ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Asian Games 2023 | ಗಾಲ್ಫ್‌: ಅದಿತಿ ಕೈತಪ್ಪಿದ ಚಿನ್ನ

Published 1 ಅಕ್ಟೋಬರ್ 2023, 14:33 IST
Last Updated 1 ಅಕ್ಟೋಬರ್ 2023, 14:33 IST
ಅಕ್ಷರ ಗಾತ್ರ

ಹಾಂಗ್‌ಝೌ: ಅಂತಿಮ ದಿನದ ಸ್ಪರ್ಧೆಯಲ್ಲಿ ಎಡವಿದರೂ ಬೆಳ್ಳಿ ಗೆದ್ದುಕೊಂಡ ಗಾಲ್ಫರ್‌ ಅದಿತಿ ಅಶೋಕ್‌ ಅವರು ಚಾರಿತ್ರಿಕ ಸಾಧನೆ ತಮ್ಮದಾಗಿಸಿಕೊಂಡರು. ಏಷ್ಯನ್‌ ಗೇಮ್ಸ್‌ ಇತಿಹಾಸದಲ್ಲಿ ಮಹಿಳಾ ವಿಭಾಗದ ಗಾಲ್ಫ್‌ನಲ್ಲಿ ಭಾರತಕ್ಕೆ ಲಭಿಸಿದ ಮೊದಲ ಪದಕ ಇದು.

ಬೆಂಗಳೂರಿನ ಅದಿತಿ, ಮೂರನೇ ಸುತ್ತಿನ ಬಳಿಕ ಅಗ್ರಸ್ಥಾನದಲ್ಲಿದ್ದರು. ಎರಡನೇ ಸ್ಥಾನದಲ್ಲಿರುವ ಸ್ಪರ್ಧಿಗಿಂತ ಏಳು ಶಾಟ್‌ಗಳ ಮುನ್ನಡೆಯಲ್ಲಿದ್ದ ಅವರು ಚಿನ್ನ ಗೆಲ್ಲುವ ನೆಚ್ಚಿನ ಸ್ಪರ್ಧಿ ಎನಿಸಿದ್ದರು. ಆದರೆ ಭಾನುವಾರ ನಡೆದ ಕೊನೆಯ ಸುತ್ತಿನ ಸ್ಪರ್ಧೆ ಕೊನೆಗೊಳಿಸಲು 77 ಸ್ಟ್ರೋಕ್‌ಗಳನ್ನು ಬಳಸಿಕೊಂಡರು. ಒಟ್ಟು 271 ಸ್ಕೋರ್‌ಗಳೊಂದಿಗೆ ಎರಡನೇ ಸ್ಥಾನಕ್ಕೆ ಕುಸಿತ ಕಂಡರು.

68 ಸ್ಟ್ರೋಕ್‌ಗಳೊಂದಿಗೆ ಅಂತಿಮ ದಿನದ ಸ್ಪರ್ಧೆ ಕೊನೆಗೊಳಿಸಿದ ಥಾಯ್ಲೆಂಡ್‌ನ 21 ವರ್ಷದ ಆಟಗಾರ್ತಿ ಅರ್ಪಿಚಯ ಯುಬೊಲ್‌ (269) ಚಿನ್ನದ ಪದಕ ಗೆದ್ದರೆ, ಕೊರಿಯಾದ ಯು ಹ್ಯುನ್‌ಜೊ (272) ಕಂಚು ಜಯಿಸಿದರು.

ಭಾರತದ ಇತರ ಇಬ್ಬರು ಸ್ಪರ್ಧಿಗಳಾದ ಪ್ರಣವಿ ಅರಸ್‌ (75) ಮತ್ತು ಅವನಿ ಪ್ರಶಾಂತ್‌ (76) ಅವರೂ ಅಂತಿಮ ದಿನ ಲಯ ಕಂಡುಕೊಳ್ಳುವಲ್ಲಿ ವಿಫಲರಾದರು. ಇದರಿಂದ ತಂಡ ವಿಭಾಗದಲ್ಲಿ ಭಾರತ, ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡು ಪದಕ ವಂಚಿತವಾಯಿತು. ಪ್ರಣವಿ ಮತ್ತು ಅವನಿ ಅವರು ವೈಯಕ್ತಿಕ ವಿಭಾಗದಲ್ಲಿ ಕ್ರಮವಾಗಿ 13 ಮತ್ತು ಜಂಟಿ 18ನೇ ಸ್ಥಾನ ಪಡೆದುಕೊಂಡರು.

ಪುರುಷರ ವಿಭಾಗದಲ್ಲಿ ಭಾರತಕ್ಕೆ ಪದಕ ದಕ್ಕಲಿಲ್ಲ. ಅನಿರ್ಬನ್‌ ಲಾಹಿರಿ (65-67-74-68) ಅವರು ಜಂಟಿ 12ನೇ ಸ್ಥಾನ ಪಡೆದರು. ಎಸ್‌ಎಸ್‌ಪಿ ಚೌರಾಸಿಯ ಅವರು ಜಂಟಿ 28ನೇ ಸ್ಥಾನಕ್ಕೆ ಕುಸಿತ ಕಂಡರು. ಖಾಲಿನ್‌ ಜೋಷಿ ಮತ್ತು ಶುಭಾಂಕರ್‌ ಶರ್ಮಾ ಅವರು ಕ್ರಮವಾಗಿ ಜಂಟಿ 27 ಮತ್ತು 32ನೇ ಸ್ಥಾನ ಗಳಿಸಿದರು.

ತಂಡ ವಿಭಾಗದಲ್ಲಿ ಪುರುಷರು ಏಳನೇ ಸ್ಥಾನ ಪಡೆದರು. ಕೊರಿಯಾ, ಥಾಯ್ಲೆಂಡ್‌ ಮತ್ತು ಹಾಂಗ್‌ಕಾಂಗ್‌ ತಂಡಗಳು ಕ್ರಮವಾಗಿ ಮೊದಲ ಮೂರು ಸ್ಥಾನಗಳನ್ನು ತಮ್ಮದಾಗಿಸಿಕೊಂಡವು.

'ಈ ಪದಕವು ಭಾರತದಲ್ಲಿ ಗಾಲ್ಫ್‌ ಕ್ರೀಡೆಗೆ ಹೆಚ್ಚಿನ ಜನಪ್ರಿಯತೆ ಮತ್ತು ಬೆಂಬಲವನ್ನು ತಂದುಕೊಡಬಲ್ಲದು ಎಂಬ ವಿಶ್ವಾಸ ನನ್ನದು’ ಎಂದು ಅದಿತಿ ಪ್ರತಿಕ್ರಿಯಿಸಿದ್ಧಾರೆ.

‘ಮಹಿಳೆಯರ ತಂಡ ವಿಭಾಗದಲ್ಲಿ ನಾಲ್ಕನೇ ಸ್ಥಾನ ಪಡೆದು, ಒಂದು ಸ್ಥಾನದಿಂದ ಪದಕ ಗೆಲ್ಲುವ ಅವಕಾಶ ಕಳೆದುಕೊಂಡಿದ್ದೇವೆ. ಆದರೂ ಈ ಕೂಟದಲ್ಲಿ ಸಾಕಷ್ಟು ಸಕಾರಾತ್ಮಕ ಅಂಶಗಳನ್ನು ಪಡೆದಿದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT