ಮುಂಬೈಗೆ ಆಘಾತ ನೀಡಿದ ಗೋವಾ

ಬುಧವಾರ, ಮಾರ್ಚ್ 20, 2019
25 °C
ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್: ಮೊರ್ತಾಡ ಎರಡು ಗೋಲು

ಮುಂಬೈಗೆ ಆಘಾತ ನೀಡಿದ ಗೋವಾ

Published:
Updated:
Prajavani

ಮುಂಬೈ: ಇಲ್ಲಿನ ಮುಂಬೈ ಫುಟ್‌ಬಾಲ್‌ ಅರೆನಾದಲ್ಲಿ ಶನಿವಾರ ರಾತ್ರಿ ಸೇರಿದ್ದ ಕ್ರೀಡಾಪ್ರಿಯರನ್ನು ಸೆನೆಗಲ್‌ನ ಮೊರ್ತಾಡ ಫಾಲ್‌ ರೋಮಾಂಚನಗೊಳಿಸಿದರು.

ಅವರು ಗಳಿಸಿದ ಎರಡು ಗೋಲುಗಳ ಬಲದಿಂದ ಎಫ್‌ಸಿ ಗೊವಾ ತಂಡ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯ ಸೆಮಿಫೈನಲ್‌ನ ಮೊದಲ ಲೆಗ್‌ನ ಎರಡನೇ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿತು.

ಮುಂಬೈ ಸಿಟಿ ಎಫ್‌ಸಿ ಎದುರಿನ ಪಂದ್ಯದಲ್ಲಿ ಗೋವಾ 5–1 ಗೋಲುಗಳಿಂದ ಗೆದ್ದು ಫೈನಲ್‌ ಪಂದ್ಯದತ್ತ ದಾಪುಗಾಲು ಇರಿಸಿತು.

ಪಂದ್ಯದ 20ನೇ ನಿಮಿಷದಲ್ಲಿ ರಾಫೆಲ್ ಬಾಸ್ಟೊಸ್‌ ಗಳಿಸಿದ ಗೋಲಿನ ಮೂಲಕ ಮುಂಬೈ ಮುನ್ನಡೆ ಗಳಿಸಿತ್ತು. ಆದರೆ ನಂತರ ಗೋವಾ ಆಟಗಾರರು ಆಧಿಪತ್ಯ ಸ್ಥಾಪಿಸಿದರು. 31ನೇ ನಿಮಿಷದಲ್ಲಿ ಜಾಕಿಚಾಂದ್ ಸಿಂಗ್ ಸಮಬಲದ ಗೋಲು ಗಳಿಸಿಕೊಟ್ಟರು.

ಮೊರ್ತಾಡ ಫಾಲ್‌ 32ನೇ ನಿಮಿಷದಲ್ಲಿ ತಂಡಕ್ಕೆ ಮುನ್ನಡೆ ತಂದುಕೊಟ್ಟರು. 51ನೇ ನಿಮಿಷದಲ್ಲಿ ಫೆರಾನ್ ಕೊರೊಮಿನಾಸ್ ಗೋವಾದ ಮುನ್ನಡೆಯನ್ನು ಹೆಚ್ಚಿಸಿದರು. ಮೊರ್ತಾಡ ಫಾಲ್‌ 58ನೇ ನಿಮಿಷದಲ್ಲಿ ಮೊತ್ತೊಂದು ಗೋಲಿನೊಂದಿಗೆ ಮಿಂಚಿದರು. 82ನೇ ನಿಮಿಷದಲ್ಲಿ ಬ್ರೆಂಡನ್ ಫೆರ್ನಾಂಡಿಸ್‌ ಚೆಂಡನ್ನು ಗುರಿ ಮುಟ್ಟಿಸಿ ಗೆಲುವಿನ ಅಂತರವನ್ನು ಹೆಚ್ಚಿಸಿದರು.

ಲೀಗ್ ಹಂತದಲ್ಲಿ ಮುಂಬೈ ತಂಡವನ್ನು ಎರಡು ಬಾರಿ ಸೋಲಿಸಿದ್ದ ಗೋವಾ ವಿಶ್ವಾಸದಿಂದಲೇ ಶನಿವಾರ ಕಣಕ್ಕೆ ಇಳಿದಿತ್ತು. ಆದರೆ ತವರಿನ ಪ್ರೇಕ್ಷಕರ ಮುಂದೆ ಮುಂಬೈ ಆರಂಭದಲ್ಲಿ ಆಕ್ರಮಣಕಾರಿ ಆಟಕ್ಕೆ ಮೊರೆ ಹೋಯಿತು. ಏಳನೇ ನಿಮಿಷದಲ್ಲಿ ಅರ್ನಾಲ್ಡ್ ಇಸೊಕೊ ಚೆಂಡನ್ನು ಡ್ರಿಬಲ್ ಮಾಡುತ್ತ ಬಂದು ಗುರಿಯತ್ತ ಒದ್ದರು. ಆದರೆ ಗೋವಾ ಗೋಲ್ ಕೀಪರ್ ನವೀನ್ ಕುಮಾರ್ ಅದನ್ನು ತಡೆಯುವಲ್ಲಿ ಯಶಸ್ವಿಯಾದರು. ಗೋವಾ ತಂಡದವರು ಲಯ ಕಂಡುಕೊಳ್ಳುವುದರೊಂದಿಗೆ ಪಂದ್ಯ ರೋಚಕವಾಯಿತು.

2–1ರ ಮುನ್ನಡೆಯೊಂದಿಗೆ ವಿರಾಮಕ್ಕೆ ತೆರಳಿದ ಗೋವಾ ದ್ವಿತೀಯಾರ್ಧದಲ್ಲಿ ಎದುರಾಳಿ ತಂಡದ ರಕ್ಷಣಾ ಕೋಟೆಯನ್ನು ನುಚ್ಚು ನೂರು ಮಾಡಿತು. ಹೀಗಾಗಿ ನಿರಂತರ ಗೋಲು ಗಳಿಸಿ ತಂಡದ ಆಟಗಾರರು ಸಂಭ್ರಮಿಸಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !