ಸ್ಯಾಫ್‌ ಮಹಿಳಾ ಫುಟ್‌ಬಾಲ್‌ ಚಾಂಪಿಯನ್‌ಷಿಪ್‌: ಭಾರತ–ನೇಪಾಳ ಫೈನಲ್‌ ಫೈಟ್‌

ಸೋಮವಾರ, ಏಪ್ರಿಲ್ 22, 2019
29 °C
ಬಾಂಗ್ಲಾ, ಲಂಕಾ ತಂಡಗಳಿಗೆ ನಿರಾಸೆ

ಸ್ಯಾಫ್‌ ಮಹಿಳಾ ಫುಟ್‌ಬಾಲ್‌ ಚಾಂಪಿಯನ್‌ಷಿಪ್‌: ಭಾರತ–ನೇಪಾಳ ಫೈನಲ್‌ ಫೈಟ್‌

Published:
Updated:
Prajavani

ಬಿರಾತ್ ನಗರ, ನೇಪಾಳ: ಹಾಲಿ ಚಾಂಪಿಯನ್‌ ಭಾರತ ತಂಡ ಮಹಿಳೆಯರ ಸ್ಯಾಫ್ ಫುಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಸತತ ಐದನೇ ಬಾರಿ ಫೈನಲ್ ಪ್ರವೇಶಿಸಿದೆ.

ಇಲ್ಲಿನ ಸಾಹಿದ್ ರಂಗಶಾಲಾ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡ ಬಾಂಗ್ಲಾದೇಶವನ್ನು 4–0 ಗೋಲು ಗಳಿಂದ ಮಣಿಸಿತು.

ಶುಕ್ರವಾರ ನಡೆಯಲಿರುವ ಫೈನಲ್‌ ನಲ್ಲಿ ಅದಿತಿ ಚೌಹಾಣ್ ಬಳಗ ಆತಿಥೇಯ ನೇಪಾಳವನ್ನು ಎದುರಿಸಲಿದೆ. ಬುಧ ವಾರ ನಡೆದ ಮೊದಲ ಸೆಮಿಫೈನಲ್‌ನಲ್ಲಿ ನೇಪಾಳ 4–0ಯಿಂದ ಶ್ರೀಲಂಕಾವನ್ನು ಸೋಲಿಸಿತು.

ಚಾಂಪಿಯನ್‌ಷಿಪ್‌ನ ಎಲ್ಲ ಆವೃತ್ತಿ ಯಲ್ಲೂ ಪ್ರಶಸ್ತಿ ಗೆದ್ದಿರುವ ಭಾರತ ಈ ಬಾರಿಯೂ ಗೆಲ್ಲುವ ನೆಚ್ಚಿನ ತಂಡ ಎಂದೆನಿಸಿಕೊಂಡಿದೆ. ಗುಂಪು ಹಂತದ ಪಂದ್ಯಗಳಲ್ಲಿ ಎದುರಾಳಿಗಳನ್ನು ಏಕಪಕ್ಷೀಯವಾಗಿ ಮಣಿಸಿದ್ದ ತಂಡ ನಾಲ್ಕರ ಘಟ್ಟದಲ್ಲೂ ಗೋಲು ಬಿಟ್ಟುಕೊಡದೆ ಗೆದ್ದಿತು.

ದಾಲಿಮಾ ಚಿಬ್ಬೇರ್ 18ನೇ ನಿಮಿ ಷದಲ್ಲಿ ತಂಡದ ಪರ ಮೊದಲ ಗೋಲು ದಾಖಲಿಸಿದರು.

ನಾಲ್ಕು ನಿಮಿಷಗಳ ಅಂತರದಲ್ಲಿ ಇಂದುಮತಿ ಕದಿರೇಶನ್‌ ಗಳಿಸಿದ ಗೋಲಿನೊಂದಿಗೆ ಭಾರತ ಮುನ್ನಡೆಯನ್ನು ಹೆಚ್ಚಿಸಿತು. 37ನೇ ನಿಮಿಷದಲ್ಲಿ ಇಂದುಮತಿ ಮತ್ತೊಂದು ಬಾರಿ ಚೆಂಡನ್ನು ಗುರಿ ಸೇರಿಸಿದರು.

ಮೂರು ಗೋಲುಗಳ ಮುನ್ನಡೆ ಯೊಂದಿಗೆ ದ್ವಿತೀಯಾರ್ಧದಲ್ಲಿ ಕಣಕ್ಕೆ ಇಳಿದ ಭಾರತಕ್ಕೆ ಎದುರಾಳಿಗಳು ಪ್ರಬಲ ಪ್ರತಿರೋಧ ಒಡ್ಡಿದರು. ಆದರೂ ಭಾರತ ಪಟ್ಟು ಬಿಡಲಿಲ್ಲ. ‘ಇಂಜುರಿ ಟೈಮ್‌’ನಲ್ಲಿ ಮನೀಶಾ (90+3) ಚೆಂಡನ್ನು ಗುರಿ ಸೇರಿಸಿ ಜಯದ ಅಂತರವನ್ನು ಹೆಚ್ಚಿಸಿದರು.

ಭಾರಿ ಆಕ್ರಮಣಕ್ಕೆ ಮುಂದಾದ ಬಾಂಗ್ಲಾ: ಪಂದ್ಯದ ಆರಂಭದಲ್ಲಿ ಬಾಂಗ್ಲಾದೇಶ ಪ್ರಬಲ ಆಕ್ರಮಣ ನಡೆಸಿತು. ಹೀಗಾಗಿ ಭಾರತದ ಡಿಫೆಂಡರ್‌ಗಳು ಕೊಂಚ ಆತಂಕಕ್ಕೆ ಒಳಗಾದರು. ಆದರೆ ಆಶಾಲತಾ ಮತ್ತು ಸ್ವೀಟಿ ದೇವಿ ಅವರ ಕೆಚ್ಚೆದೆಯ ಆಟದಿಂದಾಗಿ ಬಾಂಗ್ಲಾದೇಶದ ಆಸೆ ಈಡೇರಲಿಲ್ಲ.

ನಿಧಾನವಾಗಿ ಹಿಡಿತ ಸಾಧಿಸಿದ ಭಾರತಕ್ಕೆ 18ನೇ ನಿಮಿಷದಲ್ಲಿ ಸಂಜು ಯಾದವ್‌ ಗೋಲು ಗಳಿಸುವ ಅವಕಾಶ ಗಿಟ್ಟಿಸಿಕೊಟ್ಟರು.

ಎಡಭಾಗದಲ್ಲಿ ಚೆಂಡನ್ನು ನಿಯಂತ್ರಿಸಿದ ಅವರು ನಿಖರ ವಾಗಿ ದಾಲಿಮಾ ಅವರತ್ತ ತಳ್ಳಿದರು. ದಾಲಿಮಾ ಕ್ಷಣಮಾತ್ರವೂ ತಡಮಾಡದೆ ಗುರಿ ಮುಟ್ಟಿಸಿದರು.

ಮೊದಲ ಗೋಲಿನ ನಂತರ ಪಂದ್ಯ ಇನ್ನಷ್ಟು ರೋಚಕವಾಯಿತು. ಆಕ್ರಮಣಕಾರಿ ಆಟಕ್ಕೆ ಮುಂದಾದ ಕಾರಣ ಎರಡೂ ತಂಡಗಳಿಗೆ ಗೋಲು ಗಳಿಸಲು ಸಾಕಷ್ಟು ಅವಕಾಶಗಳು ಒದಗಿದವು. ಬಾಂಗ್ಲಾದೇಶಕ್ಕೆ ಲಭಿಸಿದ ಅವಕಾಶವನ್ನು ಸೆಂಟರ್ ಬ್ಯಾಕ್ ಆಟಗಾರ್ತಿ ಮೊಸಮ್ಮತ್‌ ಖಾತುನ್‌ ಕೈಚೆಲ್ಲಿದರೆ ಭಾರತದ ಸಂಜು ಯಾದವ್ ಒದ್ದ ಚೆಂಡು ಹೊರಗೆ ಸಾಗಿತು.

ಭಾರತದ ಎರಡನೇ ಗೋಲು ಕೂಡ ಸಂಜು ಅವರ ಶ್ರಮದ ಫಲವಾಗಿ ಮೂಡಿ ಬಂತು. ಎದುರಾಳಿ ಆವರಣದಲ್ಲಿ ಸಂಜು ಚೆಂಡನ್ನು ಹಿಂಗಾಲಿನಿಂದ ತಳ್ಳಿ ಇಂದುಮತಿ ಅವರತ್ತ ಪಾಸ್ ಮಾಡಿದರು. ಇಂದುಮತಿ ಸುಲಭವಾಗಿ ಗೋಲು ಗಳಿಸಿದರು.

ಗೋಲು ಗಳಿಸಲು ಬಾಂಗ್ಲಾದೇಶ ತಂಡ ಸತತ ಪ್ರಯತ್ನ ನಡೆಸಿತು. ಆದರೆ ಆ ಪ್ರಯತ್ನಗಳನ್ನು ನಾಯಕಿ ಮತ್ತು ಗೋಲ್‌ಕೀಪರ್‌ ಅದಿತಿ ಚೌಹಾಣ್‌ ವಿಫಲಗೊಳಿಸಿದರು. 37ನೇ ನಿಮಿಷದಲ್ಲಿ ಸಂಘಟಿತ ಶ್ರಮಕ್ಕೆ ಗೋಲು ಒಲಿಯಿತು. ಎದುರಾಳಿ ಫಾರ್ವರ್ಡರ್‌ಗಳಿಂದ ಚೆಂಡನ್ನು ಕಸಿದು ಮುನ್ನುಗ್ಗಿದ ದಾಲಿಮಾ ಅವರು ಡ್ರಿಬಲ್ ಮಾಡುತ್ತ ಸಾಗಿ ಸಂಜು ಅವರತ್ತ ತಳ್ಳಿದರು. ಅವರಿಂದ ಪಾಸ್ ಪಡೆದ ಸಂಧ್ಯಾ ಚಾಣಾಕ್ಷ ಆಟದ ಮೂಲಕ ಇಂದುಮತಿ ಅವರತ್ತ ಸಾಗಿಸಿದರು. ಗೋಲ್‌ಕೀಪರ್‌ಗೆ ಚಳ್ಳೆಹಣ್ಣು ತಿನ್ನಿಸಿದ ಇಂದುಮತಿ ತಂಡದ ಮುನ್ನಡೆಯನ್ನು 3–0ಗೆ ಹೆಚ್ಚಿಸಿದರು.

ವಿರಾಮದ ನಂತರ ಬಾಂಗ್ಲಾದೇಶದ ಆಕ್ರಮಣಕ್ಕೆ ಸಂಜು ಮತ್ತು ಡಂಗ್ಮಿ ಗ್ರೇಸ್‌ ತಕ್ಕ ಉತ್ತರ ನೀಡಿದರು. ಪಂದ್ಯ ಮುಕ್ತಾಯದತ್ತ ಸಾಗುತ್ತಿದ್ದಾಗ ಕೋಚ್‌ ಮೇಮೋಲ್ ರಾಕಿ ಅವರು ರತನ್‌ಬಾಲಾ ದೇವಿ ಮತ್ತು ಗ್ರೇಸ್ ಬದಲಿಗೆ ಅಂಜು ತಮಂಗ್‌ ಮತ್ತು ಮನೀಷಾ ಅವರನ್ನು ಅಂಗಣಕ್ಕೆ ಕಳುಹಿಸಿದರು. ಲಭಿಸಿದ ಅವಕಾಶದಲ್ಲಿ ಇವರಿಬ್ಬರೂ ಉತ್ತಮ ಸಾಮರ್ಥ್ಯ ತೋರಿದರು. ಮನೀಷಾ ಚೆಂಡನ್ನು ಗುರಿ ಸೇರಿಸಿ ಮಿಂಚಿದರು. ಇದು ಟೂರ್ನಿಯಲ್ಲಿ ಅವರು ಗಳಿಸಿದ ಮೊದಲ ಗೋಲು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !