ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಎಸ್‌ಎಲ್‌: ಎಟಿಕೆಎಂಬಿಗೆ ನಾರ್ತ್ ಈಸ್ಟ್‌ ಸಮಬಲದ ಪೆಟ್ಟು

ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್ ಟೂರ್ನಿ: ಮಿಂಚಿದ ವಿಲಿಯಮ್ಸ್‌, ಇದ್ರಿಸಾ ಸಿಲ್ಲಾ
Last Updated 6 ಮಾರ್ಚ್ 2021, 16:43 IST
ಅಕ್ಷರ ಗಾತ್ರ

ಬ್ಯಾಂಬೊಲಿಮ್‌, ಗೋವಾ: ಇಂಜುರಿ ಅವಧಿಯಲ್ಲಿ ಎಟಿಕೆ ಮೋಹನ್ ಬಾಗನ್ ತಂಡದ ರಕ್ಷಣಾ ವಿಭಾಗಕ್ಕೆ ಚಳ್ಳೆಹಣ್ಣು ತಿನ್ನಿಸಿ ಸುಲಭ ಗೋಲು ಗಳಿಸಿದ ಇದ್ರಿಸಾ ಸಿಲ್ಲಾ, ನಾರ್ತ್ ಈಸ್ಟ್ ಯುನೈಟೆಡ್‌ ತಂಡದ ಕೈ ಹಿಡಿದರು. ಇಲ್ಲಿನ ಜಿಎಂಸಿ ಕ್ರೀಡಾಂಗಣದಲ್ಲಿ ಶನಿವಾರ ರಾತ್ರಿ ನಡೆದ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯ ಎರಡನೇ ಸೆಮಿಫೈನಲ್‌ನ ಮೊದಲ ಲೆಗ್‌ನ ಪಂದ್ಯ 1–1ರಲ್ಲಿ ಡ್ರಾಗೊಂಡಿತು.

ಜಿದ್ದಾಜಿದ್ದಿಯ ಪೈಪೋಟಿಗೆ ಸಾಕ್ಷಿಯಾದ ಪಂದ್ಯದ 34ನೇ ನಿಮಿಷದಲ್ಲಿ ವಿಲಿಯಮ್ಸ್ ಗಳಿಸಿದ ಗೋಲಿನ ಮೂಲಕ ಎಟಿಕೆ ಮೋಹನ್ ಬಾಗನ್ ಮುನ್ನಡೆ ಗಳಿಸಿತ್ತು. ಪಂದ್ಯ ಮುಗಿಯಲು ನಿಮಿಷಗಳು ಬಾಕಿ ಇರುವಾಗಲೂ ತಂಡ ಜಯದ ಭರವಸೆಯಲ್ಲೇ ಇತ್ತು. ಈ ಹಂತದಲ್ಲಿ ಮ್ಯಾಜಿಕ್ ಮಾಡಿದ ಸಿಲ್ಲಾ ನಾರ್ತ್ ಈಸ್ಟ್‌ ಪಾಳಯದಲ್ಲಿ ಸಂಭ್ರಮದ ಅಲೆ ಎಬ್ಬಿಸಿದರು.

ಆರಂಭದಿಂದಲೇ ಉಭಯ ತಂಡಗಳು ಭಾರಿ ಆಕ್ರಮಣಕ್ಕೆ ಮುಂದಾದವು. ಆದರೆ ಎರಡೂ ತಂಡಗಳ ಡಿಫೆಂಡರ್‌ಗಳು ಅಷ್ಟೇ ಚಾಣಾಕ್ಷ ಆಟವಾಡಿದರು. 34ನೇ ನಿಮಿಷದಲ್ಲಿ ಅಂಗಣದ ಮಧ್ಯದಿಂದ ತೇಲಿಬಂದ ಚೆಂಡನ್ನು ನಿಯಂತ್ರಿಸಿದ ರಾಯ್ ಕೃಷ್ಣ ನೇರವಾಗಿ ವಿಲಿಯಮ್ಸ್ ಕಡೆಗೆ ಅಟ್ಟಿದರು. ವಿಲಿಯಮ್ಸ್‌ ಎದುರಾಳಿ ತಂಡದ ಆಟಗಾರರನ್ನು ವಂಚಿಸಿ ಮುನ್ನುಗ್ಗಿದರು. ಕಡೆಯ ಕ್ಷಣದಲ್ಲಿ ವಾಯುವೇಗದಲ್ಲಿ ಗೋಲು‍ಪೆಟ್ಟಿಗೆಯ ಒಳಗೆ ಒದ್ದರು. ಡಿಫೆಂಡರ್‌ಗಳು ನೋಡುತ್ತಿದ್ದಂತೆಯೇ ಚೆಂಡು ಗೋಲ್‌ಕೀಪರ್ ಸುಭಾಷಿಷ್ ರಾಯ್ ಅವರ ಎಡಭಾಗದಿಂದ ನುಗ್ಗಿ ಬಲೆಗೆ ಮುತ್ತಿಕ್ಕಿತು.

ದ್ವಿತೀಯಾರ್ಧದಲ್ಲಿ ಪಂದ್ಯ ಇನ್ನಷ್ಟು ಕಳೆಕಟ್ಟಿತು. ಮುನ್ನಡೆ ಸಾಧಿಸಿದ್ದರೂ ಅದನ್ನು ಹೆಚ್ಚಿಸುವ ಎಟಿಕೆಎಂಬಿಯ ಪ್ರಯತ್ನವನ್ನು ತಡೆಯುವಲ್ಲಿ ನಾರ್ತ್ ಈಸ್ಟ್ ಆಟಗಾರರು ಯಶಸ್ವಿಯಾದರು. ಇಂಜುರಿ ಅವಧಿಯಲ್ಲಿ ಗೋಲು ಪೆಟ್ಟಿಗೆಯ ಬಳಿ ಎದೆಯೊಡ್ಡಿ ಚೆಂಡನ್ನು ನಿಯಂತ್ರಿಸಿದ ಸಿಲ್ಲಾ ಮೊದಲು ಲೂಯಿಸ್ ಮಚಾದೊ ಕಡೆಗೆ ತಳ್ಳಿದರು. ಮಚಾದೊ ಅದನ್ನು ವಾಪಸ್ ಸಿಲ್ಲಾ ಕಡೆಗೆ ಸಾಗಿಸಿದರು. ತಲೆಯೊಡ್ಡಿದ ಸಿಲ್ಲಾ ಗೋಲ್‌ಕೀಪರ್ ಅರಿಂದಂ ಭಟ್ಟಾಚಾರ್ಯ ಅವರನ್ನು ವಂಚಿಸಿ ಗೋಲು ಗಳಿಸಿದರು.

ಭಾನುವಾರ ವಿಶ್ರಾಂತಿ ದಿನವಾಗಿದ್ದು ಸೋಮವಾರ ನಡೆಯಲಿರುವ ಮೊದಲನೇ ಸೆಮಿಫೈನಲ್‌ನ ಎರಡನೇ ಲೆಗ್‌ನಲ್ಲಿ ಮುಂಬೈ ಸಿಟಿ ಎಫ್‌ಸಿ ಮತ್ತು ಎಫ್‌ಸಿ ಗೋವಾ ತಂಡಗಳು ಸೆಣಸಲಿವೆ. ಈ ತಂಡಗಳ ನಡುವಿನ ಮೊದಲ ಸೆಮಿಫೈನಲ್‌ನ ಮೊದಲ ಲೆಗ್‌ನ ಪಂದ್ಯ 2–2ರಲ್ಲಿ ಡ್ರಾ ಆಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT