ಬುಧವಾರ, ಮೇ 25, 2022
29 °C
ಇರಾನ್ ಎದುರಾಳಿ

ಮಹಿಳಾ ಏಷ್ಯಾಕಪ್ ಫುಟ್‌ಬಾಲ್ ಟೂರ್ನಿ: ಭಾರತಕ್ಕೆ ಶುಭಾರಂಭದ ನಿರೀಕ್ಷೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವಿ ಮುಂಬೈ: ಫಿಪಾ ವಿಶ್ವಕಪ್ ಪ್ಲೇ ಆಫ್‌ಗೆ ಸ್ಥಾನ ಗಳಿಸುವ ಗುರಿಯಿಟ್ಟುಕೊಂಡು ಭಾರತ ಮಹಿಳಾ ತಂಡವು ಎಎಫ್‌ಸಿ ಏಷ್ಯಾಕಪ್ ಫುಟ್‌ಬಾಲ್‌ ಟೂರ್ನಿಯಲ್ಲಿ ಕಣಕ್ಕಿಳಿಯಲಿದ್ದು, ಗುರುವಾರ ಮೊದಲ ಪಂದ್ಯದಲ್ಲಿ ಇರಾನ್ ಸವಾಲು ಎದುರಿಸಲಿದೆ.

1979ರ ಬಳಿಕ ಇದೇ ಮೊದಲ ಬಾರಿ ಟೂರ್ನಿಯ ಆತಿಥ್ಯ ವಹಿಸಿರುವ ಭಾರತವು, ಕ್ವಾರ್ಟರ್‌ಫೈನಲ್‌ಗೆ ಅರ್ಹತೆ ಗಳಿಸುವ ಛಲದಲ್ಲಿದೆ. 12 ತಂಡಗಳ ಈ ಟೂರ್ನಿಯಲ್ಲಿ ಭಾಗವಹಿಸಲಿವೆ.

1979 ಮತ್ತು 1983ರಲ್ಲಿ ರನ್ನರ್‌ಅಪ್ ಆಗಿದ್ದ ಭಾರತ ತಂಡವು 1981ರಲ್ಲಿ ಮೂರನೇ ಸ್ಥಾನ ಗಳಿಸಿತ್ತು.

ಡಿ. ವೈ. ಪಾಟೀಲ್ ಕ್ರೀಡಾಂಗಣದಲ್ಲಿ, ತನಗಿಂತ ಕೆಳ ರ‍್ಯಾಂಕಿನ ಇರಾನ್ ಎದುರು ಗೆದ್ದರೆ ಭಾರತ ‘ಎ’ ಗುಂಪಿನಲ್ಲಿ ಕನಿಷ್ಠ ಮೂರನೇ ಸ್ಥಾನ ಖಚಿತಪಡಿಸಲಿದೆ. ಫಿಫಾ ರ‍್ಯಾಂಕಿಂಗ್‌ನಲ್ಲಿ ಇರಾನ್‌ 70ನೇ ಸ್ಥಾನದಲ್ಲಿದ್ದರೆ, ಭಾರತದ ಕ್ರಮಾಂಕ 55. ಚೀನಾ ಮತ್ತು ಚೀನಾ ತೈಪೆ ಕೂಡ ಇದೇ ಗುಂಪಿನಲ್ಲಿವೆ.

ಕೋವಿಡ್‌ ಬಿಕ್ಕಟ್ಟಿನ ನಡುವೆಯೂ ಭಾರತ ತಂಡವು ಹೋದ ವರ್ಷ ಹಲವು ಪ್ರದರ್ಶನ ಮತ್ತು ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಆಡಿತ್ತು. ಅದರಲ್ಲೂ ವಿಶ್ವಕಪ್ ಮಾಜಿ ರನ್ನರ್-ಅಪ್ ತಂಡ ಬ್ರೆಜಿಲ್ ಎದುರು ಆಡಿದ್ದು ಪ್ರಮುಖವಾಗಿದೆ.

ಶಸ್ತ್ರಚಿಕಿತ್ಸೆಗೆ ಒಳಗಾಗಿ ಚೇತರಿಸಿಕೊಳ್ಳುತ್ತಿರುವ ಪ್ರಮುಖ ಆಟಗಾರ್ತಿ ಬಾಲಾದೇವಿ ಈ ಪಂದ್ಯದಲ್ಲಿ ಆಡುತ್ತಿಲ್ಲ. ಆಶಾಲತಾ ದೇವಿ ತಂಡದ ನಾಯಕತ್ವ ವಹಿಸಿದ್ದಾರೆ. ಇರಾನ್‌ 2005ರಲ್ಲಿ ಅಂತರರಾಷ್ಟ್ರೀಯ ಫುಟ್‌ಬಾಲ್‌ಗೆ ಪದಾರ್ಪಣೆ ಮಾಡಿದೆ. ಕಳೆದ ಆರು ತಿಂಗಳಿನಿಂದ ಅದು ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿಲ್ಲ.

ಇನ್ನೊಂದು ಪಂದ್ಯದಲ್ಲಿ ಚೀನಾ ತೈಪೆ ತಂಡವು ಚೀನಾವನ್ನು ಎದುರಿಸಲಿದೆ.

ಈ ಟೂರ್ನಿಯ ಎಲ್ಲಾ ಸೆಮಿಫೈನಲಿಸ್ಟ್‌ ತಂಡಗಳು 2023ರಲ್ಲಿ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ನಲ್ಲಿ ನಡೆಯಲಿರುವ ಫಿಫಾ ವಿಶ್ವಕಪ್‌ಗೆ ನೇರ ಅರ್ಹತೆ ಪಡೆಯುತ್ತವೆ. ಈ ಟೂರ್ನಿಯಲ್ಲಿ ಒಂದು ವೇಳೆ ಆಸ್ಟ್ರೇಲಿಯಾ ಸೆಮಿಫೈನಲ್‌ಗೆ ಪ್ರವೇಶಿಸಿದರೆ ಉಳಿದ ನಾಲ್ಕು ಕ್ವಾರ್ಟರ್‌ಫೈನಲಿಸ್ಟ್‌ಗಳಿಂದ ಇನ್ನೂ ಎರಡು ತಂಡಗಳು ವಿಶ್ವಕಪ್‌ಗೆ ನೇರ ಸ್ಥಾನ ಗಳಿಸಲಿವೆ ಮತ್ತು ಇದು ಹೆಚ್ಚು ಸಂಭವನೀಯವೂ ಆಗಿದೆ. ಅಂದರೆ ಕ್ವಾರ್ಟರ್‌ಫೈನಲ್‌ನಲ್ಲಿ ಸೋತ ತಂಡಗಳು ಸಹ ಫೆಬ್ರುವರಿ 2 ಮತ್ತು 4ರಂದು ನಡೆಯುವ ಎಎಫ್‌ಸಿ ಏಷ್ಯನ್ ಕಪ್‌ನ ಪ್ಲೇ-ಆಫ್ ಪಂದ್ಯಗಳನ್ನು ಗೆದ್ದರೆ ನೇರವಾಗಿ ವಿಶ್ವಕಪ್‌ಗೆ ಅರ್ಹತೆ ಪಡೆಯಬಹುದು. ಎರಡು ಸೋತ ಕ್ವಾರ್ಟರ್‌ಫೈನಲಿಸ್ಟ್‌ಗಳು ಇಂಟರ್‌ಕಾಂಟಿನೆಂಟಲ್ ಪ್ಲೇ-ಆಫ್‌ನಲ್ಲಿ ಭಾಗವಹಿಸಲಿವೆ.

ಭಾರತದ ಇಬ್ಬರು ಆಟಗಾರ್ತಿಯರಿಗೆ ಕೋವಿಡ್‌: ಪಂದ್ಯಕ್ಕೂ ಮೊದಲೇ ಭಾರತ ತಂಡದ ಬಯೋಬಬಲ್ ವ್ಯವಸ್ಥೆಯನ್ನು ಕೋವಿಡ್‌ ಭೇದಿಸಿದೆ. ಇಬ್ಬರು ಆಟಗಾರ್ತಿಯರಿಗೆ ಸೋಂಕು ಇರುವುದು ಖಚಿತವಾಗಿದೆ. ಹೀಗಾಗಿ ಅವರನ್ನು ಪ್ರತ್ಯೇಕವಾಸಕ್ಕೆ ಕಳುಹಿಸಲಾಗಿದೆ.

ಈ ವಿಷಯವನ್ನು ಅಖಿಲ ಭಾರತ ಫುಟ್‌ಬಾಲ್ ಫೆಡರೇಷನ್ ಟ್ವೀಟ್ ಮಾಡಿದೆ.

ಪಂದ್ಯ ಆರಂಭ: ರಾತ್ರಿ 7.30

ನೇರ ಪ್ರಸಾರ: ಯೂರೊ ಸ್ಪೋರ್ಟ್ಸ್

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು