ಶನಿವಾರ, 24 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಯುರೋಪಿಯನ್‌ ಕ್ಲಬ್‌ಗಳಲ್ಲಿ ಆಡುವಾಸೆ’

Last Updated 23 ಜುಲೈ 2018, 9:41 IST
ಅಕ್ಷರ ಗಾತ್ರ

ಫಿಫಾ ವಿಶ್ವಕಪ್‌ ಮುಗಿದಿದೆ. ಅಚ್ಚರಿಯ ಫಲಿತಾಂಶವಷ್ಟೇ ಅಲ್ಲದೆ, ಉದಯೋನ್ಮುಖ ಆಟಗಾರರು ಬೆಳಕಿಗೆ ಬರಲು ಈ ಬಾರಿಯ ಟೂರ್ನಿ ಸಾಕ್ಷಿಯಾಯಿತು. ವಿಶ್ವದಾದ್ಯಂತ ಲಕ್ಷಾಂತರ ಜನರು ರಷ್ಯಾಗೆ ತೆರಳಿ ತಮ್ಮ ನೆಚ್ಚಿನ ತಂಡಗಳ ಪಂದ್ಯಗಳನ್ನು ವೀಕ್ಷಿಸಿದರು. ಹಲವು ಕಂಪನಿಗಳು ಹಮ್ಮಿಕೊಂಡಿದ್ದ ಪ್ರಚಾರ ಕಾರ್ಯಕ್ರಮಗಳ ಮೂಲಕ ಅನೇಕರಿಗೆ ರಷ್ಯಾಗೆ ತೆರಳುವ ಅವಕಾಶವೂ ಸಿಕ್ಕಿತು. ಕಿಯಾ ಅಫೀಶಿಯಲ್‌ ಮ್ಯಾಚ್‌ ಬಾಲ್‌ ಕ್ಯಾರಿಯರ್‌ ಎಂಬ ಹೆಸರಿನ ಇಂತಹುದೇ ಕಾರ್ಯಕ್ರಮವನ್ನು ಕಿಯಾ ಮೋಟರ್ಸ್‌ ಸಂಸ್ಥೆ ಹಮ್ಮಿಕೊಂಡಿತ್ತು. ಕಾರ್ಯಕ್ರಮದಡಿಯಲ್ಲಿ ಭಾರತದಿಂದ ಆರು ಮಕ್ಕಳು ರಷ್ಯಾಗೆ ತೆರಳಿದ್ದರು. ಇದರಲ್ಲಿ ಅಫೀಶಿಯಲ್‌ ಮ್ಯಾಚ್‌ ಬಾಲ್‌ ಕ್ಯಾರಿಯರ್‌ ಆಗಿ ಆಯ್ಕೆಯಾಗಿದ್ದು ಬೆಂಗಳೂರಿನ ರಿಶಿ ತೇಜ್‌ ಹಾಗೂ ತಮಿಳುನಾಡಿನ ನಥಾನಿಯಾ ಜಾನ್‌ ಕೆ.

ಬೆಂಗಳೂರಿನ ಕಲ್ಯಾಣನಗರದಲ್ಲಿರುವ ರಾಯಲ್‌ ಕಾನ್‌ಕರ್ಡ್‌ ಅಂತರರಾಷ್ಟ್ರೀಯ ಶಾಲೆಯಲ್ಲಿ ಓದುತ್ತಿರುವ ರಿಶಿಗೆ ಈಗ ಹತ್ತು ವರ್ಷ.ತಂದೆ ರವಿತೇಜ್‌ ಅವರು ಕಾಗ್ನಿಜೆಂಟ್‌ ಕಂಪನಿಯಲ್ಲಿ ಹಿರಿಯ ವ್ಯವಸ್ಥಾಪಕರಾಗಿದ್ದಾರೆ. ತಾಯಿ ಸರಿತಾ ಡಿಸೋಜಾ ಗೃಹಿಣಿ. ಭವಿಷ್ಯದಲ್ಲಿ ಫುಟ್‌ಬಾಲ್‌ ಆಟಗಾರನಾಗಬೇಕೆಂಬ ಆಕಾಂಕ್ಷೆ ಹೊಂದಿರುವ ಈತ, ಅದಕ್ಕಾಗಿ ಈಗಿನಿಂದಲೇ ಸಿದ್ಧತೆ ನಡೆಸಿದ್ದಾನೆ. ರಿಶಿ, ಲೀಗ್‌ ಹಂತದಲ್ಲಿ ನಡೆದ ಬೆಲ್ಜಿಯಂ–ಪನಾಮ ನಡುವಿನ ಪಂದ್ಯದಲ್ಲಿ ಅಧಿಕೃತವಾಗಿ ಚೆಂಡನ್ನು ಅಂಪೈರ್‌ಗಳಿಗೆ ಹಸ್ತಾಂತರಿಸಿದ್ದ.

‘ಬೆಂಗಳೂರು ಫುಟ್‌ಬಾಲ್‌ ಕ್ಲಬ್‌ (ಬಿಎಫ್‌ಸಿ)ನಲ್ಲಿ ತರಬೇತಿ ಪಡೆಯುತ್ತಿದ್ದೇನೆ. ಮುಂದೊಂದು ದಿನ ಫಿಫಾ ವಿಶ್ವಕಪ್‌ನಲ್ಲಿ ಆಡುವ ಬಯಕೆ ಇದೆ. ವಿಶ್ವಕಪ್‌ ಟೂರ್ನಿಯಲ್ಲಿ ಪಾಲ್ಗೊಳ್ಳಲು ಅವಕಾಶ ಸಿಕ್ಕಿದ್ದು ಅವಿಸ್ಮರಣೀಯ ಅನುಭವ’ ಎಂದು ಹೇಳುತ್ತಾನೆ ರಿಶಿ.

ತನ್ನ ತಾಯಿಯ ಬೆಂಬಲವಿಲ್ಲದೇ ಹೋಗಿದ್ದರೆ ಫುಟ್‌ಬಾಲ್‌ ಬಗ್ಗೆ ಆಸಕ್ತಿ ಬೆಳೆಯುತ್ತಿರಲಿಲ್ಲ ಎನ್ನುವ ರಿಶಿಗೆ ಲಯೊನೆಲ್‌ ಮೆಸ್ಸಿ, ಮೊಹಮ್ಮದ್‌ ಸಲಾ, ಕ್ಸೆವಿ, ಆ್ಯಂಟೋನ್‌ ಗ್ರಿಜ್‌ಮನ್‌ ಅವರುಗಳು ನೆಚ್ಚಿನ ಆಟಗಾರರು.

‘ಇನ್ನೂ ಕೆಲವೇ ವರ್ಷಗಳಲ್ಲಿ ಪ್ರತಿಷ್ಠಿತ ಯುರೋಪಿಯನ್‌ ಕ್ಲಬ್‌ಗಳಲ್ಲಿ ಆಡುವ ಗುರಿ ಹೊಂದಿದ್ದೇನೆ. ರಷ್ಯಾಗೆ ತೆರಳಿದ್ದರಿಂದ ಕಾಲ್ಚೆಂಡಿನ ಆಟದ ಬಗ್ಗೆ ಹೊಸ ಪಾಠಗಳನ್ನು ಕಲಿಯಲು ಸಾಧ್ಯವಾಯಿತು’ ಎಂದು ಅವನು ಅಭಿಪ್ರಾಯಪಡುತ್ತಾನೆ. ವಿಶ್ವದ ಪ್ರಮುಖ ಕ್ರೀಡೆಯೊಂದರ ಮಹತ್ವದ ಟೂರ್ನಿಯಲ್ಲಿ ಅಫೀಶಿಯಲ್‌ ಬಾಲ್‌ ಕ್ಯಾರಿಯರ್‌ ಆಗಿ ಗೌರವ ಪಡೆದ ಈ ಬಾಲಕ, ಸಾಧನೆಯ ಒಂದೊಂದೇ ಮೆಟ್ಟಿಲೇರುತ್ತಿದ್ದಾನೆ.

ನಥಾನಿಯಾ ಎಂಬ ಸ್ಫೂರ್ತಿಯ ಚಿಲುಮೆ....
ರಿಶಿಯೊಂದಿಗೆ ಆಫೀಶಿಯಲ್‌ ಬಾಲ್‌ ಕ್ಯಾರಿಯರ್‌ ಆಗಿದ್ದ ನಥಾನಿಯಾ ಜಾನ್‌ ಕೆ ತಮಿಳುನಾಡಿನವಳು. ಈ ಗೌರವಕ್ಕೆ ಪಾತ್ರಳಾದ ಭಾರತದ ಮೊದಲ ಬಾಲಕಿ ಎಂಬ ಹೆಗ್ಗಳಿಕೆ ಈಕೆಯದ್ದು. 11 ವರ್ಷದ ನಥಾನಿಯಾ ಸದ್ಯ ಆಂಧ್ರಪ್ರದೇಶದ ರಿಶಿ ವ್ಯಾಲಿ ಶಾಲೆಯಲ್ಲಿ ಏಳನೇ ತರಗತಿಯಲ್ಲಿ ಓದುತ್ತಿದ್ದಾಳೆ. ಲೀಗ್‌ ಹಂತದ ಬ್ರೆಜಿಲ್‌–ಕೋಸ್ಟರಿಕಾ ಪಂದ್ಯದಲ್ಲಿ ಆಕೆ ಚೆಂಡನ್ನು ಅಧಿಕೃತವಾಗಿ ಅಂಪೈರ್‌ಗಳಿಗೆ ಹಸ್ತಾಂತರಿಸಿದ್ದಳು.

ತನ್ನ ಮೂರನೇ ವಯಸ್ಸಿನಿಂದಲೇ ಫುಟ್‌ಬಾಲ್‌ ಆಡುತ್ತಿರುವ ನಥಾನಿಯಾಗೆ ಅಥ್ಲೆಟಿಕ್ಸ್‌ನಲ್ಲೂ ಆಸಕ್ತಿ.

ಪ್ರಜಾವಾಣಿಯೊಂದಿಗೆ ಮಾತನಾಡಿದ ನಥಾನಿಯಾ, ’ಮಹಿಳೆಯರಿಗೆ ತರಬೇತಿ ನೀಡುವ ವಿದೇಶಗಳ ಪ್ರತಿಷ್ಠಿತ ಫುಟ್‌ಬಾಲ್‌ ಕ್ಲಬ್‌ಗಳನ್ನು ಸೇರುವ ಗುರಿ ಇದೆ. ಬಾಲಕರನ್ನು ಹಿಮ್ಮೆಟ್ಟಿ ವಿಶ್ವಕಪ್‌ ಟೂರ್ನಿಯಲ್ಲಿ ಬಾಲ್‌ ಕ್ಯಾರಿಯರ್‌ ಆಗಿದ್ದು ಹೆಮ್ಮೆಯ ವಿಷಯ. ಮುಂದಿನ ದಿನಗಳಲ್ಲಿ ಗಂಭೀರವಾಗಿ ಕಾಲ್ಚೆಂಡಿನ ಅಭ್ಯಾಸದಲ್ಲಿ ತೊಡಗಬೇಕಿದೆ’ ಎಂದು ಹೇಳಿದಳು.

ಒಎಂಬಿಸಿ ಎಂದರೆ...
ಟೂರ್ನಿಯ ಪ್ರತಿ ಪಂದ್ಯದ ಮುನ್ನ ಅಧಿಕೃತವಾಗಿ ಅಂಪೈರ್‌ಗಳ ಕೈಗೆ ಚೆಂಡು ಹಸ್ತಾಂತರಿಸುವವರನ್ನು ಅಫೀಶಿಯಲ್‌ ಮ್ಯಾಚ್‌ ಬಾಲ್‌ ಕ್ಯಾರಿಯರ್‌ (ಒಎಂಬಿಸಿ) ಎಂದು ಕರೆಯುತ್ತಾರೆ. ಇದಕ್ಕಾಗಿ ಫಿಫಾದೊಂದಿಗೆ ಕಿಯಾ ಮೋಟರ್ಸ್‌ ಸಂಸ್ಥೆಯು ಜಂಟಿಯಾಗಿ ಆಯ್ಕೆ ಸ್ಪರ್ಧೆಯನ್ನು ಹಮ್ಮಿಕೊಂಡಿತ್ತು. ವಿಶ್ವದೆಲ್ಲೆಡೆಯಿಂದ 10ರಿಂದ 14 ವರ್ಷದ 1600 ಮಕ್ಕಳು ಇದರಲ್ಲಿ ಆಯ್ಕೆಯಾಗಿದ್ದರು. ಅದರಲ್ಲಿ ಅಂತಿಮವಾಗಿ 64 ಮಕ್ಕಳನ್ನು ಉಳಿಸಿಕೊಳ್ಳಲಾಗಿತ್ತು. ಭಾರತದಲ್ಲಿ ಸುನಿಲ್‌ ಚೆಟ್ರಿ ಅವರು ಈ ಸ್ಪರ್ಧೆಯ ತೀರ್ಪುಗಾರರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT