳಲ್ಲಿ ಸೋತಿಲ್ಲ.  ಇದೇ ಓಟವನ್ನು ಮುಂದುವರಿಸುತ್ತೇವೆ‘ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT