ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫುಟ್‌ಬಾಲ್‌: ಫೈನಲ್ ನಿರೀಕ್ಷೆಯಲ್ಲಿ ಭಾರತ ಮಹಿಳೆಯರ ತಂಡ

ಮಹಿಳೆಯರ ಸ್ಯಾಫ್ ಫುಟ್‌ಬಾಲ್ ಚಾಂಪಿಯನ್‌ಷಿಪ್‌: ಬಾಂಗ್ಲಾ ವಿರುದ್ಧ ಸೆಮಿಫೈನಲ್‌
Last Updated 19 ಮಾರ್ಚ್ 2019, 18:38 IST
ಅಕ್ಷರ ಗಾತ್ರ

ಬಿರಾತ್ ನಗರ, ನೇಪಾಳ: ಗೆಲುವಿನ ನಾಗಾಲೋಟದಲ್ಲಿರುವ ಭಾರತ ಮಹಿಳಾ ತಂಡದವರು ಸ್ಯಾಫ್‌ ಫುಟ್‌ಬಾಲ್ ಚಾಂಪಿಯನ್‌ಷಿಪ್‌ನ ಫೈನಲ್‌ಗೇರುವ ಕನಸಿನೊಂದಿಗೆ ಬುಧವಾರ ಕಣಕ್ಕೆ ಇಳಿಯಲಿದ್ದಾರೆ.

ನಾಲ್ಕು ಬಾರಿಯ ಚಾಂಪಿಯನ್‌ ಭಾರತ ತಂಡಕ್ಕೆ ನಾಲ್ಕರ ಘಟ್ಟದಲ್ಲಿ ಬಾಂಗ್ಲಾದೇಶ ಎದುರಾಳಿಯಾಗಿದ್ದು ಭಾರತ, ಗೆಲ್ಲುವ ನೆಚ್ಚಿನ ತಂಡ ಎನಿಸಿದೆ. ಮತ್ತೊಂದು ಸೆಮಿಫೈನಲ್‌ನಲ್ಲಿ ನೇಪಾಳ ಮತ್ತು ಶ್ರೀಲಂಕಾ ತಂಡಗಳು ಸೆಣಸಲಿವೆ.

2010ರಲ್ಲಿ ಟೂರ್ನಿ ಆರಂಭಗೊಂಡಿತ್ತು. ಅಂದಿನಿಂದ ಇಲ್ಲಿಯ ವರೆಗೆ ಎಲ್ಲ ಆವೃತ್ತಿಯ ಪ್ರಶಸ್ತಿಗಳು ಭಾರತದ ಪಾಲಾಗಿವೆ. ಟೂರ್ನಿಯಲ್ಲಿ ಈ ವರೆಗೆ ಭಾರತ ಯಾವ ಪಂದ್ಯವನ್ನೂ ಸೋತಿಲ್ಲ. 2016ರ ಫೈನಲ್‌ನಲ್ಲಿ ಬಾಂಗ್ಲಾದೇಶವನ್ನು 3–1ರಿಂದ ಮಣಿಸಿ ಪ್ರಶಸ್ತಿ ಗೆದ್ದಿತ್ತು.

ಮೇಮೋಲ್ ರಾಕಿ ಅವರ ಗರಡಿಯಲ್ಲಿ ಪಳಗಿರುವ ಭಾರತ ತಂಡ ಈ ಬಾರಿ ಗುಂಪು ಹಂತದಲ್ಲಿ ಮಾಲ್ಡಿವ್ಸ್‌ ಎದುರು 6–0ಯಿಂದ ಮತ್ತು ಶ್ರೀಲಂಕಾ ವಿರುದ್ಧ 5–0ಯಿಂದ ಗೆದ್ದಿತ್ತು. ಕಳೆದ ವರ್ಷದ ಡಿಸೆಂಬರ್‌ ತಿಂಗಳಿನಿಂದ ತಂಡ ನಿರಂತರವಾಗಿ ಪಂದ್ಯಗಳನ್ನು ಆಡುತ್ತಿದೆ. ಹಾಂಕಾಂಗ್, ಇಂಡೊನೇಷ್ಯಾ ಮತ್ತು ಟರ್ಕಿ ವಿರುದ್ಧ ಸೌಹಾರ್ದ ಪಂದ್ಯಗಳನ್ನು ಆಡಿದ ನಂತರ ಭಾರತದಲ್ಲಿ ನಡೆದ ಗೋಲ್ಡ್ ಕಪ್‌ ಟೂರ್ನಿಯಲ್ಲಿ ಆಡಿತ್ತು.

ಸ್ಯಾಫ್ ಚಾಂಪಿಯನ್‌ಷಿಪ್‌ನ ಕೊನೆಯ ಎರಡು ಪಂದ್ಯಗಳಲ್ಲಿ ಭಾರತ ಆಕ್ರಮಣಕಾರಿ ಆಟವಾಡಿತ್ತು. ಎರಡೂ ಪಂದ್ಯಗಳಲ್ಲಿ ಮೊದಲ ಗೋಲುಗಳು 10 ನಿಮಿಷಗಳ ಒಳಗೆ ಬಂದಿದ್ದವು. ಬಾಂಗ್ಲಾದೇಶ ಎದುರಿನ ಪಂದ್ಯದಲ್ಲೂ ಇದೇ ರೀತಿಯ ಆಟವಾಡಲು ತಂಡ ಸಜ್ಜಾಗಿದೆ.

ಭಾರತ ಮತ್ತು ಬಾಂಗ್ಲಾದೇಶ ಕೊನೆಯದಾಗಿ ಕಳೆದ ವರ್ಷದ ನವೆಂಬರ್‌ನಲ್ಲಿ ಮುಖಾಮುಖಿಯಾಗಿದ್ದವು. ಮ್ಯಾನ್ಮಾರ್‌ನಲ್ಲಿ ನಡೆದ ಒಲಿಂಪಿಕ್‌ ಅರ್ಹತಾ ಸುತ್ತಿನ ಆ ಪಂದ್ಯದಲ್ಲಿ ಭಾರತ 7–1ರಿಂದ ಗೆದ್ದಿತ್ತು.

‘ಅನೇಕ ತಿಂಗಳಿಂದ ಆಟಗಾರ್ತಿಯರು ಮನೆಯಿಂದ ಹೊರಗೆ ಇದ್ದಾರೆ. ಇದು, ಅವರ ಸಾಮರ್ಥ್ಯದ ಮೇಲೆ ದುಷ್ಪರಿಣಾಮ ಬೀರಲಿಲ್ಲ. ಎಲ್ಲ ಪಂದ್ಯಗಳಲ್ಲೂ ಉತ್ತಮ ಆಟವಾಡುತ್ತಿದ್ದಾರೆ. ಇದು ಖುಷಿ ತಂದಿದೆ’ ಎಂದು ಮೇಮೋಲ್ ರಾಕಿ ಹೇಳಿದರು.

ಪಂದ್ಯ ಆರಂಭ: ಮಧ್ಯಾಹ್ನ 2.45

ಸ್ಥಳ: ಸಾಹಿದ್ ರಂಗಶಾಲಾ ಕ್ರೀಡಾಂಗಣ, ನೇಪಾಳ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT