ಚಿಯಾಂಗ್ ಮೈ, ಥಾಯ್ಲೆಂಡ್: ಕಿಂಗ್ಸ್ ಕಪ್ ಫುಟ್‌ಬಾಲ್ ಟೂರ್ನಿಯ ಇರಾಕ್ ವಿರುದ್ದದ ಪಂದ್ಯದಲ್ಲಿ ‘ಗೆಲುವನ್ನು ನಮ್ಮಿಂದ ಕಸಿದುಕೊಳ್ಳಲಾಗಿದೆ’ ಎಂದು ಭಾರತ ತಂಡದ ಕೋಚ್ ಇಗೋರ್ ಸ್ಟಿಮ್ಯಾಚ್ ಟೀಕಿಸಿದ್ದು, ರೆಫರಿಯ ತೀರ್ಪುಗಳ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ.
ಗುರುವಾರ ನಡೆದಿದ್ದ ಪಂದ್ಯದಲ್ಲಿ ಭಾರತ ತಂಡ ಪೆನಾಲ್ಟಿ ಶೂಟೌಟ್‌ನಲ್ಲಿ ಇರಾಕ್ ಕೈಯಲ್ಲಿ 4–5 ರಿಂದ ಸೋತಿತ್ತು. 79ನೇ ನಿಮಿಷದವರೆಗೆ ಭಾರತ ತಂಡ 2–1 ರಿಂದ ಮುನ್ನಡೆಯಲ್ಲಿತ್ತು. ಈ ವೇಳೆ ರೆಫರಿ ಇರಾಕ್‌ಗೆ ಪೆನಾಲ್ಟಿ ನೀಡಿದ್ದರು. ಅದನ್ನು ಸದುಪಯೋಗಪಡಿಸಿ ನಿಗದಿತ ಅವಧಿಯಲ್ಲಿ 2–2 ರಿಂದ ಸಮಬಲ ಸಾಧಿಸಿದ್ದ ಇರಾಕ್, ಆ ಬಳಿಕ ಶೂಟೌಟ್‌ನಲ್ಲಿ ಜಯಿಸಿತ್ತು.
‘ನಮ್ಮ ತಂಡ ನೀಡಿದ ಪ್ರದರ್ಶನದ ಬಗ್ಗೆ ಹೆಮ್ಮೆಯಿದೆ. ಗೆಲುವನ್ನು ನಮ್ಮಿಂದ ದೋಚಲು ಯಾರೋ ನಿರ್ಧರಿಸಿದ್ದರು. ಆದರೆ ನಮ್ಮ ತಂಡ ಗೆಲ್ಲುವುದನ್ನು ರೆಫರಿಗಳಿಗೆ (ವಿವಾದಾತ್ಮಕ ತೀರ್ಪು ನೀಡಿ) ಕೂಡಾ ತಡೆಯಲು ಸಾಧ್ಯವಿಲ್ಲದ ಒಂದು ದಿನ ಬೇಗನೇ ಬರಲಿದೆ’ ಎಂದು ಅವರು ಪಂದ್ಯದ ಬಳಿಕ ಪ್ರತಿಕ್ರಿಯಿಸಿದ್ದಾರೆ.
79ನೇ ನಿಮಿಷದಲ್ಲಿ ಸಂದೇಶ್ ಜಿಂಗನ್ ಅವರು ಇರಾಕ್ ತಂಡದ ಐಮನ್ ಗದ್ಬಾನ್ ಅವರನ್ನು ಗೋಲು ಆವರಣದಲ್ಲಿ ಫೌಲ್ ಮಾಡಿದ್ದಕ್ಕೆ ರೆಫರಿ ಎದುರಾಳಿ ತಂಡಕ್ಕೆ ಪೆನಾಲ್ಟಿ ನೀಡಿದ್ದರು. ಆದರೆ ಪೆನಾಲ್ಟಿ ಕಿಕ್ ನೀಡುವಂತಹ ಗಂಭೀರ ಫೌಲ್ ಅದಾಗಿರಲಿಲ್ಲ. ಭಾರತದ ಆಟಗಾರರು ಪ್ರತಿಭಟಿಸಿದರೂ, ರೆಫರಿ ತಮ್ಮ ನಿರ್ಧಾರದಿಂದ ಹಿಂದೆ ಸರಿಯಲಿಲ್ಲ.
ಕಂಚಿನ ಪದಕ ನಿರ್ಣಯಿಸಲು ಭಾನುವಾರ ನಡೆಯುವ ‘ಪ್ಲೇ ಆಫ್’ ಪಂದ್ಯದಲ್ಲಿ ಭಾರತ ತಂಡ, ಲೆಬನಾನ್ ವಿರುದ್ಧ ಪೈಪೋಟಿ ನಡೆಸಲಿದೆ. ಪ್ರಶಸ್ತಿಗಾಗಿ ಇರಾಕ್– ಥಾಯ್ಲೆಂಡ್ ಎದುರಾಗಲಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.