ಶನಿವಾರ, ಫೆಬ್ರವರಿ 4, 2023
17 °C
ಇರಾನಿ ಟ್ರೋಫಿ ಕ್ರಿಕೆಟ್ ಪಂದ್ಯ: ಐದು ರನ್‌ಗಳಿಂದ ಶತಕವಂಚಿತ ಮಯಂಕ್ ಅಗರವಾಲ್‌

ಭರ್ಜರಿ ಶತಕ ಬಾರಿಸಿದ ಹನುಮವಿಹಾರಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನಾಗಪುರ: ರಣಜಿ ಚಾಂಪಿಯನ್ ವಿದರ್ಭ ತಂಡದ ಬೌಲಿಂಗ್ ಬಿರುಗಾಳಿಯ ನಡುವೆಯೂ ಮಯಂಕ್ ಅಗರವಾಲ್ ಮತ್ತು ಹನುಮವಿಹಾರಿ ಅವರ ಅಬ್ಬರದ ಬ್ಯಾಟಿಂಗ್ ರಂಗೇ ರಿಸಿತು.

ಜಮ್ತಾದ ವಿದರ್ಭ ಕ್ರಿಕೆಟ್ ಸಂಸ್ಥೆ (ವಿಸಿಎ) ಕ್ರೀಡಾಂಗಣದಲ್ಲಿ ಮಂಗಳ ವಾರ ಆರಂಭವಾದ ಇರಾನಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಪಂದ್ಯದ ಮೊದಲ ದಿನ ಮಯಂಕ್ ಅಗರವಾಲ್ (95; 134ಎಸೆತ, 10ಬೌಂಡರಿ, 3ಸಿಕ್ಸರ್) ಮತ್ತು ಹನುಮವಿಹಾರಿ (114; 211ಎ,11ಬೌಂಡರಿ, 2ಸಿಕ್ಸರ್) ಮಿಂಚಿದರು. ಇವರ ಆಟದ ಬಲದಿಂದ ಇತರೆ ಭಾರತ ತಂಡವು ದಿನದಾಟದ ಕೊನೆಗೆ 89.4 ಓವರ್‌ಗಳಲ್ಲಿ 330 ರನ್‌ ಗಳಿಸಿತು. ರಣಜಿ ಫೈನಲ್‌ನಲ್ಲಿ ಮಿಂಚಿದ್ದ ವಿದರ್ಭದ ಬೌಲರ್ ಆದಿತ್ಯ ಸರವಟೆ ಮತ್ತು ಅಕ್ಷಯ್ ವಾಖರೆ ತಲಾ ಮೂರು ವಿಕೆಟ್ ಗಳಿಸಿದರು.

ಟಾಸ್ ಗೆದ್ದ ಅಜಿಂಕ್ಯ ರಹಾನೆ ನಾಯಕತ್ವದ  ಇತರೆ ಭಾರತ ಇತರೆ ತಂಡಕ್ಕೆ ಇನಿಂಗ್ಸ್‌ನ ಒಂಬತ್ತನೇ ಓವರ್‌ನಲ್ಲಿ ಮಧ್ಯಮವೇಗಿ ರಜನೀಶ್ ಗುರುಬಾನಿ ಪೆಟ್ಟು ಕೊಟ್ಟರು. ಅನಮೋಲ್‌ಪ್ರೀತ್ ಸಿಂಗ್ (15 ರನ್) ಅವರ ವಿಕೆಟ್ ಕಬಳಿಸಿದರು. ಇನ್ನೊಂದು ಬದಿಯಲ್ಲಿದ್ದ  ಬೆಂಗಳೂರಿನ ಮಯಂಕ್  ಅವರೊಂದಿಗೆ ಜೊತೆಗೂಡಿದ ಹನುಮ ವಿಹಾರಿ ತಾಳ್ಮೆಯ ಇನಿಂಗ್ಸ್‌ ಕಟ್ಟಿದರು. ವಿಕೆಟ್ ಪತನಕ್ಕೆ ಅವಕಾಶ ನೀಡದೇ ರನ್‌ ಗಳಿಕೆಯನ್ನೂ ಉತ್ತಮ ಸ್ಥಿತಿಯಲ್ಲಿಟ್ಟರು. ಎರಡನೇ ವಿಕೆಟ್ ಜೊತೆಯಾಟದಲ್ಲಿ ಅವರು 125 ರನ್‌ ಕಲೆಹಾಕಿದರು.

ಅವಕಾಶ ಸಿಕ್ಕಾಗ ಚೆಂಡನ್ನು ಬೌಂಡರಿಗೆರೆ ದಾಟಿಸುತ್ತಿದ್ದ ಮಯಂಕ್ ಆಕರ್ಷಕ ಡ್ರೈವ್‌ಗಳ ಮೂಲಕ ಮನರಂಜಿಸಿದರು. 75 ಎಸೆತಗಳಲ್ಲಿ ಅರ್ಧಶತಕದ ಗಡಿ ತಲುಪಿದರು. ಶತಕದತ್ತ ದಾಪುಗಾಲಿಟ್ಟರು. ಆದರೆ, 40ನೇ ಓವರ್‌ನಲ್ಲಿ ಅದೃಷ್ಟ ಕೈಕೊಟ್ಟಿತು. ಠಾಕೂರ್ ಬೌಲಿಂಗ್‌ನಲ್ಲಿ ದೊಡ್ಡ ಹೊಡೆ ತಕ್ಕೆ ಕೈಹಾಕಿದ ಮಯಂಕ್, ಫೀಲ್ಡರ್‌ ಗುರುಬಾನಿಗೆ ಕ್ಯಾಚಿತ್ತರು. ಕೇವಲ ಐದು ರನ್‌ಗಳ ಅಂತರದಿಂದ ಶತಕ ವಂಚಿತರಾದರು. ಇನ್ನೊಂದೆಡೆ ಹೆಚ್ಚು ತಾಳ್ಮೆಯಿಂದ  ಆಡುತ್ತಿದ್ದ ಹನುಮವಿಹಾರಿ  75 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಅದಕ್ಕೆ ಮತ್ತೆ ಐವತ್ತು ರನ್‌ಗಳನ್ನು ಸೇರಿಸಲು 112 ಎಸೆತಗಳನ್ನು ತೆಗೆದು ಕೊಂಡರು. ತಾವೆದುರಿಸಿ 187ನೇ ಎಸೆತದಲ್ಲಿ ಶತಕ ಪೂರೈಸಿದರು.

ಆದರೆ, ನಾಯಕ ಅಜಿಂಕ್ಯ ರಹಾನೆ (19), ರಾಹುಲ್ ಚಾಹರ್ (22 ರನ್)ಮತ್ತು ಅಂಕಿತ್ ರಜಪೂತ್ (25 ರನ್) ಮಾತ್ರ ಸ್ವಲ್ಪ ಹೊತ್ತು ಬೌಲರ್‌ಗಳಿಗೆ ಪ್ರತಿರೋಧ ಒಡ್ಡಿದರು. ಆದರೆ ಉಳಿದವರು ಎರಡಂಕಿ ಮೊತ್ತ ಮುಟ್ಟಲಿಲ್ಲ. ಇದರಿಂಧಾಗಿ ತಂಡದ ರನ್‌ ಗಳಿಕೆಯ ವೇಗ ಕುಂಠಿತವಾಯಿತು.

ಆದರೆ ದಿನದಾಟದ ಕೊನೆಗೆ ಪಿಚ್‌ ಸ್ಪಿನ್‌ ಬೌಲರ್‌ಗಳಿಗೆ ಸ್ವಲ್ಪ ನೆರವು ನೀಡುತ್ತಿರುವುದು ಕಂಡುಬಂದಿತು. ಎರಡನೇ ದಿನ ಬ್ಯಾಟಿಂಗ್ ಆರಂಭಿ ಸಲಿರುವ ಆತಿಥೇಯ ತಂಡಕ್ಕೆ ಇತರೆ ಸ್ಪಿನ್ನರ್‌ಗಳಾದ ಕೃಷ್ಣಪ್ಪ ಗೌತಮ್, ಧರ್ಮೇಂದ್ರಸಿಂಹ ಜಡೇಜ ಅವರು ಕಠಿಣ ಸವಾಲೊಡ್ಡುವ ನಿರೀಕ್ಷೆ ಇದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು