ನವದೆಹಲಿ: ಗೋವಾದಲ್ಲಿ ಇದೇ 20ರಿಂದ ನಡೆಯುವ ಭಾರತ ಮಹಿಳಾ ಫುಟ್‌ಬಾಲ್ ರಾಷ್ಟ್ರೀಯ ಶಿಬಿರಕ್ಕೆ 29 ಆಟಗಾರ್ತಿಯರನ್ನು ಅಖಿಲ ಭಾರತ ಫುಟ್‌ಬಾಲ್ ಫೆಡರೇಷನ್ ಆಯ್ಕೆ ಮಾಡಿದೆ. ತಂಡದಲ್ಲಿ ಅನುಭವಿಗಳೊಂದಿಗೆ ಹೊಸ ಮುಖಗಳಿಗೂ ಸ್ಥಾನ ಕಲ್ಪಿಸಲಾಗಿದೆ.
ನೇಪಾಳದ ಕಠ್ಮಂಡುವಿನಲ್ಲಿ ಅ.17ರಿಂದ 30 ರವರೆಗೆ ನಡೆಯಲಿರುವ ಸ್ಯಾಫ್ ಮಹಿಳಾ ಚಾಂಪಿಯನ್‌ಷಿಪ್ ಫುಟ್‌ಬಾಲ್ ಟೂರ್ನಿಗೆ ಆಟಗಾರ್ತಿಯರನ್ನು ಗುರುತಿಸುವ ಭಾಗವಾಗಿ ಶಿಬಿರ ಆಯೋಜಿಸಲಾಗಿದೆ. ಮಹಿಳಾ ಫುಟ್‌ಬಾಲ್ ತಂಡದ ನೂತನ ಮುಖ್ಯ ಕೋಚ್ ಸಂತೋಷ್ ಕಶ್ಯಪ್ ಅವರಿಗೆ ಈ ಟೂರ್ನಿ ಮೊದಲ ಸವಾಲಾಗಿದೆ.
‘ಹಿಂದಿನ ಸ್ಯಾಫ್ ಚಾಂಪಿಯನ್‌ಷಿಪ್‌ಗಳಲ್ಲಿ ಭಾರತದ ಪ್ರದರ್ಶನ ನಿರೀಕ್ಷಿತ ಮಟ್ಟದಲ್ಲಿ ಇರಲಿಲ್ಲ ಎಂಬುದರ ಅರಿವಿದೆ. ಆದರೆ, ಈ ಬಾರಿ ಸರಿಯಾದ ತಂತ್ರಗಾರಿಕೆ, ಹೊಂದಾಣಿಕೆಯಿಂದ ಪ್ರಶಸ್ತಿ ಗೆಲ್ಲಲು ಪ್ರಯತ್ನಿಸುತ್ತೇವೆ’ ಎಂದು ಕಶ್ಯಪ್ ಪ್ರತಿಕ್ರಿಯಿಸಿದ್ದಾರೆ.