ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲ ವ್ಯಾಯಾಮಗಳುಮಾಡುವುದು ಸಲ್ಲ

Last Updated 25 ಆಗಸ್ಟ್ 2019, 19:45 IST
ಅಕ್ಷರ ಗಾತ್ರ

ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡಿಕೊಂಡು ದೇಹವನ್ನು ಫಿಟ್‌ ಆಗಿ ಇಟ್ಟುಕೊಳ್ಳಬೇಕೆಂದರೆ ವ್ಯಾಯಾಮ ಮಾಡಲೇಬೇಕು ಎಂಬುದು ಹಲವು ತಜ್ಞರ ಅಭಿಪ್ರಾಯ. ದೇಹ ದಂಡಿಸಿ ಫಿಟ್‌ನೆಸ್ ಕಾಪಾಡಿಕೊಳ್ಳುವುದಕ್ಕಾಗಿ ಜಿಮ್‌ಗಳಿಗೆ ಹೋಗುವವರು ಹಲವರು ಇದ್ದಾರೆ. ಜಿಮ್‌ಗಳಿಗೆ ಹೋದ ಕೂಡಲೇ ವ್ಯಾಯಾಮಕ್ಕೆ ನೆರವಾಗುವ ಬಗೆಬಗೆಯ ಉಪಕರಣಗಳು, ವಸ್ತುಗಳು ಕಾಣಿಸುತ್ತವೆ.

ಎಲ್ಲ ಬಗೆಯ ವ್ಯಾಯಾಮಗಳು ಎಲ್ಲರಿಗೂ ಹೊಂದುವುದಿಲ್ಲ ಎಂಬುದು ತಜ್ಞರ ಅಭಿಪ್ರಾಯ. ದೇಹಕ್ಕೆ ಹಾನಿ ಮಾಡುವ ವ್ಯಾಯಾಮಗಳ ಬಗ್ಗೆಯೂ ಕೆಲವರು ತಿಳಿಸಿದ್ದಾರೆ. ಅಂತಹ ಕೆಲವು ವ್ಯಾಯಾಮಗಳ ಬಗ್ಗೆ ತಿಳಿಯೋಣ.

ಸಿಟ್‌ಅಪ್‌ ಮತ್ತು ಕ್ರಂಚೆಸ್‌ಗಳು

ಈ ವ್ಯಾಯಾಮಗಳು ಹಲವರಿಗೆ ಪರಿಚಯ. ಹಲವು ಶಾಲೆಗಳ ದೈಹಿಕ ಶಿಕ್ಷಣ ತರಗತಿಗಳಲ್ಲಿ ಈ ವ್ಯಾಯಾಮ ಮಾಡಿಸುತ್ತಾರೆ. ವ್ಯಾಯಾಮಗಳು ಹೆಚ್ಚು ಪರಿಣಾಮಕಾರಿಯಲ್ಲ ಎಂಬುದನ್ನು ಈಚೆಗಿನ ಕೆಲವು ಸಂಶೋಧನೆಗಳು ತಿಳಿಸಿವೆ. ಇದರಿಂದ ದೇಹಕ್ಕೆ ಬಲ ನೀಡುವಂತಹ ಪ್ರಕ್ರಿಯೆ ನಡೆಯುವುದಿಲ್ಲ, ಈ ವ್ಯಾಯಾಮ ಮಾಡುವ ದೇಹದ ಭಂಗಿ ಕೂಡ ಸರಿಯಾಗಿರುವುದಿಲ್ಲ, ಇದರಿಂದ ಬೆನ್ನುಹುರಿಯ ಮೇಲೂ ಪರಿಣಾಮ ಬೀರುತ್ತದೆ ಎಂಬ ಅಭಿಪ್ರಾಯವಿದೆ. ಈ ವ್ಯಾಯಾಮದ ಬದಲಿಗೆ ಎಬಿ ವ್ಯಾಯಾಮ ಮತ್ತು ಪ್ಲ್ಯಾಂಕ್‌ ವ್ಯಾಯಾಮಗಳು ಹೆಚ್ಚು ಪರಿಣಾಮಕಾರಿ. ಇದು ದೇಹದ ಸಾಮರ್ಥ್ಯ ಹೆಚ್ಚಿಸುವುದಲ್ಲದೇ, ಮಾಂಸಖಂಡಗಳು ಸದೃಢವಾಗುವುದಕ್ಕೂ ನೆರವಾಗುತ್ತದೆ.

ಸ್ಮಿತ್ ಯಂತ್ರ

ಸ್ಮಿತ್ ಯಂತ್ರಗಳಲ್ಲಿ ವಿವಿಧ ವ್ಯಾಯಾಮಗಳನ್ನು ಮಾಡಲು ಅವಕಾಶವಿದೆ. ಈ ಯಂತ್ರದ ನೆರವಿನಿಂದ ವ್ಯಾಯಾಮ ಮಾಡುವುದು ಹೆಚ್ಚು ಸುರಕ್ಷಿತವೂ ಸಹ ಎಂಬ ಅಭಿಪ್ರಾಯವಿದೆ. ಆದರೆ ಇಲ್ಲಿ ಮಾಡುವ ಎಲ್ಲ ವ್ಯಾಯಾಮಗಳು ನಿರೀಕ್ಷಿತ ಮಟ್ಟದಲ್ಲಿ ಫಿಟ್‌ನೆಸ್ ಸಾಧಿಸುವುದಕ್ಕೆ ನೆರವಾಗುವುದಿಲ್ಲ. ಕಾರಣ ಇಲ್ಲಿ ಮಾಡುವ ಹಲವು ವ್ಯಾಯಾಮಗಳು ಸ್ವಾಭಾವಿಕವಾಗಿ ಇರುವುದಿಲ್ಲ ಎಂಬುದು ಕೆಲವರ ವಾದ. ಉದಾಹರಣೆಗೆ ಇಲ್ಲಿರುವ ಕೆಲವು ಉಪಕರಣಗಳು ಒಂದೇ ಭಂಗಿಯಲ್ಲಿ ಮಾತ್ರ ಬಳಸುವುದಕ್ಕೆ ನೆರವಾಗುತ್ತವೆ. ಇದು ದೇಹದ ಸ್ವಾಭಾವಿಕ ಚಲನೆ ಮೇಲೆ ಪ್ರಭಾವ ಬೀರುತ್ತದೆ. ಇದರ ಬದಲಿಗೆ ಸ್ಕ್ವಾಟ್ಸ್ ವ್ಯಾಯಾಮ ಹೆಚ್ಚು ಪರಿಣಾಮಕಾರಿ ಎಂದೂ ಹೇಳಲಾಗುತ್ತದೆ. ಈ ವ್ಯಾಯಾಮ ಮಾಂಸ ಖಂಡಗಳು ದೃಢವಾಗುವುದಕ್ಕೆ ಹೆಚ್ಚು ನೆರವಾಗುತ್ತದೆ.

ಸೀಟೆಡ್ ಸ್ವೆಟ್ ಮೆಷಿನ್‌

ಈ ಯಂತ್ರ ಸುಲಭವಾಗಿ ವ್ಯಾಯಾಮ ಮಾಡುವುದಕ್ಕೆ ನೆರವಾಗುತ್ತದೆ. ಕುಳಿತು ವ್ಯಾಯಾಮ ಮಾಡುವುದಕ್ಕೆ ಹೆಚ್ಚು ನೆರವಾಗುತ್ತದೆ. ದೇಹವನ್ನು ವಿವಿಧ ಭಂಗಿಗಳಲ್ಲಿ ತಿರುಗಿಸಲು ಅವಕಾಶವಿದ್ದರೂ ಕೇವಲ 13 ಡಿಗ್ರಿಯವರೆಗೆ ತಿರುಗಿಸಬಹುದು. ಹೀಗಾಗಿಯೇ ಇದು ಹೆಚ್ಚು ಪರಿಣಾಮಕಾರಿಯಲ್ಲ ಎಂಬ ಅಭಿಪ್ರಾಯವಿದೆ. ಕುಳಿತು ಮಾಡುವಂತಹ ಮತ್ತೊಂದು ವ್ಯಾಯಾಮ ನೀಲಿಂಗ್ ಪ್ಯಾಲೊಫ್ ಪ್ರೆಸ್‌ ಇದಕ್ಕಿಂತಲೂ ಹೆಚ್ಚು ಪರಿಣಾಮಕಾರಿ ಎಂಬ ಅಭಿಪ್ರಾಯವಿದೆ. ಕಂಬಕ್ಕೆ ದಾರ ಅಥವಾ ಕೇಬಲ್ ಅನ್ನು ಎದೆ ಮಟ್ಟಕ್ಕೆ ಕಟ್ಟಿ ಮಂಡಿಯೂರಿ ಮಾಡುವ ವ್ಯಾಯಾಮ ಇದು. ಇದು ಕಾಲು, ಕೈಗಳು ಮತ್ತು ದೇಹ ತಿರುಗಿಸುವುದಕ್ಕೂ ನೆರವಾಗುತ್ತದೆ. ದೇಹದ ಸಾಮರ್ಥ್ಯವನ್ನೂ ಹೆಚ್ಚಿಸುತ್ತದೆ.

ಸೂಪರ್‌ಮ್ಯಾನ್ಸ್

ಜಿಮ್‌ಗಳಲ್ಲಿ ಮತ್ತು ಫಿಸಿಕಲ್ ಥೆರಪಿ ಕೇಂದ್ರಗಳಲ್ಲಿ ಈ ವ್ಯಾಯಾಮ ಸಾಮಾನ್ಯ. ಇದರಿಂದ ಬೆನ್ನನ್ನು ಕೆಳಭಾಗವನ್ನು ಹೆಚ್ಚು ಸದೃಢವಾಗಿಸಬಹುದು. ಆದರೆ ಇದರಿಂದ ಅಧಿಕ ರಕ್ತದೊತ್ತಡದಂತಹ ಸಮಸ್ಯೆಗಳೂ ಕಾಡಬಹುದು ಎಂಬುದು ಕೆಲವರ ವಾದ. ದೇಹದ ಮೇಲೂ ಹೆಚ್ಚು ಒತ್ತಡ ಬೀರುತ್ತದೆ ಎಂಬ ಅಭಿಪ್ರಾಯವಿದೆ. ಬೆನ್ನು ನೋವಿನ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಇದು ಸೂಕ್ತ ವ್ಯಾಯಾಮವಲ್ಲ. ಇದಕ್ಕೆ ಪರ್ಯಾಯ ಎನಿಸುವ ಹಲವು ವ್ಯಾಯಾಮಗಳೂ ಇವೆ. ಅವುಗಳ ಬಗ್ಗೆಯೂ ಗಮನಹರಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT