ಕೊಕ್ಕೊ: ಮಿಂಚಿದ ಕೊಲ್ಹಾರದ ಕೋಲ್ಮಿಂಚುಗಳು..!

7
ವಿದ್ಯಾಭಾರತಿ ಶಾಲೆಗಳ ರಾಷ್ಟ್ರಮಟ್ಟದ ಕೊಕ್ಕೊ ಪಂದ್ಯಾವಳಿ

ಕೊಕ್ಕೊ: ಮಿಂಚಿದ ಕೊಲ್ಹಾರದ ಕೋಲ್ಮಿಂಚುಗಳು..!

Published:
Updated:
Deccan Herald

ಕೊಲ್ಹಾರ (ಬಸವನಬಾಗೇವಾಡಿ): ಕೊಲ್ಹಾರದ ಸಂಗಮೇಶ್ವರ ಹಿರಿಯ ಪ್ರಾಥಮಿಕ ಶಾಲೆಯ ಕೊಕ್ಕೊ ತಂಡ ರಾಜ್ಯದಲ್ಲೇ ಹೆಸರುವಾಸಿ. ಹಲ ಬಾರಿ ಚಾಂಪಿಯನ್‌ಷಿಪ್‌ ಪಡೆದಿದೆ. ಈ ಬಾರಿ ರಾಷ್ಟ್ರ ಮಟ್ಟದಲ್ಲೂ ಸಾಧನೆಗೈದು ಪ್ರಶಸ್ತಿಗೆ ಮುತ್ತಿಟ್ಟಿದೆ.

ಕೊಲ್ಹಾರದ ಕೀರ್ತಿ ಪತಾಕೆಯನ್ನು ದೇಶದೆಲ್ಲೆಡೆ ಹಾರಿಸಿದ ಕೊಕ್ಕೊ ತಂಡವನ್ನು ಶಾಲಾ ಆಡಳಿತ ಮಂಡಳಿ ಆತ್ಮೀಯವಾಗಿ ಸನ್ಮಾನಿಸಿ ಅಭಿನಂದಿಸಿದೆ. ರಾಜ್ಯದ ಕ್ರೀಡಾ ಪತಾಕೆಯನ್ನು ದೇಶದಲ್ಲಿ ಹಾರಿಸಿದ ಕೀರ್ತಿಗೂ ಈ ತಂಡ ಭಾಜನವಾಗಿದೆ.

ರಾಜಸ್ತಾನದ ಹಿಂಡೋನಾ ನಗರದಲ್ಲಿ ಈಚೆಗೆ ನಡೆದ ವಿದ್ಯಾಭಾರತಿ ಶಾಲೆಗಳ ರಾಷ್ಟ್ರಮಟ್ಟದ ಕೊಕ್ಕೊ ಪಂದ್ಯಾವಳಿಯಲ್ಲಿ ಮಹಾರಾಷ್ಟ್ರ ತಂಡವನ್ನು ನಾಲ್ಕು ಅಂಕಗಳ ಅಂತರದಿಂದ ಸೋಲಿಸಿ, ವಿಜಯ ಪತಾಕೆ ಹಾರಿಸುವ ಜತೆಗೆ ಕೇಂದ್ರ ಸರ್ಕಾರದ ಎಸ್.ಜಿ.ಎಫ್.ಐ ಆಯೋಜಿಸುವ ಕ್ರೀಡಾಕೂಟದಲ್ಲಿ ಭಾಗವಹಿಸುವ ಅರ್ಹತೆ ಪಡೆದಿದೆ.

ಸಂಗಮೇಶ್ವರ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಮಲ್ಲಿಕಾರ್ಜುನ ಕುಬಕಡ್ಡಿ ಮಾರ್ಗದರ್ಶದಲ್ಲಿ ಕಠಿಣ ತಾಲೀಮು ನಡೆಸಿದ ಕ್ರೀಡಾಪಟುಗಳು, ಹೈದರಾಬಾದ್‌ನಲ್ಲಿ ನಡೆದ ದಕ್ಷಿಣ ಮಧ್ಯ ಕ್ಷೇತ್ರದ ರಾಜ್ಯಗಳ ಕ್ರೀಡಾಕೂಟದಲ್ಲಿ ಜಯ ಸಾಧಿಸುವ ಮೂಲಕ, ರಾಷ್ಟ್ರಮಟ್ಟದಲ್ಲಿ ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕ ರಾಜ್ಯಗಳನ್ನು ಪ್ರತಿನಿಧಿಸಿದ್ದ ಕೀರ್ತಿ ಈ ವಿದ್ಯಾರ್ಥಿನಿಯರದ್ದು.

ರಾಷ್ಟ್ರಮಟ್ಟದ ಪಂದ್ಯಾವಳಿಯಲ್ಲಿ ಕ್ಷೇತ್ರವಾರು 10 ತಂಡಗಳು ಭಾಗಿಯಾಗಿದ್ದವು. ಲೀಗ್ ಹಂತದ ಪಂದ್ಯಗಳಲ್ಲಿ ಒಡಿಶಾ, ತಮಿಳುನಾಡು, ರಾಜಸ್ತಾನ, ಪಂಜಾಬ್‌ ತಂಡಗಳ ವಿರುದ್ಧ ಸತತ ಗೆಲುವು ಸಾಧಿಸಿದ್ದ ವಿದ್ಯಾರ್ಥಿನಿಯರು, ಸೆಮಿಫೈನಲ್‌ನಲ್ಲಿ ಮಧ್ಯಪ್ರದೇಶದ ವಿರುದ್ಧ ರೋಚಕ ಗೆಲುವು ಸಾಧಿಸಿ, ಫೈನಲ್‌ನಲ್ಲಿ ಮಹಾರಾಷ್ಟ್ರ ತಂಡವನ್ನು ಸುಲಭವಾಗಿ ಸೋಲಿಸಿದರು.

ಈ ಶಾಲೆಯ ವಿದ್ಯಾರ್ಥಿನಿಯರು 2016ರಲ್ಲಿ ರಾಷ್ಟ್ರಮಟ್ಟದಲ್ಲಿ ಉತ್ತಮ ಪ್ರದರ್ಶನ ನೀಡಿದ್ದರೂ; ಗೆಲುವು ಸಾಧ್ಯವಾಗಿರಲಿಲ್ಲ. ಮುಂದೊಮ್ಮೆ ಗೆಲುವು ಸಾಧಿಸಬೇಕು ಎಂದುಕೊಂಡು ಮರಳಿ ಬಂದಿದ್ದ ಈ ತಂಡದಲ್ಲಿ ಆಟವಾಡಿದ್ದ, ಐದು ವಿದ್ಯಾರ್ಥಿನಿಯರು ಈ ಬಾರಿ ಸಹಪಾಠಿ ಆಟಗಾರರೊಂದಿಗೆ ಉತ್ತಮ ಪ್ರದರ್ಶನ ನೀಡಿ ಗೆಲುವು ತಮ್ಮದಾಗಿಸಿಕೊಂಡಿದ್ದಾರೆ.

ಇವರ ಆಟದ ವೈಖರಿ ಮೆಚ್ಚಿದ ವಿವಿಧ ರಾಜ್ಯಗಳ ಆಟಗಾರರು ಎಷ್ಟು ದಿನ ತರಬೇತಿ ಪಡೆದಿದ್ದೀರಿ ?, ನಿಮಗೆ ತರಬೇತಿ ನೀಡಿದವರು ಯಾರು ಎಂಬ ಪ್ರಶ್ನೆಯ ಮೇಲೆ ಪ್ರಶ್ನೆಗಳನ್ನು ಕೇಳಿದರು ಎಂದು ತಂಡದ ಸದಸ್ಯರು ‘ಪ್ರಜಾವಾಣಿ’ಗೆ ತಿಳಿಸಿದರು.

ತಂಡದ ನಾಯಕಿ ಸೃಷ್ಟಿ ಕಾಖಂಡಕಿ ನೇತೃತ್ವದಲ್ಲಿ ವಿದ್ಯಾ ಲಮಾಣಿ, ಸೌಂದರ್ಯ ಬೆಳ್ಳುಬ್ಬಿ, ಲಕ್ಷ್ಮೀ ನಾಗರಾಳ, ಪವಿತ್ರಾ ನಾಗರಾಳ, ಐಶ್ವರ್ಯ ಗೊಳಸಂಗಿ, ಸುಶ್ಮಿತಾ ಕರಿಗಾರ, ಜ್ಯೋತಿ ಕೋಟಿ, ಬೋರಮ್ಮ ಜಾಲಿ, ನೀಲಮ್ಮ ಧರೆಗೊಂಡ ರಾಷ್ಟ್ರಮಟ್ಟದ ಪಂದ್ಯಾಟದಲ್ಲಿ ತಮ್ಮ ಕ್ರೀಡಾ ಸಾಮರ್ಥ್ಯ ಪ್ರದರ್ಶಿಸಿದ್ದಾರೆ.

ಅದ್ದೂರಿ ಸ್ವಾಗತ

ರಾಷ್ಟ್ರಮಟ್ಟದ ಪಂದ್ಯಾವಳಿಯಲ್ಲಿ ಜಯಗಳಿಸಿ ತವರೂರಿಗೆ ಮರಳಿದ ಕ್ರೀಡಾಪಟುಗಳಿಗೆ ಈಚೆಗೆ ಪಟ್ಟಣದಲ್ಲಿ ಅದ್ದೂರಿ ಸ್ವಾಗತ ಕೋರಲಾಯಿತು. ಮಲ್ಲಿಕಾರ್ಜುನ ದೇವಸ್ಥಾನದ ಮುಂಭಾಗದಲ್ಲಿ ಆಟಗಾರರಿಗೆ ಆರತಿ ಬೆಳಗಿ, ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಶಾಲೆಗೆ ಕರೆತರಲಾಯಿತು. ಶಾಲೆಯಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಕ್ರೀಡಾಪಟುಗಳೊಂದಿಗೆ ಅವರ ಪಾಲಕರನ್ನು ಸನ್ಮಾನಿಸಿದ್ದು ವಿಶೇಷವಾಗಿತ್ತು.

ಸಂಸ್ಥೆಯ ಅಧ್ಯಕ್ಷ ಬಸಪ್ಪ ಗಿಡ್ಡಪ್ಪಗೋಳ, ಕಾರ್ಯದರ್ಶಿ ಶ್ರೀಶೈಲ ಪತಂಗಿ, ನಿರ್ದೇಶಕ ವಿನೂತಕುಮಾರ ದೇಸಾಯಿ, ನಾಗಮ್ಮ ಮೇಲಗಿರಿ, ಶಂಕ್ರೆಪ್ಪ ಕುಂಬಾರ, ಶ್ರೀಶೈಲ ಜಗದಾಳೆ, ಸುನಂದಾಬಾಯಿ ಗಿಡ್ಡಪ್ಪಗೋಳ ವಿದ್ಯಾರ್ಥಿನಿಯರ ಸಾಧನೆ ಕೊಂಡಾಡಿದರು.

ಮುಖ್ಯ ಶಿಕ್ಷಕ ರಾಜಶೇಖರ ಉಮರಾಣಿ, ಯಲ್ಲಪ್ಪ ಶಿರೋಳ, ಗಿರೀಶ ಕುಲಕರ್ಣಿ, ಬಸವರಾಜ ತುಪ್ಪದ, ಮಂಜುನಾಥ ಮುಳವಾಡ, ಶಾಂತವ್ವ ಸಜ್ಜನ, ಶ್ರೀದೇವಿ ಬಿರಾದಾರ, ವಿಜಯಲಕ್ಷ್ಮೀ ಗಣಾಚಾರಿ, ಕವಿತಾ ಕಾಖಂಡಕಿ, ಶೋಭಾ ಶಿರೋಳ ಕ್ರೀಡಾಪಟುಗಳಿಗೆ ಮಾರ್ಗದರ್ಶನ ಮಾಡಿದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !