ಶನಿವಾರ, 7 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ಯಾರಾಲಿಂಪಿಕ್ಸ್‌: ಪ್ರಿ ಕ್ವಾರ್ಟರ್‌ಗೆ ಬಿಲ್ಗಾರ್ತಿ ಶೀತಲ್‌

Published 29 ಆಗಸ್ಟ್ 2024, 15:50 IST
Last Updated 29 ಆಗಸ್ಟ್ 2024, 15:50 IST
ಅಕ್ಷರ ಗಾತ್ರ

ಪ್ಯಾರಿಸ್‌: ಭಾರತದ ಪ್ಯಾರಾ ಬಿಲ್ಗಾರ್ತಿ ಶೀತಲ್‌ ದೇವಿ ಪ್ಯಾರಾಲಿಂಪಿಕ್ಸ್‌ನ ಮಹಿಳೆಯರ ವೈಯಕ್ತಿಕ ಕಾಂಪೌಂಡ್ ಓಪನ್ ರ‍್ಯಾಂಕಿಂಗ್ ಸುತ್ತಿನಲ್ಲಿ ಎರಡನೇ ಸ್ಥಾನ ಪಡೆದು, ಪ್ರಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದರು.

ಜಮ್ಮು ಮತ್ತು ಕಾಶ್ಮೀರದ 17 ವರ್ಷ ವಯಸ್ಸಿನ ಕೈಗಳಿಲ್ಲದ ಶೀತಲ್‌, ಕಾಲಿನಿಂದಲೇ ಬಾಣ ಪ್ರಯೋಗಿಸಿ 720ರಲ್ಲಿ 703 ಅಂಕಗಳನ್ನು ಪಡೆದರು. ಟರ್ಕಿಯ ಓಜ್ನೂರ್ ಗಿರ್ಡಿ ಕ್ಯೂರ್ ದಾಖಲೆಯ 704 ಅಂಕ ಪಡೆದು ಅಗ್ರಸ್ಥಾನ ಪಡೆದರು.

ಈ ತಿಂಗಳ ಆರಂಭದಲ್ಲಿ ಬ್ರಿಟನ್‌ನ ಫೋಬೆ ಪೈನ್ ಪ್ಯಾಟರ್ಸನ್ ಸ್ಥಾಪಿಸಿದ (698 ಅಂಕ) ವಿಶ್ವದಾಖಲೆಯನ್ನು ಶೀತಲ್‌ ಮುರಿದರು. ಅದಾದ ಕೆಲವೇ ಹೊತ್ತಿನಲ್ಲಿ ಟರ್ಕಿಯ ಬಿಲ್ಗಾರ್ತಿ ಓಜ್ನೂರ್ ಅವರು ದಾಖಲೆಯನ್ನು ತಮ್ಮದಾಗಿಸಿಕೊಂಡರು.

ಶೀತಲ್‌ ಸೇರಿದಂತೆ ರ‍್ಯಾಂಕಿಂಗ್‌ ಸುತ್ತಿನಲ್ಲಿ ಅಗ್ರ ನಾಲ್ಕು ಸ್ಥಾನ ಪಡೆದವರು 16ರ ಸುತ್ತಿಗೆ ಬೈ ಪಡೆದರು. ಪ್ರಿ ಕ್ವಾರ್ಟರ್‌ ಫೈನಲ್‌ ಸ್ಪರ್ಧೆ ಶನಿವಾರ ನಡೆಯಲಿದೆ.

ಶೀತಲ್‌ ಅವರು ಮುಂದಿನ ಸುತ್ತಿನಲ್ಲಿ ಚಿಲಿಯ ಮರಿಯಾನಾ ಜುನಿಗಾ ಮತ್ತು ಕೊರಿಯಾದ ಚೋಯ್ ನಾ ಮಿ ನಡುವಿನ ಸ್ಪರ್ಧೆಯ ವಿಜೇತರನ್ನು ಎದುರಿಸಲಿದ್ದಾರೆ. ಜುನಿಗಾ ಅವರು ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಮಹಿಳೆಯರ ವೈಯಕ್ತಿಕ ಕಾಂಪೌಂಡ್ ಓಪನ್‌ ವಿಭಾಗದಲ್ಲಿ ಬೆಳ್ಳಿ ಗೆದ್ದಿದ್ದರು.

ಕಳೆದ ವರ್ಷ ಚೀನಾದ ಹಾಂಗ್‌ಝೌನಲ್ಲಿ ನಡೆದ ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಶೀತಲ್‌ ಎರಡು ಚಿನ್ನ ಸೇರಿದಂತೆ ಮೂರು ಪದಕಗಳನ್ನು ಗೆದ್ದು ದಾಖಲೆ ಬರೆದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT