ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಯುರೊ ಕಪ್‌: ಪೋರ್ಚುಗಲ್ ನೆರವಿಗೆ ಕೊನ್ಸಿಕಾವೊ

ಯುರೊ ಕಪ್‌: ಕ್ರೊವೇಷಿಯಾ ಜೊತೆ ಡ್ರಾ ಮಾಡಿಕೊಂಡ ಅಲ್ಬೇನಿಯಾ
Published 19 ಜೂನ್ 2024, 16:24 IST
Last Updated 19 ಜೂನ್ 2024, 16:24 IST
ಅಕ್ಷರ ಗಾತ್ರ

ಲೀಪ್‌ಝಿಗ್‌ (ಜರ್ಮನಿ),: ಸಬ್‌ಸ್ಟಿಟ್ಯೂಟ್‌ ಆಟಗಾರ ಫ್ರಾನ್ಸಿಸ್ಕೊ ಕೊನ್ಸಿಕಾವೊ ಗಳಿಸಿದ  ಕೊನೆಗಳಿಗೆಯ ಗೋಲಿನಿಂದ ಪೋರ್ಚುಗಲ್ ತಂಡ ಮಂಗಳವಾರ ಯುರೊ ಕಪ್ ‘ಎಫ್‌’ ಗುಂಪಿನ ಮೊದಲ ಪಂದ್ಯದಲ್ಲಿ ಜಿಗುಟು ಆಟವಾಡಿದ ಝೆಕ್ ರಿಪಬ್ಲಿಕ್ ತಂಡವನ್ನು 2–1 ಗೋಲುಗಳಿಂದ ಸೋಲಿಸಿತು.

ಪಂದ್ಯ ಮುಗಿಯಲು ಕೆಲವು ನಿಮಿಷಗಳಿರುವಾಗ ಆಟಕ್ಕಿಳಿದಿದ್ದ 21 ವರ್ಷ ವಯಸ್ಸಿನ ಕೊನ್ಸಿಕಾವೊ, ‘ಇಂಜುರಿ ಅವಧಿ’ಯಲ್ಲಿ (90+2) ಈ ಗೋಲು ಗಳಿಸಿದರು. ಝೆಕ್‌ ರಕ್ಷಣೆ ಆಟಗಾರರು ಅಡ್ಡಪಾಸ್‌ನಲ್ಲಿ (ಕ್ರಾಸ್‌ನಲ್ಲಿ) ಚೆಂಡನ್ನು ಸರಿಯಾಗಿ ತಡೆಯದ ಕಾರಣ ಅದರ ಲಾಭ ಪಡೆದ ಅವರು ಸಮೀಪದಿಂದ ಚೆಂಡನ್ನು ಗುರಿತಲುಪಿಸಿ  ಪೋರ್ಚುಗಲ್ ನಿಟ್ಟುಸಿರು ಬಿಡುವಂತೆ ಮಾಡಿದರು.

ಕ್ರಿಸ್ಟಿಯಾನೊ ರೊನಾಲ್ಡೊ ಅವರ ತಂಡ ಆಟದಲ್ಲಿ ಮಿಂಚಲಿಲ್ಲ. ಆದರೆ ವಿಶ್ವಾಸ ಕಳೆದುಕೊಳ್ಳಲಿಲ್ಲ. ರಾಬಿನ್ ಹ್ರೆನಾಕ್ ಗಳಿಸಿದ ಉಡುಗೋರೆ ಗೋಲಿನಿಂದ ಪೋರ್ಚುಗಲ್‌ 1–1ರಲ್ಲಿ ಸ್ಕೋರ್ ಸಮಮಾಡಿಕೊಳ್ಳಲು ಯಶಸ್ವಿಯಾಗಿತ್ತು.

ದಾಖಲೆ ಆರನೇ ಯುರೊ ಕಪ್ ಆಡುತ್ತಿರುವ 39 ವರ್ಷ ವಯಸ್ಸಿನ ರೊನಾಲ್ಡೊ ಅವರ ಮೂರು ಗೋಲು ಯತ್ನಗಳನ್ನು ಝೆಕ್‌ ಗೋಲ್‌ಕೀಪರ್‌ ಜಿಂಡ್ರಿಚ್‌ ಸ್ಟಾನೆಕ್ ಯಶಸ್ವಿಯಾಗಿ ತಡೆದರು. ಮತ್ತೊಮ್ಮೆ ಅವರ ಯತ್ನ ಗೋಲ್‌ಪೋಸ್ಟ್‌ಗೆ ಬಡಿಯಿತು. ಆ ವೇಳೆಗೆ ಸ್ಕೋರ್‌ 1–1 ಸಮನಾಗಿತ್ತು. ಝೆಕ್‌ ರಕ್ಷಣೆ ಆಟಗಾರರು ಎದುರಾಳಿ ಫಾರ್ವರ್ಡ್‌ಗಳಿಗೆ ಸರ್ಪಗಾವಲು ಹಾಕಿದರು.

‍‍ಪೋರ್ಚುಗಲ್‌ ಕೋಚ್‌ ರಾಬರ್ಟೊ ಮಾರ್ಟಿನೆಜ್‌ ಅವರು 41 ವರ್ಷದ ಡಿಫೆಂಡರ್‌ ಪೆಪೆ ಅವರನ್ನು ಆಡಲಿಳಿಸಿದರು. ಅವರು ಯುರೊ ಕಪ್ ಆಡಿದ ಅತಿ ಹಿರಿಯ ಆಟಗಾರ ಎಂಬ ದಾಖಲೆಗೆ ಪಾತ್ರರಾದರು. ಹಳೆದ ದಾಖಲೆ ಹಂಗೆರಿಯ ಗೋಲ್‌ಕೀಪರ್‌ ಗೆಬರ್ ಕಿರಾಲಿ (40 ವರ್ಷ) ಹೆಸರಿನಲ್ಲಿತ್ತು.

ಮಿಡ್‌ಪೀಲ್ಡರ್‌ ಲುಕಾಸ್‌ ಪ್ರೊವೊಡ್‌ ಪಂದ್ಯ ಆರಂಭವಾಗಿ ಸುಮಾರು ಒಂದು ಗಂಟೆಯ ನಂತರ ಝೆಕ್ ತಂಡಕ್ಕೆ ಮುನ್ನಡೆ ಒದಗಿಸಿದ್ದರು. 62ನೇ ನಿಮಿಷ ಪೋರ್ಚುಗಲ್‌ ರಕ್ಷಣಾ ಆಟಗಾರರು ಚೆಂಡನ್ನು ಸುರಕ್ಷಿತವಾಗಿ ಸಾಗಹಾಕಲು ವಿಫಲವಾದ  ಕಾರಣ ಪ್ರೊವೊಡ್‌ ಅದರ ಲಾಭವನ್ನು ಎತ್ತಿದರು.

ಆತಂಕದಲ್ಲಿ ಕ್ರೊವೇಷಿಯಾ:

ಹ್ಯಾಂಬರ್ಗ್‌ನಲ್ಲಿ ಬುಧವಾರ ನಡೆದ ‘ಬಿ’ ಗುಂಪಿನ ಪಂದ್ಯದಲ್ಲಿ ಅಲ್ಬೇನಿಯಾ 2–2 ಗೋಲುಗಳಿಂದ ಪ್ರಬಲ ಕ್ರೊವೇಷಿಯಾ ಜೊತೆ ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾಯಿತು.

ಈ ಡ್ರಾದಿಂದಾಗಿ ಕ್ರೊವೇಷಿಯಾ ಗುಂಪು ಹಂತದಲ್ಲಿ ನಿರ್ಗಮಿಸುವ ಅಪಾಯದಲ್ಲಿದೆ. ಗುಂಪಿನ ಮೊದಲ ಪಂದ್ಯದಲ್ಲಿ ಈ ತಂಡ 0–3 ಗೋಲುಗಳಿಂದ ಸ್ಪೇನ್‌ಗೆ ಸೋತಿತ್ತು.

ಖಾಝಿಮ್ ಲಾಸಿ ಅಲ್ಬೇನಿಯಾಕ್ಕೆ 11ನೇ ನಿಮಿಷ ಮುನ್ನಡೆ ಒದಗಿಸಿದರು. ಆದರೆ ಪಂದ್ಯ ಮುಗಿಯಲು 16 ನಿಮಿಷಗಳಿರುವಾಗ ಆಂಡ್ರೆಜ್ ಕ್ರಾಮರಿಕ್ ಸ್ಕೋರ್ ಸಮ ಮಾಡಿದರು. ಕ್ಲಾಸ್‌ ಜಾಸುಲ ಅವರ ಉಡುಗೋರೆ ಗೋಲಿನಿಂದ ಕ್ರೋಟರು 2–1 ಮುನ್ನಡೆ ಸಾಧಿಸಿದರು. ಪಟ್ಟುಬಿಡದ ಅಲ್ಬೇನಿಯಾಕ್ಕೆ ಜಾಸುಲಾ ಕೊನೆಗೂ ಸಂತಸ ಮೂಡಿಸಿದರು.  ಇಂಜುರಿ ಅವಧಿಯಲ್ಲಿ (90+5) ಈ ಮಿಡ್‌ಫೀಲ್ಡರ್‌ ಗೋಲುಗಳಿಸಿ ತಂಡದ ಸೋಲು ತಪ್ಪಿಸಿ ಹೀರೊ ಆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT